ಭೂಗತ ಲೋಕದ ಕರಾಳ ಹಸ್ತ ಬಹಿರಂಗ
ಶ್ರೀಕಾಂತ ಭಟ್
ಶಿವಮೊಗ್ಗ: ಹಣಕ್ಕಾಗಿ ಶಿವಮೊಗ್ಗದ ಅಡಕೆ ವ್ಯಾಪಾರಿಯನ್ನು ಬೆದರಿಸಿ ಕೊಲ್ಲಲು ಪ್ರಯತ್ನ ನಡೆಸಿದ್ದ ಭೂಗತ ಪಾತಕಿ ಬನ್ನಂಜೆ ರಾಜಾ ವಿರುದ್ಧ ಶಿವಮೊಗ್ಗ ಪೊಲೀಸರು ಕಕೋಕ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ. ಹಾಗೆಯೇ, ಈ ಪ್ರಕರಣದಲ್ಲಿ ಬಂಧಿತರಾದ ಆರೋಪಿಗಳಿಂದ ಮಹತ್ವದ ಮಾಹಿತಿಯನ್ನು ಕಲೆ ಹಾಕಿದ್ದಾರೆ.
ಇಂಟರ್ನೆಟ್ ಬಳಸಿ ಕರೆ ಮಾಡಿದ್ದ ಬನ್ನಂಜೆ ರಾಜಾ ಅಡಕೆ ವರ್ತಕರಿಗೆ ಹಣಕೊಡುವಂತೆ ಪೀಡಿಸಿದ್ದ. ಪದೇ ಪದೆ ಒತ್ತಡ ಬಂದ ಹಿನ್ನೆಲೆಯಲ್ಲಿ ಆ ವರ್ತಕರು ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ಬೆನ್ನುಹತ್ತಿದ ಪೊಲೀಸರಿಗೆ ಅನೇಕ ಅಚ್ಚರಿಯ ಮಾಹಿತಿ ಲಭ್ಯವಾಗಿದೆ.
ಪ್ರಕರಣದಲ್ಲಿ ಬನ್ನಂಜೆ ರಾಜಾನಿಗೆ ಸ್ಥಳೀಯವಾಗಿ ಸಹಕರಿಸುತ್ತಿದ್ದ ನವಲೆ ಆನಂದನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ಆತನಿಂದ ಒಂದಷ್ಟು ಮಾಹಿತಿ ಕಲೆಹಾಕಿದ್ದಾರೆ. ಈ ಹಿಂದೆ ಬೆದರಿಕೆ ಹಾಕಿ ಹಣ ಕೀಳುವ ಕಾರ್ಯತಂತ್ರ ಯಾವುದೆಲ್ಲಾ ನಡೆಸಲಾಗಿದೆ, ಮುಂದೆ ಯಾರು ಟಾರ್ಗೆಟ್ ಆಗಿದ್ದರು ಎಂಬ ಅಂಶವನ್ನು ಬಂಧಿತರಿಂದ ಪಡೆದುಕೊಳ್ಳಲಾಲಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.
ಬನ್ನಂಜೆ ರಾಜನೊಂದಿಗೆ ಸ್ಥಳೀಯ ರೌಡಿ ಶೀಟರ್ ನವಲೆ ಆನಂದನಿಗೆ ಹಳೆಯ ಸಂಬಂಧವಿತ್ತು ಎಂಬುದೂ ವಿಚಾರಣೆ ವೇಳೆ ಗೊತ್ತಾಗಿದೆ. ಭೂಗತ ಪಾತಕಿಗಳು ಶಿವಮೊಗ್ಗದಲ್ಲಿ ತಮ್ಮ ನೆಟ್ವರ್ಕ್ ವಿಸ್ತರಿಸಿದ್ದರು ಎಂಬ ಸಂಗತಿಯೂ ಈ ಮೂಲಕ ಬಯಲಾಗಿದೆ.
ಖೆಡ್ಡಾ ಸಿದ್ಧ: ಬನ್ನಂಜೆ ರಾಜಾನನ್ನು ಕಟ್ಟಿಹಾಕುವುದು ಸಾಮಾನ್ಯ ಕಾನೂನಿನಿಂದ ಕಷ್ಟಸಾಧ್ಯ. ಹೀಗಾಗಿ ವಿಶೇಷ ಕಾಯ್ದೆ (ಖಿಏಊ ಓಆಖಃಆಖಿಆಓಆ ಈಕಃಖಿಖಕಔ ಕಋ ಕಖಎಆಃಐಖಊಉ ಈಖಐಂಊ ಆಈಖಿ, 2000) ಬಳಸಿಕೊಳ್ಳುತ್ತಿರುವುದು ಪ್ರಕರಣದ ವಿಶೇಷತೆಗಳಲ್ಲೊಂದು. ಶಿವಮೊಗ್ಗ ಜಿಲ್ಲೆಯಲ್ಲಿ ಈ ಕಾಯ್ದೆಯಡಿ ಪ್ರಕರಣ ದಾಖಲಿಸುತ್ತಿರುವುದು ಇದೇ ಮೊದಲು. ಶಿವಮೊಗ್ಗ ವರ್ತಕರ ಬೆದರಿಕೆ ಪ್ರಕರಣದಲ್ಲಿ ಬನ್ನಂಜೆ ರಾಜಾನನ್ನೇ ಪ್ರಧಾನ ಆರೋಪಿ (ಎ1) ಎಂದು ದಾಖಲಿಸಲಾಗಿದೆ. ಹಾಗೆಯೇ ಬಿಜಾಪುರ, ಹುಬ್ಬಳ್ಳಿ ಸೇರಿದಂತೆ ವಿವಿಧ ಜಿಲ್ಲೆಗಳ ಪೊಲೀಸರೊಂದಿಗೆ ಸೇರಿ ಕಾರ್ಯಾಚರಣೆ ನಡೆಸಲಾಗುತ್ತಿದೆ. ಕಕೋಕ ಕಾನೂನಿನಡಿ ತನಿಖೆಗೆ ವಿಶೇಷ ಅವಕಾಶಗಳು ಪೊಲೀಸರಿಗೆ ಸಿಗಲಿದೆ ಎಂದು ವಿಶ್ಲೇಷಿಸಲಾಗುತ್ತಿದ್ದು, ಜತೆಗೆ ಇದಕ್ಕಾಗಿಯೇ ಬೆಂಗಳೂರಿನಲ್ಲಿ ವಿಶೇಷ ಕೋರ್ಟ್ ಕಾರ್ಯನಿರ್ವಹಿಸುತ್ತಿದೆ. ಇನ್ನೊಂದೆಡೆ ಬನ್ನಂಜೆ ರಾಜಾನ ಕಡೆಯ ಶಾರ್ಪ್ ಶೂಟರ್ಗಳೆಂದು ಕರೆಸಿಕೊಳ್ಳುವವರನ್ನೂ ಹುಬ್ಬಳ್ಳಿ ಪೊಲೀಸರು ಬಂಧಿಸಿ ಇಲ್ಲಿಯ ಪೊಲೀಸರಿಗೆ ಹಸ್ತಾಂತರಿಸಿದ್ದರು. ದೊಡ್ಡ ನೆಟ್ವರ್ಕ್ ಇದ್ದು, ಅದನ್ನು ಸದೆಬಡಿಯುವ ಉದ್ದೇಶದಿಂದ ಪೊಲೀಸರ ನಾಲ್ಕು ವಿಶೇಷ ತಂಡ ರಚಿಸಲಾಗಿದೆ. ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೌಶಲೇಂದ್ರ ಕುಮಾರ್ ಅವರೇ ಈ ಪ್ರಕರಣವನ್ನು ಕೈಗೆತ್ತಿಕೊಂಡಿದ್ದಾರೆ. ಹೆಚ್ಚುವರಿ ಎಸ್ಪಿಯರೇ ತನಿಖಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಉನ್ನತ ಪೊಲೀಸ್ ಅಧಿಕಾರಿಗಳ ತಂಡವೇ ಪ್ರತಿ ದಿನ ಈ ಪ್ರಕರಣದ ಆಗು ಹೋಗುಗಳ ಬಗ್ಗೆ ನಿಗಾ ಇಟ್ಟು ಮಾರ್ಗದರ್ಶನ ಮಾಡುತ್ತಿದೆ. ಇನ್ನೊಂದೆಡೆ ಬನ್ನಂಜೆ ರಾಜಾ ಬೇರೆ ದೇಶದಲ್ಲಿ ಕುಳಿತು ಕಾರ್ಯನಿರ್ವಹಿಸುತ್ತಿಲ್ಲ, ಆತ ದೇಶದೊಳಗೆ ಅಡಗಿಕೊಂಡು ಕಾರ್ಯನಿರ್ವಹಿಸುತ್ತಿದ್ದಾನೆ. ಈ ಸಂಗತಿ ಕೂಡ ಸದ್ಯವೇ ಹೊರಬೀಳಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

