ಮುತ್ತಿಗೆ ಕ್ರಾಸ್ ಬಳಿ ರೈತರ ಬೃಹತ್ ಸಮಾವೇಶ 21ಕ್ಕೆ
ಶಿವಮೊಗ್ಗ: ಬರಗಾಲ ನಿರ್ವಹಣೆಗೆ ಒತ್ತಾಯಿಸಿ ಮತ್ತು 35ನೇ ರೈತ ಹುತಾತ್ಮ ದಿನಾಚರಣೆ ಅಂಗವಾಗಿ ರಾಜ್ಯ ರೈತ ಸಂಘ ಜುಲೈ 21ರಂದು ಆಲಮಟ್ಟಿ- ಬಿಜಾಪುರ ಮಧ್ಯೆ ಇರುವ ಮುತ್ತಿಗೆ ಕ್ರಾಸ್ ಬಳಿ ರೈತರ ಸಮಾವೇಶ ಹಮ್ಮಿಕೊಂಡಿದೆ.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ರೈತ ಸಂಘದ ಕಾರ್ಯಾಧ್ಯಕ್ಷ ಎಚ್.ಆರ್.ಬಸವರಾಜಪ್ಪ, ಗುಂಡುಹಾರಿಸುವ ಸರ್ಕಾರದ ಪ್ರವೃತ್ತಿ ಬದಲಾಗುತ್ತಿಲ್ಲ. ಹೀಗಾಗಿ ಸರ್ಕಾರವನ್ನು ಎಚ್ಚರಿಸುವ ಉದ್ದೇಶದಿಂದ ಬೃಹತ್ ಸಮಾವೇಶ ಹಮ್ಮಿಕೊಂಡಿರುವುದಾಗಿ ಹೇಳಿದರು.
ರೈತರ ನೋವು, ಕಷ್ಟ ಸಂಕಷ್ಟಗಳನ್ನು ಈಡೇರಿಸಲು ಅಂದಿನಿಂದ ಇಂದಿನವರೆಗೂ ಎಲ್ಲಾ ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಚಳವಳಿಗಳ ಮುಖಾಂತರ ಒತ್ತಾಯ ಮಾಡಿದರೂ ನಮ್ಮನ್ನಾಳಿದ ಎಲ್ಲಾ ಸರ್ಕಾರಗಳ ಬೇಜವಾಬ್ದಾರಿತನದ ಆಡಳಿತದಿಂದಾಗಿ ರೈತ ಆತ್ಮಹತ್ಯೆ ಮಾಡಿಕೊಳ್ಳುವುದನ್ನು ಇನ್ನೂ ನಿಲ್ಲಿಸಲಾಗಿಲ್ಲ ಎಂದರು.
153 ರೈತರನ್ನು ನೇರವಾಗಿ ಗುಂಡು ಹೊಡೆದು ಸಾಯಿಸಿದ್ದರೆ, ದೇಶದಲ್ಲಿ ಯಾವುದೇ ಗುಂಡು ಹಾರಿಸದೆ 7 ಲಕ್ಷ ರೈತರನ್ನು (ರಾಜ್ಯದಲ್ಲಿ 40 ಸಾವಿರಕ್ಕೂ ಅಧಿಕ) ಆತ್ಮಹತ್ಯೆಗೆ ದೂಡಿ ಒಂದು ರೀತಿ ಪ್ರಾಯೋಜಿತ ಕೊಲೆಗಡುಕ ಸರ್ಕಾರಗಳಾಗಿ ಇಂದಿಗೂ ಮುಂದುವರಿಯುತ್ತಲೇ ಇವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಬಿಜಾಪುರ ಜಿಲ್ಲೆ ಕೂಡಗಿ ಶಾಖೋತ್ಪನ್ನ ವಿದ್ಯುತ್ ಸ್ಥಾವರ ನಿರ್ಮಾಣ ವಿರೋಧಿಸಿ ಪ್ರತಿಭಟನೆ ಮಾಡುತ್ತಿದ್ದ ರೈತರ ಮೇಲೆ ರಾಜ್ಯ ಸರ್ಕಾರ ಗುಂಡು ಹಾರಿಸಿರುವುದು ಈ ಸರ್ಕಾರಗಳ ಮನಸ್ಥಿತಿಯ ದ್ಯೋತಕವಾಗಿದೆ. ಬರದಿಂದಾಗಿ ಜನ ಜಾನುವಾರುಗಳಿಗೆ ಕುಡಿವ ನೀರು, ಆಹಾರ ಮೇವು ಇಲ್ಲ. ರಾಜ್ಯವನ್ನು ಸಂಪೂರ್ಣ ಬರಪೀಡಿತ ಎಂದು ಘೋಷಿಸಬೇಕು, ಗೋಶಾಲೆ ತೆರೆಯಬೇಕು, ಮೇವಿನ ಬ್ಯಾಂಕ್ ಸ್ಥಾಪಿಸಬೇಕು, ರೈತರಿಗೆ ಉದ್ಯೋಗ ದೊರಕಿಸಿಕೊಡಬೇಕು, ಎಪಿಎಲ್ ರೈತ ಕುಟುಂಬಗಳಿಗೂ ರುಪಾಯಿ ಕೆಜಿ ಅಕ್ಕಿ ಕೊಡಬೇಕು, ರೈತರ ಸಾಲ ಮನ್ನಾ ಮಾಡುವುದು ಮತ್ತಿತರ ಬೇಡಿಕೆ ಈಡೇರಿಸಲು ಆಗ್ರಹಿಸಿದರು. ಕೆ.ರಾಘವೇಂದ್ರ, ಹಿಟ್ಟೂರು ರಾಜು, ಟಿ.ಎಂ.ಚಂದ್ರಪ್ಪ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

