ರಾಷ್ಟ್ರಮಟ್ಟದಲ್ಲಿ ಸೊರಗಿದ ಶಿಕಾರಿಪುರ ಇತಿಹಾಸ

Updated on

ಶಿಕಾರಿಪುರ: ತಾಲೂಕಿನ ವಿವಿಧ ಸ್ಥಳಗಳು ಐತಿಹಾಸಿಕವಾಗಿ ಪ್ರಸಿದ್ಧಿ ಹೊಂದಿದ್ದು, ಹೆಸರಾಂತ ಸಾಹಿತಿಗಳು ಜನಿಸಿ ಫಲವತ್ತಾದ ನದಿ, ಸ್ಮಾರಕಗಳನ್ನು ಹೊಂದಿದ್ದರೂ ರಾಷ್ಟ್ರಮಟ್ಟದಲ್ಲಿ ಶಿಕಾರಿಪುರ ಗುರುತಿಸಿಕೊಳ್ಳುವಲ್ಲಿ ವಿಫಲವಾಗಿರುವುದು ದುರ್ದೈವದ ಸಂಗತಿ ಎಂದು ಅಖಿಲ ಭಾರತ ರಾಷ್ಟ್ರೀಯ ಕಾಂಗ್ರೆಸ್ ಸಮಿತಿ ಸದಸ್ಯ ಮಂಜುನಾಥ ಭಂಡಾರಿ ವಿಷಾದ ವ್ಯಕ್ತಪಡಿಸಿದರು.
ಪಟ್ಟಣದ ಸುದ್ದಿಮನೆಯಲ್ಲಿ ಸೋಮವಾರ ಸ್ಥಳೀಯ ಶ್ರೀ ಬ್ರಾಂತೇಶ ಚಿತ್ರದ ವತಿಯಿಂದ ನಿರ್ಮಾಣವಾದ ಕನ್ನೇಶ್ವರ ರಾಮ ಕಿರುಚತ್ರವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ಐತಿಹಾಸಿಕವಾಗಿ ಶಿಕಾರಿಪುರ ತಾಲೂಕಿನ ಬಳ್ಳಿಗಾವಿ, ಕೋಟಿಪುರ ಮತ್ತಿತರ ಹಲವು ಸ್ಥಳಗಳು ರಾಜಮಹಾರಾಜರ ಮೂಲಸ್ಥಳವಾಗಿ ಇಂದಿಗೂ ಅಲ್ಲಿನ ಸುಂದರ ಕೆತ್ತನೆಯ ಶಿಲ್ಪದ ದೇವಾಲಯಗಳು ವಿಶ್ವಪ್ರಸಿದ್ಧವಾಗಿದೆ ಎಂದರು.
ವಿಪರ್ಯಾಸ:  ಇಂಥ ಪ್ರಸಿದ್ಧ ಸ್ಥಳಗಳು ತಾಲೂಕಿನಲ್ಲಿ ವಿವಿಧ ಕಡೆಗಳಲ್ಲಿ ಅವ್ಯಾಹತವಾಗಿವೆ. ಇದರೊಂದಿಗೆ ಶಾಂತ ಹಾಗೂ ಫಲವತ್ತಾದ ಸುಂದರ ಪ್ರದೇಶವನ್ನು ಒಳಗೊಂಡಿದ್ದು, ರಾಷ್ಟ್ರಕವಿ ಜ್ಞಾನಪೀಠ ಪ್ರಶಸ್ತಿ ವಿಜೇತ ಜಿ.ಎಸ್. ಶಿವರುದ್ರಪ್ಪ ಮತ್ತಿತರರು ಜನಿಸಿದ ಸ್ಥಳವಾದರೂ ಇಂದಿಗೂ ಕೇವಲ ಪ್ರಸಿದ್ಧ ಕವಿ, ಐತಿಹಾಸಿಕ ಮಹತ್ವ ಪಡೆದ ಸ್ಥಳ ಎಂಬ ಹೆಗ್ಗಳಿಕೆಯನ್ನು ಹೊರತುಪಡಿಸಿ ಶಿಕಾರಿಪುರ ಹೊರ ಜಗತ್ತನ್ನು ಆಕರ್ಷಿಸುವ ಕೇಂದ್ರವಾಗಿ ಗೋಚರಿಸದಿರುವುದು ವಿಪರ್ಯಾಸ ಎಂದರು.
ಆರೋಪ ಮಾಡದಿರಿ:  ತಾಲೂಕಿನ ಇತಿಹಾಸವನ್ನು ಜನತೆಗೆ ಪರಿಚಯಿಸುವ ಕಾರ್ಯ ಕೇವಲ ಸರ್ಕಾರ ಸ್ಥಳೀಯ ಆಡಳಿತದ ಜವಾಬ್ದಾರಿ ಮಾತ್ರವಲ್ಲವಾಗಿದೆ. ಈ ಬಗ್ಗೆ ಸ್ಥಳೀಯ ಮುಖಂಡರು ಕಿರುಚಿತ್ರದ ಮೂಲಕ ಜನತೆಗೆ ಇತಿಹಾಸವನ್ನು ಪರಿಚಯಿಸುವ ಕಾರ್ಯ ಅತ್ಯಂತ ತುರ್ತಾಗಿ ನಡೆಯಬೇಕಿದೆ. ಈ ದಿಸೆಯಲ್ಲಿ ಸರ್ಕಾರದ ವಿರುದ್ಧ ಆರೋಪ ಮಾಡದಂತೆ ತಿಳಿಸಿದರು.
ಪ್ರಯತ್ನಿಸಿ:  ಕನ್ನಡದ ಪ್ರಮುಖ ಶಬ್ಧಗಳು ಮರೆಯಾಗುವ ಅಂಚಿನಲ್ಲಿವೆ. ಇಂತಹ ಸಂದರ್ಭದಲ್ಲಿ ಇತಿಹಾಸದ ನೆನೆಪು ಶಾಶ್ವತವಾಗಿ ಕಣ್ಮರೆ ಆಗುವ ಸಾಧ್ಯತೆ ಹೆಚ್ಚಾಗಿದೆ ಎಂದ ಅವರು, ಕುಟುಂಬಕ್ಕೆ ಏಕೈಕ ಮಗು ಎಂಬ ಪದ್ಧತಿಯ ಜಾರಿಯಿಂದಾಗಿ ಅತ್ತೆ, ಮಾವ ಮತ್ತಿತರ ಶಬ್ಧ ಶೀಘ್ರದಲ್ಲಿ ಮರೆಯಾಗಲಿವೆ. ಇದರೊಂದಿಗೆ ಲೀವಿಂಗ್ ಟುಗೆದರ್ ಸಂಸ್ಕೃತಿಯಿಂದಾಗಿ ಮಕ್ಕಳನ್ನು ಹಾಸ್ಟೆಲ್ಗೆ ದಾಖಲಿಸಿ ಅಪ್ಪ, ಅಮ್ಮ ಶಬ್ಧವು ಮರೆಯಾಗುವ ಕಾಲ ಸನ್ನಿಹಿತವಾಗಲಿದೆ ಎಂದು ಕಳವಳ ವ್ಯಕ್ತಪಡಿಸಿ, ಮುಂದಿನ ಪೀಳಿಗೆಗೆ ಕಲೆ ಉಳಿಯಲು ಇತಿಹಾಸ ನೆನಪಿಸಲು ಯುವಪೀಳಿಗೆ ನಾಟಕ, ಕಿರುಚಿತ್ರದ ಮೂಲಕ ಪ್ರಯತ್ನವನ್ನು ನಡೆಸುವಂತೆ ತಿಳಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ಕೆಪಿಸಿಸಿ ಸದಸ್ಯ ಮಾಜಿ ಶಾಸಕ ಶಾಂತವೀರಪ್ಪಗೌಡ ಮಾತನಾಡಿ, ಪರಕೀಯರ ದಾಸ್ಯದಿಂದ ದೇಶವನ್ನು ಮುಕ್ತಗೊಳಿಸಿ ಸ್ವಾತಂತ್ರ ದೊರಕಿಸಲು ಹಲವರು ತಮ್ಮದೇ ರೀತಿಯಲ್ಲಿ ಹೋರಾಟವನ್ನು ಕೈಗೊಂಡಿದ್ದಾರೆ. ಈ ದಿಸೆಯಲ್ಲಿ ಕನ್ನೇಶ್ವರ ರಾಮ ಶ್ರೀಮಂತರ ಮನೆಯನ್ನು ಕೊಳ್ಳೆ ಹೊಡೆಯುವುದಾಗಿ ತಿಳಿಸಿ, ದರೋಡೆ ನಡೆಸಿ ಬಡವರಿಗೆ ಸಹಾಯ ಮಾಡುವ ಮೂಲಕ ಚರಿತ್ರೆ ರಚಿಸಿದ ಎಂದು ತಿಳಿಸಿದರು.
ನಾಟ್ಯರಾಣಿ ಶಾಂತಲೆ, ಶಿವಪ್ಪ ನಾಯಕರ ಪತ್ನಿ ಚೆನ್ನಮ್ಮ, ಶೂನ್ಯ ಸಿಂಹಾಸನಾಧೀಶ ಅಲ್ಲಮಪ್ರಭು ಮತ್ತಿತರರ ಹಲವು ಶಿವಶರಣೆಯರು ಜನಿಸಿದ ಶಿಕಾರಿಪುರ ತಾಲೂಕಿನ ಸಮಗ್ರ ಪರಿಚಯ ಇಂದಿನ ಪೀಳಿಗೆಗೆ ಅತ್ಯಗತ್ಯವಾಗಿದ್ದು, ಅನ್ಯಾಯದ ವಿರುದ್ಧ ಹೋರಾಟ ನಡೆಸಿ ಹುತಾತ್ಮರಾದವರು ಹಲವರಿದ್ದಾರೆ. ಆದರೆ, ದುರಾದೃಷ್ಟವಶಾತ್ ಇಂದು ಅನ್ಯಾಯ ವಿಜೃಂಭಿಸುವಂತಾಗಿದೆ ಎಂದರು.
ಕಿರುಚಿತ್ರದ ನಿರ್ದೇಶಕ ಎಸ್.ವಿ.ಕೆ. ಮೂರ್ತಿ ಮಾತನಾಡಿ, ಇದುವರೆಗೂ ಸಮಾಜಕ್ಕೆ ಉತ್ತಮ ಸಂದೇಶವುಳ್ಳ ಹಲವು ಕಿರುಚಿತ್ರಗಳನ್ನು ಬಿಡುಗಡೆಗೊಳಿಸಿದೆ. ಉತ್ತಮ ಕಾರ್ಯಕ್ಕೆ ಸ್ಥಳೀಯರ ಸಹಕಾರ ಹೆಚ್ಚಿನದ್ದಾಗಿದೆ ಎಂದರು.
ಕಿರುಚಿತ್ರ ಕನ್ನೇಶ್ವರ ರಾಮ ನಾಯಕ ಪಾತ್ರಧಾರಿ ರವೀಂದ್ರ (ರಾಘು) ಮಾತನಾಡಿ, ತಾಲೂಕಿನ ತೊಗರ್ಸಿ ಗ್ರಾಮ ಬಳಿಯ ಹರಿಗೆಯಲ್ಲಿ ಹಿಂದುಳಿದ
ವರ್ಗದ ಕನ್ನೇಶ್ವರ ರಾಮ ಅಪ್ರತಿಮ ದೇಶಭಕ್ತನಾಗಿ ಶ್ರೀಮಂತರ ಮನೆ ಬಾಗಿಲಿಗೆ ಕಳ್ಳತನ ನಡೆಸುವ ಬಗ್ಗೆ ತಿಳಿಸಿ ದರೋಡೆ ಮಾಡಿ ಬಡವರಿಗೆ ಸಹಾಯ ಮಾಡುತ್ತಿದ್ದ ಧೈರ್ಯಶಾಲಿಯಾಗಿದ್ದು, ತಾಲೂಕಿನ ಇತಿಹಾಸದ ಬಗ್ಗೆ ಬೆಳಕು ಚೆಲ್ಲುವ ಪ್ರಯತ್ನ ಕಿರುಚಿತ್ರವಾಗಿದೆ ಎಂದರು.
ಈ ಸಂದರ್ಭ ಪುರಸಭಾ ಸದಸ್ಯ ಗೋಣಿ ಮಾಲತೇಶ್, ಯಲ್ಲಪ್ಪ, ಮಧು, ಪೊಲೀಸ್ ವೃತ್ತ ನಿರೀಕ್ಷಕ ಮಾದಪ್ಪ, ಕಸಾಪ ಅಧ್ಯಕ್ಷ ಸುದರ್ಶನ್, ಹನುಮಂತಪ್ಪ, ಮಾಜಿ ಪುರಸಭಾಧ್ಯಕ್ಷ ರಮೇಶ್, ಹಳ್ಳೂರು ಪರಮೇಶ್ವರಪ್ಪ ಮತ್ತಿತರರು ಇದ್ದರು.
ಶ್ರೀಧರ್ ಪ್ರಾರ್ಥಿಸಿ, ಸುಧೀರ್ ಸ್ವಾಗತಿಸಿ, ಅರುಣಕುಮಾರ್ ನಿರೂಪಿಸಿ ವಂದಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com