ಶಿವಮೊಗ್ಗ

ಇದ್ದಿದ್ದು 65, ಚರ್ಚೆಯಾಗಿದ್ದು ನಾಲ್ಕೈದೇ ವಿಷ್ಯ!

Published On :

ಕ.ಪ್ರ.ವಾರ್ತೆ, ಶಿವಮೊಗ್ಗ, ಜ.20
ಯಾರು, ಏಕೆ, ಏನು, ಹೇಗೆ ಮಾತನಾಡಬೇಕು ಎಂಬ ಯಾವ ಮಾನ-ದಂಡವೂ ಇಲ್ಲದ, ಹಿಂದಿನ ಮುನ್ಸಿಪಾಲಿಟಿ ಸಭೆಯಂತೆ ಶಿವಮೊಗ್ಗ ಮಹಾನಗರ ಪಾಲಿಕೆಯ ಪ್ರಥಮ ಸಭೆಯೂ ನಡೆಯಿತು.
ಅಜೆಂಡಾದಂತೆ ಸಭೆ ನಡೆಸುವ ಮಾತಂತೂ ದೂರವೇ ಉಳಿದಿತ್ತು. ಒಬ್ಬರು ಮಾತನಾಡುವಾಗ ಮತ್ತೊಬ್ಬರು ಕಾಲೆಳೆಯುವ, ಯಾರು ಏನು ಮಾತನಾಡುತ್ತಿದಾರೆ ಎಂಬುದು ಕೇಳಿಸದಂತೆ ಗದ್ದಲ ನಡೆದಿತ್ತು. ಪ್ರಸ್ತಾವನೆ- ಚರ್ಚೆ- ಪೂರಕ ಚರ್ಚೆ- ಪ್ರಶ್ನೋತ್ತರಗಳ್ಯಾವುದಕ್ಕೂ ಬೆಲೆ ಇರಲಿಲ್ಲ. ಮುನ್ಸಿಪಾಲಿಟಿಯಿಂದ ಕಾರ್ಪೋರೇಷನ್ ಆಗಿ ಬದಲಾದರೂ ಗೊಂದಲಗಳು ಮಾತ್ರ ಎಂದಿಗಿಂತ ಹೆಚ್ಚಾಗಿದ್ದವು.
ಸಭೆ ಆರಂಭವಾಗುತ್ತಿದ್ದಂತೆ ಶಿಷ್ಟಾಚಾರ ಕುರಿತ ಚರ್ಚೆ ಬಹಳಷ್ಟು ಸಮಯ ವ್ಯಯ ಮಾಡಿತು. ರಾಜ್ಯಸಭಾ ಸದಸ್ಯ ಆಯನೂರು ಮಂಜುನಾಥ್ ಅವರು ಈ ಪ್ರಶ್ನೆಯನ್ನೆತ್ತಿ, ಶಿಷ್ಟಾಚಾರದಂತೆ ವೇದಿಕೆಯಲ್ಲಿ ಕುಳಿತುಕೊಳ್ಳಲು ಯಾರ್ಯಾರಿಗೆ ಅವಕಾಶವಿದೆ ಎಂದು ಪ್ರಶ್ನಿಸಿದರು. ದಿಢೀರನೆ ಎದುರಾದ ಪ್ರಶ್ನೆಗೆ ಉತ್ತರಿಸಲು ತಡಕಾಡಿತ ಆಯುಕ್ತ ಕರಿಭೀಮಣ್ಣನವರ್, ಈ ಕುರಿತು ಪುಸ್ತಕಗಳಲ್ಲಿ ಮಾಹಿತಿ ಸಿಗದೇ ಕೊನೆಗೆ ಜಿಲ್ಲಾಧಿಕಾರಿ ಅವರನ್ನು ಸಂಪರ್ಕಿಸುವುದಾಗಿ ಹೇಳಿದರು.
ಆಗ ಹರಿಹಾಯ್ದ ಆಯನೂರು ಮಂಜುನಾಥ್ ರೇಗಿದರು. ವಿಧಾನಪರಿಷತ್ ಸದಸ್ಯ ಭಾನುಪ್ರಕಾಶ್ ಸಹ ಆಯುಕ್ತರ ಗೊಂದಲಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಕೊನೆಗೆ ಆಯುಕ್ತರು ವೇದಿಕೆ ಮೇಲೆ ಮಹಾಪೌರರು, ಉಪಮಹಾಪೌರರು ಹಾಗೂ ಆಯುಕ್ತರು ಮಾತ್ರ ವೇದಿಕೆ ಮೇಲೆ ಕುಳಿತುಕೊಳ್ಳಬಹುದು ಎಂದು ಸ್ಪಷ್ಟಪಡಿಸಿದರು. ಶಾಸಕ ಕೆ.ಬಿ. ಪ್ರಸನ್ನಕುಮಾರ್ ಅವರು, ಇನ್ನೂ ಮಾರ್ಗಸೂಚಿಗಳು ಬಂದಿಲ್ಲ. ನಂತರ ಸಭೆ ಸಮರ್ಪಕವಾಗಿ ನಡೆಯಲಿದೆ ಎಂದು ಸಮಜಾಯಿಷಿ ನೀಡಿದರು.
ಕ್ಷಮೆಯಾಚನೆ:  4 ವಿಷಯಗಳನ್ನು ಅಜೆಂಡಾದಲ್ಲಿ ಸೇರಿಸಲು ಅರ್ಜಿ ಕೊಟ್ಟಿದ್ದೆ. ಆದರೆ, ಆಯುಕ್ತರು ಸೇರಿಸಿಲ್ಲ ಎಂದು ಸದಸ್ಯ ಮೋಹನ್ ರೆಡ್ಡಿ ಆಕ್ಷೇಪಿಸಿದ್ದು ಮತ್ತೊಂದು ಸುತ್ತಿನ ಗೊಂದಲಕ್ಕೆ ಕಾರಣವಾಯಿತು.
ವಿಧಾನಪರಿಷತ್ ಸದಸ್ಯ ಆರ್.ಕೆ. ಸಿದ್ದರಾಮಣ್ಣ, ಸದಸ್ಯ ಎನ್.ಜೆ. ರಾಜಶೇಖರ್ ಸೇರಿದಂತೆ ಹಲವರು ಈ ವಿಷಯ ಬೆಂಬಲಿಸಿ ಆಯುಕ್ತರನ್ನು ತರಾಟೆಗೆ ತೆಗೆದುಕೊಂಡರು. ಇದು ಚುನಾಯಿತ ಪ್ರತಿನಿಧಿಗಳಿಗೆ ಅಗೌರವ ಮಾಡಿದಂತೆ. ಇದಕ್ಕೆ ಸ್ಪಷ್ಟನೆ ನೀಡಬೇಕು ಎಂದು ಒತ್ತಾಯಿಸಿದರು.
ಆಗ ಮಹಾಪೌರರಾದ ಖುರ್ಷಿದಾ ಬಾನು ಅವರು, ನಾನು ವಿಷಯವನ್ನು ಸಭೆಗೆ ತರುವಂತೆ ಹೇಳಿದ್ದೆ ಎಂದಾಗ ಬಹುತೇಕ ವಿಪಕ್ಷ ಸದಸ್ಯರು ಆಯುಕ್ತರ ವಿರುದ್ಧ ಪ್ರತಿಭಟನೆಗಿಳಿದರು. ಆಗ ಮಹಾಪೌರರು ಸಭೆಯಿಂದ ಹೊರನಡೆದರು. ಸ್ವಲ್ಪ ಹೊತ್ತಿನ ನಂತರ ಒಳಗೆ ಬಂದ ಪೌರಾಯುಕ್ತರು ಪ್ರಮಾದಕ್ಕೆ ಕ್ಷಮೆ ಕೇಳುವುದಾಗಿ ಹೇಳಿದರು. ನಂತರ ಸಭೆ ಮುಂದುವರಿಯಿತು.
ಈಗ ಚರ್ಚೆ ಬೇಡ:  ಮಧ್ಯಾಹ್ನದ ನಂತರ ಸಭೆಯಲ್ಲಿ ರಾಜ್ಯಸಭಾ ಸದಸ್ಯ ಆಯನೂರು ಮಂಜುನಾಥ್, ವಿಧಾನಪರಿಷತ್ ಸದಸ್ಯರಾದ ಆರ್.ಕೆ. ಸಿದ್ದರಾಮಣ್ಣ, ಎಂ.ಬಿ. ಭಾನುಪ್ರಕಾಶ್ ಇರಲಿಲ್ಲ. ಶಾಸಕ ಕೆ.ಬಿ. ಪ್ರಸನ್ನ ಕುಮಾರ್ ಮಾತ್ರ ಇದ್ದರು. ಆಗಲೂ ಸಹ ಚರ್ಚೆಗಳು ಹಳಿಗೆ ಬರಲಿಲ್ಲ.
ಸಭೆ ಮುಗಿಯುವ ಸ್ವಲ್ಪ ಹೊತ್ತಿನ ಮುಂಚೆ ಅಜೆಂಡಾ ಚರ್ಚೆಗೆ ಬಂತು. ಆಡಿಟ್ ವರದಿಯ ಬಗ್ಗೆ ಚರ್ಚೆ ಬಂದಾಗ ಐಡಿಯಲ್ ಗೋಪಿ, ಈ ಬಗ್ಗೆ ವಿಸ್ತೃತ ಚರ್ಚೆಯ ಅಗತ್ಯವಿದೆ. ಈಗ ಸಮಯವಿಲ್ಲವಾದರೆ ಮುಂದಿನ ಸಭೆಗೆ ವಿಷಯ ಮುಂದೂಡಿ ಎಂದರು. ಮಹಾಪೌರರು ಇದಕ್ಕೆ ಒಪ್ಪಿದರು.
ಹೀಗೆ ಒಟ್ಟು ಅಜೆಂಡಾದಲ್ಲಿದ್ದ 65 ವಿಷಯಗಳಲ್ಲಿ ಚರ್ಚೆ ನಡೆದಿದ್ದು, ನಾಲ್ಕೈದು ವಿಷಯಗಳ ಮೇಲೆ ಮಾತ್ರ. ಉಳಿದೆಲ್ಲಾ ವಿಷಯಗಳು ಹಾಗೆಯೇ ಒಪ್ಪಿಗೆಯಾದವು. ಇಲ್ಲವೇ, ಮುಂದಿನ ಸಭೆಗೆ ಮುಂದೂಡಲ್ಪಟ್ಟವು. ಈ ನಡುವೆ, ರಸ್ತೆ ಕಾಮಗಾರಿಗೆ ಯಾವ ಗುತ್ತಿಗೆದಾರರೂ ಮುಂದೆ ಬರುತ್ತಿಲ್ಲ. ಏಕೆಂದರೆ ನಾಗರಿಕ ಹಿತರಕ್ಷಣಾ ಸಮಿತಿಯವರು ಕೆಲಸ ಮಾಡಿದ ಕಡೆಯಲ್ಲೆಲ್ಲಾ ಸ್ಕೇಲು ಹಿಡಿದು ಬರುತ್ತಾರೆ ಎಂಬ ಪ್ರಸ್ತಾಪವೂ ಬಂತು. ಕುಳಿತು ಸದಸ್ಯರಿಗೆ ಪ್ರತಿಕ್ರಿಯಿಸುತ್ತಿದ್ದ ಆಯುಕ್ತರಿಗೆ ನಿಂತು ಮಾತನಾಡಿ ಎಂದ ಘಟನೆಯೂ ನಡೆಯಿತು. ಸಂಜೆ 4 ಗಂಟೆಗೆ ಸಭೆ ಮುಕ್ತಾಯವಾಯಿತು. ಉಪಮಹಾಪೌರರಾದ ರೇಖಾ ಚಂದ್ರಶೇಖರ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.