ರಸ್ತೆಯಲ್ಲಿ ಬತ್ತದ ಸಸಿ ನೆಟ್ಟು ವಿನೂತನ ಪ್ರತಿಭಟನೆ
ಕ.ಪ್ರ. ವಾರ್ತೆ, ಸಾಗರ, ಜುಲೈ 28
ತಾಲೂಕಿನ ಸಿರಿವಂತೆ ಗ್ರಾಪಂ ವ್ಯಾಪ್ತಿಯ ಸಿರಿವಂತೆ-ಜನ್ನೆಹಕ್ಲು-ಬರದವಳ್ಳಿ ರಸ್ತೆ ಕೆಸರು ಹೊಂಡವಾಗಿ ಪರಿವರ್ತಿತವಾಗಿದ್ದು, ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಿದೆ ಎಂದು ದೂರಿರುವ ಗ್ರಾಮಸ್ಥರು ಸೋಮವಾರ ಈ ರಸ್ತೆಯಲ್ಲಿ ಬತ್ತದ ಸಸಿ ನೆಡುವ ಮೂಲಕ ವಿನೂತನವಾಗಿ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಗ್ರಾಮದ ಸಂತೋಷ್ ಲಂಡಿಗೆರೆ, ಮೂರು ತಿಂಗಳ ಹಿಂದೆ ಈ ರಸ್ತೆಯನ್ನು ನಿರ್ಮಾಣ ಮಾಡಿದ್ದು, ಕಳಪೆ ಕಾಮಗಾರಿಯಿಂದಾಗಿ ಮಳೆಗಾಲ ಆರಂಭದಲ್ಲಿಯೇ ರಸ್ತೆ ಪೂರ್ಣ ಹಾಳಾಗಿದೆ. ಈ ಭಾಗದಿಂದ ವಿದ್ಯಾರ್ಥಿಗಳು ಸಿರಿವಂತೆ ಶಾಲೆಗೆ ಬರುತ್ತಿದ್ದು, ರಸ್ತೆಯಲ್ಲಿ ಬರುವಾಗ ಮಕ್ಕಳ ಬಟ್ಟೆಯೆಲ್ಲಾ ಮಣ್ಣಾಗಿ ಅದೇ ಸ್ಥಿತಿಯಲ್ಲಿಯೇ ಪಾಠ ಕೇಳುವ ಸ್ಥಿತಿ ನಿರ್ಮಾಣವಾಗಿದೆ ಎಂದು ದೂರಿದರು.
ತಾಲೂಕು ಪಂಚಾಯ್ತಿ ಅನುದಾನದಲ್ಲಿ ರಸ್ತೆ ಕಾಮಗಾರಿಯನ್ನು ಅವೈಜ್ಞಾನಿಕವಾಗಿ ನಿರ್ವಹಿಸಿದ್ದಲ್ಲದೇ, ರಸ್ತೆಗೆ ಬರೀ ಮಣ್ಣನ್ನು ತುಂಬಲಾಗಿದೆ. ಈಗ ಸತತ ಮಳೆ ಹಿನ್ನೆಲೆಯಲ್ಲಿ ರಸ್ತೆ ಮಣ್ಣು ಕೆಸರಿನ ಹೊಂಡವಾಗಿದೆ. ಕಾಮಗಾರಿ ನಿರ್ವಹಿಸಿದ ಇಂಜಿನಿಯರ್ ಭರತ್‌ಗೆ ಈ ಬಗ್ಗೆ ತಿಳಿಸಿದ್ದರೂ ಅವರು ಈ ತನಕ ರಸ್ತೆ ದುರಸ್ತಿ ಕೈಗೊಂಡಿಲ್ಲ ಎಂದು ಆರೋಪಿಸಿದರು.
ಸಾರ್ವಜನಿಕರು, ವಿದ್ಯಾರ್ಥಿಗಳ ಓಡಾಟ ಹಾಗೂ ವಾಹನ ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಿದೆ. ಸ್ಥಳೀಯ ಜನಪ್ರತಿನಿಧಿಗಳು ಸಹ ರಸ್ತೆ ಹಾಳಾಗಿದ್ದು ಗೊತ್ತಿದ್ದರೂ, ಗೊತ್ತಿಲ್ಲದಂತೆ ಮೌನವಹಿಸಿರುವುದು ಖಂಡನೀಯ. ಇನ್ನಾದರೂ ರಸ್ತೆ ಪುನರ್ ನಿರ್ಮಾಣ ಸರಿಯಾಗಿ ಮಾಡದೇ ಹೋದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಪ್ರಶಾಂತ್ ಲಂಡಿಗೆರೆ, ಅಶೋಕ, ಹುಚ್ಚಪ್ಪ, ಸುರೇಂದ್ರ, ಕನ್ನಮ್ಮ, ಗಂಗಮ್ಮ, ಲಕ್ಷ್ಮಮ್ಮ, ಚಂದ್ರು, ಶಾಲಾ ಕಾಲೇಜು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

