ಸಾಹಿತ್ಯ ಚಿಂತನೆ ಪರಿಧಿ ದಾಟಿ ಸಮಾಜದ ಎಲ್ಲ ಸ್ಥರ ತಲುಪಲಿ: ಡಾ. ಶಾಂತಾರಾಮಪ್ರಭು
ಹೊಸನಗರ: ಸಾಹಿತ್ಯ ಕಠಿಣ ಕ್ಷೇತ್ರವಲ್ಲ. ಹಾಗಾಗಿ ಸಾಹಿತ್ಯ ಸರ್ವರ ಜೀವನಕ್ರಮ ಆಗಬೇಕು. ಸಾಹಿತ್ಯ ಪರಿಷತ್ ಸಾಹಿತ್ಯ ಚಿಂತನೆಯ ಪರಿಧಿಯನ್ನು ದಾಟಿ ಸಮಾಜದ ಎಲ್ಲಾ ಸ್ಥರವನ್ನೂ ತಲುಪುವ ಸಾಧನವಾಗಬೇಕು ಎಂದು ಹಿರಿಯ ಸಾಹಿತಿ ಡಾ. ಶಾಂತಾರಾಮಪ್ರಭು ಅಭಿಪ್ರಾಯಪಟ್ಟರು.
ತಾಲೂಕಿನ ಹುಂಚಾದಲ್ಲಿ ಜಿಲ್ಲೆಯ ಎಲ್ಲ್ಲ ತಾಲೂಕು ಸಾಹಿತ್ಯ ಸಮ್ಮೇಳನಾಧ್ಯಕ್ಷರ, ಸಂಪನ್ಮೂಲ ವ್ಯಕ್ತಿಗಳ, ಸಾಹಿತ್ಯ ಪರಿಷತ್ ಜಿಲ್ಲಾ ಹಾಗೂ ತಾಲೂಕು ಸಮಿತಿಗಳ ಪದಾಧಿಕಾರಿಗಳ ಚಿಂತನ-ಮಂಥನ ಸಮಾವೇಶದಲ್ಲಿ ಅವರು ದಿಕ್ಸೂಚಿ ಭಾಷಣ ಮಾಡಿದರು.
ಹಿಂದೆ ದಸರಾ ಉತ್ಸವ ಕೇವಲ ಮೈಸೂರು ಅರಸರ ಕುಟುಂಬದೊಳಗಿನ ಆಚರಣೆಯಾಗಿತ್ತು. ನಂತರ ಅರಸರು ಅದನ್ನು ಅರಮನೆಯಿಂದ ಹೊರಗೆ ತಂದು ಸಾರ್ವಜನಿಕಗೊಳಿಸಿದ್ದರಿಂದ ದಸರಾ ನಾಡಹಬ್ಬದ ಮಾನ್ಯತೆ ಪಡೆಯಿತು. ಅಂತೆಯೇ ಸಾಹಿತ್ಯ ಸಮ್ಮೇಳನಗಳು ಕೇವಲ ಸಾಹಿತ್ಯ ಪರಿಷತ್ ಮತ್ತು ಸಾಹಿತಿಗಳ ಹಬ್ಬವಾಗದೇ ಸಾಮಾಜಿಕ ಬದುಕಿಗೆ ಹತ್ತಿರ ತರುವ ಪ್ರಯತ್ನ ನಡೆಯಬೇಕು.
ಶಿಕ್ಷಣ ಕ್ಷೇತ್ರದಲ್ಲಿ ಸಾಹಿತ್ಯದ ಬಗ್ಗೆ ತಾತ್ಸಾರ ಕಂಡು ಬರುತ್ತಿರುವುದು ಆತಂಕಕಾರಿ. ಎಲ್ಲಾ ವಿಷಯಗಳ ಶಿಕ್ಷಕರೂ ಸಾಹಿತ್ಯಾಧ್ಯಯನ ನಡೆಸಿ ವಿದ್ಯಾರ್ಥಿಗಳಲ್ಲಿ ಸಾಹಿತ್ಯ ಪ್ರೇಮ ತುಂಬಬೇಕು ಎಂದರು.
ಅಂಟಿಕೆ ಪಂಟಿಕೆಯಂತಹ ಅನೇಕ ಶ್ರೀಮಂತ ಜನಪದ ಕಲೆಗಳು ಮರೆಯಾಗುತ್ತಿವೆ. ನಾಡಿನ ಸಾಂಸ್ಕೃತಿಕ ವೈಭವದ ಪ್ರತೀಕದಂತಹ ಇಂತಹ ಕಲೆಗಳು ಪುನರುಜ್ಜೀವನಕ್ಕೆ ಪರಿಷತ್ ಮುಂದಾಗಬೇಕು. ಕಸಾಪ ಶಿವಮೊಗ್ಗ ಜಿಲ್ಲಾಧ್ಯಕ್ಷ ಡಿ. ಮಂಜುನಾಥ್ ಅವರ ಪರಿಕಲ್ಪನೆಯ ಸಾಹಿತ್ಯ ಗ್ರಾಮ ಯೋಜನೆ ಕಸಾಪ ಶತಮಾನೋತ್ಸವ ಸಂಭ್ರಮಾಚರಣೆ ಈ ವರ್ಷವೇ ಪೂರ್ಣಗೊಳ್ಳುವಂತೆ ನೋಡಿಕೊಳ್ಳುವ ಜವಾಬ್ದಾರಿ ಎಲ್ಲರ ಮೇಲಿದೆ. ಸರ್ಕಾರ ಈ ಬಗ್ಗೆ ಗಮನಹರಿಸಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಕಸಾಪ ಜಿಲ್ಲಾಧ್ಯಕ್ಷ ಡಿ. ಮಂಜುನಾಥ್ ಮಾತನಾಡಿ, ಈ ಚಿಂತನ-ಮಂಥನ ಸಮಾವೇಶ ಸೇರಿದಂತೆ ನಮ್ಮ ಅನೇಕ ಯೋಜನೆ ಮತ್ತು ಪ್ರಯತ್ನಗಳು ರಾಜ್ಯಮಟ್ಟಕ್ಕೆ ಮಾದರಿಯಾಗುವಂತಿದೆ. ಉರ್ದು ಶಾಲೆಗಳಲ್ಲಿ ಮತ್ತು ನ್ಯಾಯಾಲಯಗಳಲ್ಲಿ ಕನ್ನಡ ಬಳಕೆಗೆ ಒತ್ತಾಯ, ವಿದ್ಯಾರ್ಥಿ ಸಾಹಿತ್ಯ ಸಮ್ಮೇಳನ, ತಾಳಮದ್ದಲೆ ಕಾರ್ಯಕ್ರಮಗಳು, ನಾಟ್ಯರಾಣಿ ಶಾಂತಲೆ ಹೆಸರಲ್ಲಿ ನೃತ್ಯ ಪ್ರದರ್ಶನ ಕಾರ್ಯಕ್ರಮ ಸೇರಿದಂತೆ ಅನೇಕ ಹೊಸ ವಿಚಾರಗಳು ಜಿಲ್ಲಾ ಕಸಾಪ ಮುಂದಿವೆ. ಈ ಕಾರ್ಯಕ್ರಮದಲ್ಲಿ ಅವುಗಳಿಗೆ ಮೂರ್ತ ರೂಪ ನೀಡಬೇಕಿದೆ ಎಂದರು.
ಡಾ.ಜೆ.ಕೆ. ರಮೇಶ್ ಉದ್ಘಾಟಿಸಿದರು. ರಘುರಾಮ ದೇವಾಡಿಗ, ಸಾರಂಗಪಾಣಿ, ಡಾ.ಎಸ್.ಪಿ. ಪದ್ಮ ಪ್ರಸಾದ್, ಡಿ.ಎನ್. ಶ್ರೀನಾಥ್, ಕೋಣಂದೂರು ಲಿಂಗಪ್ಪ, ಕೆಸಿನಮನೆ ನಾ. ರತ್ನಾಕರ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

