ಶಿವಮೊಗ್ಗ

ನಿವೇಶನ ಹಂಚಿಕೆ ತಪ್ಪಾಗಿಲ್ಲ

Published On :

ಶಿವಮೊಗ್ಗ: ನಿವೇಶನ ಹಂಚಿಕೆಯಲ್ಲಿ ನಾವು ಯಾವ ತಪ್ಪನ್ನೂ ಮಾಡಿಲ್ಲ. ಸರ್ಕಾರದ ನಿಯಮದಂತೆ ನಿವೇಶನ ಹಂಚಿದ್ದೇವೆ. ಅಕ್ರಮಗಳ ತನಿಖೆ ಎನ್ನುವುದು ರಾಜಕೀಯ ಷಡ್ಯಂತ್ರ. ಶಾಸಕ ಪ್ರಸನ್ನಕುಮಾರ್ ಹಾಗೂ ಜಿಲ್ಲಾಧಿಕಾರಿ ವಿಪುಲ್ ಬನ್ಸಲ್ ಅವರೂ ಇದರಲ್ಲಿ ಪಾಲುದಾರರು. ಆದ್ದರಿಂದ ಪರಿಶೀಲನಾ ಸಮಿತಿ ವರದಿ ಹಿಂಪಡೆಯಬೇಕು ಎಂದು ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ದತ್ತಾತ್ರಿ ಅವರು ಮತ್ತೊಬ್ಬ ಮಾಜಿ ಅಧ್ಯಕ್ಷ ಜ್ಞಾನೇಶ್ವರ್ ಉಪಸ್ಥಿತಿಯಲ್ಲಿ ಹೇಳಿದರು.
ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಅವರು, ನಿವೇಶನದಾರರ ಹಿತ ರಕ್ಷಿಸಲು ಜೈಲಿಗೆ ಹೋಗುವುದಕ್ಕೂ ಸಿದ್ಧ ಎಂದರು.
ಇಲ್ಲ ಸಲ್ಲದ ಆರೋಪ: ಸಂಘ ಪರಿವಾರ, ಬಿಜೆಪಿ ಮುಖಂಡರ ಮೇಲೆ ಇಲ್ಲಸಲ್ಲದ ಆರೋಪ ಹೊರಿಸುವ ಪ್ರಯತ್ನವನ್ನು ಸರ್ಕಾರ ಮಾಡುತ್ತಿದೆ. ರಾಜಕೀಯ ತೇಜೋವಧೆ ಪ್ರಯತ್ನವಿದು. ಈ ಮೂಲಕ ಶಾಸಕ ಪ್ರಸನ್ನಕುಮಾರ್ ತಾವೊಬ್ಬ ಹೀರೋ ಎಂದು ತೋರಿಸಿಕೊಳ್ಳಲು ಹೊರಟಿದ್ದಾರೆ ಎಂದು ದತ್ತಾತ್ರಿ ಟೀಕಿಸಿದರು.
ವಿವೇಚನಾ ಕೋಟಾ ಅಡಿಯಲ್ಲಿ ನಿವೇಶನ ಹಂಚಿರುವುದನ್ನು ಬಲವಾಗಿ ಸಮರ್ಥಿಸಿಕೊಂಡ ಅವರು, 2010ರ ಜನವರಿ 28ರಂದು ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ಬರೆದ ಪತ್ರದ ಆಧಾರದ ಮೇಲೆಯೇ ನಿವೇಶನ ಹಂಚಿದ್ದೇವೆ. ಆದರೆ ಪರಿಶೀಲನಾ ಸಮಿತಿಯು ಈ ಪತ್ರವನ್ನು ವರದಿಯಲ್ಲಿ ಸಂಪೂರ್ಣವಾಗಿ ಉಲ್ಲೇಖಿಸಿಲ್ಲ ಎಂದರು.
ಸಮಿತಿ ನೈಸರ್ಗಿಕ ನ್ಯಾಯವನ್ನು ಉಲ್ಲಂಘಿಸಿದೆ. ವರದಿ ಸಲ್ಲಿಸುವ ಮುನ್ನ ನಮ್ಮ ಅಭಿಪ್ರಾಯ ಕೇಳಿಲ್ಲ. ಸಂಪರ್ಕಿಸಿಲ್ಲ. ಇದೇ ಆಧಾರದ ಮೇಲೆಯೇ ಯಡಿಯೂರಪ್ಪ ಅವರ ವಿರುದ್ಧ ಲೋಕಾಯುಕ್ತರು ನೀಡಿದ್ದ ತನಿಖಾ ಪ್ರಕರಣ ವಜಾ ಆಗಿತ್ತು. ಅದೇ ರೀತಿ ನಮ್ಮ ವಿರುದ್ಧದ ಪ್ರಕರಣ ದಾಖಲಿಸಿದರೂ ಏನೂ ಆಗದು ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನಷ್ಟದಲ್ಲಿದ್ದ ಪ್ರಾಧಿಕಾರ ಲಾಭದತ್ತ:  ನಷ್ಟದಲ್ಲಿದ್ದ ಪ್ರಾಧಿಕಾರವನ್ನು ನಾವು ಲಾಭ ಗಳಿಸುವಂತೆ ಮಾಡಿದ್ದೇವೆ. ಹಾಲಿ ರು. 30-40 ಕೋಟಿ ಠೇವಣಿ ಸೂಡಾದಲ್ಲಿದೆ. ಸ್ವತಂತ್ರ್ಯವಾಗಿ ನಡೆಯುತ್ತಿದೆ. ಆದರೆ ವರದಿಯು ಪಾಸಿಟಿವ್ ಅಂಶಗಳನ್ನು ಬಿಟ್ಟು ಕೇವಲ ನೆಗೆಟಿವ್ ಅಂಶಗಳನ್ನು ಹೇಳಿದೆ ಎಂದರು.
ಅನುದಾನಿತ ಕಾಲೇಜುಗಳ ಸಿಬ್ಬಂದಿಯನ್ನು ಸರ್ಕಾರಿ ನೌಕರರೆಂದೇ ಪರಿಗಣಿಸಿ ಅವರಿಗೆ ನಿವೇಶನ ನೀಡಿದ್ದೇವೆ. ಅದನ್ನೇ ತಪ್ಪೆಂದು ಹೇಳಿದೆ. ಹಲವು ದೃಢೀಕರಣ ಪತ್ರಗಳನ್ನು ನೀಡದಿರುವುದನ್ನೇ ದೊಡ್ಡದಾಗಿ ತೋರಿಸಿದೆ. ನಿವೇಶನ ಹಂಚಿಕೆ ಬಗ್ಗೆ ಆಕ್ಷೇಪಣೆ ಆಹ್ವಾನಿಸಿ ಹಂಚಿದ್ದೇವೆ. ಆದರೂ ಲೋಪ ತೋರಿಸಲಾಗುತ್ತಿದೆ. ಪರಿಶಿಷ್ಟರಿಗೆ ಸಾಮಾನ್ಯ ವರ್ಗದಲ್ಲಿ ನಿವೇಶನ ಕೊಟ್ಟರೆ ತಪ್ಪೇನು ಎಂದು ದತ್ತಾತ್ರಿ ಪ್ರಶ್ನಿಸಿದರು.
ವಾಜಪೇಯಿ ಬಡಾವಣೆ ನಿವೇಶನ ಹಂಚಿಕೆಯಿಂದ ಪ್ರಾಧಿಕಾರಕ್ಕೆ ಆರ್ಥಿಕವಾಗಿ ನಷ್ಟವಾಗಿಲ್ಲ ಎಂದು ಸಮಿತಿ ಹೇಳಿರುವತ್ತ ಗಮನ ಸೆಳೆದರು. ಖಾಸಗಿ ನಿವೇಶನ ಇದ್ದರೂ ಪ್ರಾಧಿಕಾರ ನಿವೇಶನ ನೀಡಬಹುದು ಎಂಬುದಕ್ಕೆ ಅವರು ಸರ್ಕಾರಿ ಅಧಿಸೂಚನೆ ಪ್ರತಿ ನೀಡಿದರು.
ಪ್ರಶ್ನೆಗಳು: 2011ರಲ್ಲಿ ಆಗಿರುವ ನಿವೇಶನ ಹಂಚಿಕೆಗೆ ಸಮರ್ಥನೆಯಾಗಿ 2013ರಲ್ಲಿ ಹೊರಡಿಸಿರುವ ಅಧಿಸೂಚನೆಯನ್ನು ಏಕೆ ಸಮರ್ಥನೆಯಾಗಿ ಬಳಸಿಕೊಳ್ಳುತ್ತಿದ್ದೀರಿ, ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ಬರೆದಿರುವ ಪತ್ರದಲ್ಲಿ 2005 ರಲ್ಲಿಯೇ ವಿವೇಚನಾ ಕೋಟಾ ರದ್ದಾಗಿರುವ ಪ್ರಸ್ತಾವ ಏಕಿಲ್ಲ ಇತ್ಯಾದಿ ಪತ್ರಕರ್ತರ ಪ್ರಶ್ನೆಗಳಿಗೆ ದತ್ತಾತ್ರಿ ಅವರು ಸೂಕ್ತ ಉತ್ತರ ನೀಡದೇ ಜಾರಿಕೊಂಡರು.
ಪತ್ರಿಕಾಗೋಷ್ಠಿಯಲ್ಲಿ ಮಾಜಿ ಶಾಸಕ ಕೆ.ಜಿ. ಕುಮಾರಸ್ವಾಮಿ, ಬಿಜೆಪಿ ಮುಖಂಡ ಎಸ್.ಎನ್. ಚನ್ನಬಸಪ್ಪ, ಎಂ. ಶಂಕರ್, ಡಿ.ಎಸ್. ಅರುಣ್, ಬಿಳಕಿ ಕೃಷ್ಣಮೂರ್ತಿ, ಸೋಮಸುಂದರಂ, ಲಕ್ಷ್ಮಣ್, ವೆಂಕ್ಯಾನಾಯ್ಕ್ ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.