ತಾಲೂಕಿನಾದ್ಯಂತ ಗಣರಾಜ್ಯ ಸಂಭ್ರಮ
ಕ.ಪ್ರ.ವಾರ್ತೆ , ಭದ್ರಾವತಿ ,ಜ.27
ರಾಷ್ಟ್ರ ಗಣರಾಜ್ಯೋತ್ಸವ ಆಚರಿಸುವ ಸಂದರ್ಭದಲ್ಲಿ ದೇಶವನ್ನು ರಚಿಸಲು ತಮ್ಮ ಜೀವನವನ್ನು ಬಲಿದಾನಗೈದ ಹುತಾತ್ಮರಿಗೆ ಗೌರವಪೂರ್ಣ ಪ್ರಣಾಮಗಳನ್ನು ಸಲ್ಲಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ ಕಾರ್ಯಪಾಲಕ ನಿರ್ದೇಶಕ ಎ.ರವಿ ಹೇಳಿದರು.
ಅವರು ವಿಐಎಸ್ಎಲ್ ಕಾರ್ಖಾನೆ ವತಿಯಿಂದ ವಿಐಎಸ್ಎಲ್ ರಜತ ಮಹೋತ್ಸವ ಕ್ರೀಡಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಗಣರಾಜ್ಯೋತ್ಸವ ಸಮಾರಂಭದಲ್ಲಿ ಧ್ವಜವಂದನೆ ಸ್ವೀಕರಿಸಿ, ಭಾರತದ ಅರ್ಥವ್ಯವಸ್ಥೆ ಜಗತ್ತಿನಲ್ಲಿಯೇ ಅತಿವೇಗವಾಗಿ ಬೆಳೆಯುತ್ತಿರುವ ಪ್ರಮುಖ ಅರ್ಥವ್ಯವಸ್ಥೆ ಎಂಬುದನ್ನು ದೃಢಪಡಿಸಿದೆ ಎಂದು ತಿಳಿಸಿದರು.
ತೀವ್ರ ಸ್ಪರ್ಧೆ: ಉಕ್ಕು ಮಾರುಕಟ್ಟೆಯನ್ನೊಳಗೊಂಡು ದೇಶದ ಎಲ್ಲಾ ಮಾರುಕಟ್ಟೆಗಳಲ್ಲಿ ಈಗ ಅರ್ಥಿಕ ಹಿನ್ನಡೆಯುಂಟಾಗಿದ್ದು, ಮಾರುಕಟ್ಟೆಯಲ್ಲಿ ಅಸ್ತಿತ್ವವನ್ನು ಉಳಿಸಿಕೊಳ್ಳಲು ತೀವ್ರ ಸ್ಪರ್ಧೆ ನಡೆಯುತ್ತಿದೆ. ಅದೇ ರೀತಿ ವಿಐಎಸ್ಎಲ್ ಕಾರ್ಖಾನೆ ಮೇಲೂ ಒತ್ತಡವಿದೆ ಎಂದರು.
ಧ್ವಜಾರೋಹಣದ ನಂತರ ನಡೆದ ಪಥಸಂಚಲನದಲ್ಲಿ ವಿಐಎಸ್ಎಲ್ ಸುರಕ್ಷತಾ ಪಡೆ, ಎನ್.ಸಿ.ಸಿ., ಸ್ಕೌಟ್ಸ್ ಮತ್ತು ಗೈಡ್ಸ್, ವಿವಿಧ ಶಾಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಎಂ. ಉಮೇಶ್ ರಾವ್, ಎಚ್.ಎನ್. ಮಹೇಶ್ವರಪ್ಪ, ಇಳಯರಾಜ ಅವರಿಗೆ ಉತ್ತಮ ಕಾರ್ಯನಿರ್ವಹಣೆಗಾಗಿ 2013ನೇ ಸಾಲಿಗೆ ಜವಾಹರಲಾಲ್ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಇದೇ ಸಂದರ್ಭದಲ್ಲಿ 20 ಕಾರ್ಮಿಕರಿಗೆ ಉತ್ತಮ ಕಾರ್ಯನಿರ್ವಹಣೆಗಾಗಿ ನೆಹರೂ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕಾರ್ಖಾನೆಯ ಗಣಿಗಳು, ಯೋಜನೆಗಳು ಮತ್ತು ಮಾರುಕಟ್ಟೆ ಮಹಾಪ್ರಬಂಧಕ ಡಿ. ಬ್ಯಾನರ್ಜಿ, ಸ್ಥಾವರಗಳ ಮಹಾಪ್ರಬಂಧಕ ಎಚ್.ಕೆ. ವೆಂಕಟೇಶ ಕುಮಾರ್, ವಿಐಎಸ್ಎಲ್ ಕಾರ್ಮಿಕರ ಸಂಘದ ಉಪಾಧ್ಯಕ್ಷ ಕೆಂಪರಾಜೇಗೌಡ, ವಿಐಎಸ್ಎಲ್ ಅಧಿಕಾರಿಗಳ ಸಂಘದ ಅಧ್ಯಕ್ಷ ಬಿ.ಎಂ. ರವಿಶಂಕರ್, ಇತರ ಹಿರಿಯ ಅಧಿಕಾರಿಗಳು, ಕಾರ್ಮಿಕರ ಸಂಘದ ಹಾಗೂ ಅಧಿಕಾರಿಗಳ ಸಂಘದ ಪದಾಧಿಕಾರಿಗಳು ಮತ್ತು ಕಾರ್ಯಕಾರಿ ಸಮಿತಿ ಸದಸ್ಯರು ಹಾಜರಿದ್ದರು.
ತಹಸೀಲ್ದಾರ್ ಧ್ವಜಾರೋಹಣ: ರಾಷ್ಟ್ರೀಯ ಹಬ್ಬಗಳ ಸಮಿತಿ ಪಟ್ಟಣದ ಕನಕ ಮಂಟಪ ಮೈದಾನದಲ್ಲಿ ಏರ್ಪಡಿಸಿದ್ದ ಗಣರಾಜ್ಯೋತ್ಸವ ಸಮಾರಂಭದಲ್ಲಿ ತಹಸೀಲ್ದಾರ್ ಸಿದ್ದಮಲ್ಲಪ್ಪ ಧ್ವಜಾರೋಹಣ ನೆರವೇರಿಸಿದರು.
ಜಿಲ್ಲಾ ಸಶಸ್ತ್ರ ಮೀಸಲು ಪೋಲಿಸ್ ಪಡೆ, ಎನ್.ಸಿ.ಸಿ., ವಿವಿಧ ಶಾಲಾ ವಿದ್ಯಾರ್ಥಿಗಳು ಪಥಸಂಚಲನದಲ್ಲಿ ಪಾಲ್ಗೊಂಡಿದ್ದರು. ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ ವ್ಯಕ್ತಿಗಳನ್ನು ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಸನ್ಮಾನಿಸಲಾಯಿತು. ಶಾಸಕ ಎಂ.ಜೆ.ಅಪ್ಪಾಜಿ ಅಧ್ಯಕ್ಷತೆ ವಹಿಸಿದ್ದರು. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ನಾಡಗೀತೆ ಹಾಡಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎನ್.ಸೋಮಶೇಖರಯ್ಯ ಸ್ವಾಗತಿಸಿದರು. ತಾ.ಪಂ. ಅಧ್ಯಕ್ಷೆ ಭುವನೇಶ್ವರಿ, ಉಪಾಧ್ಯಕ್ಷೆ ಸೋಮ್ಲಿಬಾಯಿ, ಜಿ.ಪಂ. ಸದಸ್ಯ ಎಸ್.ಕುಮಾರ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ್, ಡಿವೈಎಸ್ಪಿ ಸದಾನಂದ ಬಿ.ನಾಯಕ್, ಪೌರಾಯುಕ್ತ ಬಿ.ಡಿ.ಬಸವರಾಜಪ್ಪ, ನಗರಸಭಾ ಸದಸ್ಯರುಗಳಾದ ವಿದ್ಯಾಶ್ರೀ, ವಿಶಾಲಾಕ್ಷಿ, ಮಹಾದೇವಿ, ಸಕ್ಕೂಬಾಯಿ, ಸುಧಾಮಣಿ, ಮಣಿ, ಬದರಿನಾರಾಯಣ, ಶಾಂಭವಿ ಮತ್ತು ಶಿವರಾಜ್, ಎಪಿಎಂಸಿ ಅಧ್ಯಕ್ಷ ಮಣಿಶೇಖರ್, ತಹಶೀಲ್ದಾರ್ನ್ಫೀಜಾ ಬೇಗಂ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಎಂಪಿಎಂ: ಮೈಸೂರು ಕಾಗದ ಕಾರ್ಖಾನೆ ವತಿಯಿಂದ ಫುಟ್ಬಾಲ್ ಮೈದಾನದಲ್ಲಿ ಏರ್ಪಡಿಸಿದ್ದ ಗಣರಾಜ್ಯೋತ್ಸವದಲ್ಲಿ ಅಲ್ಲಿನ ವಾಡಿಕೆಯಂತೆ ಕಾರ್ಖಾನೆಯ ಉದ್ಯೋಗಿ ನಗರಾಡಳಿತ ಇಲಾಖೆಯ ಬೋರಯ್ಯ ಧ್ವಚಾರೋಹಣ ಮಾಡಿ ಮಾತನಾಡಿದರು.
ಕಾರ್ಖಾನೆ ಮುಖ್ಯ ಆಡಳಿತಾಧಿಕಾರಿ ಬಿ.ಎನ್. ಶ್ರೀನಿವಾಸ್ ಮಾತನಾಡಿ, ಕಾರ್ಖಾನೆ ಕಷ್ಟದ ಪರಿಸ್ಥಿತಿ ಸುಧಾರಿಸಲು ಕೆಲವು ಕಠಿಣ ಕ್ರಮ ಕೈಗೊಂಡಿದ್ದು, ಕಾರ್ಮಿಕರು ಮತ್ತು ಅಧಿಕಾರಿಗಳು ಆಡಳಿತವರ್ಗದೊಂದಿಗೆ ಸಹಕರಿಸಬೇಕೆಂದರು.
ಕಾರ್ಖಾನೆಯ ಹಣಕಾಸು ಉಪ ಮಹಾಪ್ರಬಂಧಕ ಮಳಗನ್, ಕಾಗದನಗರ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ನಾಗಮ್ಮ, ಎಂಪಿಎಂ ಉದ್ಯೋಗಿಗಳ ಸಂಘದ ಅಧ್ಯಕ್ಷ ಎಸ್.ಚಂದ್ರೇಶೇಖರ್ ಉಪಸ್ಥಿತರಿದ್ದರು. ಶಾಲಾ ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

