ಬದುಕು ಕಟ್ಟಿಕೊಳ್ಳುವ ಅನಿವಾರ್ಯತೆಯಿಂದ ಇಂಗ್ಲಿಷ್ನತ್ತ ಜನತೆ ಒಲವು: ಸ್ಪೀಕರ್ ಕಾಗೋಡು ತಿಮ್ಮಪ್ಪ ಅಭಿಮತ
ಸಾಗರ: ನಮ್ಮಲ್ಲಿ ಕನ್ನಡಾಭಿಮಾನ ಏನೂ ಕಡಿಮೆಯಾಗಿಲ್ಲ, ಆದರೆ ಬದುಕು ಕಟ್ಟಿಕೊಳ್ಳುವ ಅನಿವಾರ್ಯತೆಯಿಂದ ಆಂಗ್ಲಭಾಷೆಯತ್ತ ಒಲವು ತೋರುವಂತೆ ಮಾಡಿದೆ ಎಂದು ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಅಭಿಪ್ರಾಯಪಟ್ಟರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಶನಿವಾರ ಹಮ್ಮಿಕೊಂಡಿದ್ದ ಸಾಗರ ತಾ. 4ನೇ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿದ ಅವರು ವ್ಯವಸ್ಥೆಯ ದೋಷದಿಂದ ಬೇರೆ ಭಾಷೆ ಕಲಿಯುವುದು ಅನಿವಾರ್ಯವಾಗಿದೆ ಎಂದರು.
ಆಡಳಿತದಲ್ಲಿ ಶೇ.90ರಷ್ಟು ಕನ್ನಡ ಭಾಷೆ ಜಾರಿಗೆ ಬಂದಿದೆ. ಕನ್ನಡದ ಪಾರಿಭಾಷಿಕ ಪದಗಳು ಜನರ ಭಾಷೆಯಲ್ಲಿ ಬಂದರೆ ಕನ್ನಡ ಜನಸಾಮಾನ್ಯರ ನಡುವೆಯೂ ಬೆಳೆಯಲು ಸಾಧ್ಯ. ಇಂಗ್ಲಿಷನ್ನು ಸುಲಭವಾಗಿ ಕಿತ್ತು ಹಾಕಲು ಸಾಧ್ಯವಿಲ್ಲ. ಕನ್ನಡವನ್ನು ಇನ್ನಷ್ಟು ಉತ್ಕೃಷ್ಟಗೊಳಿಸಿದರೆ ಇಂಗ್ಲಿಷ್ಗೆ ಸಮರ್ಥ ಸ್ಪರ್ಧೆ ನೀಡಲು ಸಾಧ್ಯವಿದೆ ಎಂದು ಹೇಳಿದರು.
ಜನಮಾನಸದಲ್ಲಿ ವಿಶೇಷ ಸ್ಥಾನ: ಪಂಪ, ರನ್ನರ ಕಾಲದಲ್ಲಿ ಕನ್ನಡ ವಿಶ್ವವಿದ್ಯಾನಿಲಯ, ಶಾಲೆ, ಕಾಲೇಜುಗಳು ಇರಲಿಲ್ಲ. ಆದರೂ ಅವರು ರಚಿಸಿರುವ ಕೃತಿಗಳು ಇಂದಿಗೂ ಜನಮಾನಸದಲ್ಲಿ ವಿಶೇಷ ಸ್ಥಾನ ಪಡೆದಿದೆ. ಸಾಹಿತ್ಯ ಪರಿಷತ್ತಿನಂತಹ ಕನ್ನಡಪರ ಸಂಘಟನೆಗಳು ಸಾಹಿತ್ಯವನ್ನು ಕನ್ನಡಿಗರಿಗೆ ತಲುಪಿಸುವ ಕಾರ್ಯ ಮಾಡಬೇಕಾಗಿದೆ. ಈಗಾಗಲೆ ಭಾಷಾ ಮಾಧ್ಯಮದ ಬಗ್ಗೆ ಸರ್ಕಾರ ಸುಪ್ರೀಂ ಕೋರ್ಟ್ ನಲ್ಲಿ ವಾದವನ್ನು ಮಂಡಿಸುತ್ತಿದೆ. ಕನ್ನಡ ಭಾಷೆಯನ್ನು ಮಾತೃಭಾಷಾ ಸ್ಥಾನದಲ್ಲಿ ನೋಡುವ ಬಯಕೆ ಸರ್ಕಾರದ್ದೂ ಆಗಿದೆ ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕಸಾಪ ಜಿಲ್ಲಾಧ್ಯಕ್ಷ ಡಿ.ಮಂಜುನಾಥ್, ಸಾಹಿತ್ಯ ಸಮ್ಮೇಳನಗಳು ಸಾಹಿತ್ಯದ ಮನಸ್ಸನ್ನು ಅರಳಿಸುವ ಕೆಲಸ ಮಾಡುತ್ತದೆ. ಎಲ್ಲರ ಬೇಗುದಿಗಳಿಗೆ ಸಮ್ಮೇಳನ ವೇದಿಕೆ ಆಗುತ್ತದೆ. ಈ ಕಾರಣಕ್ಕಾಗಿಯೇ ಕೇಂದ್ರ ಪರಿಷತ್ತು ಪ್ರತಿ ವರ್ಷ ತಾಲೂಕು ಮಟ್ಟದಲ್ಲಿಯೂ ಸಾಹಿತ್ಯ ಸಮ್ಮೇಳನಗಳನ್ನು ನಡೆಸುತ್ತಿದೆ ಎಂದರಲ್ಲದೆ, ಕನ್ನಡ ಭಾಷೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಅವೈಜ್ಞಾನಿಕವಾಗಿದ್ದು, ಈ ನಿಟ್ಟಿನಲ್ಲಿ ಸರ್ಕಾರ ಮತ್ತು ಕನ್ನಡದ ಮನಸ್ಸುಗಳು ಒಟ್ಟಾಗಿ ಪ್ರಯತ್ನ ನಡೆಸಬೇಕು ಎಂದು ಹೇಳಿದರು.
ಟಿ.ಎಂ.ಶೇಷಗಿರಿ ಬರೆದಿರುವ ದೇವಾಲಯದ ಬುಡದಲ್ಲೊಂದು ಗಿಡ ಕಥಾ ಸಂಕಲನವನ್ನು ಸಾಹಿತಿ ಡಾ.ನಾ.ಡಿಸೋಜ ಬಿಡುಗಡೆ ಮಾಡಿದರು. ಕಸಾಪ ತಾ. ಅಧ್ಯಕ್ಷ ವಿ.ಟಿ.ಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಸಮ್ಮೇಳನದ ಸರ್ವಾಧ್ಯಕ್ಷ ಡಾ.ಜಿ.ಎಸ್.ಭಟ್, ಕನ್ನಡ ಪುಸ್ತಕ ಪ್ರಾಧಿಕಾರ ಅಧ್ಯಕ್ಷ ಡಾ.ಬಂಜಗೆರೆ ಜಯಪ್ರಕಾಶ್, ಜಾನಪದ ವಿದ್ವಾಂಸ ಹುಚ್ಚಪ್ಪ ಮಾಸ್ತರ್, ವಿಭಾಗಾಧಿಕಾರಿ ಡಾ.ಉದಯಕುಮಾರ ಶೆಟ್ಟಿ, ನಗರಸಭೆ ಅಧ್ಯಕ್ಷೆ ಲಲಿತಮ್ಮ, ಜಿಪಂ ಸದಸ್ಯರಾದ ಲಲಿತಾ ನಾರಾಯಣ, ಸುಮಂಗಲ ರಾಮಕೃಷ್ಣ, ತಾಪಂ ಅಧ್ಯಕ್ಷೆ ಜ್ಯೋತಿ ಮುರಳೀಧರ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಚ್.ಆರ್.ನಾಗಭೂಷಣ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

