ಶಿವಮೊಗ್ಗ

ಎರಡು ಅಪರಾಧ ಪ್ರಕರಣದಲ್ಲಿ ಪೊಲೀಸರದ್ದೇ ಪಾಲುದಾರಿಕೆ!

Published On :

ಕನ್ನಡಪ್ರಭ ವಾರ್ತೆ ಟಿ ಶಿವಮೊಗ್ಗ ಟಿ ಜ.18
ಎರಡು ಪ್ರತ್ಯೇಕ ಅಪರಾಧ ಪ್ರಕರಣ ಬಯಲಿಗೆಳೆದಿರುವ ಪೊಲೀಸರು, ತಮ್ಮದೇ ಇಲಾಖೆಯ ಸಿಬ್ಬಂದಿಯ ಪಾಲುದಾರಿಕೆ ಬಹಿರಂಗಗೊಳಿಸಿ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಬ್ರೌನ್ ಶುಗರ್ ಮಾರಾಟಕ್ಕೆ ಸಂಚು ರೂಪಿಸಿದ್ದ ಆರೋಪದ ಮೇಲೆ ಒಬ್ಬ ಪೇದೆಯನ್ನು ಬಲೆಗೆ ಬೀಳಿಸಿಕೊಂಡಿದ್ದರೆ, ಮತ್ತೊಂದು ಜಿಲಿಟಿನ್ ಕಡ್ಡಿ ಪ್ರಕರಣ. ಅದೂ ಒಬ್ಬನನ್ನು ತಪ್ಪಿತಸ್ಥನನ್ನಾಗಿ ಮಾಡುವ ಉದ್ದೇಶದಿಂದ ಮಾಡಿದ ತಂತ್ರಗಾರಿಕೆಗೆ ಪೊಲೀಸ್ ಪೇದೆಯೇ ಪ್ರಮುಖ ಮಾಸ್ಟರ್ ಮೈಂಡ್ ಆಗಿದ್ದ ಎಂಬ ಸಂಗತಿ ಬೆಳಕಿಗೆ ಬಂದಿದೆ.
ಘಟನೆ-1: ನಗರದ ಕಾಲೇಜು ವಿದ್ಯಾರ್ಥಿಗಳಿಗೆ ಮಾದಕ ವಸ್ತು ಬ್ರೌನ್ಶುಗರ್ ಮಾರಲು ಸಂಚು ರೂಪಿಸಿದ್ದ ಐದು ಜನರ ತಂಡವನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಸುಮಾರು 400 ಗ್ರಾಂ ತೂಕದ 50 ಲಕ್ಷ ಮೌಲ್ಯದ ಮಾದಕ ವಸ್ತು ವಶಕ್ಕೆ ಪಡೆಯಲಾಗಿದೆ.
ಶುಕ್ರವಾರ ಇಲ್ಲಿನ ಸಹ್ಯಾದ್ರಿ ಕಾಲೇಜು ಬಳಿ ಮಾದಕ ವಸ್ತು ಮಾರುವ ವೇಳೆಗೆ ಇವರೆಲ್ಲರೂ ರೌಡಿ ನಿಗ್ರದಳದ ಸಿಪಿಐ ಎಚ್. ಜೈರಾಜ್ ನೇತೃತ್ವದ ತಂಡ ಬೀಸಿದ ಬಲೆಗೆ ಬಿದ್ದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಭದ್ರಾವತಿಯ ಪೊಲೀಸ್ ಪೇದೆಯನ್ನು ಬಂಧಿಸಿದ್ದಾರೆ.
ಭದ್ರಾವತಿ ಹಳೇನಗರ ಪೊಲೀಸ್ ಠಾಣೆಯ ಪೇದೆ ಜೈಕುಮಾರ್(22), ತೀರ್ಥಹಳ್ಳಿ ಮೂಲದ ಬೆಂಗಳೂರು ಗೊರಗುಂಟೆ ಪಾಳ್ಯದ ನಿವಾಸಿ ಸುಚಿತ್ (22), ತೀರ್ಥಹಳ್ಳಿಯ ವಿಲ್ಸನ್ (40), ಚಂದ್ರಕಾಂತ್ ಯಾನೆ ಪೋಲು, ಕಾರ್ಕಳದ ಅಶೋಕ (30) ಬಂಧಿತ ಆರೋಪಿಗಳಾಗಿದ್ದಾರೆ.
ಶಿವಮೊಗ್ಗ ಪ್ರಮುಖ ಪದವಿ ಕಾಲೇಜು ಸೇರಿದಂತೆ ಮೆಡಿಕಲ್ ಕಾಲೇಜು, ಎಂಜಿನಿಯರ್ ಕಾಲೇಜಿನ ಆಜುಬಾಜಲ್ಲಿ ಮಾದಕ ವಸ್ತು ಮಾರಾಟ ನಡೆಯುತ್ತಿದೆ ಎಂಬ ಗುಲ್ಲೆದ್ದಿತ್ತು. ಇಂತಹ ಸಂದರ್ಭದಲ್ಲಿಯೇ ಪೊಲೀಸರು ಭರ್ಜರಿ ಬೇಟೆ ನಡೆಸಿದ್ದಾರೆ.
ಘಟನೆ-2: ಇತ್ತೀಚೆಗೆ ನಗರದಲ್ಲಿ ಪತ್ತೆಯಾಗಿದ್ದ ಜಿಲಿಟಿನ್ ಕಡ್ಡಿಗಳನ್ನು ತುಂಬಿದ್ದ ಬ್ಯಾಗ್ ಪ್ರಕರಣ ಮಹತ್ವದ ತಿರುವು ಪಡೆದುಕೊಂಡಿದ್ದು, ವೃತ್ತಿ ಮಾತ್ಸರ್ಯದಿಂದ ತನ್ನ ಎದುರಾಳಿಯನ್ನು ಸಿಕ್ಕಿಸಲಿ ಹೋಗಿ ವ್ಯಾಪಾರಿಯೊಬ್ಬ ತಾನೇ ಹಳ್ಳಕ್ಕೆ ಬಿದ್ದಿದ್ದಾನೆ.
ಸುರೇಶ್ ಎಂಬ ಕೋವಾ ವ್ಯಾಪಾರಿ ತನ್ನ ಪ್ರತಿಸ್ಪರ್ಧಿ ವ್ಯಾಪಾರಿ ಶ್ರೀನಿವಾಸ್ ಮನೆಯ ಕಾಂಪೌಂಡ್ನೊಳಗೆ ಜಿಲಿಟಿನ್ ತುಂಬಿದ್ದ ಬ್ಯಾಗ್ ಇರಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದ. ಪೊಲೀಸರು ಶ್ರೀನಿವಾಸನನ್ನು ವಿಚಾರಣೆ ಮಾಡಿ ನಂತರ ಬಿಡುಗಡೆಗೊಳಿಸಿದ್ದರು.
ಜ.13ರಂದು ಘಟನೆ ನಡೆದಿತ್ತು. ಸ್ಥಳದಲ್ಲಿ ಸ್ಫೋಟಕ ಸಾಮಗ್ರಿಯೊಂದಿಗೆ ಅಮೃತಾಂಜನ, ಕ್ರೋಸಿನ್ ಟ್ಯಾಬ್ಲೆಟ್ ಮತ್ತಿತರ ವಸ್ತುಗಳು ಇದ್ದಿದ್ದನ್ನು ಗಮನಿಸಿದ ಪೊಲೀಸರು ಉಗ್ರ ಸಂಘಟನೆಯ ಸಂಬಂಧದ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದರು. ಈ ನಡುವೆಯೇ ನಕ್ಸಲರೊಂದಿಗೆ ಶ್ರೀನಿವಾಸ ಸಂಬಂಧ ಹೊಂದಿದ್ದಾನೆಂಬಂತೆ ಅನುಮಾನ ಹುಟ್ಟಲು ಕಾರಣವನ್ನೂ ಅಲ್ಲಿ ಸೃಷ್ಟಿಸಲಾಗಿತ್ತು. ಆದರೆ, ಹಾದಿ ತಪ್ಪದ ತನಿಖೆ ಪೊಲೀಸರ ಹಾದಿ ತಪ್ಪಿಸಲು ಹೊರಟವರನ್ನೇ ಹುಡುಕಿತು.
ಪೊಲೀಸರು ಈ ಪ್ರಕರಣದ ಮುಖ್ಯ ರೂವಾರಿ ಸುರೇಶ್ ಅಲಿಯಾಸ್ ಷಣ್ಮುಗರಾಜು ಹಾಗೂ ಕಲ್ಲಗಂಗೂರಿನ ವೀರಪ್ಪ ಎಂಬವರನ್ನು ಬಂಧಿಸಿದರು. ಇವರು ನೀಡಿದ ಹೇಳಿಕೆ ಮೇಲೆ ಪ್ರಕರಣದ ಮಾಸ್ಟರ್ ಮೈಂಡ್ ಶಿವಮೊಗ್ಗ ತುಂಗಾ ನಗರ ಠಾಣೆಯ ಮುಖ್ಯ ಪೊಲೀಸ್ ಪೇದೆ ಇಸ್ಮಾಯಿಲ್ನನ್ನೂ ವಿಚಾರಣೆಗೊಳಪಡಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.