ರೈಲ್ವೆ ಗೇಟ್- 130 ಅಭಿವೃದ್ಧಿ; ಪರಿಶೀಲನೆ
ಸಾಗರ: ಪಟ್ಟಣದ ಚಂದ್ರಮಾವಿನಕೊಪ್ಪಲು ಬೈಪಾಸ್ನಲ್ಲಿ ಇರುವ ರೈಲ್ವೆ ಲೆವೆಲ್ ಕ್ರಾಸಿಂಗ್ ಗೇಟ್ ನಂ.129 ಅನ್ನು ಮುಚ್ಚಿ, ಗೇಟ್ ನಂ.130 ಅನ್ನು ಅಭಿವೃದ್ಧಿಪಡಿಸುವ ಕುರಿತು ಗುರುವಾರ ರೈಲ್ವೆ ಇಲಾಖೆ ಅಧಿಕಾರಿಗಳು ಹಾಗೂ ಸ್ಥಳೀಯ ಅಧಿಕಾರಿಗಳ ತಂಡ ಸ್ಥಳ ಪರಿಶೀಲನೆ ನಡೆಸಿತು.
ಈ ಸಂದರ್ಭ ಮಾತನಾಡಿದ ಉಪವಿಭಾಗಾಧಿಕಾರಿ ಡಾ.ಉದಯಕುಮಾರ್ ಶೆಟ್ಟಿ, ಶಿವಮೊಗ್ಗ ರಸ್ತೆಯಿಂದ ಎಪಿಎಂಸಿಗೆ ಸಂಪರ್ಕಿಸುವ ಬೈಪಾಸ್ ರಸ್ತೆಯಲ್ಲಿ ಇರುವ ಚಂದ್ರಮಾವಿನಕೊಪ್ಪಲು ಭಾಗದಲ್ಲಿ ಇರುವ ರೈಲ್ವೆ ಕ್ರಾಸಿಂಗ್ನಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚುತ್ತಿದೆ. ಒಂದೆರಡು ಸಾವುನೋವಿನ ಪ್ರಕರಣವೂ ಸಂಭವಿಸಿರುವುದರಿಂದ ಈ ಗೇಟ್ ಮುಚ್ಚುವ ಪ್ರಸ್ತಾಪ ರೈಲ್ವೆ ಇಲಾಖೆ ಎದುರು ಇದೆ. ಈ ಗೇಟನ್ನು ಮುಚ್ಚಿ, ಪಕ್ಕದಲ್ಲಿ ಇರುವ ರಸ್ತೆಯ ರೈಲ್ವೆ ಲೆವೆಲ್ ಕ್ರಾಸಿಂಗ್ ಗೇಟ್ ಸಂಖ್ಯೆ 130ರ ಮೂಲಕ ವಾಹನ ಸಂಚಾರಕ್ಕೆ ಅನುಕೂಲ ಕಲ್ಪಿಸುವ ಉದ್ದೇಶ ಹೊಂದಲಾಗಿದೆ ಎಂದರು.
ರಾಮಕೃಷ್ಣ ಶಾಲೆ ಎದುರಿನ ರಸ್ತೆ ಕಿರಿದಾಗಿದೆ. ದೊಡ್ಡ ವಾಹನಗಳು ಸಂಚರಿಸಲು ತೊಂದರೆ ಆಗುವ ಸಾಧ್ಯತೆ ಇರುವುದರಿಂದ ರಸ್ತೆ ಅಗಲೀಕರಣಕ್ಕೆ ರೈಲ್ವೆ ಇಲಾಖೆಗೆ ಪ್ರಸ್ತಾವ ಸಲ್ಲಿಸಲಾಗುವುದು. ಜೊತೆಗೆ ಚಂದ್ರಮಾವಿನಕೊಪ್ಪಲು ಗೇಟ್ ಉಳಿಸಿಕೊಳ್ಳುವ ನಿಟ್ಟಿನಲ್ಲಿ ದುರ್ಗಾಂಬಾ ವೃತ್ತದ ಲೆವೆಲ್ ಕ್ರಾಸಿಂಗ್ 130 ಹಾಗೂ ಚಂದ್ರಮಾವಿನಕೊಪ್ಪಲಿನ ಲೆವೆಲ್ ಕ್ರಾಸಿಂಗ್ 129ಕ್ಕೆ ಮೇಲ್ಸೇತುವೆ ನಿರ್ಮಿಸುವ ಪ್ರಸ್ತಾಪವೂ ರೈಲ್ವೆ ಇಲಾಖೆ ಮುಂದಿದೆ ಎಂದು ತಿಳಿಸಿದರು.
ಈಗಾಗಲೇ ಸೊರಬ ರಸ್ತೆ ಅಗಲೀಕರಣ ಪ್ರಸ್ತಾಪ ಸರ್ಕಾರದ ಮುಂದೆ ಇದೆ. ಲೆವೆಲ್ ಕ್ರಾಸಿಂಗ್ ಸಂದರ್ಭದಲ್ಲಿ ವಿಪರೀತ ವಾಹನ ದಟ್ಟಣೆ ಉಂಟಾಗುತ್ತಿದೆ.
ಇಂತಹ ಸ್ಥಿತಿಯಲ್ಲಿ ಚಂದ್ರಮಾವಿನಕೊಪ್ಪಲಿನ ಗೇಟ್ ಮುಚ್ಚಿ, ಪರ್ಯಾಯ ಮಾರ್ಗದಿಂದ ದುರ್ಗಾಂಬ ವೃತ್ತದ ಮೂಲಕ ವಾಹನ ಸಂಚಾರಕ್ಕೆ ಅನುಕೂಲ ಕಲ್ಪಿಸುವ ಯೋಜನೆ ಅವೈಜ್ಞಾನಿಕವಾಗಿದೆ ಎದರು.
ರೈಲ್ವೆ ಇಲಾಖೆಯ ಸಹಾಯಕ ವಿಭಾಗೀಯ ಅಭಿಯಂತರ ಎಳಪಂರು ವಲುಧಿ, ಜಾಕಿರ್ ಹುಸೇನ್, ಪೌರಾಯುಕ್ತ ಚಂದ್ರಶೇಖರ್, ಪೇಟೆಠಾಣೆ ಸರ್ಕಲ್ ಇನ್ಸ್ಪೆಕ್ಟರ್ ಕೃಷ್ಣಮೂರ್ತಿ, ಸಾರಿಗೆ ಇಲಾಖೆಯ ರಾಮೇಗೌಡ, ಲೋಕೋಪಯೋಗಿ ಇಲಾಖೆಯ ಭೀಮಾನಾಯಕ್ ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

