ಶಿವಮೊಗ್ಗ

ಮುಖ್ಯಮಂತ್ರಿಗಳೇ, ಸಹ್ಯಾದ್ರಿ ಪ್ರಾಧಿಕಾರ ಸ್ಥಾಪನೆ ಏನಾಯ್ತು?

Published On :

ಶಿವಮೊಗ್ಗ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ, ಸಹ್ಯಾದ್ರಿ ಪರಂಪರೆ ಅಭಿವೃದ್ಧಿ ಪ್ರಾಧಿಕಾರ ಸ್ಥಾಪನೆ ಎಲ್ಲಿಯವರೆಗೂ ಬಂತು ಮೊದಲು ಹೇಳಿ ಎಂದು ಪ್ರಶ್ನಿಸುವ ಕಾಲ ಈಗ ಮಲೆನಾಡಿಗರಿಗೆ ಬಂದಿದೆ.
ಬನವಾಸಿ ಕದಂಬೋತ್ಸವ ಉದ್ಘಾಟನೆ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬನವಾಸಿ ಅಭಿವೃದ್ಧಿ ಪ್ರಾಧಿಕಾರ ರಚಿಸುವ ಭರವಸೆ ನೀಡಿದ ಸಂದರ್ಭದಲ್ಲಿ ರಾಜ್ಯ ಸರ್ಕಾರವು ಈ ಹಿಂದೆ ಶಿವಮೊಗ್ಗ, ಚಿಕ್ಕಮಗಳೂರು, ದಕ್ಷಿಣ ಕನ್ನಡ ಜಿಲ್ಲೆ ವ್ಯಾಪ್ತಿ ಹೊಂದಿದ ಸಹ್ಯಾದ್ರಿ ಪರಂಪರೆ ಅಭಿವೃದ್ಧಿ ಪ್ರಾಧಿಕಾರ ರಚಿಸಿ ಹಣವನ್ನೂ ಸಹ ಮೀಸಲಿಟ್ಟಿದ್ದು ಗೊತ್ತಾಗಲಿಲ್ಲವೇ ಎಂದು ಕೇಳುತ್ತಿದ್ದಾರೆ.
ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿಯೇ ಸಹ್ಯಾದ್ರಿ ಪರಂಪರೆ ಅಭಿವೃದ್ಧಿ ಪ್ರಾಧಿಕಾರವನ್ನು ರಚಿಸುವುದಾಗಿ ಬಜೆಟ್‌ನಲ್ಲಿ ಘೋಷಿಸಿದ್ದರು. ಈ ಬಗ್ಗೆ ಅಧಿಸೂಚನೆಯೂ ಹೊರಬಿದ್ದಿತ್ತು. ಆದರೆ,  ಸಮಿತಿಯನ್ನು ರಚಿಸಿರಲಿಲ್ಲ. ಈಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿರುವ ಬನವಾಸಿಯೂ ಸಹ ಸಹ್ಯಾದ್ರಿ ಪ್ರಾಧಿಕಾರದ ವ್ಯಾಪ್ತಿಯಲ್ಲಿತ್ತು. ಬನವಾಸಿಗಾಗಿಯೇ ಮತ್ತೊಂದು ಪ್ರಾಧಿಕಾರ ರಚಿಸುವುದಾಗಿ ಘೋಷಿಸುವ ಮೂಲಕ ಸಿದ್ದರಾಮಯ್ಯ ಅವರು ಮಲೆನಾಡನ್ನು ಸ್ಪಷ್ಟವಾಗಿ ನಿರ್ಲಕ್ಷಿಸಿದ್ದಾರೆ.
ಏನಿದು ಪ್ರಾಧಿಕಾರ: ಸಹ್ಯಾದ್ರಿ ಪರಂಪರೆ ಅಭಿವೃದ್ಧಿ ಪ್ರಾಧಿಕಾರವು ಸಹ್ಯಾದ್ರಿ ಪರಂಪರೆ ಪ್ರದೇಶದಲ್ಲಿರುವ ಐತಿಹಾಸಿಕ, ಪಾರಂಪರಿಕ ಮತ್ತು ಜಾನಪದೀಯ ಪರಂಪರೆ, ಮೌಲ್ಯಗಳನ್ನು ಉಳಿಸಿ, ಬೆಳೆಸುವುದು, ಸಾಂಸ್ಕೃತಿಕ ಚಟುವಟಿಕೆಗಳನ್ನು ಸಹ್ಯಾದ್ರಿ ಪರಂಪರೆ ಪ್ರದೇಶದಲ್ಲಿ ಹಮ್ಮಿಕೊಂಡು, ಸಾಂಸ್ಕೃತಿಕ ಅವಶ್ಯಕತೆಗಳನ್ನು ಪೂರೈಸುವುದು, ಸಹ್ಯಾದ್ರಿ ಪರಂಪರೆ ಪ್ರದೇಶದಲ್ಲಿ ಉತ್ಸವಗಳನ್ನು ಹಮ್ಮಿಕೊಳ್ಳುವುದು, ಪರಂಪರೆಯನ್ನು ಬಿಂಬಿಸುವ ವಸ್ತು ಸಂಗ್ರಹಾಲಯಗಳನ್ನು ಕಟ್ಟುವ, ಸಹ್ಯಾದ್ರಿ ಪರಂಪರೆ ಬಗ್ಗೆ ಸಂಪೂರ್ಣ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳುವುದನ್ನು ಮುಖ್ಯ ಕಾರ್ಯವಾಗಿ ಹೊಂದಿತ್ತು.
ಶಿವಮೊಗ್ಗವನ್ನು ಕೇಂದ್ರವಾಗಿ ಹೊಂದಿದ್ದ ಈ ಪ್ರಾಧಿಕರವನ್ನು ಅಸ್ತಿತ್ವಕ್ಕೆ ತರುವ ಕೆಲಸವನ್ನು ನಂತರ ಬಂದ ಮುಖ್ಯಮಂತ್ರಿಗಳಾದ ಡಿ.ವಿ. ಸದಾನಂದಗೌಡ, ಜಗದೀಶ್ ಶೆಟ್ಟರ್ ಮಾಡಲಿಲ್ಲ. ಇನ್ನು ಸಿದ್ದರಾಮಯ್ಯ ಅವರಂತೂ ಸಹ್ಯಾದ್ರಿ ಪರಂಪರೆ ಅಭಿವೃದ್ಧಿ ಪ್ರಾಧಿಕಾರದ ಅಸ್ತಿತ್ವವನ್ನೇ ಅಳಿಸಿ ಹಾಕುವಂತೆ, ಬನವಾಸಿ ಪ್ರಾಧಿಕಾರ ರಚಿಸುವುದಾಗಿ ಘೋಷಿಸಿದ್ದಾರೆ.
ಏಕೆ ಬೇಕು: ಬಸವಣ್ಣ ಅವರು ಐಕ್ಯವಾದ ಕೂಡಲಸಂಗಮ ಅಭಿವೃದ್ಧಿಗೆ ಪ್ರಾಧಿಕಾರವಿದೆ. ಕನಕದಾಸರ ಸ್ಥಳ ಕಾಗಿನೆಲೆಗೊಂದು ಪ್ರಾಧಿಕಾರವಿದೆ. ಬಳ್ಳಿಗಾವಿಯ ಅಲ್ಲಮಪ್ರಭು, ಹೊಯ್ಸಳರಾಣಿ ಪಟ್ಟಮಹಿಷಿ ಶಾಂತಲಾದೇವಿ, ಉಡುತಡಿಯ ಅಕ್ಕಮಹಾದೇವಿ, ಶರಣರಾದ ಅಜಗಣ್ಣ, ಮುಕ್ತಾಯಕ್ಕ, ಮಹಾಕಾಳಯ್ಯ, ಏಕಾಂತರಾಮಯ್ಯ, ಮೂರಟದ ಬಂಕಯ್ಯ, ಸತ್ಯಕ್ಕ, ದೋಸೆ ಪೆಟ್ಟವ್ವ ಅವರು ಜನಿಸಿರುವ ಜಾತ್ಯತೀತ ನೆಲ, ಶಿವಪ್ಪ ನಾಯಕ, ಬೂದಿ ಬಸಪ್ಪ ನಾಯಕ, ಕೆಳದಿ ಚನ್ನಮ್ಮ ಸೇರಿದಂತೆ ಹಲವರ ಕಾರ್ಯಕ್ಷೇತ್ರವಾದ ಶಿವಮೊಗ್ಗ ಜಿಲ್ಲೆಯನ್ನೊಳಗೊಂಡ ಮೂರು ಜಿಲ್ಲೆಗಳ ಸಾಂಸ್ಕೃತಿಕ ಪರಂಪರೆ ಅಭಿವೃದ್ಧಿಗೆ ಪ್ರಾಧಿಕಾರ ರಚನೆಯಾಗುವ ಅಗತ್ಯವಿದೆ.
ಈ ಮೂರು ಜಿಲ್ಲೆಗಳಲ್ಲಿ ಹಿರಿಯ ಐಎಎಸ್ ಅಧಿಕಾರಿ ಜಾಮದಾರ್ ಅವರು ಪ್ರವಾಸ ಮಾಡಿ, ಹಲವು ಇತಿಹಾಸ ಸಂಶೋಧಕರೊಂದಿಗೆ ಚರ್ಚೆ ನಡೆಸಿದ ನಂತರ ಈ ಪ್ರಾಧಿಕಾರದ ರೂಪುರೇಷೆಗಳು ರಚನೆಯಾಗಿದ್ದವು. ಈ ಯೋಜನೆ ಏನಾಯಿತು ಎಂಬ ಪ್ರಶ್ನೆ ಈಗ ಮೇಲೆದ್ದಿದೆ.

ಹೊನ್ನಾಳಿ ಚಂದ್ರಶೇಖರ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.