ವರದಾ ನದಿ ಪ್ರವಾಹ: ಸಾವಿರಾರು ಎಕರೆ ಕೃಷಿ ಭೂಮಿ ಜಲಾವೃತ
ಸಾಗರ: ಕಳೆದ ಒಂದು ವಾರಕ್ಕೂ ಹೆಚ್ಚು ದಿನಗಳಿಂದ ನಿರಂತರ ಸುರಿಯುತ್ತಿರುವ ಮಳೆಯಿಂದ ಇಡೀ ತಾಲೂಕು ತೊಯ್ದು ತೊಪ್ಪೆಯಾಗಿದೆ. ಜೂನ್ನಲ್ಲಿ ವಾಡಿಕೆಯಷ್ಟು ಮಳೆಯಾಗದೆ ಜನರಲ್ಲಿ ಆತಂಕ ಮನೆಮಾಡಿತ್ತು.
ಜುಲೈ ಎರಡನೇ ವಾರದಿಂದ ಆರಂಭಗೊಂಡ ವರ್ಷಧಾರೆ ಇನ್ನೂ ನಿಂತಿಲ್ಲ. ನಿರಂತರ ಮಳೆಯಿಂದ ತಾಲ್ಲೂಕಿನ ಎಲ್ಲ ಕೆರೆಕಟ್ಟೆಗಳು ತುಂಬಿ ಹರಿಯುತ್ತಿವೆ. ಗ್ರಾಮೀಣ ಪ್ರದೇಶಗಳ ಗುಡ್ಡ, ಕಾಡಿನ ಪ್ರದೇಶದಲ್ಲಿ ಜಲವೊಡೆದು ತಿಳಿ ನೀರು ಹರಿಯುತ್ತಿದೆ.
ಬಸವನ ಹೊಳೆ ಡ್ಯಾಂ ಭರ್ತಿ: ಪುನರ್ವಸು ಹಾಗೂ ಪುಷ್ಯ ಮಳೆ ಅನ್ನದಾತನ ಮುಖದಲ್ಲಿ ಸಂತಸ ಮೂಡಿಸಿದೆ. ತಾಲೂಕಿನಲ್ಲಿ ಕೃಷಿ ಚಟುವಟಿಕೆ ಬಿರುಸುಗೊಂಡಿದೆ. ಎಲ್ಲ ಭಾಗಗಳಲ್ಲಿ ಬಿತ್ತನೆ ಕಾರ್ಯ ಚುರುಕುಗೊಂಡಿದೆ. ಎಡಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಪಟ್ಟಣದ ಗಣಪತಿ ಕೆರೆಯಲ್ಲಿ ಕೋಡಿ ಬಿದ್ದಿದೆ. ಕುಡಿಯುವ ನೀರು ಪೂರೈಸುವ ಬಸವನ ಹೊಳೆ ಡ್ಯಾಂ ಭರ್ತಿಯಾಗಿ ಹೆಚ್ಚುವರಿ ನೀರನ್ನು ಹೊರಬಿಡಲಾಗುತ್ತಿದೆ.
ಗಾಳಿ-ಮಳೆ ಕೆಲೆವೆಡೆ ಅನಾಹುತಗಳನ್ನು ಸೃಷ್ಟಿಸಿದೆ. ತಾಲೂಕಿನ ತಾಳಗುಪ್ಪ ಹೋಬಳಿಯಲ್ಲಿ ವರದಾ ನದಿ ಪ್ರವಾಹ ಸಾವಿರಾರು ಎಕರೆ ಕೃಷಿ ಭೂಮಿಯನ್ನು ಆಪೋಷನ ತೆಗೆದುಕೊಂಡಿದೆ. ವರದಾ ನದಿ ಪ್ರವಾಹದಿಂದ ತಾಳಗುಪ್ಪ ಹೋಬಳಿಯ ಬೀಸನಗದ್ದೆ ಗ್ರಾಮ ದ್ವೀಪವಾಗಿದೆ. ಕೆಲವೆಡೆ ಮನೆ ಕುಸಿತದ ಪ್ರಕರಣಗಳೂ ವರದಿಯಾಗಿದೆ.
ಶರಾವತಿ ಹಿನ್ನೀರಿನ ಪ್ರದೇಶ ತುಮರಿ ಹೋಬಳಿಯಲ್ಲಿಯೂ ವ್ಯಾಪಕ ಮಳೆಯಾಗುತ್ತಿದ್ದು ಲಿಂಗನಮಕ್ಕಿ ಅಣೆಕಟ್ಟಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ.
ತಾಪಂ ಅಧ್ಯಕ್ಷ ಭೇಟಿ: ತಾಳಗುಪ್ಪ ಹೋಬಳಿಯ ನೆರೆಪೀಡಿತ ಪ್ರದೇಶಕ್ಕೆ ತಾಪಂ ಅಧ್ಯಕ್ಷೆ ಜ್ಯೋತಿ ಮುರಳಿಧರ ಭೇಟಿ ನೀಡಿ ಪರಿಶೀಲಿಸಿದರು. ನೆರೆಯಿಂದ ಹೋಬಳಿಯ ತಡಗಳಲೆ, ಸೈದೂರು, ಕಾಗೋಡು, ಮಂಡಗಳಲೆ, ತಟ್ಟೆಕೊಪ್ಪ ಸೇರಿದಂತೆ ಅನೇಕ ಭಾಗಗಳಲ್ಲಿ ವಿಪರೀತ ಹಾನಿಯುಂಟಾಗಿದ್ದು, 1500 ಎಕರೆ ಜಮೀನು ಜಲಾವೃತವಾಗಿದೆ ಎಂದು ಅಧ್ಯಕ್ಷರು ತಿಳಿಸಿದರು.
ಪ್ರತಿ ವರ್ಷ ಈ ಭಾಗದಲ್ಲಿ ನೆರೆ ಬರುತ್ತಿದ್ದು, ಮಳೆಗಾಲದಲ್ಲಿ ಉಕ್ಕುವ ನೀರನ್ನು ಆಣೆಕಟ್ಟು ನಿರ್ಮಾಣ ಮಾಡುವ ಮೂಲಕ ಸಂಗ್ರಹಿಸುವುದರಿಂದ ನೆರೆ ತಪ್ಪಿಸುವ ಬಗ್ಗೆ ಚಿಂತನೆ ನಡೆಸಬೇಕಾಗಿದೆ. ಈಗಾಗಲೆ ಬೀಸನಗದ್ದೆ ಗ್ರಾಮ ಸಂಪೂರ್ಣ ಜಲಾವೃತವಾಗಿದ್ದು, ದೋಣಿ ವ್ಯವಸ್ಥೆ ಕಲ್ಪಿಸಲಾಗಿದೆ.
ಆ ಭಾಗದಲ್ಲಿ ಸಾಂಕ್ರಾಮಿಕ ರೋಗ ಹರಡದಂತೆ ಅಗತ್ಯ ಕ್ರಮ ಕೈಗೊಳ್ಳಲು ಆರೋಗ್ಯ ಇಲಾಖೆಗೆ ಸೂಚನೆ ನೀಡಲಾಗಿದೆ. ಉದ್ಯೋಗಖಾತ್ರಿ ಯೋಜನೆಯಡಿ ಬೀಸನದ್ದೆ ಗ್ರಾಮಕ್ಕೆ ರು. 20 ಲಕ್ಷ ವೆಚ್ಚದಲ್ಲಿ ಬಂಡ್ ನಿರ್ಮಿಸಲಾಗಿತ್ತು. ಆದರೆ ಅದು ನೆರೆಯಲ್ಲಿ ಮುಳುಗಿ ಹೋಗಿದೆ. ನೆರೆಯಿಂದ ಹಾನಿಗೊಳಗಾದ ಜಮೀನಿಗಳಿಗೆ ಸರ್ಕಾರ ನಿಗಧಿಪಡಿಸಿದ ಪರಿಹಾರಧನ ನೀಡಲಾಗುವುದು ಎಂದು ತಿಳಿಸಿದರು.
ಜಿಪಂ ಸದಸ್ಯೆ ಲಲಿತಾ ನಾರಾಯಣ್, ಸೈದೂರು ಗ್ರಾಪಂ ಸದಸ್ಯ ಮಹಾಬಲೇಶ್ವರ ಜೆ. ನಾಯಕ್, ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಮೋಹನ್ ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

