ಶಿವಮೊಗ್ಗ

ಹಣ, ಚಿನ್ನಕ್ಕೆ ಮೋಸವಿಲ್ಲ ; ಅಪಪ್ರಚಾರಕ್ಕೆ ಕಿವಿಗೊಡಬೇಡಿ, ಬ್ಯಾಂಕ್ ಸುಭದ್ರ

Published On :

ಡಿಸಿಸಿ ಬ್ಯಾಂಕ್ ಅಧ್ಯಕ್ಷ ಮಂಜುನಾಥ ಗೌಡ ಸ್ಪಷ್ಟನೆ


ಶಿವಮೊಗ್ಗ: ಗ್ರಾಹಕರ ಹಣಕ್ಕೆ, ಅವರು ಅಡಮಾನ ಇಟ್ಟಿರುವ ಚಿನ್ನಕ್ಕೆ ಮೋಸ ಇಲ್ಲ. ಅಪಪ್ರಚಾರಕ್ಕೆ ಕಿವಿಗೊಡಬೇಡಿ. ಬ್ಯಾಂಕ್ ಸುಭದ್ರವಾಗಿದೆ. ಆರ್‌ಬಿಐ ಮಾರ್ಗದರ್ಶನದಂತೆ ಡಿಸಿಸಿ ಬ್ಯಾಂಕ್ ನಡೆಯುತ್ತಿದ್ದು, ದುರ್ಬಳಕೆ ಅಸಾಧ್ಯ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ, ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಆರ್.ಎಂ. ಮಂಜುನಾಥ ಗೌಡ ಹೇಳಿದ್ದಾರೆ.
ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಠೇವಣಿದಾರರ ಹಣ ಸುಭದ್ರವಾಗಿದೆ. ನಗರದ ಶಿವಪ್ಪ ನಾಯಕ ವೃತ್ತದಲ್ಲಿರುವ ಶಾಖೆ ಹೊರತುಪಡಿಸಿ ಬೇರೆ ಯಾವ ಶಾಖೆಯಲ್ಲಿಯೂ ರೀತಿಯ ಅವ್ಯವಹಾರ ನಡೆದಿಲ್ಲ. ಇಲ್ಲಿ ಸಹ ನಕಲಿ ಖಾತೆಗಳಲ್ಲಿ ಮಾತ್ರ ಅಕ್ರಮ ವ್ಯವಹಾರ ನಡೆದಿದೆ. ಉಳಿದೆಲ್ಲಾ ಖಾತೆಗಳ ಪರಿಶೀಲನೆ ನಡೆಯುತ್ತಿದ್ದು, ಇದೂವರೆಗೆ ಪರಿಶೀಲನೆ ಮಾಡಿರುವ ಶೇ.70ರಷ್ಟು ಖಾತೆಗಳಲ್ಲಿ ಲೋಪ ಕಂಡುಬಂದಿಲ್ಲ. ಯಾರು ನಕಲಿ ಖಾತೆ ಸೃಷ್ಟಿಸಿದ್ದಾರೋ ಅವರ ಮೇಲೆ ತನಿಖಾಧಿಕಾರಿಗಳು ಕ್ರಮ ಕೈಗೊಳ್ಳುತ್ತಾರೆಂದರು.
ಮುಟ್ಟುಗೋಲು:   ಬೇರೆ ಶಾಖೆಗಳಲ್ಲಿ ಸಹಕಾರ ಇಲಾಖೆ ಉಪನಿಬಂಧಕರ ಸೂಚನೆ ಮೇರೆಗೆ ಲೆಕ್ಕಪತ್ರ ತಪಾಸಣೆ ಮಾಡಲಾಗಿದೆ. ಎಲ್ಲವೂ ಸರಿಯಾಗಿದೆ ಎಂದರು.
ಬಂಧಿತ ಬ್ಯಾಂಕ್ ಮ್ಯಾನೇಜರ್ ಶೋಭಾ ವಿವಿಧೆಡೆ ಮಾಡಿರುವ ಸುಮಾರು ರು. 42 ಕೋಟಿ ಮೌಲ್ಯದ ಆಸ್ತಿ ಪತ್ತೆ ಮಾಡಲಾಗಿದೆ. ಇವರ ಹಾಗೂ ಇತರೆ ಆರೋಪಿಗಳ ಆಸ್ತಿ ಮುಟ್ಟುಗೋಲು ಹಾಕಿಕೊಂಡು ಅವ್ಯವಹಾರ ಹಣ ಭರಿಸಲಾಗುವುದು ಎಂದ ಅವರು, ಕೃಷಿ ಸಾಲ ನೀಡುವುದನ್ನು ನಿಲ್ಲಿಸಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಸಿವಿಲ್ ದಾವೆ: ನಗರ ಶಾಖೆಯಲ್ಲಿ ಬೇಲಿಯೇ ಎದ್ದು ಹೊಲ ಮೇಯ್ದಿದೆ. ಬ್ಯಾಂಕಿನ ಆಡಿಟರ್ ಗಮನಕ್ಕೂ ಬಾರದೆ ಅವ್ಯವಹಾರ ನಡೆದಿದೆ. ಈ ಹಿನ್ನಲೆಯಲ್ಲಿ ಶಾಖೆಯ 13 ಸಿಬ್ಬಂದಿ ವಿರುದ್ಧವೂ ವಿಚಾರಣೆ ನಡೆಸಲು ಆಡಳಿತ ಮಂಡಳಿ ನಿರ್ಧರಿಸಿದೆ ಎಂದು ಆರ್‌ಎಂಎಂ ತಿಳಿಸಿದರು.
ನಷ್ಟದಲ್ಲಿದ್ದ ಡಿಸಿಸಿ ಬ್ಯಾಂಕನ್ನು ಶ್ರಮವಹಿಸಿ ಲಾಭದತ್ತ ತಂದಿದ್ದೇವೆ. ಇವತ್ತು ಸಾವಿರಾರು ಕೋಟಿ ರು. ವಹಿವಾಟು ನಡೆಸುತ್ತಾ ರಾಜ್ಯದ ಸುಭದ್ರ ಬ್ಯಾಂಕುಗಳಲ್ಲಿ ಒಂದಾಗಿದೆ. ಈ ಒಂದು ಪ್ರಕರಣದಲ್ಲಿ ಇಡೀ ಸಹಕಾರಿ ವ್ಯವಸ್ಥೆ ಹಾಳಾಗಲು ಬಿಡುವುದಿಲ್ಲ. ಎಲ್ಲವನ್ನೂ ಸರಿಪಡಿಸುವತ್ತ ನಮ್ಮ ಮೊದಲ ಆದ್ಯತೆ. ನಂತರ ಟೀಕಾಕಾರರಿಗೆ ಉತ್ತರ ಕೊಡುತ್ತೇವೆ ಎಂದು ಹೇಳಿದರು.
ಬಡ್ಡಿ ಸಮೇತ ವಾಪಸು:  ಗ್ರಾಹಕರು ಠೇವಣಿ ಇಟ್ಟ ಹಣವನ್ನು ಸಾಲವಾಗಿ ನೀಡಿರುತ್ತೇವೆ. ದಿಢೀರನೇ ವಾಪಸು ಕೊಡಿ ಎಂದು ಕೇಳಿದರೆ ಹೇಗೆ ಸಾಧ್ಯ ಎಲ್ಲಾ ಠೇವಣಿದಾರರಿಗೂ ಮೆಚ್ಯೂರಿಟಿ ನಂತರ ಬಡ್ಡಿ ಸಮೇತ ಹಣ ವಾಪಸು ನೀಡುತ್ತೇವೆ. ಬ್ಯಾಂಕ್ ಬೃಹತ್ತಾಗಿ ಬೆಳೆದಿದೆ. ಕುಂಬಾರನಿಗೆ ವರುಷ ದೊಣ್ಣೆಗೆ ನಿಮಿಷ ಎನ್ನುವಂತೆ ಇಡೀ ವ್ಯವಸ್ಥೆ ಹಾಳು ಮಾಡುವುದು ಸರಿ ಅಲ್ಲ ಎಂದು ನುಡಿದರು.
ಡಿಸಿಸಿ ಬ್ಯಾಂಕು ಸೊಸೈಟಿಗಳಿಗೂ ಸಾಲ ನೀಡಿರುತ್ತದೆ. ಅವರಿಂದ ದಿಢೀರನೇ ಹಣ ವಾಪಸು ಕೇಳಿದರೆ ಇಡೀ ಸಹಕಾರಿ ವ್ಯವಸ್ಥೆ ಕುಸಿಯುತ್ತದೆ. ಬ್ಯಾಂಕಿನಿಂದ ಅನುಕೂಲ ಪಡೆದು ಈಗ ಅಪಪ್ರಚಾರ ಮಾಡುತ್ತಿರುವವರು ಇದನ್ನು ಗಮನಿಸಬೇಕು ಎಂದು ಸ್ಪಷ್ಟಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಬ್ಯಾಂಕ್ ಉಪಾಧ್ಯಕ್ಷ ತಳ್ಳಿಕಟ್ಟೆ ಮಂಜುನಾಥ್, ನಿರ್ದೇಶಕ ಯೋಗೀಶ್, ವ್ಯವಸ್ಥಾಪಕ ನಿರ್ದೇಶಕ ಸಂತೋಷ್ ಕುಮಾರ್, ಮಹಿಳಾ ಪಟ್ಟಣ ಸಹಕಾರ ಬ್ಯಾಂಕ್ ಅಧ್ಯಕ್ಷೆ ವೀರಮ್ಮ ಮತ್ತಿತರರು ಇದ್ದರು.



ಜು.25 ರಂತೆ
ಬ್ಯಾಂಕ್ ಸ್ಥಿತಿಗತಿ


ಟಿ ಷೇರು ಬಂಡವಾಳ- 27.03 ಕೋಟಿ
ಟಿ ಠೇವಣಿ ಸಂಗ್ರಹ- 603 ಕೋಟಿ
ಟಿ ನಬಾರ್ಡ್, ಅಪೆಕ್ಸ್ ಬ್ಯಾಂಕಿನಿಂದ ಪಡೆದ ಸಾಲ - 278.30 ಕೋಟಿ
ಟಿ ನಿವ್ವಳ ಲಾಭ- 8.60 ಕೋಟಿ
ಟಿ ಆದಾಯ ಖಾತೆಗೆ ಬರಬೇಕಾದ ಬಾಬ್ತು- 47.06 ಕೋಟಿ
ಟಿ ನೀಡಿರುವ ಸಾಲ- 728.24 ಕೋಟಿ
ಟಿ ಸರ್ಕಾರದಿಂದ ಬರಬೇಕಾದ ಬಡ್ಡಿ ಸಹಾಯಧನ- 47.08 ಕೋಟಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.