ಶಾಶ್ವತಿ ಮಹಿಳಾ ವೇದಿಕೆ ಸದಸ್ಯರ ಧರಣಿ
ಶಿವಮೊಗ್ಗ: ಮುಗ್ಧ ಮಕ್ಕಳ ಮೇಲೆ ದೌರ್ಜನ್ಯ ನಡೆಯುತ್ತಿದ್ದರೂ ಮೌನ ವಹಿಸಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಉಮಾಶ್ರೀಯವರೇ ಎಲ್ಲಿ ಮತ್ತು ಏಕೆ ಕಾಣೆಯಾಗಿದ್ದೀರಾ ಎಂದು ಚುಂಚಾದ್ರಿ ಮಹಿಳಾ ವೇದಿಕೆ, ಶಾಶ್ವತಿ ಮಹಿಳಾ ವೇದಿಕೆ ಸದಸ್ಯರು ಪ್ರಶ್ನಿಸಿದ್ದಾರೆ.
ಶನಿವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ವೇದಿಕೆ ಸದಸ್ಯರು, ಸರ್ಕಾರದ ವಿರುದ್ಧ ಘೋಷಣೆ ಕೂಗಿ, ಮಹಿಳೆಯರ ಮೇಲಿನ ದೌರ್ಜನ್ಯವನ್ನು ಖಂಡಿಸಿದರು.
ನೀವು ಒಬ್ಬ ಹೆಣ್ಣಲ್ಲವೇ ಎಂದು ಸಚಿವರನ್ನು ತರಾಟೆಗೆ ತೆಗೆದುಕೊಂಡ ವೇದಿಕೆ ಸದಸ್ಯರು, ನಿಮಗೆ ಒಬ್ಬ ಹೆಣ್ಣು ಮಗಳಿದ್ದೂ, ಆಕೆಗೆ ಈ ರೀತಿ ದೌರ್ಜನ್ಯ ನಡೆದಲ್ಲಿ ಸುಮ್ಮನೆ ಇರುತ್ತಿದ್ದಿರಾ, ನಿಮಗೆ ಒಂದು ನ್ಯಾಯ, ಸಮಾಜಕ್ಕೆ ಒಂದು ನ್ಯಾಯವೇ ಎಂದು ಕಟುಶಬ್ದಗಳಲ್ಲಿ ಟೀಕಿಸಿದರು.
ನಿಮ್ಮಿಂದ ಯಾವ ಕೆಲಸವೂ ಆಗಿಲ್ಲ, ಮಹಿಳೆಯರ ಪರವಾಗಿ ದನಿ ಎತ್ತಿ ನ್ಯಾಯ ಕೊಡಿಸುವ ಕೆಲಸ ಮಾಡಲೂ ಸಾಧ್ಯವಿಲ್ಲ. ಇನ್ನಾದರೂ ನೀವು ಮನಸ್ಸು ಮಾಡಿ, ಇಲ್ಲವಾದಲ್ಲಿ ಬೇರೆಯವರಿಗೆ ತಮ್ಮ ಸ್ಥಾನವನ್ನು ತೆರವು ಮಾಡಿಕೊಡಿ ಎಂದು ಸವಾಲೆಸೆದಿರುವ ವೇದಿಕೆ ಸದಸ್ಯರು, ಇಲ್ಲವಾದಲ್ಲಿ ಮಕ್ಕಳು ಮತ್ತು ಮಹಿಳೆಯರಿಗೋಸ್ಕರ ರಾಜ್ಯಾದ್ಯಂತ ಉಗ್ರ ಹೋರಾಟ ಹಮ್ಮಿಕೊಳ್ಳುವುದಾಗಿ ಎಚ್ಚರಿಸಿದರು.
ಒಳಿತು ಕೆಡುಕಿನ ಅರಿವು: ಇತ್ತೀಚಿನ ದಿನಗಳಲ್ಲಿ ದೇಶಾದ್ಯಂತ ಅಪ್ರಾಪ್ತ ವಯಸ್ಸಿನ ಹೆಣ್ಣು ಮಕ್ಕಳ ಮೇಲೆ ನಿರಂತರವಾಗಿ ಅತ್ಯಾಚಾರ ನಡೆಯುತ್ತಿವೆ. ಆ ಮುಗ್ಧ ಹೆಣ್ಣು ಮಗುವಿಗೆ ಸಮಾಜದ ಒಳಿತು- ಕೆಡುಕಿನ ಬಗ್ಗೆ ಅರಿವಿರುವುದಿಲ್ಲ. ಅಂತಹ ಮಕ್ಕಳ ಮೇಲೆ ಕಿಡಿಗೇಡಿಗಳು ಅತ್ಯಾಚಾರವೆಸಗುತ್ತಿದ್ದರೂ ನೋಡಿಕೊಂಡು ಅಸಹಾಯಕ ಸ್ಥಿತಿಯಲ್ಲಿ ನಾವೆಲ್ಲರೂ ಕೈಕಟ್ಟಿಕೊಂಡು ಕುಳಿತಿದ್ದೇವೆ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.
ಪ್ರಸ್ತುತ ಇಂತಹ ಪ್ರಕರಣಗಳಲ್ಲಿ ಆರೋಪಿಗಳಿಗೆ ಕನಿಷ್ಠ ಶಿಕ್ಷೆ ಅಥವಾ ದೀರ್ಘಾವಧಿ ವಿಚಾರಣೆಯಿಂದ ರಿಯಾಯಿತಿ ದೊರೆಯುತ್ತಿದೆ. ಇದರಿಂದಲೇ ಇಂಥ ಪ್ರಕರಣಗಳು ಹೆಚ್ಚಾಗುತ್ತಿವೆ. ಇನ್ನಾದರೂ ಅಚ್ಯಾಚಾರವೆಸಗುವ ಅಪರಾಧಿಗಳಿಗೆ ತಕ್ಷಣವೇ ಗಲ್ಲು ಶಿಕ್ಷೆ ವಿಧಿಸುವ ಕಾನೂನನ್ನು ತಡಮಾಡದೇ ಜಾರಿಗೆ ತರಬೇಕು ಎಂದು ಮುಖ್ಯಮಂತ್ರಿಯವರಿಗೆ ಸಲ್ಲಿಸಿರುವ ಮನವಿಯಲ್ಲಿ ವೇದಿಕೆ ಸದಸ್ಯರು ಎಚ್ಚರಿಸಿದ್ದಾರೆ. ಶಾಂತಾ ಸುರೇಂದ್ರ, ಲಲಿತಾ ಪ್ರಕಾಶ್, ಗಿರಿಜಾ ಕುಮಾರ್, ಭಾರತಿ ಮುರುಗೇಶ್, ರೂಪ, ನಂದಿನಿ ರಾಜೇಶ್, ಉಷಾ, ಪ್ರೇಮ, ಶ್ಯಾಮಲಾ ಮತ್ತಿತರರು ಇದ್ದರು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

