ಪುಂಡಾನೆ ದಾಳಿ: ನಾಲ್ವರಿಗೆ ಗಾಯ
ಕ.ಪ್ರ.ವಾರ್ತೆ, ಭದ್ರಾವತಿ, ಜೂ.2
ತಾಲೂಕಿನಲ್ಲಿ ಕಾಡಾನೆ ದಾಳಿ ಮುಂದುವರಿದಿದ್ದು, ನಾಲ್ವರ ಮೇಲೆ ದಾಳಿ ನಡೆಸಿ ಗಾಯಗೊಳಿಸಿದೆ.
ಸೋಮವಾರ ಬೆಳಗ್ಗೆ ತಿಮ್ಲಾಪುರ ಸಮೀಪದ ಅರದೊಟ್ಲುವಿನಲ್ಲಿ ಚಂದ್ರಪ್ಪ (50) ಹಾಗೂ ನಾಗತಿಬೆಳಗಲು ತಾಂಡಾಬಳಿ ಕೃಷ್ಣ ನಾಯ್ಕ (57) ಅವರನ್ನು ಬೆನ್ನಟ್ಟಿ ದಾಳಿ ನಡೆಸಿದೆ. ಇಬ್ಬರೂ ಗಾಯಗೊಂಡಿದ್ದು, ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಸಂಜೆ ವೇಳೆ ಮತ್ತೆ ಆನೆ ತೀರ್ಥ ಮತ್ತು ಪರಶುರಾಮಪ್ಪ ಎಂಬುವರ ಮೇಲೆ ಆನೆ ದಾಳಿ ನಡೆಸಿ ಘಾಸಿಗೊಳಿಸಿದೆ.
ಭಾನುವಾರ ಬೆಳಗ್ಗೆ ಮೊಸರಹಳ್ಳಿಯಲ್ಲಿ ರಾಜಣ್ಣ ಎಂಬವರ ಕಬ್ಬಿನ ಗದ್ದೆಯನ್ನು ಹಾನಿಗೊಳಿಸಿತ್ತು. ವಿಷಯ ತಿಳಿದ ಗ್ರಾಮಸ್ಥರು ಆನೆಯನ್ನು ಅಲ್ಲಿಂದ ಓಡಿಸಲು ಇನ್ನಿಲ್ಲದ ಹರಸಾಹಸ ಪಟ್ಟಿದ್ದರು. ನಂತರ ಅರಣ್ಯ ಇಲಾಖೆಯ ಸಹಕಾರದೊಂದಿಗೆ ಪಟಾಕಿ ಸಿಡಿಸಿ, ತಮಟೆ ಬಡಿದು ಕಾಡಿಗೆ ಅಟ್ಟಿದ್ದರು. ನಂತರ ಸಂಜೆ ವೇಳೆ ಸಮೀಪದ ಕೆಂಚೇನಹಳ್ಳಿ ಗ್ರಾಮದ ಬಳಿ ಕಾಡನೆ ಮತ್ತೆ ಕಾಣಿಸಿಕೊಂಡಿತಾದರೂ, ಕತ್ತಲಾಗಿದ್ದರಿಂದ ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಕಾರ್ಯಾಚರಣೆ ಕೈಬಿಟ್ಟಿದ್ದರು. ಆದರೆ, ಸೋಮವಾರ ಮತ್ತೆ ದಾಳಿಗಿಳಿದಿದೆ. ಕೃಷ್ಣಾನಾಯ್ಕ ಗಂಭೀರವಾಗಿ ಗಾಯಗೊಂಡಿದ್ದು, ಅವರ ಕಿಡ್ನಿ, ಜಠರ ಭಾಗಕ್ಕೆ ತೀವ್ರತರದ ಗಾಯಗಳಾಗಿವೆ. ಪರಿಸ್ಥಿತಿ ಗಂಭೀರವಾಗಿದೆ.
ಮತ್ತಿಬ್ಬರಿಗೆ ತಿವಿದ ಆನೆ: ಅರಣ್ಯ ಇಲಾಖೆಯವರು ಪದೇ ಪದೇ ಎಚ್ಚರಿಕೆ ಸಂದೇಶ ರವಾನಿಸುತ್ತಿದ್ದರೂ ಆನೆ ನೋಡುವ ಧಾವಂತದಲ್ಲಿ ಜಂತೆ ಇದ್ದರು. ರಸ್ತೆ ಮೇಲೆ ಸಂಚರಿಸುತ್ತಿದ್ದ ಇಬ್ಬರ ಮೇಲೆ ಆನೆ ದಾಳಿ ಮಾಡಿದಾಗ ತೀರ್ಥ ಎಂಬುವರ ಭುಜ, ಕಂಕಳು ಭಾಗಕ್ಕೆ ಕೋರೆಯಿಂದ ಇರಿದಿದೆ. ಅದೇ ರೀತಿ ಪರಶುರಾಮಪ್ಪ ಅವರ ಸೊಂಟವನ್ನೂ ಸಹ ಘಾಸಿಗೊಳಿಸಿದೆ.
ಸಕ್ರೆಬೈಲ್ ಆನೆಗಳಿಂದ ಇಂದು ಕಾರ್ಯಾಚರಣೆ: ದಾಳಿ ಮಾಡಿರುವ ಆನೆಯನ್ನು ಹಿಡಿಯಲು ಮಂಗಳವಾರ ಕಾರ್ಯಾಚರಣೆ ಆರಂಭಿಸಲಿದ್ದು, ಆನೆ ಸೆರೆ ಹಿಡಿಯುವವರೆಗೆ ಎಚ್ಚರಿಕೆಯಿಂದ ಇರುವಂತೆ ಅರಣ್ಯ ಇಲಾಖೆಯು ಈ ಭಾಗದ ಗ್ರಾಮಸ್ಥರಿಗೆ ಸೂಚಿಸಿದ್ದಾರೆ. ಸಕ್ರೆಬೈಲಿನಿಂದ 2 ಆನೆಗಳನ್ನು ಈಗಾಗಲೇ ಸ್ಥಳಕ್ಕೆ ತರಿಸಲಾಗಿದೆ. ಮತ್ತೆ 3 ಆನೆಗಳನ್ನು ತರಿಸುವ ಆಲೋಚನೆ ಅರಣ್ಯ ಇಲಾಖೆಗಿದೆ. ಒಟ್ಟಾರೆ ಮಂಗಳವಾರ ಪಳಗಿದ ಆನೆಗಳನ್ನು ಕಳಿಸಿ ಕಾಡಾನೆಯನ್ನು ಹಿಡಿಯುವ ಕಾರ್ಯತಂತ್ರ ರೂಪಿಸಿದ್ದಾರೆ. ಘಟನೆಯಿಂದಾಗಿ ಈ ಭಾಗದ ಜನರಲ್ಲಿ ಆತಂಕ ಮನೆ ಮಾಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

