ಶಿವಮೊಗ್ಗ

ಸಂಡದಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಪ್ರಯತ್ನ: ಭರವಸೆ

Published On :

ಕ.ಪ್ರ.ವಾರ್ತೆ, ಶಿಕಾರಿಪುರ, ಫೆ.24
ಗ್ರಾಮೀಣ ಪ್ರದೇಶದಿಂದ ಪಟ್ಟಣದೆಡೆಗೆ ಯುವಪೀಳಿಗೆಯ ವಲಸೆಯನ್ನು ತಡೆದು ಉದ್ಯೋಗ ಸೃಷ್ಟಿಸಿ ದುಡಿಯುವ ಕೈಗೆ ಕೆಲಸಕ್ಕೆ ಕೈಗಾರಿಕೆಗಳು ಅತ್ಯಗತ್ಯವಾಗಿದ್ದು, ಈ ದಿಸೆಯಲ್ಲಿ ತಾಲೂಕಿನ ಸಂಡ ಕೈಗಾರಿಕಾ ಪ್ರದೇಶದಲ್ಲಿ ವಿವಿಧ ರೀತಿಯ ಹತ್ತಾರು ಕೈಗಾರಿಕೆಗಳ ಆರಂಭಕ್ಕೆ ಪ್ರಯತ್ನಿಸುವುದಾಗಿ ರಾಜ್ಯದ ಮಾಜಿ ಮುಖ್ಯಮಂತ್ರಿ, ಶಾಸಕ ಯಡಿಯೂರಪ್ಪ ತಿಳಿಸಿದರು.
ಸೋಮವಾರ ತಾಲೂಕಿನ ಸಂಡ ಕೈಗಾರಿಕಾ ವಸಾಹತು ಪ್ರದೇಶದಲ್ಲಿ ಅಂದಾಜು 45 ಕೋಟಿ ವೆಚ್ಚದಲ್ಲಿ ರಾಜ್ಯ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿ (ಕೆ.ಎಂ.ಎಫ್) ವತಿಯಿಂದ ನಿರ್ಮಾಣವಾದ ನೂತನ ಪಶು ಆಹಾರ ಘಟಕವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು.
ತೃಪ್ತಿ ತಂದಿದೆ: ರಾಜ್ಯದ ಇದುವರೆಗಿನ 4 ಘಟಕಗಳಿಗೆ ಹೋಲಿಸಿದಲ್ಲಿ ಹೆಚ್ಚಿನ ಸಾಮರ್ಥ್ಯ ಹೊಂದಿದ್ದು, ಶಿಕಾರಿಪುರದ ಜನತೆ ಪುರಸಭಾ ಸದಸ್ಯ, ಶಾಸಕ, ರಾಜ್ಯದ ಮುಖ್ಯಮಂತ್ರಿಯಾಗಿ ಆಯ್ಕೆಗೊಳಿಸಿದಕ್ಕೆ ಇದೀಗ ಸಮಾಧಾನ, ತೃಪ್ತಿ ತಂದಿದೆ. ಈಗ 2 ಹಸು ಸಾಕಣೆ ಮೂಲಕ ಒಂದು ಕುಟುಂಬ ಗೌರವಯುತವಾಗಿ ಬದುಕಲು ಸಾದ್ಯವಿದೆ ಎಂದು ಅವರು ಹೇಳಿದರು.
45 ಕೋಟಿ ವೆಚ್ಚದ ಈ ಘಟಕವು 30 ಎಕರೆ ವಿಶಾಲ ಸ್ಥಳದಲ್ಲಿದೆ. 300 ಮೆಟ್ರಿಕ್ ಟನ್ ಸಾಮರ್ಥ್ಯ ಹೊಂದಿದೆ. ಅಲ್ಲದೆ ನಿತ್ಯ 9 ಸಾವಿರ ಮೆ.ಟನ್ ಕಚ್ಚಾ ಆಹಾರ ದಾಸ್ತಾನು ಸಾಮರ್ಥ್ಯದ ಗೋದಾಮು ಹೊಂದಿದೆ.
ಕ್ಷೀರ ಕ್ರಾಂತಿ: ಕುಟುಂಬದ ಪೋಷಣೆಯಲ್ಲಿ ಪುರುಷರಿಗಿಂತ ಮಹಿಳೆಯರ ಪಾತ್ರ ಬಹು ಮುಖ್ಯವಾಗಿದ್ದು ಈ ದಿಸೆಯಲ್ಲಿ ಹಾಲಿಗೆ ಪ್ರೋತ್ಸಾಹ ಧನ ನೀಡಿದ ಪರಿಣಾಮ ಇದೀಗ ಕ್ಷೀರ ಕ್ರಾಂತಿಯಾಗಿದೆ. ಸರ್ಕಾರ ಶಾಲಾ ಮಕ್ಕಳಿಗೆ ಪೌಷ್ಟಿಕಾಂಶಕ್ಕಾಗಿ ಹಾಲು ನೀಡುವ ತೀರ್ಮಾನವನ್ನು ಅವರು ಶ್ಲಾಘಿಸಿದರು.
ರಾಜ್ಯದ 7.5 ಲಕ್ಷ ಕುಟುಂಬ ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡು 55 ಲಕ್ಷ ಲೀ.ಹಾಲು ನಿತ್ಯ ಉತ್ಪಾದನೆಯಲ್ಲಿ ತೊಡಗಿಸಿಕೊಂಡಿದ್ದು ಪಶು ಆಹಾರ ಘಟಕದ ಆರಂಭದಿಂದ ಸಾಗಾಣಿಕೆ ವೆಚ್ಚ ಕಡಿಮೆಯಾಗುವ ಜತೆಗೆ ಸ್ಥಳೀಯ ರೈತರ ಜೋಳಕ್ಕೆ ಉತ್ತಮ ಬೆಲೆ ದೊರಕಲಿದೆ ಎಂದರು.
ನಂ.1 ಆಗಬೇಕು: ರಾಜ್ಯ ಸಹಕಾರಿ ಹಾಲು ಮಹಾಮಂಡಳದ ಅಧ್ಯಕ್ಷ ಸೋಮಶೇಖರ್ ರೆಡ್ಡಿ, ಹಾಲಿನ ಉತ್ಪಾದನೆಯಲ್ಲಿ ಪ್ರಥಮ ಸ್ಥಾನದಲ್ಲಿರುವ ಗುಜರಾತನ್ನು ಹಿಂದಿಕ್ಕಿ ರಾಜ್ಯವನ್ನು ನಂ.1 ಸ್ಥಾನಕ್ಕೇರಿಸುವ ಗುರಿಯನ್ನು ಹೊಂದಿರುವುದಾಗಿ ಅವರು ತಿಳಿಸಿದರು.
ಸಂಸದ ಆಯನೂರು ಮಂಜುನಾಥ್, ಯಡಿಯೂರಪ್ಪನವರಿಗೆ ಶಿಕಾರಿಪುರದ ಬಗ್ಗೆ ವಿಚಿತ್ರ ವ್ಯಾಮೋಹ, ಪ್ರೀತಿ ತಾಲೂಕಿನ ಜನತೆಯ ಋಣ ತೀರಿಸುವ ಸಂಕಲ್ಪ ಹೊಂದಿದ್ದಾರೆ. ಜಿಲ್ಲೆ 3 ಮುಖ್ಯಮಂತ್ರಿಯನ್ನು ಕಂಡಿದ್ದು ಯಡಿಯೂರಪ್ಪನವರು ಶಾಶ್ಪತ ಕಾರ್ಯದಿಂದ ರಾಜಕಾರಣದ ಪುಟದಲ್ಲಿ ಶಾಶ್ವತವಾಗಿದ್ದಾರೆ ಎಂದು ಹೇಳಿದರು.
ಬೇರ್ಪಡಿಸಲು ಸಲಹೆ: ಸಂಸದ ರಾಘವೇಂದ್ರ, ಜಿಲ್ಲೆಯಲ್ಲಿ 800ಕ್ಕಿಂತ ಅಧಿಕವಾಗಿರುವ ಉತ್ಪಾದಕರ ಸಂಘದ ಅಭಿವೃದ್ದಿಗೆ ಶಿವಮೊಗ್ಗ ಹಾಲು ಒಕ್ಕೂಟದಿಂದ ದಾವಣಗೆರೆ, ಚಿತ್ರದುರ್ಗ ಬೇರ್ಪಡಿಸುವಂತೆ ಕೆಎಂಎಫ್ ಅದ್ಯಕ್ಷರಿಗೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸಾಂಕೇತಿಕವಾಗಿ ರೈತರಿಗೆ ಪಶು ಆಹಾರವನ್ನು ವಿತರಿಸಲಾಯಿತು. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ರನ್ನು ಅಭಿನಂದಿಸಲಾಯಿತು. ವೇದಿಕೆಯಲ್ಲಿ ಅಪೆಕ್ಸ್ ಬ್ಯಾಂಕ್ ಅದ್ಯಕ್ಷ ಆರ್.ಎಂ. ಮಂಜುನಾಥ ಗೌಡ, ಜಿ.ಪಂ ಅಧ್ಯಕ್ಷೆ ಗೀತಾ ಮಲ್ಲಿಕಾರ್ಜುನ, ತಾ.ಪಂ ಅದ್ಯಕ್ಷೆ ಲೀಲಾವತಿ, ಜಿ.ಪಂ ಸದಸ್ಯ ಬಂಗಾರಿನಾಯ್ಕ್, ಈಶ್ವರಪ್ಪ, ಮಾಜಿ ಶಾಸಕ ಮಹಾಲಿಂಗಪ್ಪ, ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಪ್ರೇಮನಾಥ್, ಶಿಮುಲ್ ಅದ್ಯಕ್ಷ ಜಗದೀಶ್ವರ್, ಮುಖಂಡ ಚನ್ನವೀರಪ್ಪ, ಗುರುಮೂರ್ತಿ, ಪ್ರವೀಣಶೆಟ್ಟಿ ಮತ್ತಿತರರು ಹಾಜರಿದ್ದರು.
ಸುಬ್ರಹ್ಮಣ್ಯ ಸಂಗಡಿಗರು ಪ್ರಾರ್ಥಿಸಿ, ರೇವಣಸಿದ್ದೇಶ್ವರ ಸ್ವಾಗತಿಸಿ ರಾಜೇಶ್ವರಿ ನಿರೂಪಿಸಿ ವಂದಿಸಿದರು.
ರೈತರಿಗೆ ಸೂಕ್ತ ಸೌಲಭ್ಯ ಕಲ್ಪಿಸಿ
ಶಿಕಾರಿಪುರ: ಕೃಷಿ ಉತ್ಪನ್ನ ಮಾರುಕಟ್ಟೆಯ ಸುಂಕದ ಆದಾಯವನ್ನು ಹೆಚ್ಚಿಸಿ ರೈತರಿಗೆ ಸೂಕ್ತ ಸೌಲಭ್ಯಗಳನ್ನು ಕಲ್ಪಿಸುವ ಮೂಲಕ ಇಲ್ಲಿಗೆ ಆಗಮಿಸುವ ಪ್ರತಿಯೊಬ್ಬ ರೈತರಿಗೆ ಸೂಕ್ತ ರೀತಿಯ ವ್ಯವಸ್ಥೆಯನ್ನು ಒದಗಿಸುವಂತೆ ಮಾಜಿ ಮುಖ್ಯಮಂತ್ರಿ, ಶಾಸಕ ಬಿ.ಎಸ್. ಯಡಿಯೂರಪ್ಪ ಹೇಳಿದರು.
ಸೋಮವಾರ ಪಟ್ಟಣದ ಎಪಿಎಂಸಿ ಮಾರುಕಟ್ಟೆಯಲ್ಲಿನ ನೂತನ ಪ್ರಾಂಗಣದ ಪ್ರವೇಶ ದ್ವಾರ, ಕಾಂಕ್ರೀಟ್ ರಸ್ತೆ, 19 ಗೋದಾಮು ನಿರ್ಮಾಣ ಮತ್ತಿತರ ರು. 5 ಕೋಟಿ ವೆಚ್ಚದ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
ಶೇ. 25 ಸಬ್ಸಿಡಿ: ರಾಜ್ಯ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಮಂಜುನಾಥ್ ಗೌಡ, ಸಹಕಾರಿ ಬ್ಯಾಂಕ್‌ಗಳಿಗೆ ಕೃಷಿ ಪೂರಕ ಕಾರ್ಯಕ್ಕೆ ರೈತರಿಗೆ ನಬಾರ್ಡ್‌ನಿಂದ 25 ಶೇ. ಸಬ್ಸಿಡಿ ದರದಲ್ಲಿ ಸಹಾಯಧನ ಲಭ್ಯವಿದ್ದು, ಡಿಸಿಸಿ ಬ್ಯಾಂಕ್ ಮೂಲಕ ಸಲ್ಲಿಸುವಂತೆ ಸೂಚಿಸಿದರು.
ಎಪಿಎಂಸಿ ಮಾರುಕಟ್ಟೆ ಅದ್ಯಕ್ಷ ಚಂದ್ರಶೇಖರಪ್ಪ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಮಾಜಿ ಶಾಸಕ ಮಹಾಲಿಂಗಪ್ಪ, ಉಪಾಧ್ಯಕ್ಷ ಕುಮಾರ್, ಕಾರ್ಯದರ್ಶಿ ಸಿದ್ದರಾಜು, ರಾಮಪ್ಪ, ಮುಖಂಡ ಗುರುಮೂರ್ತಿ, ಅಗಡಿ ಅಶೋಕ್, ಚನ್ನವೀರಪ್ಪ, ನಾಗರಾಜಪ್ಪ, ಸಣ್ಣಹನುಮಂತಪ್ಪ, ಸುಕೇಂದ್ರಪ್ಪ, ಗುಡ್ಡಪ್ಪ, ರಾಜಪ್ಪ, ಡಿ.ಎಲ್. ಬಸವರಾಜ್, ಪ್ರವೀಣ್ ಶೆಟ್ಟಿ ತಹಶೀಲಾರ್ ಧರ್ಮೋಜಿರಾವ್ ಮತ್ತಿತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.