ಶಿವಮೊಗ್ಗ

ಪಾಲಿಕೆ ವಿರುದ್ಧ ಕ್ರಿಮಿನಲ್ ಕೇಸ್‌ಗೆ ನಿರ್ಧಾರ

Published On :

ವಿಶೇಷ ವರದಿ
ಶಿವಮೊಗ್ಗ: ನಮ್ಮ ಕಸ ನಮ್ಮ ಹೊಣೆ ಎಂದು ಹೇಳಿಕೊಳ್ಳುತ್ತಾ ಪ್ರಚಾರ ಗಿಟ್ಟಿಸಿ ಸದ್ದಿಲ್ಲದೆ ತುಂಗಾ ನದಿಗೆ ಕಸ ತಳ್ಳಿ ತನ್ನ ಹೊಣೆ ಇಳಿಸಿಕೊಂಡಿದ್ದ ಅಂದಿನ ಶಿವಮೊಗ್ಗ ನಗರಸಭೆ ಹಾಲಿ ನಗರಪಾಲಿಕೆ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲು ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಮುಂದಾಗಿದೆ.
ಆಗಿದ್ದಿಷ್ಟು, ಇಲ್ಲಿನ ರೋಟರಿ ಚಿತಾಗಾರದ ಪಕ್ಕದಲ್ಲಿ ಕೆಲ ವರ್ಷಗಳ ಹಿಂದೆ ನಗರದ ತ್ಯಾಜ್ಯವನ್ನು ದೊಡ್ಡ ಪ್ರಮಾಣದಲ್ಲಿ ಸಂಗ್ರಹಿಸಲಾಗಿತ್ತು. ಇದೇ ಜಾಗದ ಪಕ್ಕದಲ್ಲಿ ನಗರಸಭೆ ಟ್ರೀಟ್‌ಮೆಂಟ್ ಪ್ಲಾಂಟ್ ನಿರ್ಮಾಣಕ್ಕೆ ಮುಂದಾದ ಸಂದರ್ಭದಲ್ಲಿ ಅಲ್ಲಿದ್ದ ಕಸ ತೆಗೆದು ಬದಿಗೆ ಸರಿಸುತ್ತಾ ನೇರಾನೇರ ನದಿಗೆ ತಳ್ಳಲಾಗಿತ್ತು.
ಈ ನಡುವೆ ಸಾಮಾಜಿಕ ಕಾರ್ಯಕರ್ತರೂ ಅಧಿಕಾರಿಗಳ ವರ್ತನೆಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಗೆ ದೂರಿದ್ದರು. ಈ ಸಂಬಂಧ ಅ. 27ರಂದು ಕನ್ನಡಪ್ರಭ ವಿಶೇಷ ವರದಿ ಪ್ರಕಟಿಸಿತ್ತು. ಇದನ್ನು ಆಧರಿಸಿ ಮಾಲಿನ್ಯ ನಿಯಂತ್ರಣ ಮಂಡಳಿಯು ವಿವರಣೆ ನೀಡುವಂತೆ ನಗರಸಭೆಗೆ ನೋಟಿಸ್ ನೀಡಿತ್ತು.
ಅಸಮಾಧಾನ: ಮಾಲಿನ ನಿಯಂತ್ರಣ ಮಂಡಳಿಯ ನೋಟಿಸ್‌ಗೆ ಸೊಪ್ಪು ಹಾಕದ ಆಯುಕ್ತರು, ನೋಟಿಸ್‌ಅನ್ನು ಬುಡಕ್ಕೆ ಹಾಕಿಕೊಂಡು ಹಾಗೇ ಕುಳಿತುಬಿಟ್ಟರು.
ಇದರಿಂದ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಮಾಲಿನ್ಯ ನಿಯಂತ್ರಣ ಮಂಡಳಿ, ಸಂಬಂಧಪಟ್ಟ ಸ್ಥಳೀಯ ಸಂಸ್ಥೆ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲು ಮುಂದಾಗಿದೆ. ಈ ಕುರಿತಂತೆ ಕೇಂದ್ರ ಮಂಡಳಿಯಿಂದ ಅನುಮತಿ ಪಡೆದುಕೊಳ್ಳುವ ನಿಟ್ಟಿನಲ್ಲಿ ಪ್ರಕ್ರಿಯೆ ಆರಂಭಿಸಿದೆ.
ಈ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಮಾಲಿನ ನಿಯಂತ್ರಣ ಮಂಡಳಿ ಶಿವಮೊಗ್ಗ ಕಚೇರಿಯ ಅಧಿಕಾರಿ, ಈಗಾಗಲೇ ಶಿವಮೊಗ್ಗ ನಗರಸಭೆ ವಿರುದ್ಧ ಒಂದು ಪ್ರಕರಣ ದಾಖಲಿಸಲಾಗಿದೆ. ಇನ್ನೊಂದು ಪ್ರಕರಣ ದಾಖಲಿಸುವ ನಿಟ್ಟಿನಲ್ಲಿ ಪ್ರಕ್ರಿಯೆ ನಡೆದಿದೆ. ಮಂಡಳಿಯ ಕೇಂದ್ರ ಕಚೇರಿಗೆ ಈಸಂಬಂಧ ಅನುಮತಿ ಪಡೆದು ಪ್ರಕರಣ ದಾಖಲಿಸಲಾಗುತ್ತದೆ ಎಂದು ವಿವರಿಸಿದರು.
ಆಗಿದ್ದೇನು?: ಟ್ರೀಟ್‌ಮೆಂಟ್ ಪ್ಲಾಂಟ್ ನಿರ್ಮಾಣ ಕಾರ್ಯ ಗುತ್ತಿಗೆಯನ್ನು ಖಾಸಗಿ ವ್ಯಕ್ತಿಯೊಬ್ಬರು ಪಡೆದುಕೊಂಡಿದ್ದರು. ಪರಿಸರದ ಅರಿವಿಲ್ಲದ ಜೆಸಿಬಿ ಯಂತ್ರದ ಸಿಬ್ಬಂದಿ ನೇರವಾಗಿ ಅಲ್ಲಿದ್ದ ಕಸ ನದಿಗೆ ತಳ್ಳಲಾರಂಭಿಸಿದ್ದರು. ಸುಮಾರು ಅರ್ಧ ಗಂಟೆ ಕಾಲ ನಿರಂತರವಾಗಿ ಕಸ ಹೊಳೆಗೆ ತಳ್ಳಲಾಯಿತು. ಇದನ್ನು ಗಮನಿಸಿದ ಸಾಮಾಜಿಕ ಕಾರ್ಯಕರ್ತ ಅ.ನಾ. ವಿಜಯೇಂದ್ರ ರಾವ್, ಅಶೋಕ್ ಯಾದವ್ ಅವರು ನಗರಸಭೆ ಗಮನಕ್ಕೆ ತರಲು ಪ್ರಯತ್ನಿಸಿ ವಿಫಲರಾದರು. ಜನಪ್ರತಿನಿಧಿಗಳಿಗೆ ಕರೆ ಮಾಡಿದರೂ ಪ್ರಯೋಜನಕ್ಕೆ ಬರಲೇ ಇಲ್ಲ.
ಹಾಗೆಯೇ, ಕಸವನ್ನು ನದಿಗೆ ತಳ್ಳಲು ಯಾರು ಆದೇಶಿದ್ದಾರೆ ಮಾಹಿತಿ ಕೊಡಿ ಎಂದು ಅಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿಗೆ ಕೇಳಿದರು, ಯಾವುದೇ ಮಾಹಿತಿ ಸಿಗಲಿಲ್ಲ. ಈ ನಡುವೆ ನಗರಸಭೆ ಆಯುಕ್ತ ಕರಭೀಮಣ್ಣನವರ್ ಅವರಿಗೆ ಕರೆ ಮಾಡಿ ವಿಷಯ ತಿಳಿಸುವ ಪ್ರಯತ್ನ ಮಾಡಲಾಯಿತಾದರೂ ಅದು ಫಲ ಕೊಡಲಿಲ್ಲ. ಹತ್ತಾರು ಬಾರಿ ಕರೆ ಮಾಡಿದರೂ ನಗರಸಭೆ ಆಯುಕ್ತರು ಕರೆ ಸ್ವೀಕರಿಸದೆ ಹೋದರು.
ಅಂತಿಮವಾಗಿ ದನಿ ಹೆಚ್ಚುಗೊಳಿಸಿದಾಗ ಕಸ ತಳ್ಳುವ ಕೆಲಸ ನಿಂತಿತು. ಆದರೆ, ಅಷ್ಟರಲ್ಲಾಗಲೇ ನಗರದ ಪ್ಲಾಸ್ಟಿಕ್ ಸಹಿತ ತ್ಯಾಜ್ಯ ಸಾಕಷ್ಟು ಪ್ರಮಾಣದಲ್ಲಿ ತುಂಗೆಯ ಒಡಲಿಗೆ ಸೇರಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.