ಖರೀದಿಯಾಗದ ಬತ್ತ: ರೈತರ ಆಕ್ರೋಶ
ತ್ಯಾಗರ್ತಿ: ಸರ್ಕಾರ ಜಾರಿಗೆ ತರುವ ಹಲವು ಯೋಜನೆಗಳಲ್ಲಿ ಸಮಸ್ಯೆ ಎಂಬುದು ಸ್ವತಃ ಯೋಜನೆಗಳಲ್ಲೇ ಇರೊತ್ತದೆಯೋ ಅಥವಾ ಯೋಜನೆಯ ಅನುಷ್ಠಾನದಲ್ಲಿ ಇರುತ್ತದೆಯೋ ಎಂಬುದಕ್ಕೆ ಗೊಂದಲದ ಗೂಡಾದ ಬೆಂಬಲ ಬೆಲೆಯಲ್ಲಿ ಬತ್ತ ಖರೀದಿ ಯೋಜನೆಯೇ ಸಾಕ್ಷಿ ಎಂದು ಖರೀದಿ ಕೇಂದ್ರಕ್ಕೆ ಬತ್ತ ನೀಡಲು ಹೋದ ತ್ಯಾಗರ್ತಿ ಭಾಗದ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸರ್ಕಾರ ಪ್ರತಿ ಕ್ವಿಂಟಲ್ ಬತ್ತಕ್ಕೆ 1600 ಬೆಲೆ ಎಂದು ನಿಗದಿಗೊಳಿಸಿದೆ. ಆದರೂ ಸದ್ಯಕ್ಕೆ ಮಾರುಕಟ್ಟೆ ದರಕ್ಕಿಂತ ಅಲ್ಪ ಪ್ರಮಾಣಕ್ಕಾದರೂ ಹೆಚ್ಚಾಗಿದೆ ಎಂಬ ಸಮಾಧಾನದಲ್ಲಿ ವರ್ಷವಿಡೀ ಕಷ್ಟಪಟ್ಟು ಬೆಳೆ ಬೆಳೆದ ರೈತ ಈ ಯೋಜನೆಯ ಉಪಯೋಗ ಪಡೆಯಲು ಬಯಸಿದರೆ ಆತನಿಗೆ ಎದುರಾಗುವುದೇ ಪ್ರಶ್ನಾರ್ಥಕ ಚಿನ್ಹೆಗಳ ಸಾಲು. ರೈತ ಸುಗ್ಗಿ ಮುಗಿಸಿ ಇನ್ನೇನು ಬತ್ತ ಮಾರಿದರೆ ಈ ವರ್ಷದ ಕೆಲಸ ಮುಗಿಯಿತು ಎಂಬ ಹುಮ್ಮಸ್ಸಿನಲ್ಲಿ ಅಗತ್ಯ ತಯಾರಿಯೊಂದಿಗೆ ಖರೀದಿ ಕೇಂದ್ರದಲ್ಲಿ ಮುಖ್ಯವಾಗಿ ಸಾಗರ ಹಾಗೂ ಆನಂದಪುರದ ಕೇಂದ್ರಗಳಲ್ಲಿ ವಿಚಾರಿಸಿದರೆ ಅಲ್ಲಿನ ಅಧಿಕಾರಿಗಳು ನಮ್ಮ ಗೋದಾಮು ತುಂಬಿದೆ, ಜಾಗ ಇಲ್ಲ, ಹೋದ ಲಾರಿಗಳು ಬಂದಿಲ್ಲ, ಸ್ವಲ್ಪ ದಿನ ಕಾಯಿರಿ ಎಂದು ಸಬೂಬು ಹೇಳುತ್ತಾರೆ. ಫೆಬ್ರವರಿ ಮೂರನೇ ತಾರೀಕಿನಿಂದ ಯಾವುದೇ ಲಾರಿಯೂ ಬಂದಿಲ್ಲ. 20- 25 ದಿನಗಳಾದರೂ ಲಾರಿಯ ಸರಿಯಾದ ವ್ಯವಸ್ಥೆ ಮಾಡಲಾಗಿಲ್ಲ ಎಂದರೆ ನಾಚಿಕೆಗೇಡಿನ ವಿಷಯವಲ್ಲವೇ, ಇಂತಹ ಒಂದು ಆಧುನಿಕ ಕಾಲ ಎಂದು ಕರೆಸಿಕೊಳ್ಳುವ ದಿನಗಳಲ್ಲೂ ಒಂದು ವ್ಯವಸ್ಥಿತ ಸಾರಿಗೆ ವ್ಯವಸ್ಥೆ, ಗೋದಾಮಿನ ಲಭ್ಯತೆ ಇಲ್ಲವೆಂದರೆ ಅದಕ್ಕೆ ಯಾರು ಹೊಣೆಯೋ ಅರಿಯದಾಗಿದೆ ಎಂಬುದು ರೈತರ ಅಸಮಾಧಾನದ ಮಾತು. ಬೆಳೆದ ಒಂದು ಬೆಳೆಗೆ ತಕ್ಕ ಬೆಲೆ ನೀಡುವ ಯೋಗ್ಯತೆಯಂತೂ ನಮ್ಮನ್ನಾಳುವವರಿಗಿಲ್ಲ. ಆದರೆ, ಮಾಡುವ ಕಾರ್ಯವನ್ನಾದರೂ ಸಮರ್ಪಕವಾಗಿ ನಿರ್ವಹಿಸಿದರೆ ಎಷ್ಟೋ ಅನುಕೂಲವಲ್ಲವೇ, ಇದು ನಮ್ಮ ಸರ್ಕಾರದ ಆಡಳಿತಕ್ಕೆ ಹಿಡಿದ ಕೈಗನ್ನಡಿಯಲ್ಲವೇ ಎಂದು ಪ್ರಗತಿಪರ ರೈತರಾದ ಗಣಪತಿ ಜಿ. ಹೆಗಡೆ ಅಭಿಪ್ರಾಯಪಟ್ಟಿದ್ದಾರೆ.
ಬತ್ತವನ್ನು ನೇರವಾಗಿ ಖರೀದಿ ಕೇಂದ್ರಕ್ಕೆ ಕಳಿಸಿದರಾಯ್ತೆಂದು ಯೋಚಿಸಿದವರೆಲ್ಲ ಅಲ್ಲೇ ಕಾಯಬೇಕಾದ ಅನಿವಾರ್ಯತೆ ಎದುರಾಗಿದೆ. ಈ ಒಂದು ಸಮಸ್ಯೆಗೆ ಸರ್ಕಾರ ಸ್ಪಂದಿಸಿ ರೈತರಿಗೆ ಸಹಕಾರ ನೀಡಬೇಕೆಂದು ಈ ಭಾಗದ ರೈತರು ಆಗ್ರಹಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

