ಶಿವಮೊಗ್ಗ

ಎಡಿಸಿ ಭರವಸೆ: ದಸಂಸ ಧರಣಿ ಅಂತ್ಯ

Published On :

ಕ.ಪ್ರ.ವಾರ್ತೆ    ಸೊರಬ    ಜ. 18
ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ತಾಲೂಕು ಶಾಖೆ ವತಿಯಿಂದ ತಾಲೂಕು ಕಚೇರಿ ಎದುರು ಕಳೆದ 9 ದಿನಗಳಿಂದ ಹಮ್ಮಿಕೊಂಡಿದ್ದ ಅಹೋರಾತ್ರಿ ಧರಣಿ ಸತ್ಯಾಗ್ರಹ ಮತ್ತು ಜ. 17ರಿಂದ ನಡೆಸಿದ ಆಮರಣಾಂತ ಉಪವಾಸ ಸತ್ಯಾಗ್ರಹ ಶನಿವಾರ ಅಂತ್ಯಗೊಂಡಿದೆ.
ಸ್ಥಳಕ್ಕೆ ಆಗಮಿಸಿದ ಅಪರ ಜಿಲ್ಲಾಧಿಕಾರಿ ಶ್ರೀರಂಗಯ್ಯ ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿ ಮಾತನಾಡಿದರು.
ತಾಲೂಕಿನ ಕುಪ್ಪಗಡ್ಡೆ ಹೋಬಳಿಯ ಗುಡಗಿನಕೊಪ್ಪ ಗ್ರಾಮದ ಬಗರ್ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ನೀಡುವುದು ಮತ್ತು ಅದೇ ಗ್ರಾಮದಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ನಿಷೇಧಿಸುವುದು, ಬಾರಂಗಿ ಹೋಬಳಿ ಗುಡ್ಡದ ಬೆಣ್ಣಿಗೇರಿ ಗ್ರಾಮದ ಸರ್ವೆ ನಂ. 1 ಮತ್ತು 10ರಲ್ಲಿ ಸಾಗುವಳಿ ಮಾಡುತ್ತಿರುವ ಭೂಮಿಯನ್ನು ದಲಿತರಿಗೆ ಮಂಜೂರು ಮಾಡುವುದು ಮುಂತಾದ ಹತ್ತು ಬೇಡಿಕೆಗಳಿದ್ದು, ಗುಡಗಿನಕೊಪ್ಪ ಗ್ರಾಮದ ಸಾಗುವಳಿದಾರರಿಗೆ ಸಂಬಂಧಪಟ್ಟ ಪ್ರಕರಣ ಉಚ್ಚ ನ್ಯಾಯಾಲಯದಲ್ಲಿದೆ. ಹಾಗಾಗಿ ಅಧಿಕಾರಿಗಳು ಇದರಲ್ಲಿ ಭಾಗಿಯಾಗುವಂತಿಲ್ಲ. ಉಳಿದ ಸಾಗುವಳಿಗೆ ಸಂಬಂಧಪಟ್ಟ ಪ್ರತಿಭಟನಾಕಾರರ ಮನವಿಗೆ ಅರ್ಜಿ ಪರಿಶೀಲಿಸಿ, ಬಗರ್ಹುಕುಂ ಸಮಿತಿಯ ಮುಂದಿಟ್ಟು ಇತ್ಯರ್ಥಗೊಳಿಸುವಂತೆ ತಹಸೀಲ್ದಾರ್ ಅವರಿಗೆ ತಿಳಿಸಲಾಗಿದೆ. ಅಕ್ರಮ ಗಣಿಗಾರಿಕೆ ಪರಿಶೀಲಿಸಿ, ಸಂಬಂಧಪಟ್ಟವರಿಗೆ ಸೂಕ್ತ ಕ್ರಮ ಜರುಗಿಸುವಂತೆ ಭೂ ಮತ್ತು ಗಣಿ ವಿಜ್ಞಾನ ಇಲಾಖಾ ಅಧಿಕಾರಿಗಳಿಗೆ ಸೂಚಿಸಲಾಗುವುದು. ವಿದ್ಯಾರ್ಥಿನಿಲಯಗಳಿಗೆ ಈಗಾಗಲೇ ಅಗತ್ಯ ನಿವೇಶನ ಮಂಜೂರು ಮಾಡಲಾಗಿದ್ದು, ಕಟ್ಟಡ ನಿರ್ಮಾಣ ಕೈಗೊಳ್ಳಬೇಕಿದೆ. ತಾಲೂಕಿನ ಆನವಟ್ಟಿ ಬಸ್ ನಿಲ್ದಾಣಕ್ಕೆ ಸಂಬಂಧಪಟ್ಟಂತೆ ಗ್ರಾಪಂ ಸದಸ್ಯರೆ ಸಭೆಯಲ್ಲಿ ಅನುಮೋದನೆ ಪಡೆದು ನಿವೇಶನ ಮಂಜೂರು ಮಾಡುವ ಮೂಲಕ ಸಮಸ್ಯೆ ಇತ್ಯರ್ಥಗೊಳಿಸಬಹುದು ಎಂದು ಹೇಳಿದರು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ಡಿಎಸ್ಎಸ್ ತಾಲೂಕು ಸಂಚಾಲಕ ಬಸವರಾಜ ಹಶ್ವಿ ಮಾತನಾಡಿ, ಅಪರ ಜಿಲ್ಲಾಧಿಕಾರಿಗಳು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ, ನಮ್ಮ ಮನವಿ ಸ್ವೀಕರಿಸಿ, ಆದಷ್ಟು ಶೀಘ್ರದಲ್ಲಿ ಬೇಡಿಕೆ ಪರಿಶೀಲಿಸಿ, ಕಾನೂನು ಚೌಕಟ್ಟಿನಲ್ಲಿ ಬಗೆಹರಿಸಲಾಗುವುದು ಎಂಬ ಆಶ್ವಾಸನೆ ನೀಡಿದ್ದಾರೆ. ಈ ಕಾರಣದಿಂದ ಅಮರಣಾಂತ ಉಪವಾಸ ಸತ್ಯಾಗ್ರಹ ಹಿಂತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದರು.
ಈ ವೇಳೆ ತಹಸೀಲ್ದಾರ್ ಪಿ.ಜಿ. ನಟರಾಜ್, ಪೊಲೀಸ್ ವೃತ್ತ ನಿರೀಕ್ಷಕ ಡಿ. ನಾಗರಾಜು, ಶಿರಸ್ತೇದಾರ್ ಶಶಿಕಲಾ, ಡಿಎಸ್ಎಸ್ ಮುಖಂಡರಾದ ಎಂ. ಗಣೇಶಪ್ಪ, ಗೋವಿಂದಪ್ಪ, ಹೂವಪ್ಪ, ನಾಗರಾಜ್ ಕುಬಟೂರು, ಡಿ. ರಮೇಶ್ ಹಾಯ, ಬಗರ್ಹುಕುಂ ಸಾಗುವಳಿದಾರರಾದ ಯಲ್ಲಮ್ಮ, ಪರಮೇಶ್ವರಪ್ಪ, ಬಂಗಾರಮ್ಮ, ಶಾಂತಪ್ಪ, ಪ್ರಕಾಶ್, ನಿಂಗಪ್ಪ, ನಾಗಪ್ಪ, ಸಿದ್ದಪ್ಪ, ಕರಿಸಬಪ್ಪ, ಫಕ್ಕೀರಪ್ಪ, ದೇವೇಂದ್ರಪ್ಪ ಮೊದಲಾದವರು ಇದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.