ಪೌರ ಕಾರ್ಮಿಕರಿಂದ ಕಸ ವಿಲೇವಾರಿ ಶೀಘ್ರ ಜಾರಿ: ನಗರಸಭಾಧ್ಯಕ್ಷೆ ವಿಶಾಲಾಕ್ಷಿ
ಭದ್ರಾವತಿ: ಕಸ ವಿಲೇವಾರಿಗಾಗಿ ಮನೆ ಮಾಲೀಕರಿಂದ ಕಂದಾಯ ವಸೂಲು ಮಾಡಿ ನಗರಸಭೆ ಪೌರಕಾರ್ಮಿಕರಿಂದಲೇ ಕಸ ವಿಲೇವಾರಿ ಮಾಡುವ ವ್ಯವಸ್ಥೆಯನ್ನು ಶೀಘ್ರವಾಗಿ ಜಾರಿಗೊಳಿಸಲಾಗುವುದೆಂದು ನಗರಸಭಾಧ್ಯಕ್ಷೆ ವಿಶಾಲಾಕ್ಷಿ ತಿಳಿಸಿದ್ದಾರೆ.
ಮಂಗಳವಾರ ನಗರಸಭೆ ಆವರಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು ಈ ವಿಷಯವನ್ನು ಮುಂಬರುವ ಕೌನ್ಸಿಲ್ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ಸೂಕ್ತ ತೀರ್ಮಾನ ತೆಗೆದು ಕೊಳ್ಳಲಾಗುವುದೆಂದರು.
2014-16 ನೇ ಸಾಲಿನ ಅಭಿವೃದ್ಧಿ ಕಾಮಗಾರಿಗೆ ನಗರೋತ್ಥಾನ ಯೋಜನೆಯಡಿ ರು. 12 ಕೋಟಿ ಮಂಜೂರಾಗಿದೆ ಮತ್ತು 2014-15ನೇ ಸಾಲಿಗೆ ವಿವಿಧ ಯೋಜನೆಯಡಿ ರು. 23 ಕೋಟಿ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.
ಒಂದು ಡಾಂಬರ್ ಮತ್ತು ಒಂದು ಸಿಮೆಂಟ್ ರಸ್ತೆ ನಿರ್ಮಾಣವನ್ನು ಈ ಯೋಜನೆಯಲ್ಲಿ ಮಾಡುವ ಉದ್ದೇಶವಿದೆ. ರಾಜ್ಯ ಹಣಕಾಸು ನಿಗಮ ನಿಧಿಯಿಂದ ಶೇ.22.75, ಶೇ.7.25 ಅನುದಾನದಲ್ಲಿ ಕೈಗೊಳ್ಳಲಾಗಿರುವ ಕಾಮಗಾರಿಗಳಿಗೆ ಈಗಾಗಲೇ ಟೆಂಡರ್ ಕರೆಯಲಾಗಿದೆ ಎಂದರು.
ಸ್ಥಾಯಿ ಸಮಿತಿ ಅಧ್ಯಕ್ಷ ಜಿ.ಡಿ.ನಟರಾಜ್ ಹಾಗೂ ನಗರಸಭಾ ಸದಸ್ಯರು ಇದ್ದರು.
ಎನ್ಪಿಸಿಸಿ ಲಿಮಿಟೆಡ್ಗೆ ಕಾಮಗಾರಿ
ನಗರೋತ್ಥಾನ ಯೋಜನೆಯಡಿ ಸಣ್ಣ ಮತ್ತು ಮಧ್ಯಮ ಪಟ್ಟಣಗಳ ಅಭಿವೃದ್ಧಿ ಕಾರ್ಯಕ್ರಮದ ಎರಡನೇ ಹಂತದ ಆದ್ಯತಾವಾರು ಕಾಮಗಾರಿಗಳನ್ನು ನಿರ್ವಹಿಸುವ ನಿಟ್ಟಿನಲ್ಲಿ ಸುಮಾರು ರು. 120 ಕೋಟಿ ಕಾಮಗಾರಿಯನ್ನು ಎನ್ಪಿಸಿಸಿ ಲಿಮಿಟೆಡ್ಗೆ ಹಸ್ತಾಂತರಿಸಲಾಗಿದೆ ಎಂದು ತಿಳಿಸಿದರು.
ಇದೇ ವೇಳೆ ಪತ್ರಕರ್ತರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಅವರು ಇನ್ನು 5 ತಿಂಗಳಿನಲ್ಲಿ ಶೇ.50ರಷ್ಟು ರಸ್ತೆ ಅಭಿವೃದ್ಧಿ ಕಾಮಗಾರಿ ಪೂರ್ಣಗೊಳ್ಳುವುದು ಎಂದು ಭರವಸೆ ನೀಡಿದರು.
ಪಟ್ಟಣ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ನಗರಾಭಿವೃದ್ಧಿ ಪ್ರಾಧಿಕಾರ ವತಿಯಿಂದ ಹೈಮಾಸ್ಕ್ ದೀಪಗಳನ್ನು ಅಳವಡಿಸಲಾಗುವದು. ಇದಕ್ಕಾಗಿ ರು. 2 ಕೋಟಿ ನಿಗದಿಪಡಿಸಲಾಗಿದೆ. ಹೊಸಮನೆ ಶಿವಾಜಿ ವೃತ್ತ, ಬೊಮ್ಮನಕಟ್ಟೆ, ಸಂತೆ ಮೈದಾನ, ಹುತ್ತಾ ಕಾಲೋನಿ ರಂಗಮಂದಿರದ ಬಳಿ, ಸಿದ್ದಾಪುರ ಉದ್ಯಾನವನ, ಗಾಂಧಿನಗರ ಗಣಪತಿ ದೇವಸ್ಥಾನದ ಬಳಿ, ವೇಲೂರುಶೆಡ್ ಮುಖ್ಯರಸ್ತೆ ಹಾಗೂ ಹುಡ್ಕೋ ಕಾಲೋನಿಗಳಲ್ಲಿ ಹೈಮಾಸ್ಕ್
ದೀಪಗಳನ್ನು ಅಳವಡಿಸುವ ಯೋಜನೆ ಇದೆ.
ರು. 4.77 ಕೋಟಿ ಯೋಜನೆ
ಕಸ ಸಂಗ್ರಹಣೆ, ನಿರ್ವಹಣೆ ಮತ್ತು ಯಂತ್ರೋಪಕರಣ ಹಾಗೂ ವಾಹನಗಳ ಖರೀದಿಗಾಗಿ ರು. 8.85 ಕೋಟಿ ಗಳನ್ನು ಕಾಯ್ದಿರಿಸಲಾಗಿದೆ. 13ನೇ ಹಣಕಾಸು ಯೋಜನೆಯಲ್ಲಿ ಹಿಂದಿನ ಸಾಲಿನ ರು. 2 ಕೋಟಿ ಶಿಲ್ಕು ಹಾಗೂ 2014-15ನೇ ಸಾಲಿನ ಮೂಲ ಅನುದಾನ ರು. 2.77 ಕೋಟಿ ಸೇರಿ ಒಟ್ಟು ರು. 4.77 ಕೋಟಿ ಯೋಜನೆ ರೂಪಿಸಲಾಗುವುದು ಎಂದು ಅವರು ತಿಳಿಸಿದರು.
13ನೇ ಹಣಕಾಸು ಯೋಜನೆಯ ಪ್ರೋತ್ಸಾಹ ಧನದಲ್ಲಿ ಹಿಂದಿನ ಸಾಲಿನ ರು. 80 ಲಕ್ಷ ಸೇರಿದಂತೆ ರು. 1.22 ಕೋಟಿ ಅಭಿವೃದ್ಧಿ ಯೋಜನೆ ರೂಪಿಸಲಾಗುವುದು. ಇದೇ ಶೀರ್ಷಿಕೆಯಡಿ ರಸ್ತೆ ಮತ್ತು ಸೇತುವೆಗಳ ಅಭಿವೃದ್ಧಿಗೆ ಹಿಂದಿನ ಸಾಲಿನ ರು. 30 ಲಕ್ಷ ಸೇರಿದಂತೆ ರು. 81 ಲಕ್ಷದ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಹೇಳಿದರು.
ಉದ್ಯಾನವನದಲ್ಲಿ ದೀಪದ ವ್ಯವಸ್ಥೆ
ಗಾಂಧಿನಗರ ಉದ್ಯಾನವನದಲ್ಲಿ ದೀಪದ ವ್ಯವಸ್ಥೆ ಮತ್ತು ಅಭಿವೃದ್ಧಿಗೆ ರು. 24 ಲಕ್ಷ ಗಳನ್ನು ಕಾಯ್ದಿರಿಸಲಾಗಿದೆ. ರೈಲ್ವೆ ನಿಲ್ದಾಣದ ಬಳಿ ತರಕಾರಿಯನ್ನು ಏರಿಸಿಳಿಸಲು ಪ್ರತ್ಯೇಕ ವ್ಯವಸ್ಥೆ ಮಾಡಿ ಪ್ರಯಾಣಿಕರು ಸುಗಮವಾಗಿ ರಸ್ತೆಯಲ್ಲಿ ಓಡಾಡುವ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ವಿಶಾಲಾಕ್ಷಿ ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

