ಹೊರಗುತ್ತಿಗೆ ಸಿಬ್ಬಂದಿ ಬಗ್ಗೆ ಮತ್ತದೇ ಒಣ ಚರ್ಚೆ
ಶಿವಮೊಗ್ಗ: ಕಳೆದ ಎರಡು ವರ್ಷಗಳಿಂದ ಜಿಲ್ಲಾ ಪಂಚಾಯಿತಿಯಲ್ಲಿ ಸಾಮಾನ್ಯ ಸಭೆಗಳಲ್ಲಿ ಹೊರಗುತ್ತಿಗೆ ವಿಚಾರವಾಗಿ ನಡೆಯುತ್ತಿರುವ ಪ್ರಸ್ತಾಪ- ಚರ್ಚೆಗಳ ಬಗ್ಗೆ ಕಾರ್ಮಿಕ ಇಲಾಖೆ ಹಿರಿಯ ಅಧಿಕಾರಿಗಳು ಗಂಭೀರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮಂಗಳೂರಿನಲ್ಲಿರುವ ಕಾರ್ಮಿಕ ಇಲಾಖೆ ಆಯುಕ್ತರ ಕಚೇರಿ ಹಾಗೂ ಶಿವಮೊಗ್ಗದ ಕಾರ್ಮಿಕ ಇಲಾಖೆಯವರೂ ಇಲ್ಲಿ ನಡೆಯುತ್ತಿರುವ ಬೆಳವಣಿಗೆ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಈ ಮಧ್ಯೆಯೇ ಇದೇ ತಿಂಗಳ 28ರಂದು ನಡೆಯುವ ಜಿಪಂ ಸಾಮಾನ್ಯ ಸಭೆಯಲ್ಲಿ ಸಹ ಗುತ್ತಿಗೆ ಕಾರ್ಮಿಕರ ವಿಚಾರ ಮತ್ತೆ ಪ್ರಸ್ತಾಪವಾಗುತ್ತಿರುವುದು ಅಚ್ಚರಿಗೆ ಕಾರಣವಾಗಿದೆ.
ಹಿನ್ನೆಲೆ: ಬಹುತೇಕ ಎಲ್ಲಾ ಸರ್ಕಾರಿ ಇಲಾಖೆಗಳಲ್ಲಿ ಹೊರಗುತ್ತಿಗೆ ಸಂಪ್ರದಾಯ ಇತ್ತೀಚಿನ ವರ್ಷಗಳಲ್ಲಿ ಬೆಳೆದು ಬಂದಿದೆ. ಜಿಲ್ಲೆಯಲ್ಲಿ ಸುಮಾರು 1500ಕ್ಕಿಂತ ಹೆಚ್ಚಿನ ಗುತ್ತಿಗೆ ಕಾರ್ಮಿಕರು ವಿವಿಧ ಇಲಾಖೆ, ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ಜಿಲ್ಲಾ ಪಂಚಾಯಿತಿ ಅಡಿಯಲ್ಲಿ ಬರುವಂತಹ ಸಮಾಜ ಕಲ್ಯಾಣ, ಆರೋಗ್ಯ, ಶಿಕ್ಷಣ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಪ್ರಧಾನವಾಗಿ ಗುತ್ತಿಗೆ ಕಾರ್ಮಿಕರನ್ನು ನೇಮಿಸಿಕೊಂಡಿದೆ.
ಇವರೆಲ್ಲಾ ಡಿ ದರ್ಜೆ, ಕಂಪ್ಯೂಟರ್ ಆಪರೇಟರ್, ಕ್ಲರಿಕಲ್, ಕಚೇರಿ ಸಹಾಯಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಈ ಎಲ್ಲಾ ಇಲಾಖೆಗಳೂ ತಮ್ಮ ಮುಖ್ಯ ಕಚೇರಿಯ ನಿರ್ದೇಶನ ಮತ್ತು ಮೂರ್ಗಸೂಚಿಯಂತೆ ಗುತ್ತಿಗೆ ಕಾರ್ಮಿಕರನ್ನು ನೇಮಿಸಿಕೊಂಡಿದೆ. ಟೆಂಡರ್ ಮೂಲಕ ಗುತ್ತಿಗೆ ಏಜೆನ್ಸಿಗಳನ್ನು ಆಹ್ವಾನಿಸಿ ನೇಮಿಸಿಕೊಂಡಿವೆ.
ಆದರೆ, ಕಳೆದ ಎರಡು ವರ್ಷಗಳಿಂದ ಜಿಲ್ಲಾ ಪಂಚಾಯಿತಿಯ ಬಹುತೇಕ ಎಲ್ಲಾ ಸಾಮಾನ್ಯ ಸಭೆಯಲ್ಲಿ ಗುತ್ತಿಗೆ ಏಜೆನ್ಸಿ ನೇಮಕಾತಿಯಲ್ಲಿ ನಿಯಮ ಉಲ್ಲಂಘನೆಯಾಗಿದೆ ಎಂದು ಪ್ರಸ್ತಾಪವಾಗುತ್ತಿತ್ತು. ನಂತರದ ಸಭೆಗಳಲ್ಲಿ ಕಾರ್ಮಿಕ ಕಾಯ್ದೆ ಉಲ್ಲಂಘನೆಯಾಗಿದೆ ಎಂದು ಗಂಟೆಗಟ್ಟಲೆ ಚರ್ಚೆ ನಡೆಯುತ್ತಿದೆ.
ವಾಸ್ತವ: ವಿಶೇಷವೆಂದರೆ ಕಾರ್ಮಿಕ ಇಲಾಖೆ ಹಿರಿಯ ಅಧಿಕಾರಿಗಳೇ ಸ್ಪಷ್ಟಪಡಿಸುವಂತೆ ಜಿಲ್ಲೆಯಲ್ಲಿ ಗುತ್ತಿಗೆ ಕಾರ್ಮಿಕರ ನೇಮಕ, ಕಾರ್ಯನಿರ್ವಹಣೆ ವಿಚಾರದಲ್ಲಿ ಯಾವುದೇ ಅಕ್ರಮ ನಡೆದಿಲ್ಲ ಹಾಗೂ ನಿಯಮ ಉಲ್ಲಂಘನೆಯಾಗಿಲ್ಲ.
ಗುತ್ತಿಗೆ ಕಾರ್ಮಿಕ ಕಾಯ್ದೆ 1970 ರದ್ಧತಿ ಮತ್ತು ನಿಯಂತ್ರಣ ಅಡಿಯಲ್ಲಿ ಮೂಲ ಉದ್ಯೋಗದಾತರು(ಆಯುಕ್ತರು, ಡಿಸಿ, ಸಿಇಒ, ಅಧೀನ ಅಧಿಕಾರಿಗಳು) ಕಾರ್ಮಿಕ ಇಲಾಖೆಯ ಸಹಾಯಕ ಆಯುಕ್ತರ ಕಚೇರಿ ಮಂಗಳೂರಿನಲ್ಲಿ ನಿಗದಿತ ನಮೂನೆ ಫಾರಂ 1ರಲ್ಲಿ ಆ ಇಲಾಖೆಗೆ ಸಂಬಂಧಪಟ್ಟ ಇಲಾಖೆಗೆ ನೇಮಿಸಿಕೊಳ್ಳಲು ನೋಂದಣಿ ಮಾಡಿಕೊಳ್ಳಬೇಕು.
ನೋಂದಣಿ ವೇಳೆಯಲ್ಲಿ ಕೆಲಸದ ವಿವರ, ಎಷ್ಟು ಸಂಖ್ಯೆ, ಮಹಿಳೆಯರೆಷ್ಟು, ಪುರುಷರೆಷ್ಟೆಂದು ನಮೂದು ಮಾಡಬೇಕು. ಆದರೆ, ಮುಖ್ಯ ನಿಯಮವೆಂದರೆ ಕೆಲಸ ನಡೆಯುವ ಸ್ಥಳದಲ್ಲಿ ಕನಿಷ್ಠ 20 ಗುತ್ತಿಗೆ ಕಾರ್ಮಿಕರಿರಲೇಬೇಕು. ಇಲ್ಲವಾದರೆ, ಈ ಕಾಯ್ದೆ ಅನ್ವಯವಾಗುವುದಿಲ್ಲ.
ವಿಶೇಷವೆಂದರೆ, ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಈ ಕಾಯ್ದೆಯ ಹಿನ್ನೆಲೆ- ಮುನ್ನೆಲೆ ತಿಳಿದುಕೊಳ್ಳದೇ ಗಂಟೆಗಟ್ಟಲೆ ಚರ್ಚೆ ನಡೆಯುತ್ತಿದೆ ಎಂಬುದು ಕಾರ್ಮಿಕ ಇಲಾಖೆ ಹಿರಿಯ ಸಿಬ್ಬಂದಿಯ ವಿಷಾದದ ಮಾತು.
ಅನ್ವಯವಾಗುವುದಿಲ್ಲ: ಶಿವಮೊಗ್ಗ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಸಮಾಜ ಕಲ್ಯಾಣ, ಬಿಸಿಎಂ (ಹಾಸ್ಟೆಲ್), ಆರೋಗ್ಯ ಇಲಾಖೆಯಲ್ಲಿ(ಪಿಎಚ್ಸಿ) ಯಾವುದೇ ಒಂದು ಕಡೆಯೂ 20 ಮಂದಿ ಕೆಲಸ ಮಾಡುತ್ತಿಲ್ಲ. ಹೀಗಾಗಿ ಕಾರ್ಮಿಕ ಕಾಯ್ದೆಯೇ ಇಲ್ಲಿ ಅನ್ವಯವಾಗುವುದಿಲ್ಲ.
ಆದರೂ ಇಲ್ಲಿ ಕಾರ್ಯನಿರ್ವಹಿಸುತ್ತಿರುವ ಗುತ್ತಿಗೆ ಕಾರ್ಮಿಕ ಸಿಬ್ಬಂದಿಗೆ ಸಿಗಬೇಕಾದ ಕನಿಷ್ಠ ವೇತನ, ಪಿಎಫ್, ಇಎಸ್ಐ ಸೌಕರ್ಯಗಳು ಕಡ್ಡಾಯವಾಗಿ ಲಭ್ಯವಾಗುತ್ತಿದೆ. ಹಾಗೆಯೇ ಈ ಬಗ್ಗೆ ಸೌಲಭ್ಯ ವಂಚಿತರಿಂದ ಒಂದೇ ಒಂದು ದೂರು ಸಹ ಈ ವರೆಗೆ ಬಂದಿಲ್ಲ ಎಂದು ಪಿಎಫ್, ಇಎಸ್ಐ ಹಾಗೂ ಕಾರ್ಮಿಕ ಇಲಾಖೆಯ ಅಧಿಕಾರಿಗಳು ಸ್ಪಷ್ಟಪಡಿಸುತ್ತಾರೆ.
ವಂಚನೆ ನಡೆದಿಲ್ಲ: ಈ ಬೆಳವಣಿಗೆಯ ಬಗ್ಗೆ ಪ್ರಮುಖ ಮ್ಯಾನ್ ಪವರ್ ಏಜೆನ್ಸಿಯ ಮುಖ್ಯಸ್ಥರನ್ನು “OÚ«ÚsÚ®Úúڒ ಮಾತನಾಡಿಸಿದಾಗ, ಇಲಾಖೆಯೊಂದಿಗಿನ ಒಡಂಬಡಿಕೆಯಲ್ಲಿರುವ ಷರತ್ತು ಮತ್ತು ನಿಬಂಧನೆಯಂತೆ ನಡೆದುಕೊಳ್ಳುವುದು ಮೂಲ ಉದ್ದೇಶ ಎಂದರು. ಹಾಗೆಯೇ ಇಲಾಖೆಗಳೇ ನಿರ್ಧರಿಸಿ ದೃಢೀಕರಿಸಿ ನೀಡಿರುವ ವೇತನ, ಭವಿಷ್ಯ ನಿಧಿ, ಇಎಸ್ಐಗಳನ್ನು ಸಿಬ್ಬಂದಿಗೆ ಪಾವತಿಸುತ್ತೇವೆ. ಇದನ್ನು ಪ್ರತಿ ತಿಂಗಳು ಇಲಾಖೆಯವರು ಪರಿಶೀಲಿಸಿ ಪ್ರಮಾಣಿಕರಿಸುತ್ತಿದ್ದಾರೆ. ಇದರಲ್ಲಿ ಶೇ. 1ರಷ್ಟೂ ಮೋಸ, ವಂಚನೆ ನಡೆದಿಲ್ಲ. ನಮ್ಮದು ಪ್ರಾಮಾಣಿಕ ಸೇವೆ. ಆದರೂ ರಾಜಕೀಯ ದ್ವೇಷವೋ, ವೃತ್ತಿ ವೈಷ್ಯಮೋ ಈ ವಿಚಾರದ ಬಗ್ಗೆ ಪದೇ ಪದೇ ಆರೋಪಿಸಲಾಗುತ್ತಿದೆ ಎಂದು ಅಭಿಪ್ರಾಯಪಟ್ಟರು.
-ಶ್ರೀಕಾಂತ ಭಟ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

