ಶಿವಮೊಗ್ಗ

ಪಾಲಿಕೆ ಸದಸ್ಯತ್ವಕ್ಕೆ ರಾಜಿನಾಮೆ ಇಲ್ಲ: ಪ್ರಸನ್ನಕುಮಾರ್ ಇಂಗಿತ

Published On :

ಶಿವಮೊಗ್ಗ: ವಿಧಾನಸಭೆ ಚುನಾವಣೆಗಳು ಮುಗಿದು 7 ತಿಂಗಳು ಮುಗಿದು ಹೋಗಿವೆ. ಶಿವಮೊಗ್ಗ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ಕೆ.ಬಿ. ಪ್ರಸನ್ನಕುಮಾರ್ ಶಾಸಕರಾಗಿ ಈಗ ಕಾರ್ಯನಿರತರಾಗಿದ್ದಾರೆ. ಆದರೆ ಅವರು ನಗರಸಭೆ ಸದಸ್ಯತ್ವಕ್ಕೆ ರಾಜಿನಾಮೆ ಕೊಡಲಿಲ್ಲವೇಕೆ?
ಈಗ ರಾಜಿನಾಮೆ ಕೊಡುತ್ತಾರೆ, ಆಗ ಕೊಡುತ್ತಾರೆ ಎಂದು ನಗರಸಭೆಗೆ ಬರಲಿಚ್ಛಿಸಿದ್ಧ ಟಿಕೆಟ್ ಆಕಾಂಕ್ಷಿಗಳು ಕಾದಿದ್ದೇ ಬಂತು. ಶಾಸಕರಾಗಿ ಆಯ್ಕೆಯಾದ 6 ತಿಂಗಳೊಳಗೆ ಕೊಡುತ್ತಾರೆ ಎಂಬ ಚರ್ಚೆಗಳೂ ನಡೆದವು. ಆದರೆ ಪ್ರಸನ್ನಕುಮಾರ್ ಅವರು ನಗರಸಭೆ ಸದಸ್ಯತ್ವಕ್ಕೆ ರಾಜಿನಾಮೆ ಕೊಡಲೇ ಇಲ್ಲ. ನಗರಸಭೆಯ ಮಾಸಿಕ ಸಭೆಗಳಲ್ಲಿ ಭಾಗವಹಿಸುತ್ತಲೇ ಬಂದರು.
ಇವರು ನಗರಸಭೆಗೆ ಆಯ್ಕೆಯಾಗಿ ಮೂರ್ನಾಲ್ಕು ತಿಂಗಳಲ್ಲಿಯೇ ವಿಧಾನಸಭೆ ಚುನಾವಣೆ ನಡೆದಿತ್ತು. ಆದರೆ ನಗರಸಭೆ ಸದಸ್ಯತ್ವಕ್ಕೆ ರಾಜಿನಾಮೆ ಕೊಡಲಿಲ್ಲ. ಏಕೆಂದರೆ- ಅವರು ಶಾಸಕರಾಗಿ ಆಯ್ಕೆಯಾದ ನಂತರ ನಗರಸಭೆ ಸದಸ್ಯತ್ವಕ್ಕೆ ರಾಜಿನಾಮೆ ಕೊಡುವುದು ಕಡ್ಡಾಯವೇನಲ್ಲ. ಈ ಬಗ್ಗೆ ಕರ್ನಾಟಕ ಮುನ್ಸಿಪಾಲಿಟಿ ಅಧಿನಿಯಮವು ಈ ಕುರಿತು ಸ್ಪಷ್ಟವಾಗಿ ಹೇಳಿದೆ. ಈ ಕಾಯ್ದೆಯ 16ನೇ ಕಲಂನಲ್ಲಿ ನಗರಸಭೆ ಸದಸ್ಯತ್ವ ಅನರ್ಹತೆ ಬಗ್ಗೆ ಹಲವು ಅಂಶಗಳನ್ನು ವಿವರಿಸುತ್ತಾ, ಲಾಭದಾಯಕ ಹುದ್ದೆ ಹೊಂದಿದ್ದರೆ ಸದಸ್ಯತ್ವದಿಂದ ತೆಗೆಯಬಹುದು ಎನ್ನುತ್ತದೆ.
ಶಾಸಕರಾಗಿರುವುದು ಲಾಭದಾಯಕ ಹುದ್ದೆ ಅಲ್ಲ. ಈಗ ನಗರಸಭೆ ಪಾಲಿಕೆ ಆಗಿದೆ. ನಗರ ಪಾಲಿಕೆ ಕಾಯ್ದೆಯಲ್ಲಿಯೂ ಸಹ ರಾಜಿನಾಮೆ ಕೊಡಬೇಕೆಂಬ ಪ್ರಸ್ತಾವ ಇಲ್ಲ. ಪ್ರಜಾ ಪ್ರತಿನಿಧಿ ಕಾಯ್ದೆಯು ಎರಡು ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾದರು ಒಂದು ಕ್ಷೇತ್ರದ ಶಾಸಕತ್ವಕ್ಕೆ ರಾಜಿನಾಮೆ ಕೊಡಬೇಕೆಂದು ಹೇಳುತ್ತದೆಯೇ ಹೊರತು ನಗರ ಸ್ಥಳೀಯ ಸಂಸ್ಥೆ ಅಥವಾ ಪಂಚಾಯತ್ ರಾಜ್ ಸಂಸ್ಥೆಗೆ ಆಯ್ಕೆಯಾದರೆ ಏನು ಮಾಡಬೇಕೆಂಬ ಸೂಚನೆಗಳಿಲ್ಲ.

ಸರ್ಕಾರಕ್ಕೇ ಹೊರೆ
ಕಾಯ್ದೆಯಲ್ಲಿ ಎರಡೂ ಸ್ಥಾನದಲ್ಲಿ ಮುಂದುವರಿಯಲು ಅವಕಾಶವಿದೆ ಎನ್ನುವ ಕಾರಣಕ್ಕೆ ನಾನು ಮುಂದುವರಿಯುತ್ತಿಲ್ಲ ಎಂದು ಶಾಸಕ ಕೆ.ಬಿ. ಪ್ರಸನ್ನಕುಮಾರ್ ಸ್ಪಷ್ಟಪಡಿಸಿದ್ದಾರೆ.
ಈ ಕುರಿತು 'ಕನ್ನಡಪ್ರಭ' ಅವರನ್ನು ಸಂಪರ್ಕಿಸಿದಾಗ, ನಗರಸಭೆ ಸದಸ್ಯತ್ವಕ್ಕೆ ರಾಜಿನಾಮೆ ಕೊಟ್ಟಿದ್ದರೆ ಮತ್ತೆ ಚುನಾವಣೆ ನಡೆಯಬೇಕಿತ್ತು. ಸರ್ಕಾರಕ್ಕೆ ಹೊರೆಯಾಗುತ್ತಿತ್ತು. ಅಲ್ಲದೇ ಕೆಲವೇ ದಿನಗಳಲ್ಲಿ ನಗರಸಭೆಯು ನಗರ ಪಾಲಿಕೆ ಆಗುವುದಿತ್ತು. ಇದಕ್ಕಾಗಿ ಚುನಾವಣೆ ನಡೆಯಲೇಬೇಕಿತ್ತು. ಹಾಗಾಗಿ ನಗರಸಭೆ ಸದಸ್ಯತ್ವಕ್ಕೆ ರಾಜಿನಾಮೆ ಕೊಡಲಿಲ್ಲ ಎಂದರು.
ಈಗ ಶಿವಮೊಗ್ಗ ನಗರಸಭೆಯು ನಗರ ಪಾಲಿಕೆಯಾಗಿದೆ. ಇನ್ನೊಂದು ವರ್ಷದಲ್ಲಿ ಚುನಾವಣೆ ನಡೆಯಲೇಬೇಕು. ಈ ದಿಸೆಯಲ್ಲಿ ವಾರ್ಡ್‌ಗಳ ಪುನರ್ ವಿಂಗಡಣೆ ಪ್ರಕ್ರಿಯೆ ಶುರುವಾಗಿದೆ. ಈ ಹಿನ್ನೆಲೆಯಲ್ಲಿ ಶಾಸಕ ಕೆ.ಬಿ. ಪ್ರಸನ್ನ ಕುಮಾರ್ ಅವರು ಮುಂಬರುವ ಪಾಲಿಕೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದೂ ಸ್ಪಷ್ಟಪಡಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.