ಶಿವಮೊಗ್ಗ

ತಮಿಳು ಬೋವಿಗಳಿಗೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ: ಯಡಿಯೂರಪ್ಪ ಭರವಸೆ

Published On :

ಶಿವಮೊಗ್ಗ: ತಮಿಳು ಬೋವಿ ಸಮಾಜದವರಿಗೆ ಪಶಿಷ್ಟ ಜಾತಿಯ ಪ್ರಮಾಣ ಪತ್ರ ನೀಡುವ ನಿಟ್ಟಿನಲ್ಲಿ ಸರ್ಕಾರದ ಗಮನ ಸೆಳೆಯಲಾಗುತ್ತದೆ ಎಂದ ಅವರು ತಮಿಳು ಸಮಾಜದ ಸಮಗ್ರ ಅಭಿವೃದ್ಧಿಗೆ ಬೇಕಾದ ಸೌಕರ್ಯಗಳನ್ನು ಸರ್ಕಾರದಿಂದ ಕಲ್ಪಿಸಲಾಗುತ್ತದೆಂದು ಸಂಸದ ಯಡಿಯೂರಪ್ಪ ಹೇಳಿದ್ದಾರೆ.
ಇಲ್ಲಿನ ಶುಭ ಮಂಗಳ ಕಲ್ಯಾಣ ಮಂದಿರದಲ್ಲಿ ಭಾನುವಾರ ಸಂಜೆ ತಮಿಳು ಸಂಘಟನೆಯ ಒಕ್ಕೂಟದ ವತಿಯಿಂದ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ, ತಮಿಳು ಸಂಘದ ಬೇಡಿಕೆಯಂತೆ ದಾದರ್ ಪಾಂಡಿಚೆರಿ ರೈಲಿಗೆ ಸಂಪರ್ಕ ಕಲ್ಪಿಸುವಂತೆ ಶಿವಮೊಗ್ಗದಿಂದ 2 ಬೋಗಿಗಳನ್ನು ಕಲ್ಪಿಸುವಂತೆ ರೈಲ್ವೆ ಸಚಿವರೊಂದಿಗೆ ಸಮಾಲೋಚನೆ ನಡೆಸಿ ಕ್ರಮ ಕೈಗೊಳ್ಳಲಾಗುವುದಾಗಿಯೂ ಹೇಳಿದರು.
ತಮಿಳು ಸಂಘ ನಗರದಲ್ಲಿ ನಿರ್ಮಿಸುತ್ತಿರುವ ಸಮುದಾಯ ಭವನಕ್ಕೆ ಸಂಸದರ ನಿಧಿಯಿಂದ 20 ಲಕ್ಷ ಬೇಡಿಕೆ ಸಲ್ಲಿಸಿದ್ದು, 10 ಲಕ್ಷ ರುಪಾಯಿ ಕೊಡುತ್ತೇನೆಂದು ಹೇಳಿದ್ದೇನೆ ಎಂದು ಯಡಿಯೂರಪ್ಪ ಇದೇ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು.
ಮುಖ್ಯ ಅತಿಥಿ ಕೆ.ಎಸ್.ಈಶ್ವರಪ್ಪ ಮಾತನಾಡಿದರು. ಅಧ್ಯಕ್ಷತೆಯನ್ನು ತಮಿಳು ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಸುಬ್ಬಣ್ಣ ವಹಿಸಿದ್ದು, ಸಮಾಜದ ಮುಖಂಡರಾದ ಎಂ.ಪಿ.ಸಂಪತ್, ಡಿ.ರಾಜಶೇಖರಪ್ಪ, ಮಣಿ ಮೊದಲಾದವರು ಇದ್ದರು.
ಸಂಹಿತೆ ಉಲ್ಲಂಘನೆ:  ಕಾರ್ಯಕ್ರಮದಲ್ಲಿ ಸಮುದಾಯ ಭವನಕ್ಕೆ ತಮ್ಮ ಅನುದಾನದಲ್ಲಿ 10 ಲಕ್ಷ ನೀಡಲು ಒಪ್ಪಿರುತ್ತೇನೆ ಎಂದು ಸಂಸದ ಬಿ.ಎಸ್.ವೈ. ಹೇಳಿರುವುದು ವಿವಾದವಾಗಿದೆ. ಶಿಕಾರಿಪುರ ಚುನಾವಣೆ ವೇಳಾಪಟ್ಟಿ ಪ್ರಕಟವಾಗಿರುವ ಸಂದರ್ಭದಲ್ಲಿ ಬಿಎಸ್‌ವೈ ಅನುದಾನ ಘೋಷಣೆಯು ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗುತ್ತದೆ ಎಂದು ವಿಶ್ಲೇಷಿಸಲಾಗುತ್ತಿದೆ.
19ರಂದು ಚುನಾವಣೆಯ ಪ್ರಕರಣ ಹೊರಬಿದ್ದಿತ್ತು. 26ರಿಂದ ಜಾರಿಯಾಗುವಂತೆ ಚುನಾವಣೆ ಅಧಿಸೂಚನೆ ಪ್ರಕಟಗೊಂಡಿದೆ. ಈ ಸಂದರ್ಭ ಅನುದಾನ ಘೋಷಣೆ ಸಂಹಿತೆ ಉಲ್ಲಂಘನೆಯಾಗುತ್ತದೆಂದು ಹೇಳಲಾಗುತ್ತಿದೆಯಾದರೂ, ಅಧಿಕಾರಿಗಳು ಇದನ್ನು ಖಚಿತಪಡಿಸಿಲ್ಲ. ಸೋಮವಾರ ಜಿಲ್ಲಾಧಿಕಾರಿಯವರು ದಾಖಲೆ ತರಿಸಿಕೊಂಡು ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.