ಶಿವಮೊಗ್ಗ

ವೇತನ ಹೆಚ್ಚಳ; ಸರ್ಕಾರದೊಂದಿಗೆ ಚರ್ಚೆ ಭರವಸೆ

Published On :

ಕನ್ನಡಪ್ರಭ ವಾರ್ತೆ, ಸಾಗರ, ಜ.9
ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿರುವ ಗುತ್ತಿಗೆ ಪೌರಕಾರ್ಮಿಕರ ಜತೆ ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಅವರು ಗುರುವಾರ ಮಾತುಕತೆ ನಡೆಸಿದರು. ಕಾಗೋಡು ಅವರು ತಮ್ಮ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿರುವ ಹಿನ್ನೆಲೆಯಲ್ಲಿ ಕಾರ್ಮಿಕರು ಪ್ರತಿಭಟನೆ ಹಿಂದಕ್ಕೆ ಪಡೆದರು.
ಈ ಸಂದರ್ಭದಲ್ಲಿ ಮಾತನಾಡಿದ ಕಾಗೋಡು, ಗುತ್ತಿಗೆ ಪೌರ ಕಾರ್ಮಿಕರಿಗೆ ವೇತನ ಹೆಚ್ಚಿಸುವ ಕುರಿತು ಸರ್ಕಾರದ ಜತೆಗೆ ಮಾತುಕತೆ ನಡೆಸುವುದಾಗಿ ಭರವಸೆ ನೀಡಿದರು.
ಗುತ್ತಿಗೆದಾರರಿಗೆ ಎಚ್ಚರಿಕೆ:  ಗುತ್ತಿಗೆ ಪೌರ ಕಾರ್ಮಿಕರಿಗೆ ಕಳೆದ ಮಾರ್ಚ್‌ನಿಂದ 2013ರ ಜೂನ್‌ವರೆಗೆ ಪ್ರತಿ ತಿಂಗಳು 1524 ನಂತೆ ಅರಿಯರ್ಸ್ ರೂಪದಲ್ಲಿ ನೀಡಲಾಗುವುದು. ಸರ್ಕಾರ ನಿಗದಿಪಡಿಸಿದ ವೇತನವನ್ನು ಗುತ್ತಿಗೆದಾರರು ಕಡ್ಡಾಯವಾಗಿ ನೀಡಬೇಕು. ಒಂದೊಮ್ಮೆ ಗುತ್ತಿಗೆದಾರರು ನೌಕರರಿಗೆ ಮೋಸ ಮಾಡುವ ಪ್ರಯತ್ನ ಮಾಡಿದರೆ ಅಂತಹ ಗುತ್ತಿಗೆದಾರರ ವಿರುದ್ದ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು. ನೌಕರರಿಗೆ ಪ್ರತಿ ತಿಂಗಳು 1ನೇ ತಾರೀಖಿಗೆ ವೇತನ ಕೊಡಬೇಕು. ಜತೆಗೆ ತಿಂಗಳಿನ 30 ದಿನವೂ ಕೆಲಸ ಕೊಡಬೇಕು ಎಂದರು.
ಪೌರ ಕಾರ್ಮಿಕರಿಗೆ ಮಳೆಗಾಲದಲ್ಲಿ ರೈನ್‌ಕೋಟ್, ರಬ್ಬರ್ ಶ್ಯೂ, ಗ್ಲೌಸ್ ಇನ್ನಿತರ ಸುರಕ್ಷಿತ ಪರಿಕರಗಳನ್ನು ಗುತ್ತಿಗೆದಾರರು ನೀಡಬೇಕು. ಒಂದೊಮ್ಮೆ ಗುತ್ತಿಗೆದಾರರು ಸುರಕ್ಷಿತ ಪರಿಕರ ನೀಡದೆ ಹೋದರೆ ನಗರಸಭೆಯಿಂದ ಅದನ್ನು ಪೂರೈಸಿ, ಗುತ್ತಿಗೆದಾರರ ಹಣದಲ್ಲಿ ಅದನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು. ಕಾರ್ಮಿಕರು ಸಹ ನೀಡಿದ ಸೌಲಭ್ಯ ಸದುಪಯೋಗಪಡಿಸಿಕೊಂಡು, ಆರೋಗ್ಯ ರಕ್ಷಣೆ ಬಗ್ಗೆ ಸಹ ಗಮನ ಹರಿಸಬೇಕು ಎಂದು ಹೇಳಿದರು. ಪೌರಕಾರ್ಮಿಕರಿಗೆ ಹಿಂದೆ ಮನೆ ನಿರ್ಮಾಣಕ್ಕೆ ನಿವೇಶನ ನೀಡಲಾಗಿತ್ತು.
ಕೆಲವರು ಅಂತಹ ನಿವೇಶನ ಮಾರಾಟ ಮಾಡಿರುವ ದೂರುಗಳಿದೆ. ಅಧಿಕಾರಿಗಳು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಕ್ಕೆ ನೀಡಿದ ನಿವೇಶನವನ್ನು ಯಾರಾದರೂ ಖರೀದಿ ಮಾಡಿದ್ದರೆ ಅವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸುವ ಜತೆಗೆ ನಿವೇಶನ ಮುಟ್ಟುಗೋಲು ಹಾಕುವಂತೆ ಸೂಚನೆ ನೀಡಿದರು.
ಹೊಸ ಟೆಂಡರ್: ಉಪವಿಭಾಗಾಧಿಕಾರಿ ಹಾಗೂ ನಗರಸಭೆ ಆಡಳಿತಾಧಿಕಾರಿ ಡಾ.ಉದಯಕುಮಾರ್ ಶೆಟ್ಟಿ ಮಾತನಾಡಿ, ಸರ್ಕಾರ ಗುತ್ತಿಗೆ ಪೌರ ಕಾರ್ಮಿಕರಿಗೆ 216.20 ವೇತನ ನೀಡುತ್ತಿದ್ದು, ಮುಂದಿನ ಏಪ್ರಿಲ್‌ನಲ್ಲಿ ಹೊಸದಾಗಿ ಟೆಂಡರ್ ಕರೆಯಲಾಗುವುದು. ಈ ಸಂದರ್ಭದಲ್ಲಿ ವೇತನ ಇನ್ನಷ್ಟು ಹೆಚ್ಚುವ ಸಾಧ್ಯತೆ ಇದೆ. 2014ರ ಜನವರಿಯಿಂದ ಮೂರು ತಿಂಗಳವರೆಗೆ ಮಾತ್ರ ಟೆಂಡರ್ ಕರೆಯಲಾಗಿದ್ದು, ಏಪ್ರಿಲ್ ನಂತರ ಹೊಸ ಟೆಂಡರ್ ಕರೆದು ಗುತ್ತಿಗೆದಾರರನ್ನು ನೇಮಕ ಮಾಡಿಕೊಳ್ಳಲಾಗುವುದು. ಕಾರ್ಮಿಕರು ಮಾರಿಜಾತ್ರೆ ಹತ್ತಿರ ಬರುವುದರಿಂದ ತಮ್ಮ ಪ್ರತಿಭಟನೆ ಕೈಬಿಟ್ಟು ಕೆಲಸಕ್ಕೆ ಹಾಜರಾಗಬೇಕು ಎಂದು ವಿನಂತಿಸಿದರು.
ಪೌರಾಯುಕ್ತ ಬಿ.ಎ. ಚಂದ್ರಶೇಖರ್, ನಗರಸಭೆ ಸದಸ್ಯರು, ಕಿರಿಯ ಅಭಿಯಂತರ ಎಚ್.ಕೆ. ನಾಗಪ್ಪ, ಗುರುಪ್ರಸಾದ್, ಶೈಲೇಶ್, ಗುತ್ತಿಗೆ ಪೌರ ಕಾರ್ಮಿಕರ ಸಂಘದ ಅಧ್ಯಕ್ಷ ಗಣಪತಿ ಮತ್ತಿತರ ಪದಾಧಿಕಾರಿಗಳು ಹಾಜರಿದ್ದರು.

ಪೌರಕಾರ್ಮಿಕರ ಪ್ರತಿಭಟನೆ
ಸಾಗರ: ವಿವಿಧ ಬೇಡಿಕೆಗಳ ಈಡೇರಿಸುವಂತೆ ಒತ್ತಾಯಿಸಿ ನಗರಸಭೆಯ ಗುತ್ತಿಗೆ ಪೌರಕಾರ್ಮಿಕರ ಸಂಘದ ವತಿಯಿಂದ ಬುಧವಾರ ಪ್ರತಿಭಟನಾ ಮೆರವಣಿಗೆ ನಡೆಸಿ, ಪೌರಾಯುಕ್ತರಿಗೆ ಮನವಿ ಸಲ್ಲಿಸಲಾಯಿತು.
ಕಳೆದ 20 ವರ್ಷಗಳಿಂದ ನಗರಸಭೆಯಲ್ಲಿ ಗುತ್ತಿಗೆ ಪೌರ ಕಾರ್ಮಿಕರು ಕಾರ್ಯನಿರ್ವಹಿಸುತ್ತಿದ್ದು, ಗುತ್ತಿಗೆದಾರರು ಅವರಿಗೆ ನೀಡಬೇಕಾದ ಯಾವ ಸೌಲಭ್ಯವನ್ನು ಕೊಡುತ್ತಿಲ್ಲ. ಹಾಲಿ 107 ಜನರು ಗುತ್ತಿಗೆ ಪೌರ ಕಾರ್ಮಿಕರಾಗಿ ಕಾರ್ಯನಿರ್ವಹಿಸುತ್ತಿದ್ದು, ಪ್ರತಿದಿನ 198 ಸಂಬಳ ನೀಡಲಾಗುತ್ತಿದೆ. ಈಗಿನ ದುಬಾರಿಯ ಕಾಲದಲ್ಲಿ ಈ ಸಂಬಳ ಸಾಕಾಗುತ್ತಿಲ್ಲ. ಈ ವೇತನದಿಂದ ಕುಟುಂಬ ನಿರ್ವಹಣೆ ಕಷ್ಟವಾಗುತ್ತಿದೆ ಎಂದು ಪ್ರತಿಭಟನಾಕಾರರು ದೂರಿದರು.
350 ದಿನಭತ್ಯೆ: ಕನಿಷ್ಠ 350 ದಿನಭತ್ಯೆ ನಿಗದಿಪಡಿಸಿ, ಪಾವತಿ ಮಾಡುವಂತೆ ಆದೇಶ ಮಾಡಬೇಕು. ತಕ್ಷಣ ಈ ಬಗ್ಗೆ ಕ್ರಮ ಕೈಗೊಳ್ಳದೆ ಹೋದಲ್ಲಿ ನೈರ್ಮಲ್ಯ ಕಾರ್ಯ ನಿಲ್ಲಿಸಿ ನಿರಂತರ ಸತ್ಯಾಗ್ರಹ ನಡೆಸುವುದಾಗಿ ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.
ಸಂಘದ ಅಧ್ಯಕ್ಷ ಗಣಪತಿ, ಉಪಾಧ್ಯಕ್ಷರಾದ ನಾಗರಾಜ್, ರಾಜೇಂದ್ರ, ಕಾರ್ಯದರ್ಶಿ ಮುರುಗೇಶ್, ಖಜಾಂಚಿ ಕಣ್ಣನ್, ಗೌರವಾಧ್ಯಕ್ಷ ತಂಗರಾಜ್, ಪ್ರಮುಖರಾದ ಸುಮಿತ್ರ, ಸೋಮಿ, ಚೆಲುವಿ, ಜ್ಞಾನ ಪ್ರಕಾಶ್, ಬುದ್ದ, ಗಣೇಶ್, ಸತೀಶ, ಕೃಷ್ಣ ಹಾಜರಿದ್ದರು.
ಕಾನೂನು ಕ್ರಮ: ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಪೌರ ಸೇವಾ ನೌಕರರ ಸಂಘದ ಅಧ್ಯಕ್ಷ ಎಚ್.ಕೆ. ನಾಗಪ್ಪ, ಕಾರ್ಮಿಕರನ್ನು ವಂಚಿಸುತ್ತಿರುವ ಗುತ್ತಿಗೆದಾರರ ವಿರುದ್ಧ ನಗರಸಭೆ ವತಿಯಿಂದ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.