ತ್ಯಾವರೇಕೊಪ್ಪ ಧಾಮಕ್ಕೆ ಬರಲಿವೆ ಮತ್ತೆ 4 ಸಿಂಹಗಳು
ಶಿವಮೊಗ್ಗ: ತ್ಯಾವರೇಕೊಪ್ಪ ಹುಲಿ ಸಿಂಹಧಾಮಕ್ಕೆ ಸದ್ಯವೇ ಹೊಸ ಮೆರಗು ಬರಲಿದೆ. ಸದ್ಯವೇ ನಾಲ್ಕು ಸಿಂಹಗಳು ಹಾಗೂ ನೀರಾನೆ ಈ ಧಾಮದ ಪ್ರಮುಖ ಆಕರ್ಷಣೆಯಾಗಲಿವೆ.
ಈಗಾಗಲೇ ಇಲ್ಲಿ ಮಾನಿನಿ, ಆರ್ಯ, ಮಾನ್ಯ ಎಂಬ 3 ಸಿಂಹಗಳಿವೆ. ಶೀಘ್ರವೇ ಬನ್ನೇರುಘಟ್ಟದಿಂದ ಒಂದು ಗಂಡು, ಒಂದು ಹೆಣ್ಣು, ಎರಡು ಮರಿಗಳನ್ನೊಳಗೊಂಡ ಸಿಂಹದ ಕುಟುಂಬವೊಂದು ಸೇರ್ಪಡೆಯಾಗಲಿದೆ. ನೀಲ್ಗಾಯ್ ಹಾಗೂ ಕಾಡೆಮ್ಮೆಯೂ ಮಾರ್ಚ್ ಅಂತ್ಯದೊಳಗೆ ಧಾಮಕ್ಕೆ ಬರಲಿವೆ.
ಸಿಂಹಧಾಮದಲ್ಲಿ ಈಗ ನೀರಿನ ಕೊರತೆ ಇಲ್ಲ. ಹಾಗಾಗಿ ಒಂದು ನೀರಾನೆ ಸೇರ್ಪಡೆ ಧಾಮದ ಹೆಗ್ಗುರುತು ಆಗುವ ನಿರೀಕ್ಷೆ ಇದೆ. ಒಂದು ಜತೆ ಆಸ್ಟ್ರಿಚ್ ಈಗಾಗಲೇ ಬಂದಿದೆ.
ವನ್ಯಜೀವಿ ವಿಭಾಗ ಉಪ ಅರಣ್ಯ ಸಂರಕ್ಷಣಾಧಿಕಾರಿ ರವಿಕುಮಾರ್ ಅವರು 'ಕನ್ನಡಪ್ರಭ'ಕ್ಕೆ ಈ ವಿಷಯ ತಿಳಿಸಿದ್ದು, ಸಿಂಹಧಾಮವನ್ನು ಇನ್ನಷ್ಟು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಹಲವು ಯೋಜನೆಗಳನ್ನು ರೂಪಿಸಿದ್ದೇವೆ ಎನ್ನುತ್ತಾರೆ.
ಹುಲ್ಲಿನಲ್ಲಿ ಸ್ವಾವಲಂಬಿ: ಸಿಂಹಧಾಮದಲ್ಲಿರುವ ಸಾಧು ಪ್ರಾಣಿಗಳಿಗೆ ಪೌಷ್ಟಿಕ ಆಹಾರ ಒದಗಿಸುವ ನಿಟ್ಟಿನಲ್ಲಿ ಲಭ್ಯವಿರುವ ಪ್ರದೇಶದಲ್ಲಿ 6 ಜಾತಿಯ ಹುಲ್ಲನ್ನು ಬೆಳೆಸುವ ಯೋಜನೆಯನ್ನು ಇಲಾಖೆ ಹೊಂದಿದೆ. ಸಿಒ-1, ಸಿಒ-2, ಕಾಂಗೋ, ಆಫ್ರಿಕನ್ ಟಾಲ್, ಎನ್ಬಿ 21 ಜಾತಿಗಳ ಹುಲ್ಲುಗಳನ್ನು ಬೆಳೆಸುವ ಮೂಲಕ ಹೊರಗಿನಿಂದ ಖರೀದಿಸುವ ಪ್ರಕ್ರಿಯೆಯನ್ನು ಕಡಿಮೆಗೊಳಿಸುವ ಚಿಂತನೆ ಇಲಾಖೆಯದ್ದು. ಸದ್ಯದಲ್ಲಿಯೇ ಹುಲ್ಲು ಬೆಳೆಸುವ ಪ್ರಕ್ರಿಯೆಯೂ ಶುರುವಾಗಲಿದ್ದು, ಜೂನ್ ವೇಳೆಗೆ ಹುಲ್ಲು ಬಳಕೆಗೆ ಲಭ್ಯವಾಗಲಿದೆ.
ದತ್ತು ಯೋಜನೆ: ಧಾಮದಲ್ಲಿರುವ ಪ್ರಾಣಿಗಳನ್ನು ದತ್ತು ಪಡೆಯುವ ಯೋಜನೆ ನಿಧಾನವಾಗಿ ಜನಪ್ರಿಯವಾಗುತ್ತಿದೆ. ಕೆಲವು ತಿಂಗಳುಗಳ ಹಿಂದೆ ಜನಿಸಿದ ಕಪ್ಪು ಚಿರತನೆಯನ್ನು ಖ್ಯಾತ ಚಿತ್ರನಟ ದರ್ಶನ್ 70 ಸಾವಿರ ನೀಡಿ ದತ್ತು ಪಡೆದಿದ್ದಾರೆ. ಅಲ್ಲದೇ, ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮವು ಹುಲಿಯೊಂದಕ್ಕೆ 2.47 ಲಕ್ಷ ನೀಡಿ ದತ್ತು ಪಡೆದಿದೆ. ಈ ಎರಡು ಪ್ರಾಣಿಗಳ ವಾರ್ಷಿಕ ನಿರ್ವಹಣೆ ಮೊತ್ತವು ಈಗ ಇಲಾಖೆಗೆ ಸಂದಾಯವಾಗಿದೆ.
ದತ್ತು ಪಡೆಯುವವರು ವಾರ್ಷಿಕವಾಗಿ ಮಾತ್ರವಲ್ಲದೇ ಸಾಮಾನ್ಯರಿಗೂ ಎಟಕುವ ದರ ಪಟ್ಟಿಯಿದ್ದು, ಒಂದು ದಿನಕ್ಕೂ ತಮ್ಮ ಇಷ್ಟದ ಪ್ರಾಣಿಯನ್ನು ದತ್ತು ಪಡೆಯುವ ಅವಕಾಶವಿದೆ. ಆಸಕ್ತರು ವನ್ಯಜೀವಿ ವಿಭಾಗವನ್ನು ಸಂಪರ್ಕಿಸಬಹುದು ಎಂದು ರವಿಕುಮಾರ್ ಹೇಳಿದ್ದು, ದರ್ಶನ್ ಅವರು ಸಿಂಹಧಾಮಕ್ಕೆ ಭೇಟಿ ನೀಡುವ ಬಗ್ಗೆ ಆಸಕ್ತರಾಗಿದ್ದಾರೆ. ಇನ್ನೂ ದಿನಾಂಕ ನಿಗದಿಯಾಗಿಲ್ಲ ಎಂದಿದ್ದಾರೆ.
ಸಿಂಹಧಾಮವನ್ನು ಇನ್ನಷ್ಟು ಅಭಿವೃದ್ಧಿ ಮಾಡುತ್ತೇವೆ. ಈ ಪ್ರದೇಶ ಇತ್ತೀಚಿನ ವರ್ಷಗಳಲ್ಲಿ ಅತಿ ಹೆಚ್ಚು ಪ್ರವಾಸಿಗರನ್ನು ಸೆಳೆಯುತ್ತಿರುವುದೇ ಇದರ ಆಕರ್ಷಣೆಗೆ ಸಾಕ್ಷಿ. ಈ ಸಾಲಿನ ಆದಾಯವು 1.5 ಕೋಟಿ ತಲುಪುವ ನಿರೀಕ್ಷೆ ಇದೆ.
ಟಿ ರವಿಕುಮಾರ್, ಉಪ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ)
ಸಿಂಹಧಾಮದ ಆದಾಯವೆಷ್ಟು?
2011-2012....1.10 ಕೋಟಿ
2012-2013....1.27 ಕೋಟಿ
2013-2014....1.17 ಕೋಟಿ
(ಜ.22ರ ವರೆಗೆ)
ಧಾಮದಲ್ಲಿ ಆ್ಯಂಫಿ ಥಿಯೇಟರ್
ಸಿಂಹಧಾಮದಲ್ಲಿ ಹಾಲಿ ಇರುವ ದೊಡ್ಡ ಕೋಣೆಯನ್ನು ಬಳಸಿಕೊಂಡು ಆ್ಯಂಫಿ ಥಿಯೇಟರ್ ಮಾಡುವ ಯೋಜನೆ ಅರಣ್ಯ ಇಲಾಖೆಗಿದೆ. 1.5 ಲಕ್ಷ ವೆಚ್ಚದಲ್ಲಿ ಪ್ರೊಜೆಕ್ಟರ್, ಲ್ಯಾಪ್ಟ್ಯಾಪ್, ಖುರ್ಚಿ ಇತ್ಯಾದಿ ವ್ಯವಸ್ಥೆ ಮಾಡಿ ಕಿರುಚಿತ್ರಗಳನ್ನು ಪ್ರದರ್ಶಿಸಲಾಗುವುದು. ಗ್ರೀನ್ ಆಸ್ಕರ್ ಪ್ರಶಸ್ತಿ ಪುರಸ್ಕೃತ, ಕೃಪಾಕರ ಸೇನಾನಿ ಅವರು ಸಿದ್ಧಪಡಿಸಿದ ಸೀಳುನಾಯಿಗಳ ಕುರಿತ ಕಿರುಚಿತ್ರ, ಇಲಾಖೆಯೇ ಸಿದ್ಧಪಡಿಸಿದ ಸಕ್ರೈಬೈಲು ಆನೆಯ ವೀನಿಂಗ್ ಕಿರುಚಿತ್ರ, ಗಂಡಾನೆ ಹಿಡಿದಿದ್ದ ಬಗೆಗಿನ ಚಿತ್ರ, ಸಕ್ರೆಬೈಲು- ಗುಡವಿ ಪಕ್ಷಿಧಾಮಗಳ ಬಗೆಗಿನ ಕಿರುಚಿತ್ರ ಸೇರಿದಂತೆ ವನ್ಯಜೀವಿಗಳಿಗೆ ಸಂಬಂಧಿಸಿದ ಹಲವು ಚಿತ್ರಗಳನ್ನು ಇಲ್ಲಿ ಪ್ರದರ್ಶಿಸಲಾಗುವುದು.
-ಹೊನ್ನಾಳಿ ಚಂದ್ರಶೇಖರ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

