ಶಿವಮೊಗ್ಗ

ಬಿಜೆಪಿಗೆ ಹೋಗುವ ಮಾತೇ ಇಲ್ಲ

Published On :

ಕ.ಪ್ರ.ವಾರ್ತೆ   ಹೊಸನಗರ   ಜ. 13
ಕೆಜೆಪಿ- ಬಿಜೆಪಿ ವಿಲೀನಗೊಂಡಿದ್ದರೂ ನಾನು ಮಾತ್ರ ಬಿಜೆಪಿ ಹೋಗುವ ಮಾತೇ ಇಲ್ಲ. ಬೆನ್ನಿಗೆ ಚೂರಿ ಹಾಕುವವರೊಂದಿಗೆ ಹೊಂದಾಣಿಕೆ ಹೇಗೆ ಸಾಧ್ಯ ಎಂದು ರಾಜ್ಯ ಅಪೆಕ್ಸ್ ಅಧ್ಯಕ್ಷ ಆರ್.ಎಂ. ಮಂಜುನಾಥಗೌಡ ಸ್ಪಷ್ಟಪಡಿಸಿದ್ದಾರೆ.
ತಾಲೂಕಿನ ಕರಿಮನೆ ಚಂಡಿಕೇಶ್ವರಿ ಸಭಾಂಗಣದಲ್ಲಿ ಮುಂದಿನ ರಾಜಕೀಯ ನಿರ್ಧಾರದ ಬಗ್ಗೆ ಕಾರ್ಯಕರ್ತರಿಂದ ಅಭಿಪ್ರಾಯ ಪಡೆದ ಅವರು, ಮುಂದಿನ ಹೆಜ್ಜೆ ಬಗ್ಗೆ ಶೀಘ್ರದಲ್ಲೇ ತೀರ್ಮಾನ ಪ್ರಕಟಿಸುತ್ತೇನೆ ಎಂದರು.
ಬಿಎಸ್ವೈ ನಿಲುವು ಸರಿಯಿಲ್ಲ: ಮಾಜಿ ಮುಖ್ಯಮಂತ್ರಿ ಬಂಗಾರಪ್ಪ, ಜೆ.ಎಚ್. ಪಟೇಲ್ರನ್ನು ಅತ್ಯಂತ ಗೌರವದಿಂದ ಕಂಡಿದ್ದೇನೆ ಮತ್ತು ಬೆರೆತಿದ್ದೇನೆ. ಅದೇ ರೀತಿ ಬಿ.ಎಸ್. ಯಡಿಯೂರಪ್ಪರ ಬಗ್ಗೆ ಕೂಡ ಗೌರವ ಹೊಂದಿದ್ದು, ಕೆಜೆಪಿ ಕಟ್ಟಿದಾಗ ಅವರ ಬೆಂಬಲಕ್ಕೆ ನಿಂತಿದ್ದೆ. ಆದರೆ ಬಿಜೆಪಿಯೊಂದಿಗೆ ವಿಲೀನ ನನಗೆ ಯಾಕೋ ಸರಿ ಕಾಣುತ್ತಿಲ್ಲ ಎನ್ನುವ ಮೂಲಕ ಬಿಜೆಪಿ ಬಗ್ಗೆ ತಮ್ಮ ನಿಲುವನ್ನು ಬಹಿರಂಗಗೊಳಿಸಿದ್ದಾರೆ.
ಕೆಜೆಪಿ ಕಟ್ಟಿದ ಕಾರ್ಯಕರ್ತರು ಮತ್ತು ಬೆಂಬಲಿಗರ ಭವಿಷ್ಯದ ಬಗ್ಗೆ ಯೋಚಿಸುತ್ತಿದ್ದೇನೆ. ಬಿಜೆಪಿಗೆ ಹೋದಲ್ಲಿ ಕಿರುಕುಳ ತಪ್ಪಿದ್ದಲ್ಲ. ಹಾಗಾಗಿ ವಿಭಿನ್ನವಾಗಿ ಆಲೋಚಿಸುತ್ತಿದ್ದು, ಶೀಘ್ರದಲ್ಲಿ ತೀರ್ಮಾನ ಕೈಗೊಳ್ಳುತ್ತೇನೆ. ಬೆಂಬಲಿಗರಾರು ಆತಂಕಗೊಳ್ಳುವ ಅಗತ್ಯವಿಲ್ಲ ಎಂದರು. ಹಾಗಂತ ಕಾಂಗ್ರೆಸ್, ಜೆಡಿಎಸ್ ಬಗ್ಗೆ ಉತ್ತಮ ಭಾವನೆ ಇಲ್ಲ. ದೆಹಲಿಯಲ್ಲಿ ಆಮ್ ಆದ್ಮಿ ಸರ್ಕಾರ ರಚನೆಯಾಗಿರುವುದು ನೋಡಿದರೆ ರಾಜಕೀಯ ದಿಕ್ಸೂಚಿ ಬದಲಾಗುತ್ತಿದೆ. ಬಿಜೆಪಿ ಮೋದಿಯನ್ನು ಪ್ರಧಾನಿ ಅಭ್ಯರ್ಥಿ ಎಂದು ಬಿಂಬಿಸಿದರೂ ರಾಜಧಾನಿಯಲ್ಲಿ ಸರ್ಕಾರ ರಚಿಸಲು ಸಾಧ್ಯವಾಗಿಲ್ಲ. ಕಾಂಗ್ರೆಸ್ ಭ್ರಷ್ಟಾಚಾರದಲ್ಲಿ ಮುಳುಗಿದೆ. ಇನ್ನು ಅತ್ಯಧಿಕ ಸ್ಥಾನ ಹೊಂದಿರುವ ಉತ್ತರಪ್ರದೇಶದಲ್ಲೂ ಕಾಂಗ್ರೆಸ್ ಬಿಜೆಪಿ ಆಟ ನಡೆಯುವ ಸಾಧ್ಯತೆ ಇಲ್ಲ. ಅಲ್ಲೇನಿದ್ದರೂ ಎಸ್.ಪಿ ಮತ್ತು ಬಿಎಸ್ಪಿ ನಡುವೆ ಸ್ಪರ್ಧೆ ಕಂಡುಬರುತ್ತಿದೆ ಎಂದರು.
ವಿಭಿನ್ನ ಅಭಿಪ್ರಾಯ: ಇದಕ್ಕೂ ಮುನ್ನ ತಮ್ಮ ಅಭಿಪ್ರಾಯ ತಿಳಿಸಿದ ಕಾರ್ಯಕರ್ತರಲ್ಲಿ ಕೆಲವರು ಯಾವುದೇ ಪಕ್ಷ ಹೋಗೋದು ಬೇಡ. ಲೋಕಸಭಾ ಚುನಾವಣೆಯಲ್ಲಿ ಮೋದಿಗೆ ಬೆಂಬಲಿಸೋಣ, ಇನ್ನು ಕೆಲವರು ತಟಸ್ಥವಾಗಿರಿ ಎಂದರೆ ಬಹುತೇಕ ಕಾರ್ಯಕರ್ತರು ನಿಮ್ಮ ನಿರ್ಧಾರಕ್ಕೆ ನಾವು ಬದ್ಧರಾಗಿದ್ದೇವೆ ಎಂದು ಬೆಂಬಲ ವ್ಯಕ್ತಪಡಿಸಿದರು.
ಪ್ರಮುಖರಾದ ಸಚೀಂದ್ರ ಹೆಗಡೆ, ಮಾಸ್ತಿಕಟ್ಟೆ ಸುಬ್ರಹ್ಮಣ್ಯ, ದೊಡ್ಲೆಪಾಲ್ ಚಂದ್ರಶೇಖರ್, ಡಿ.ಟಿ. ಸತ್ಯನಾರಾಯಣ, ಸುಧೀರ್, ದೇವೇಂದ್ರ, ಸುಮಾ ಸುಬ್ರಹ್ಮಣ್ಯ, ಸುಷ್ಮಾ ಸಂಜಯ್, ವಿದ್ಯಾಧರ್, ಗುರುಶಂಕರ್ ಶ್ರೀಧರಶೆಟ್ಟಿ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.