ಎಲ್ಲಾ ಕಾಲಘಟ್ಟದ ಸಾಹಿತ್ಯದಲೂ ಸಮಾಜ ತಿದ್ದುವ ಪ್ರಯತ್ನ: ದತ್ತ
ಕ.ಪ್ರ.ವಾರ್ತೆ, ಸಾಗರ, ಜ.31
ಕನ್ನಡ ಸಾಹಿತ್ಯದ ಎಲ್ಲಾ ಕಾಲಘಟ್ಟದಲ್ಲಿ ಸಾಮಾಜಿಕ ವ್ಯವಸ್ಥೆಯನ್ನು ಚರ್ಚಿಸಿ ಆ ಮೂಲಕ ಸಮಾಜವನ್ನು ತಿದ್ದುವ ಪ್ರಯತ್ನ ನಡೆದಿರುವುದನ್ನು ಕಾಣಬಹುದು ಎಂದು ಶಾಸಕ ವೈ.ಎಸ್.ವಿ.ದತ್ತ ಹೇಳಿದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಶುಕ್ರವಾರ ಸಂಜೆ ಏರ್ಪಡಿಸಿದ್ದ ಕಮಲಮ್ಮ ಒಡೆಯರ್ ನೀಡಿದ ಕೆ.ಜಿ.ಒಡೆಯರ್ ದತ್ತಿ ಕಾರ್ಯಕ್ರಮದಲ್ಲಿ ರಾಜಕೀಯ ಮತ್ತು ಸಾಹಿತ್ಯ ಎನ್ನುವ ವಿಷಯದ ಕುರಿತು ಅವರು ಉಪನ್ಯಾಸ ನೀಡಿದರು.
ಸಾಮಾಜಿಕ ವ್ಯವಸ್ಥೆ: ವಚನಕಾರರಿಂದ ಹಿಡಿದು, ಪಂಪ, ಕುಮಾರವ್ಯಾಸ, ನವೋದಯ ಕಾಲದ ಕುವೆಂಪು, ಬೇಂದ್ರೆ, ಅಡಿಗರು, ಜಿ.ಎಸ್. ಶಿವರುದ್ರಪ್ಪ ಎಲ್ಲರೂ ತಮ್ಮ ಸಾಹಿತ್ಯದಲ್ಲಿ ಸಾಮಾಜಿಕ ವ್ಯವಸ್ಥೆಯನ್ನು, ರಾಜಕಾರಣವನ್ನು ವಿಡಂಬನೆ ಮಾಡಿರುವುದನ್ನು ಕಾಣಬಹುದು ಎಂದರು.
ಇಂದಿನ ರಾಜಕಾರಣದಲ್ಲಿ ಕಂಡುಬರುವ ಪ್ರಾದೇಶಿಕತೆ (ಪ್ರಾದೇಶಿಕ ಪಕ್ಷಗಳ ಪ್ರಾಬಲ್ಯ), ಪಕ್ಷಾಂತರ, ಅಧಿಕಾರದಾಹ, ಕೃಷಿ ಪದ್ಧತಿ ಎಲ್ಲದರ ಬಗ್ಗೆ ಕನ್ನಡದ ಸಾಹಿತಿಗಳು, ಬರಹಗಾರರು ಬರೆದಿದ್ದಾರೆ. ಸಾಮಾಜಿಕವಾಗಿ ಯೋಚಿಸುವ ಕವಿಗಳು, ಚಿಂತಕರು ಪ್ರಾದೇಶಿಕತೆಗೆ ಹೆಚ್ಚು ಒತ್ತು ನೀಡಿದ್ದರು ಎಂದು ಪಂಪ ನೆನೆವುದೆನ್ನ ಮನಂ, ಬನವಾಸಿ ದೇಶಮಂ ಎಂದು ಹೇಳಿರುವುದನ್ನು ಉಲ್ಲೇಖಿಸಿ ಪ್ರಾದೇಶಿಕತೆ ಎಲ್ಲ ಕಾಲದಲ್ಲೂ ಕಾಡಿದೆ ಬಿಟ್ಟಿಲ್ಲ ಎಂದರು.
ಮನ್ನಣೆಯ ದಾಹ: ರಾಜಕಾರಣಿಗಳಿಗೆ ಮಾನ್ಯತೆಯ ಹುಚ್ಚು, ಮನ್ನಣೆಯ ದಾಹ ಎನ್ನುವುದನ್ನು ಕುಮಾರವ್ಯಾಸ ಅಂದೇ ತನ್ನ ಕಾವ್ಯಗಳಲ್ಲಿ ಹೇಳಿರುವುದನ್ನು ಪ್ರಸ್ತಾಪಿಸಿದ ಅವರು, ಜನರಿಲ್ಲದೆ ರಾಜಕಾರಣಿ ಇಲ್ಲ ಎನ್ನುವುದನ್ನು ಕುಮಾರವ್ಯಾಸ ಸ್ಪಷ್ಟವಾಗಿ ಹೇಳಿದ್ದಾನೆ ಎಂದರು.
ಪಕ್ಷಾಂತರ ಪ್ರವೃತ್ತಿ ಅಧರ್ಮ ಎನ್ನುವ ವ್ಯಾಖ್ಯಾನ ಸಾಹಿತ್ಯದಲ್ಲಿ ಎಂದೋ ಇತ್ತು. ಕುಮಾರವ್ಯಾಸ ತಮ್ಮ ಕಾವ್ಯದಲ್ಲಿ ಕೃಷ್ಣನನ್ನು ಪಾಂಡವರ ಪಕ್ಷಕ್ಕೆ ಸೆಳೆಯುವ ಸಂದರ್ಭ ವಿವರಿಸುತ್ತ ಕರ್ಣನ ಮೂಲಕ ತಾನು ಪಾಂಡವರ ಪಕ್ಷಕ್ಕೆ ಬಂದೆನಾದರೆ ರೂಢಿ ಮೆಚ್ಚದು, ಜನರು ಮೆಚ್ಚುವುದಿಲ್ಲ ಎಂದು ಹೇಳಿಸುತ್ತಾನೆ. ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಕುಮಾರವ್ಯಾಸ ಅಂದೇ ಕಂಡಿದ್ದ. 12ನೇ ಶತಮಾನದಲ್ಲಿ ಬಸವಣ್ಣನವರೂ ಪಕ್ಷಾಂತರದ ಬಗ್ಗೆ ಬರೆದಿದ್ದಾರೆ ಎಂದರು.ಪರಿಷತ್ತಿನ ಅಧ್ಯಕ್ಷ ವಿ.ಟಿ. ಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ರಂಗಕರ್ಮಿ ಕಾಗೋಡು ಅಣ್ಣಪ್ಪ, ಅಶ್ವಿನಿ ಕುಮಾರ್, ಜಗದೀಶ ಒಡೆಯರ್, ಬಸವರಾಜ್ ಮೊದಲಾದವರು ಹಾಜರಿದ್ದರು. ಲೋಕೇಶ್ ಸ್ವಾಗತಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

