ಶಿವಮೊಗ್ಗ

ಆಗುಂಬೆ ಘಾಟಿ ಅಭಿವೃದ್ಧಿ, ನಗರಕ್ಕೆ ಇಎಸ್‌ಐ ಆಸ್ಪತ್ರೆ

Published On :

ಕ.ಪ್ರ.ವಾರ್ತೆ, ಶಿವಮೊಗ್ಗ, ಜ. 12
ಮಲೆನಾಡು ಹಾಗೂ ಕರಾವಳಿ ಭಾಗಕ್ಕೆ ಸಂಪರ್ಕ ಕಲ್ಪಿಸುವ ಆಗುಂಬೆ ಘಾಟಿ ಅಭಿವೃದ್ಧಿಗೆ ಕೂಡಲೇ ಕ್ರಮ ಕೈಗೊಳ್ಳುವ ಜೊತೆಗೆ ಶಿವಮೊಗ್ಗದಲ್ಲಿ ಇಎಸ್‌ಐ ಆಸ್ಪತ್ರೆಯನ್ನು ಆದ್ಯತೆ ಮೇಲೆ ಆರಂಭಿಸುವ ಬಗ್ಗೆ ಶೀಘ್ರವೇ ನಿರ್ಧರಿಸಲಾಗುತ್ತದೆ ಎಂದು ಕೇಂದ್ರ ಸಚಿವ ಆಸ್ಕರ್ ಫರ್ನಾಂಡೀಸ್ ಹೇಳಿದ್ದಾರೆ.
ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆಯೇ ಆಗುಂಬೆ ಘಾಟ್ ಅಗಲೀಕರಣಕ್ಕೆ ಕೇಂದ್ರ ಪರಿಸರ ಸಚಿವಾಲಯದ ಅನುಮತಿ ಈಗಾಗಲೇ ಸಿಕ್ಕಿದ್ದು, ಮತ್ತೆ ಅನುಮತಿ ಪಡೆಯುವ ಅಗತ್ಯವಿಲ್ಲ. ಅಭಿವೃದ್ಧಿ ಕಾರ್ಯಕೈಗೆತ್ತಿಕೊಳ್ಳುವುದೊಂದೇ ಬಾಕಿ ಎಂದರು.
ಕ್ರಮಕ್ಕೆ ಡಿಪಿಆರ್‌ಗೆ ಸೂಚನೆ: ಘಾಟಿ ರಸ್ತೆ ಅರ್ಧ ಭಾಗ ಕಾಂಕ್ರಿಟ್ ಆಗಿದೆ. ಇನ್ನರ್ಧ ಭಾಗ ಆಗಬೇಕಾಗಿದೆ. ಜೊತೆಗೆ ಇಲ್ಲಿ ನಡೆಯುವ ಕಾಮಗಾರಿ ತಾತ್ಕಾಲಿಕವಾಗಿರದೇ ಬಹುಕಾಲ ಬಾಳಿಕೆ ಬರುವಂತಿರಬೇಕೆಂಬುದು ನಮ್ಮ ಆಶಯ. ಈ ನಿಟ್ಟಿನಲ್ಲಿ ಸೂಕ್ತ ಕ್ರಮಕ್ಕೆ ಡಿಪಿಆರ್‌ಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.
ರಾಜ್ಯ ಹೆದ್ದಾರಿಯಾಗಿರುವ ತೀರ್ಥಹಳ್ಳಿ- ಮಣಿಪಾಲದ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿಸುವ ಉದ್ದೇಶವಿದೆ ಎಂದ ಅವರು, ಆಗುಂಬೆ ಘಾಟಿಯಲ್ಲಿನ ತಿರುವು ರಸ್ತೆಯನ್ನು ಎಷ್ಟು ಅಗಲೀಕರಣ ಮಾಡಬೇಕೆಂದು ಇನ್ನೂ ತೀರ್ಮಾನಿಸಿಲ್ಲ. ಆದರೆ ರಾಷ್ಟ್ರೀಯ ಹೆದ್ದಾರಿಯ ಮಾನದಂಡದ ಪ್ರಕಾರವೇ ಕಾಮಗಾರಿ ನಡೆಯಲಿದೆ ಎಂದು ವಿವರಿಸಿದರು.
ರಾಹುಲ್ ಸ್ಪರ್ಧಿಸಲಿ: ರಾಹುಲ್ ಗಾಂಧಿಯವರು ಕರ್ನಾಟಕದಿಂದ ಲೋಕಸಭೆಗೆ ಸ್ಪರ್ಧಿಸಲಿ ಎಂಬುದು ನಮ್ಮೆಲ್ಲರ ಆಶಯವಾಗಿದೆ ಎಂದು ಪ್ರಶ್ನೆಯೊಂದಕ್ಕೆ ಆಸ್ಕರ್ ಪ್ರತಿಕ್ರಿಯಿಸಿದರು. ಎಲ್ಲವನ್ನೂ ಹೈಕಮಾಂಡ್ ನಿರ್ಧರಿಸಲಿದೆ ಎಂದ ಅವರು, ಟಿಕೆಟ್ ನೀಡುವಾಗ ಗೆಲ್ಲುವ ಅಭ್ಯರ್ಥಿಗಳ ಆಯ್ಕೆ ಎಷ್ಟು ಮುಖ್ಯವೋ ಎಲ್ಲರನ್ನೂ ಒಟ್ಟಿಗೆ ಕರೆದುಕೊಂಡು ಹೋಗುವುದೂ ಅವಶ್ಯವಾಗಿದೆ ಎಂದು ಹೇಳಿದರು.
ಶೀಘ್ರವಾಗಿ ಲೋಕಸಭೆ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಮಾಡಲಾಗುವುದು. ಅಭ್ಯರ್ಥಿ ಆಯ್ಕೆಯಲ್ಲಿ ಚುನಾವಣಾ ಸಮಿತಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ತೀರ್ಮಾನವೇ ಅಂತಿಮವಾಗಲಿದೆ ಎಂದರು.
ಶರದ್ ಪವಾರ್ ಮುಂದಿನ ಪ್ರಧಾನಿಯಾಗಲಿ ಎಂಬ ಕೇಂದ್ರ ಗೃಹಸಚಿವ ಸುಶೀಲ್‌ಕುಮಾರ್ ಶಿಂಧೆ ಹೇಳಿಕೆಯಲ್ಲಿ ಯಾವುದೇ ಗೊಂದಲವಿಲ್ಲ. ಯುಪಿಎ ಭಾಗವಾಗಿರುವ ಶರದ್ ಪವಾರ್ ಪರವಾಗಿ ಶಿಂಧೆ ಹೇಳಿಕೆ ನೀಡಿದ್ದಾರೆ. ಇದರಲ್ಲಿ ವಿವಾದವಾಗುವ ಯಾವುದೇ ಅಂಶಗಳಿಲ್ಲ ಎಂದು ಹೇಳಿದರು.
ಅಸಮಾಧಾನ: ಭೂ ಸ್ವಾಧೀನ ಪ್ರಕ್ರಿಯೆ ವಿಳಂಬವಾದ ಕಾರಣ 14 ಪ್ರಮುಖ ಯೋಜನೆಗಳಿಗೆ ಅನುಮೋದನೆ ಸಿಕ್ಕಿದ್ದರೂ ಅದು ಕಾರ್ಯಗತವಾಗುತ್ತಿಲ್ಲ. ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಗುಜರಾತ್, ತಮಿಳುನಾಡು, ಉತ್ತರ ಪ್ರದೇಶ ಸರ್ಕಾರಗಳು ಸಹಕರಿಸುತ್ತಿಲ್ಲ ಎಂದು ಕೇಂದ್ರ ಭೂ ಸಾರಿಗೆ ಸಚಿವ ಆಸ್ಕರ್ ಫರ್ನಾಂಡಿಸ್ ಅವರು ಕಾಂಗ್ರೆಸ್ಸೇತರ ಸರ್ಕಾರದ ವಿರುದ್ಧ ಪರೋಕ್ಷವಾಗಿ ಹರಿಹಾಯ್ದಿದ್ದಾರೆ.
ಭೂ ಸ್ವಾಧೀನವೇ ತೊಡಕಾಗಿ ಪರಿಣಮಿಸಿದೆ. ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಅಗತ್ಯವಾದ ಭೂಮಿ ಹಾಗೂ ಪರಿಸರ ಸಚಿವಾಲಯದಿಂದ ನಿರಾಪೇಕ್ಷಣಾ ಪತ್ರ ಪಡೆಯುವುದು ಆಯಾ ರಾಜ್ಯಗಳ ಜವಾಬ್ದಾರಿ ಇವೆರಡೂ ವಿಷಯಕ್ಕೆ ಸಂಬಂಧಿಸಿದಂತೆ ರಾಜ್ಯಗಳು ಹೇಗೆ ನಿರ್ಧಾರ ಕೈಗೊಳ್ಳುತ್ತವೆ ಎಂಬುದು ಮುಖ್ಯವಾಗುತ್ತದೆ ಎಂದರು.
ತಮಿಳುನಾಡು, ಉತ್ತರ ಪ್ರದೇಶ, ಗುಜರಾತ್ ಮುಂತಾದ ರಾಜ್ಯಗಳಿಂದ ಯೋಜನೆಗಳಿಗೆ ಸೂಕ್ತ ಪ್ರತಿಕ್ರಿಯೆ ಸಿಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ಎನ್‌ಡಿಎ ಅಧಿಕಾರಾವಧಿಯಲ್ಲಿ ಹಳೆಯ ರಸ್ತೆಗಳನ್ನೇ ಅಭಿವೃದ್ಧಿಪಡಿಸಿದ್ದರು. ಯುಪಿಎ ಸರ್ಕಾರ ಹೊಸ ಯೋಜನೆಗಳನ್ನು ಕೈಗೆತ್ತಿಕೊಂಡಿದೆ. ಜೊತೆಗೆ ಹಿಂದಿನ ರಸ್ತೆಗಳನ್ನೂ ಅಭಿವೃದ್ಧಿಪಡಿಸುತ್ತಿದ್ದೇವೆ ಎಂದು ಹೇಳಿದರು.
ಅಸ್ಸಾಂನ ಚಹಾ ತೋಟದ ಕಾರ್ಮಿಕರಿಗೆ 50-60 ದಿನವಹಿ ಕೂಲಿ ಸಿಗುತ್ತಿದೆ. ಆದರೆ ನಮ್ಮ ರಾಜ್ಯದಲ್ಲಿ ಕೃಷಿ ಕಾರ್ಮಿಕರಿಗೆ 200-300 ಇದೆ. ಇದೇ ವಿಷಯ ಕೈಗಾರಿಕೆಗಳಿಗೂ ಅನ್ವಯವಾಗುತ್ತದೆ. ಮ್ಯಾನ್ ಪವರ್ ಏಜೆನ್ಸಿಗಳ ಗುತ್ತಿಗೆ ಕಾರ್ಮಿಕರಿಗೂ ಕಾಯಂ ನೌಕರರಷ್ಟೇ ವೇತನ ಸಿಗಬೇಕು. ಈ ನಿಟ್ಟಿನಲ್ಲಿ ಅಗತ್ಯ ಕಾರ್ಮಿಕ ನೀತಿ ರೂಪಿಸುವುದಾಗಿ ತಿಳಿಸಿದರು.
ಗೋಷ್ಠಿಯಲ್ಲಿ ಶಾಸಕ ಕೆ.ಬಿ. ಪ್ರಸನ್ನಕುಮಾರ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಆರ್.ಪ್ರಸನ್ನಕುಮಾರ್, ಮಾಜಿ ಶಾಸಕ ಕರಿಯಣ್ಣ, ಪ್ರಮುಖರಾದ ಇಸ್ಮಾಯಿಲ್ ಖಾನ್, ಮಂಜುನಾಥ ಭಂಡಾರಿ, ಎನ್. ರಮೇಶ್, ರುದ್ರೇಶ್ ಮುಂತಾದವರಿದ್ದರು.

ಸೌಲಭ್ಯ ಒದಗಿಸಿ ವಲಸೆ ತಡೆಗಟ್ಟಿ
ಕ.ಪ್ರ.ವಾರ್ತೆ, ಶಿವಮೊಗ್ಗ, ಜ. 12
ಭಾರತದ ಯುವಜನತೆ ಬಗ್ಗೆ ಎಚ್ಚರದಿಂದಿರುವಂತೆ ಅಮೆರಿಕಾದ ಅಧ್ಯಕ್ಷರೇ ತಮ್ಮ ದೇಶದ ಯುವಕರಿಗೆ ಹೇಳಿದ್ದಾರೆ. ಅಷ್ಟೊಂದು ಸಾಮರ್ಥ್ಯ, ಪ್ರತಿಭೆ ನಮ್ಮ ಯುವಜನತೆಯಲ್ಲಿದೆ. ಅದು ಸದ್ಬಳಕೆಯಾಗಬೇಕು ಎಂದು ಕೇಂದ್ರ ಭೂ ಸಾರಿಗೆ ಮತ್ತು ಕಾರ್ಮಿಕ ಇಲಾಖೆ ಸಚಿವ ಆಸ್ಕರ್ ಫರ್ನಾಂಡಿಸ್ ಹೇಳಿದರು.
ಇಲ್ಲಿನ ಸುವರ್ಣ ಸಂಸ್ಕೃತಿ ಭವನದಲ್ಲಿ ಭಾನುವಾರ ಹೊಸ ಬೆಳಕು ಚಾರಿಟಬಲ್ ಟ್ರಸ್ಟ್ ಆಯೋಜಿಸಿದ್ದ ನಾಯಕತ್ವ ಮತ್ತು ಕೌಶಲ್ಯ ತರಬೇತಿ ಕಾರ್ಯಾಗಾರದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ನಾಯಕತ್ವ ಗುಣ: ಕಾರ್ಯಾಗಾರ ಉದ್ಘಾಟಿಸಿ ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಮಾತನಾಡಿ, ಗ್ರಾಪಂ, ತಾಪಂ, ಜಿಪಂ ಆಡಳಿತ ಸತ್ತು ಹೋಗಿದೆ. ಅರ್ಹರಿಗೆ ವೃದ್ಧಾಪ್ಯವೇತನ ಕೊಡಿಸೋದು ಕಷ್ಟ. ಸಾಗುವಳಿ ಚೀಟಿ ನೀಡಿ ಐದು ವರ್ಷವಾದರೂ ಖಾತೆ ಆಗಿಲ್ಲ. ವ್ಯವಸ್ಥೆ ಹದಗೆಟ್ಟುಹೋಗಿದೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರದ ಎನ್‌ಆರ್‌ಇಜಿ ಉತ್ತಮ ಯೋಜನೆ. ಆದರೆ, ಸಮರ್ಪಕವಾಗಿ ಜಾರಿಗೊಳಿಸಲು ಆಗುತ್ತಿಲ್ಲ. ಈ ಯೋಜನೆ ಜನಪ್ರತಿನಿಧಿಗಳಿಗೆ ಬೇಡವಾಗಿದೆ. ಅವರಿಗೆ ಯೋಜನೆ ಅನುಷ್ಠಾನಗೊಳಿಸುವಲ್ಲಿ ಬದ್ಧತೆ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಎಐಸಿಸಿ ಸದಸ್ಯ ಮಂಜುನಾಥ ಭಂಡಾರಿ, ಸಚಿವ ಕಿಮ್ಮನೆ ರತ್ನಾಕರ್, ಕಾಂಗ್ರೆಸ್ಮುಖಂಡ ಗಫೂರ್, ಹೊಸಬೆಳಕು ಚಾರಿಟಬಲ್ ಟ್ರಸ್ಟ್‌ನ ಬಸವರಾಜ್, ದತ್ತ, ಚೇತನ್‌ರಾಮ್, ಗಣೇಶ್ ಭಟ್, ಪ್ರವೀಣ ಚಕ್ರವರ್ತಿ ಮತ್ತಿತರರು ವೇದಿಕೆಯಲ್ಲಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.