ಶಿವಮೊಗ್ಗ

ರಾಜ್ಯದ ಅಭಿವೃದ್ಧಿಗೆ ಇನ್ನಷ್ಟು ಯೋಜನೆ: ಕಿಮ್ಮನೆ

Published On :

ಕ.ಪ್ರ.ವಾರ್ತೆ ,  ಶಿವಮೊಗ್ಗ  ,  ಜ. 26
ನಾನಾ ರೀತಿಯ ಜನಪರ ಯೋಜನೆಗಳನ್ನು ರಾಜ್ಯದಲ್ಲಿ ನಾವು ಅಧಿಕಾರಕ್ಕೆ ಬಂದ ಮೇಲೆ ಮಾಡಿದ್ದೇವೆ. ಇನ್ನೂ ಹಲವು ಯೋಜನೆಗಳು ಪ್ರಾರಂಭವಾಗಿದ್ದು, ಅದನ್ನು ನಿಲ್ಲಿಸುತ್ತೇವೆ ಎಂಬ ಯೋಚನೆ ಬೇಡ. ಅದನ್ನು ಮುಂದಿನ ದಿನಗಳಲ್ಲಿ ಪರಿಪೂರ್ಣ ಮಾಡಿ, ಅಭಿವೃದ್ಧಿಗಾಗಿ ಇನ್ನಷ್ಟು ಯೋಜನೆ ಜಾರಿಗೊಳಿಸುತ್ತೇವೆ ಎಂದು ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಹೇಳಿದರು.
ಇಲ್ಲಿನ ಪೊಲೀಸ್ ಪರೇಡ್ ಮೈದಾನದಲ್ಲಿ ಧ್ವಜಾರೋಹಣ ನೆರವೇರಿಸಿ, ಧ್ವಜವಂದನೆ ಸ್ವೀಕರಿಸಿ ಮಾತನಾಡಿದರು.
8 ತಿಂಗಳಲ್ಲೇ ಅನುಷ್ಟಾನ: ನಮ್ಮ ಸರ್ಕಾರ ಜನರಿಗೆ ನೀಡಿರುವ ಹಲವು ಭರವಸೆಯನ್ನು ಮೊದಲ 8 ತಿಂಗಳಲ್ಲೇ ಅನುಷ್ಟಾನಗೊಳಿಸಿರುವುದು ಸಂತೋಷ ತಂದಿದೆ ಎಂದ ಅವರು, ಪ್ರಕೃತಿ ನಮಗೆ ಹುಟ್ಟು ಕೊಟ್ಟಿದೆ. ಹಸಿವಿನಿಂದ ಯಾರೂ ಸಾಯಬಾರದು ಎಂಬ ನೆಹರೂ ಮಾತು ಗಮನದಲ್ಲಿಟ್ಟುಕೊಂಡು ಅನ್ನಭಾಗ್ಯ ಯೋಜನೆಯನ್ನು ರಾಜ್ಯದಲ್ಲಿ ಜಾರಿಗೊಳಿಸಿದ್ದೇವೆ. ಇದಕ್ಕಾಗಿ ನಾಲ್ಕು ಸಾವಿರ ಕೋಟಿ ರುಪಾಯಿ ಹಣ ವಿನಿಯೋಗವಾಗುತ್ತಿದೆ ಎಂದರು.
ಅದೇ ರೀತಿ ಸಾವಿರಾರು ವರ್ಷಗಳಿಂದ ತುಳಿತಕ್ಕೊಳಗಾದ ಸಮುದಾಯ ನಾಗರಿಕ ವ್ಯವಸ್ಥೆಯಲ್ಲಿ ತಮಗೆ ದಕ್ಕಬೇಕಾದ ಹಕ್ಕು ದಕ್ಕಿಸಿಕೊಳ್ಳಲು ಆಗದೇ ಇನ್ನೂ ಪರಿತಪಿಸುತ್ತಿದ್ದಾರೆ. ಅಂತಹವರು ನಾನಾ ಇಲಾಖೆ ನಿಗಮಗಳಲ್ಲಿ ಮಾಡಿರುವ ಸಾಲ ಮನ್ನಾ ಮಾಡಿದ್ದೇವೆ. ಇದಕ್ಕಾಗಿ ರು. 4,200 ಕೋಟಿ ನೀಡಿದ್ದೇವೆ ಎಂದು ಹೇಳಿದರು.
ರು. 1.5 ಲಕ್ಷ ಮೀಸಲು: ಎನ್‌ಆರ್‌ಇಜಿ ಮೂಲಕ ಮೂಲ ಸೌಕರ್ಯ ಕೊಡುವ ಪ್ರಯತ್ನಕ್ಕೆ ಹೊಸ ಯೋಜನೆ ಮೂಲಕ ಕೈ ಹಾಕಿದ್ದೇವೆ. ಪ್ರತಿ ಗ್ರಾಪಂನ 50 ಕುಟುಂಬಗಳಿಗೆ ರು. 1.5 ಲಕ್ಷ ಮೀಸಲಿಟ್ಟಿದ್ದು, ಅದರ ಮೂಲಕ ವೈಯಕ್ತಿಕ ಅಭಿವೃದ್ಧಿ, ಮನೆ, ಕೊಟ್ಟಿಗೆ, ಬಾವಿಗೆ ಬಳಸಿಕೊಳ್ಳಲು ಅವಕಾಶ ಮಾಡಿಕೊಡಲಾಗಿದೆ. ಸಾವಿರಾರು ಜನರಿಗೆ ಇದರ ಅನುಕೂಲವಾಗುತ್ತಿದೆ ಎಂದ ಹೇಳಿದ ಅವರು, ಪ್ರತಿ ಗ್ರಾಪಂನಲ್ಲಿ ಕೌಶಲ್ಯ ತರಬೇತಿ ಕಾರ್ಯಕ್ರಮ ರೂಪಿಸಲಾಗಿದೆ ಎಂದು ತಿಳಿಸಿದರು.
ರಾಜ್ಯದ ರಸ್ತೆ ಕಾಮಗಾರಿ ಆರಂಭವಾಗುತ್ತಿದೆ. ಸುಮಾರು ರು. 14,000 ಕಿ.ಮೀ. ರಸ್ತೆ ಅಭಿವೃದ್ಧಿಪಡಿಸಲಾಗುತ್ತಿದೆ. ಜಿಲ್ಲೆಯಾದ್ಯಂತ ಈಗಾಗಲೇ ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ ಎಂದ ಅವರು, ವಸತಿ ಯೋಜನೆಯಡಿ ಸುಮಾರು 3 ಲಕ್ಷ ಮನೆ ಕೊಡುವ ಅವಕಾಶ ಕಲ್ಪಿಸಲಾಗಿದೆ ಎಂದರು.
ಶಾಸಕ ಕೆ.ಬಿ. ಪ್ರಸನ್ನಕುಮಾರ್, ವಿಧಾನ ಪರಿಷತ್ ಸದಸ್ಯ ಎಂ.ಬಿ. ಭಾನುಪ್ರಕಾಶ್, ಸಿದ್ದರಾಮಣ್ಣ, ಜಿಪಂ ಅಧ್ಯಕ್ಷೆ ಗೀತಾ ಮಲ್ಲಿಕಾರ್ಜುನ್, ಜಿಲ್ಲಾಧಿಕಾರಿ ವಿಪುಲ್ ಬನ್ಸಲ್, ರಕ್ಷಣಾಧಿಕಾರಿ ಕೌಶಲೇಂದ್ರ ಕುಮಾರ್, ಜಿ.ಪಂ.ಸಿಇಒ ಸಸಿಕಾಂತ್ ಸೆಂಥಿಲ್ ಮೊದಲಾದವರು ಇದ್ದರು.
ಬಿಜಿಎಸ್ ಸಂಸ್ಥೆ: ಶಿವಮೊಗ್ಗದ ಗುರುಪುರದ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್, ಬಿಜಿಎಸ್ ವಿದ್ಯಾ ಸಂಸ್ಥೆಯು 65ನೇ ಗಣರಾಜ್ಯೋತ್ಸವ ಆಚರಿಸಿತು.
ಕಾರ್ಯಕ್ರಮದಲ್ಲಿ ಪತ್ರಕರ್ತ ಎಸ್.ಕೆ. ಗಜೇಂದ್ರಸ್ವಾಮಿ ಧ್ವಜಾರೋಹಣ ನೆರವೇರಿಸಿದರು. ಶಾಲಾ ಪ್ರಾಂಶುಪಾಲ ಸುರೇಶ್ ಎಸ್.ಎಚ್. ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕ ವಿಶ್ವನಾಥ್ ಗಣರಾಜ್ಯೋತ್ಸವ ಕುರಿತು ಮಾತನಾಡಿದರು. ನಂತರ ಶಾಲಾ ಮಕ್ಕಳಿಂದ ವಿವಿಧ ಮನರಂಜನಾ ಕಾರ್ಯಕ್ರಮಗಳು ನಡೆದವು. ಶಾಲಾ ಶಿಕ್ಷಕ ವೃಂದದವರು, ವಿದ್ಯಾರ್ಥಿಗಳು ಹಾಗೂ ಪೋಷಕರು, ಸಾರ್ವಜನಿಕರು ಹಾಜರಿದ್ದರು.
ಸೊರಬ
ಹಲವಾರು ನಾಯಕರ ತ್ಯಾಗ ಬಲಿದಾನದ ಫಲವಾಗಿ ನಮ್ಮ ದೇಶ ಬ್ರಿಟೀಷರ ಕಪಿ ಮುಷ್ಟಿಯಿಂದ ಹೊರ ಬಂದಿದ್ದು, ಇಂತಹ ಸ್ವಾತಂತ್ರದ ನಾಡಿಗೆ ಇದ್ದ ಪ್ರಜಾಪ್ರಭುತ್ವದ ಮಾದರಿಯನ್ನು ರೂಪಿಸಿದ್ದು, ಅದನ್ನು 1950ನೇ ಜನವರಿ 26ರಂದು ಜಾರಿಗೆ ತರಲಾಯಿತು ಎಂದು ತಹಸೀಲ್ದಾರ್ ಜಿ.ನಟರಾಜ್ ತಿಳಿಸಿದರು. ಅವರು ಪಟ್ಟಣದ ಜೂನಿಯರ್ ಕಾಲೇಜು ಮೈದಾನದಲ್ಲಿ ತಾಲೂಕು ಆಡಳಿತದಿಂದ ನಡೆದ 65ನೇ ಗಣರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಎಸ್. ಮಧು ಬಂಗಾರಪ್ಪ, ದೇಶದ ಸ್ವಾತಂತ್ರ್ಯಕ್ಕಾಗಿ ತ್ಯಾಗ - ಬಲಿದಾನ ನೀಡಿ ನಮಗೆ ಸ್ವಾತಂತ್ರ್ಯ ತಂದುಕೊಟ್ಟ ದೇಶದ ಮಹಾನ್ ನಾಯಕರ ತತ್ವ, ಸಿದ್ಧಾಂತಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದರ ಮುಖಾಂತರ ದೇಶ ಕಟ್ಟುವ ಕೆಲಸದಲ್ಲಿ ಪಾಲ್ಗೊಳ್ಳುವಂತಾಗಬೇಕು ಎಂದು ಯುವ ಜನರಿಗೆ ಸಲಹೆ ನೀಡಿದರು.ಜಡೆಸಂಸ್ಥಾನ ಮಠದ ಡಾ. ಮಹಾಂತ ಶ್ರೀ ಪಾಲ್ಗೊಂಡಿದ್ದರು. ಸಹಾಯಕ ಕೃಷಿ ಅಧಿಕಾರಿ ಮಂಜುಳ ಜಿ.  ಸಹಿಪ್ರಾ ಶಾಲೆ ಶಿಕ್ಷಕ, ಆರ್.ಬಿ. ಚಂದ್ರಪ್ಪ,  ಡಿ. ದರ್ಜೆ, ನೌಕರ ಕಲುಬಣ್ಣ, ಆನವಟ್ಟಿ ಯುವಜನ ಸಂಘದ ಕಾರ್ತಿಕ ಎಂ.ಎಸ್. ಇವರುಗಳನ್ನು ಸನ್ಮಾನಿಸಲಾಯಿತು. ನಂತರ ವಿವಿಧ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ತ್ಯಾಗರ್ತಿ
ರಾಷ್ಟ್ರೀಯ ಹಬ್ಬಗಳನ್ನು ಶ್ರಮದಾನದೊಂದಿಗೆ ಅಚರಿಸಿದರೆ ದೇಶದ ಅಭಿವೃದ್ಧಿಗೆ ಸಹಕಾರಿಯಾಗುತ್ತದೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬರೂರು ವಲಯದ ಮೇಲ್ವಿಚಾರಕ ಭೀಮಾ ಎಸ್. ಮರಾಠೆ ಹೇಳಿದರು.ಗಣರಾಜ್ಯೋತ್ಸವ ಪ್ರಯುಕ್ತ ಸಾಗರ ತಾಲೂಕಿನ ಹೀರೆಬಿಲಗುಂಜಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆಳಗಿನ ಮನೆಯ ಬಸವೇಶ್ವರ ದೇವಸ್ಥಾನ, ನಾಡಕಲಸಿಯ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಾಳಗೋಡು ಗ್ರಾಮದ ಎ.ಕೆ. ಕಾಲೋನಿ, ಬರೂರು ಗ್ರಾಮ ಪಂಚಾಯಿತಿಯ ಕಲ್ಕೊಪ್ಪ ದೇವಸ್ಥಾನದ ಆವರಣ ಸ್ವಚ್ಛತಾ, ಪಡವಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೂಡಳ್ಳಿ ಶಾಲಾ ಆವರಣದ ಶ್ರಮದಾನ ಕಾರ್ಯಕ್ರಮದಲ್ಲಿ ಮಾತನಾಡಿದರು. ನಾಡಕಲಸಿ ಗ್ರಾಮ ಪಂಚಾಯಿತಿ ಸದಸ್ಯ ಸುಬ್ಬಮ್ಮ, ಸೇವಾ ನಿರತರಾದ ಸುಧಾ, ಹರೀಶ್, ರಮೇಶ್, ಬಸವರಾಜ್, ಸ್ಥಳೀಯ ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಜೋಗ್‌ಫಾಲ್ಸ್
ದೇಶದ ಸಂವಿಧಾನ ನಾಗರಿಕರೆಲ್ಲರಿಗೂ ಸಮಾನ ಸ್ವಾತಂತ್ರ್ಯ, ಸುರಕ್ಷಿತ ಪಾಗೂ ಸೌಖ್ಯದ ಬದುಕನ್ನು ಹೊಂದಬೇಕೆಂದು ಆಶಿಸುತ್ತದೆ. ಪ್ರತಿಯೊಂದು ಜಾತಿ- ಧರ್ಮಗಳನ್ನು ಸಹ ಒಂದೇ ದೃಷ್ಟಿಕೋನದಲ್ಲಿ ಪರಾಮರ್ಶಿಸುವ ನಮ್ಮ ದೇಶವು ವಿವಿಧತೆಯಲ್ಲಿ ಏಕತೆ ಹೊಂದಿರುವ ದೇಶವಾಗಿದೆ ಎಂದು ನಿಗಮದ ಮುಖ್ಯ ಅಭಿಯಂತರ ಜಿ. ಹನುಮಂತಪ್ಪ ತಿಳಿಸಿದರು.ಇಲ್ಲಿನ ಸರ್ ಎಂ. ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ನಡೆದ 65ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.ಅಧೀಕ್ಷಕ ಅಭಿಯಂತರ ಕೆ.ಆರ್. ಶಿವಾಜಿ, ಹಣಕಾಸು ವಿಭಾಗದ ಸಹಾಯಕ ಪ್ರಧಾನ ಪ್ರಬಂಧಕ ಬಿ.ನಿಜೇಂದ್ರ ಹಾಜರಿದ್ದರು. ಜೋಗ್ ಕೆಪಿಸಿ ಪ್ರೌಢಶಾಲೆ, ಆಂಗ್ಲ ಮಾಧ್ಯಮ ಶಾಲೆ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಹೊಂಗಿರಣ ಶಾಲಾ ಮಕ್ಕಳಿಂದ ಆಕರ್ಷಕ ಪಥಸಂಚಲನ, ಕವಾಯತು ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ತೀರ್ಥಹಳ್ಳಿ
ಸರ್ಕಾರಿ ಪದವಿಪೂರ್ವ ಕಾಲೇಜು ಕ್ರೀಡಾಂಗಣದಲ್ಲಿ ನಡೆದ ಸಮಾರಂಭದಲ್ಲಿ  ತಹಸೀಲ್ದಾರ್ ಗಣೇಶಮೂರ್ತಿ ರಾಷ್ಟ್ರಧ್ವಜೋರೋಹಣ ನೆರವೇರಿಸಿದರು.    ತೀರ್ಥಹಳ್ಳಿ ಪಟ್ಟಣ ವ್ಯಾಪ್ತಿಯ ಶಾಲಾಮಕ್ಕಳು ಪೆರೇಡಿನಲ್ಲಿ ಭಾಗವಹಿಸಿದ್ದರು. ಡಿವೈಎಸ್‌ಪಿ ಚಿನ್ನಪ್ಪ,  ಜಿಪಂ  ಸದಸ್ಯ ಡಾ.ಟಿ.ಎಲ್. ಸುಂದರೇಶ್, ಶೃತಿ ವೆಂಕಟೇಶ್, ತಾಪಂ ಅಧ್ಯಕ್ಷೆ ರೇಣುಕಾ ನಾಗರಾಜ್ ಮೊದಲಾದವರು ಈ ಸಂದರ್ಭದಲ್ಲಿ ಹಾಜರಿದ್ದರು. ಧ್ವಜಾರೋಹಣಕ್ಕೂ ಮೊದಲು ಪಟ್ಟಣದ ಮುಖ್ಯ ಬಿದಿಯಲ್ಲಿ  ಪಥಸಂಚಲನ ನಡೆಯಿತು.   ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಮ್ಮಿಕೊಂಡಿದ್ದ ಈ ಸಮಾರಂಭದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು  ರೇಣುಕಾ ನಾಗರಾಜ್ ವಹಿಸಿದ್ದರು. ಡಿ.ಎಸ್. ವಿಶ್ವನಾಥ ಶೆಟ್ಟಿ ಸ್ವಾಗತಿಸಿದರು. ರಾಮಣ್ಣ ನಿರೂಪಿಸಿದರು.   ಶಾಲಾ ಮಕ್ಕಳಿಂದ ಸಾಂಸ್ಕೃತಿಕ ನೃತ್ಯೋತ್ಸವ ನೆಡೆಯಿತು. ಈ ಸಂದರ್ಭದಲ್ಲಿ ನಿವೃತ್ತ ಯೋಧರನ್ನು ಸನ್ಮಾನಿಸಲಾಯಿತು.
ವಿವಿಧೆಡೆ ಸಡಗರದ ಗಣರಾಜ್ಯೋತ್ಸವ
ಬಿಜೆಪಿ ಕಚೇರಿ
ಶಿವಮೊಗ್ಗದಲ್ಲಿ ಭಾನುವಾರ ಮುಂಜಾನೆ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಗಣರಾಜ್ಯೋತ್ಸವ ಆಚರಿಸಲಾಯಿತು.
ಧ್ವಜಾರೋಹಣ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಆರ್.ಕೆ.ಸಿದ್ದರಾಮಣ್ಣ, ಬಿಜೆಪಿ ಮುಖಂಡ ಗಿರೀಶ್ ಪಟೇಲ್, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎಸ್.ದತ್ತಾತ್ರಿ, ಎ.ಎನ್.ನಟರಾಜ್, ಜಿಲ್ಲಾ ಖಜಾಂಚಿ ಎಸ್.ರಮೇಶ್, ನಗರ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್.ಜಿ.ನಾಗರಾಜ್, ನಗರ ಯುವಮೋರ್ಚಾ ಅಧ್ಯಕ್ಷ ಜೆ.ಹಿರಣ್ಣಯ್ಯ, ಮುಖಂಡರಾದ ಕೆ.ಎಸ್.ಅರುಣಕುಮಾರ್, ಸಿ.ನಾರಾಯಣ ಇನ್ನಿತರರು ಉಪಸ್ಥಿತರಿದ್ದರು.
ರೋಟರಿ ಸಂಸ್ಥೆ
ಇಂದು ನಾವು ಮಕ್ಕಳಿಗೆ ವಿದ್ಯಾಭ್ಯಾಸದ ಜೊತೆಗೆ ರಾಷ್ಟ್ರಭಕ್ತಿ ಹಾಗೂ ದೇಶಪ್ರೇಮ ಬೆಳೆಸುವಲ್ಲಿ ಪೋಷಕರು ಹಾಗೂ ಶಿಕ್ಷಕರ ಪಾತ್ರ ಅತೀ ಮುಖ್ಯ. ಮಕ್ಕಳಿಗೆ ಪ್ರತಿನಿತ್ಯ ನಾವು ಸಂಸ್ಕಾರ, ವಿದ್ಯೆ ಜೊತೆಗೆ ಅತ್ಯಂತ್ತ ಮುಖ್ಯವಾಗಿ ರಾಷ್ಟ್ರಭಕ್ತಿ, ದೇಶಪ್ರೇಮ ಬೆಳೆಸುವ ನಿಟ್ಟಿನಲ್ಲಿ ಆಸಕ್ತಿ ವಹಿಸಬೇಕು ಎಂದು ರಾಜ್ಯಪ್ರಶಸ್ತಿ ಪುರಸ್ಕೃತ ಉಳುವೆ ಶಾರದ ಅಭಿಪ್ರಾಯಪಟ್ಟರು. ರೋಟರಿ ಶಿವಮೊಗ್ಗ ಪೂರ್ವ, ರೋಟರಿ ವಿದ್ಯಾಸಂಸ್ಥೆ ಹಾಗೂ ಇನ್ನರ್‌ವೀಲ್ ಕ್ಲಬ್ ವತಿಯಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ವಿದ್ಯಾರ್ಥಿಘಳು ಗುರು ಹಿರಿಯರನ್ನು, ಓದಿದ ಶಾಲೆಯನ್ನು ಮತ್ತು ರಾಜ್ಯ ಹಾಗೂ ರಾಷ್ಟ್ರವನ್ನು ಪ್ರಿತಿಯಿಂದ ಗೌರವಿಸಿದಾಗ ಮಾತ್ರ ಸಮಾಜದಲ್ಲಿ ಅಂತಹ ವಿದ್ಯಾರ್ಥಿಗಳು ಪರಿಪೂರ್ಣರಾಗುತ್ತಾರೆ ಎಂದರು.
ರವಿಕಿರಣ್ ಉಪನ್ಯಾಸ ನೀಡಿದರು.
ಕೆ.ಎಸ್.ಪುರುಷೋತ್ತಮ್ ಧ್ವಜಾರೋಹಣ ನೆರವೇರಿಸಿದರು. ಕಡಿದಾಳ್  ಗೋಪಾಲ್, ಸುಜಯಪುರುಷೋತ್ತಮ್, ಬಿ.ಪ್ರಸನ್ನಕುಮಾರ್, ಎಂ.ಎಲ್.ಪ್ರತಾಪ್, ಬಿಂದು ವಿಜಯಕುಮಾರ್, ಕೆ.ಬಿ.ರವಿಶಂಕರ್, ಎಚ್.ಬಿ.ಆದಿಮೂರ್ತಿ, ರಾಮಚಂದ್ರ ಕೆ.ಜಿ. ಮತ್ತಿತರರು ಉಪಸ್ಥಿತರಿದ್ದರು.
ಭಾರತ ಸಂವಿಧಾನ ವಿಶ್ವಕ್ಕೇ ಮಾದರಿ
ಕ.ಪ್ರ.ವಾರ್ತೆ ,  ಶಿರಾಳಕೊಪ್ಪ  ,  ಜ. 26
ಬ್ರಿಟೀಷರು ಭಾರತವನ್ನು ಆಳಿ ಸ್ವಾತಂತ್ರ್ಯ ಪಡೆದ ನಂತರ ಭಾರತ ತನ್ನದೇ ಆದ ಸಂವಿಧಾನ ಹೊಂದಿ ಪ್ರಪಂಚಕ್ಕೇ ಮಾದರಿಯಾಗುವ ಮೂಲಕ ಭದ್ರ ಪ್ರಜಾಪ್ರಭುತ್ವ ಹೊಂದಿದೆ ಎಂದು ಪಪಂ ಮುಖ್ಯಾಧಿಕಾರಿ ರಾಜ್‌ಕುಮಾರ್ ತಿಳಿಸಿದರು.
ಶಿರಾಳಕೊಪ್ಪ ಪಟ್ಟಣದಲ್ಲಿ ಅತ್ಯಂತ ಸಂಭ್ರಮ ಸಡಗರದಿಂದ ನಡೆದ ಗಣರಾಜ್ಯೋತ್ಸವದಲ್ಲಿ ಧ್ವಜಾರೋಹಣ  ನೆರವೇರಿಸಿ ಮಾತನಾಡಿದರು.  ಈ ಬಾರಿ ಕಾರ್ಯಕ್ರಮದಲ್ಲಿ ಆನೆಯ ಮೇಲೆ ದೇಶ ಭಕ್ತರ ಪೋಷಾಕಿನೊಂದಿಗೆ ಹಾಗೂ ಎತ್ತಿನ ಗಾಡಿಯಲ್ಲಿ ವೇಷಧರಿಸಿದ ಮಕ್ಕಳ ಮೆರವಣಿಗೆ ಸಾರ್ವಜನಿಕರನ್ನು ಆಕರ್ಷಿಸಿತು. ಸ್ವಾತಂತ್ರ್ಯ ಹೋರಾಟಗಾರ ಬಸ್ಸ್ ಏಜಂಟ್ ಶಿವಣ್ಣ, ಪಪಂ ಚುನಾಯಿತ ಪ್ರತಿನಿಧಿಗಳು, ಪಟ್ಟಣದ ನಾಗರಿಕರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.