ಅಡಕೆ ಸಮಿತಿಯಲ್ಲಿ ಬೆಳೆಗಾರರನ್ನು ಸೇರಿಸಿಕೊಳ್ಳಿ
ಕ.ಪ್ರ.ವಾರ್ತೆ , ಶಿವಮೊಗ್ಗ , ಜ. 28
ಅಡಕೆ ಅಧ್ಯಯನಕ್ಕೆ ರಾಜ್ಯ ಸರ್ಕಾರವು ಸಮಿತಿ ರಚಿಸಿದ್ದು, ಇದರಲ್ಲಿ ಬೆಳೆಗಾರರ ಪ್ರತಿನಿಧಿ ಇಲ್ಲ. ಅಡಕೆಗೆ ನ್ಯಾಯ ಒದಗಿಸಬೇಕೆಂದರೆ ಸಮಿತಿಯಲ್ಲಿ ಅಡಕೆ ಬೆಳೆಗಾರರನ್ನು ಸೇರಿಸಿಕೊಳ್ಳಬೇಕು. ಇಲ್ಲದಿದ್ದರೆ ಬೀದಿಗಿಳಿದು ಹೋರಾಟ ಮಾಡುತ್ತೇವೆ ಎಂದು ಮಲೆನಾಡು ಅಡಕೆ ಮಾರಾಟ ಸಹಕಾರ ಸಂಘ ಎಚ್ಚರಿಸಿದೆ.
ನಗರದಲ್ಲಿ ಮಂಗಳವಾರ ಸಂಘದ ಉಪಾಧ್ಯಕ್ಷ ಕೆ. ನರಸಿಂಹನಾಯಕ್, ರಾಜ್ಯ ಸರ್ಕಾರವು ಸುಪ್ರೀಂಕೋರ್ಟ್ನಲ್ಲಿರುವ ಮೊಕದ್ದಮೆಯನ್ನು ಬೆಳೆಗಾರರನ್ನು ಪ್ರತಿನಿಧಿಸಲು ಭಟ್ ಎಂಬ ವಕೀಲರನ್ನು ನೇಮಿಸಿರುವುದು ಸ್ವಾಗತಾರ್ಹ. ವಕೀಲರನ್ನು ನೇಮಿಸುವುದರಿಂದ, ಸಮಿತಿ ರಚಿಸುವುದರಿಂದ ಸಮಸ್ಯೆ ಬಗೆ ಹರಿಯುವುದಿಲ್ಲ.
ಹೇಳಿಕೆ ವಾಪಸ್ ಪಡೆಯಿರಿ: ಮೊಕದ್ದಮೆಯ ವಿಚಾರಣೆ ಸುಪ್ರೀಂಕೋರ್ಟ್ನಲ್ಲಿ ಬರುವುದರೊಳಗೆ ಹೆಚ್ಚುವರಿ ಸಾಲಿಸಿಟರ್ ಜನರಲ್ ಇಂದಿರಾ ಜೈಸಿಂಗ್ ಅವರು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಸೂಕ್ತ ನಿರ್ದೇಶನ ನೀಡಿ ಈಗಾಗಲೇ ಸಲ್ಲಿಸಿರುವ ಲಿಖಿತ ಹೇಳಿಕೆಯನ್ನು ವಾಪಸ್ ಪಡೆಯಬೇಕು. ಹೆಚ್ಚುವರಿ ಅಥವಾ ಪುನವಿಮರ್ಶಿತ ಪ್ರಮಾಣ ಪತ್ರ ಸಲ್ಲಿಸಬೇಕು ಎಂದಿದ್ದಾರೆ.
ಅಡಕೆಯನ್ನು ಹಾನಿಕಾರಕ ವಸ್ತುಗಳ ಪಟ್ಟಿಯಿಂದ ಕೈಬಿಡುವಂತೆ ಕರ್ನಾಟಕ ರಾಜ್ಯ ಉಚ್ಛ ನ್ಯಾಯಾಲಯವು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದ್ದು, ಈ ಮೊಕದ್ದಮೆಯಲ್ಲಿ ಈಗಾಗಲೇ ಜಯಗಳಿಸಿದ್ದೇವೆ. ಈ ಮೊಕದ್ದಮೆಯ ತೀರ್ಪು ಎಲ್ಲಾ ಅಡಕೆ ಸಂಬಂಧಿಸಿದ ಹೋರಾಟಗಳಲ್ಲಿ ಅರ್ಜಿದಾರ ಸಂಸ್ಥೆಗಳಿಗೆ ಮೂಲಾಧಾರವಾಗಿದೆ ಎಂದು ಅವರು ತಿಳಿಸಿದ್ದಾರೆ.
ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಈ ವಿಷಯ ತಿಳಿಸಿ, 2007ರಲ್ಲಿ ಗುಟ್ಕಾ ಕಂಪನಿಗಳಿಗೆ ಸಂಬಂಧಿಸಿದ ಅಂಕುರ್ ಗುಟ್ಕಾ ವಿರುದ್ಧ ರಾಜಸ್ಥಾನ ಸರ್ಕಾರ ದಾವೆಯಲ್ಲಿ ರಾಜಸ್ಥಾನ ಸರ್ಕಾರವು ಪ್ಲಾಸ್ಟಿಕ್ ಪೌಚ್ ಗಳನ್ನು ನಿಷೇಧಿಸಿತ್ತು. ಕ್ಯಾನ್ಸರ್ ಸೊಸೈಟಿ ಆಫ್ ಇಂಡಿಯಾ ವಿರುದ್ಧ ಅಂಕುರ್ ಗುಟ್ಕಾ ದಾವೆಯು ಸುಪ್ರೀಂಕೋರ್ಟ್ನಲ್ಲಿ ಮುಂದುವರಿದಿದ್ದು, ಜನವರಿ 6ರಂದು ನಿಗದಿಯಾಗಿದ್ದ ವಿಚಾರಣೆ ಮುಂದೂಡಲ್ಪಟ್ಟಿದೆ. ದಿನಾಂಕ ನಿಗದಿಯಾಗಿಲ್ಲ ಎಂದು ಮಾಹಿತಿ ನೀಡಿದರು.
ಸುಪ್ರೀಂಕೋರ್ಟ್ನ ಈ ದಾವೆಯಲ್ಲಿ ಎಲ್ಲಾ ಗುಟ್ಕಾ ಕಂಪನಿಗಳು ವೈಯಕ್ತಿಕವಾಗಿ ಹಾಗೂ ಸಾಮೂಹಿಕವಾಗಿ ಅರ್ಜಿದಾರರಾಗಿದ್ದಾರೆ. ಈ ಹಂತದಲ್ಲಿ ಮ್ಯಾಮ್ಕೋಸ್ ಇತರೆ ಅಡಕೆ ಬೆಳೆಗಾರರ ಸಂಸ್ಥೆಗಳಾದ ಕ್ಯಾಂಪ್ಕೋ, ಟಿಎಸ್ಎಸ್, ಟಿಎಂಎಸ್, ತುಮ್ಕೋಸ್, ಕಿಸಾನ್ ಸಂಘ, ಅಡಕೆ ಬೆಳೆಗಾರರ ಸಂಘ, ಆಪ್ಸ್ ಕೋಸ್, ಕ್ರ್ಯಾಮ್ ಮತ್ತಿತರ ಸಂಸ್ಥೆಗಳೊಂದಿಗೆ ಇಂಪ್ಲೀಡಿಂಗ್ ಅರ್ಜಿ ಹಾಕಿದ್ದು, ಈ ದಾವೆಯಲ್ಲಿ ಅರ್ಜಿದಾರರರಾಗಿದ್ದೇವೆ ಎಂದು ಮಾಹಿತಿ ನೀಡಿದರು.
ಈ ದಾವೆಯನ್ನು ಬೆಳೆಗಾರರನ್ನು ಪ್ರತಿನಿಧಿಸಲು ಸಮರ್ಥ ನ್ಯಾಯವಾದಿಯೊಬ್ಬರನ್ನು ನೇಮಕ ಮಾಡಲು ರಾಜ್ಯ ಸರ್ಕಾರವನ್ನು ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದೆವು. ಅದರಂತೆ ರಾಜ್ಯ ಸರ್ಕಾರವು ಕ್ರಮ ಕೈಗೊಂಡಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ವ್ಯವಸ್ಥಾಪಕ ನಿರ್ದೇಶಕ ಡೊಂಗ್ರೆ, ಪ್ರಮುಖರಾದ ನಾಗೇಶ್, ವಿರೂಪಾಕ್ಷಪ್ಪ ಮತ್ತಿತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

