ಹೊಸ ಕಟ್ಟಡಕ್ಕೆ ಸ್ಥಳಾಂತರಗೊಳ್ಳದ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ
ಸೊರಬ: ಶರವೇಗದಲ್ಲಿ ಕಾಮಗಾರಿ ಮುಗಿದು, ಸೇವೆಗೆ ಅಣಿಯಾದ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗೆ ಈಗ ಬೀಗ ಜಡಿದು ಅರ್ಧ ವರ್ಷ ಕಳೆದಿದೆ. ಮೂಲ ಸೌಕರ್ಯಗಳೇ ಇಲ್ಲದ ಈ ನೂತನ ಕಟ್ಟಡದಲ್ಲಿ ಇಲಾಖೆ ಕಾರ್ಯ ಚಟುವಟಿಕೆಗಳಿಲ್ಲದೇ ಯೋಜನೆ ಹಳ್ಳ ಹಿಡಿದಿರುವುದು ಜನಪ್ರತಿನಿಧಿಗಳು, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ.
ಪಟ್ಟಣದ ಕೃಷಿ ಇಲಾಖೆ ಎದುರು, ತಾಲೂಕು ಕಚೇರಿಯ ಹಿಂಭಾಗದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ನಿರ್ಮಿಸಲು ಯೋಜನೆ ರೂಪಿಸಲಾಗಿತ್ತು. ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಮಾಜಿ ಸಚಿವ ಎಚ್.ಹಾಲಪ್ಪ 32 ಲಕ್ಷ ಪ್ರಸ್ತಾವನೆ ಸಲ್ಲಿಸಿ, ಮೂಲಭೂತ ಸೌಕರ್ಯಗಳಿಗಾಗಿ ಹೆಚ್ಚುವರಿಯಾಗಿ 10 ಲಕ್ಷ ಸೇರಿ ಒಟ್ಟು 42 ಲಕ್ಷಗಳನ್ನು ಸರ್ಕಾರದಿಂದ ಬಿಡುಗಡೆ ಮಾಡಿಸಿದ್ದರು.
ಶಂಕುಸ್ಥಾಪನೆ ನೆರವೇರಿಸಿ, ಕಾಮಗಾರಿಯನ್ನೂ ಪ್ರಾರಂಭಿಸಿದ್ದರು. ಕಾಮಗಾರಿ ಸಂಪೂರ್ಣಗೊಂಡ ಕಟ್ಟಡವನ್ನು 2013 ಡಿಸೆಂಬರ್ 13ರಂದು ಶಾಸಕ ಮಧು ಬಂಗಾರಪ್ಪ ಉದ್ಘಾಟಿಸಿದ್ದರು. ಆದರೀಗ ನೂತನ ಕಟ್ಟಡಕ್ಕೆ ಬೀಗ ಜಡಿಯಲಾಗಿದೆ. ಉದ್ಘಾಟನೆ ಬಳಿಕ ಇಲ್ಲಿ ಮತ್ತೆ ಯಾರೂ ಸುಳಿದಿಲ್ಲ. ಈಗಲೂ ಸರ್ಕಾರಿ ಹಿರಿಯ ಗಂಡು ಮಕ್ಕಳ ಪ್ರಾಥಮಿಕ ಶಾಲೆ ಆವರಣದಲ್ಲಿ ಮಳೆ ಬಂದರೆ ಸೋರುವಂತಿರುವ ಚಿಕ್ಕ ಹಳೆಯ ಕಟ್ಟಡದಲ್ಲಿಯೇ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ಕಾರ್ಯ ಚಟುವಟಿಕೆ ನಡೆಯುತ್ತಿವೆ. ಆದರೆ, ಹಲವು ಮೂಲಭೂತ ಸಮಸ್ಯೆಗಳಿಂದ ಬಳಲುತ್ತಿರುವ ಈ ಕಟ್ಟಡದಲ್ಲಿ ಕಾರ್ಯನಿರ್ವಹಿಸುವುದು ದುಸ್ತರವಾಗಿದೆ ಎಂದು ಕಚೇರಿ ಸಿಬ್ಬಂದಿ ಅಳಲು ವ್ಯಕ್ತಪಡಿಸಿದ್ದಾರೆ.
ಈ ನೂತನ ಕಟ್ಟಡಕ್ಕೆ ಕಾಂಪೌಂಡ್ ಇಲ್ಲ. ಇದರಿಂದಾಗಿ ನಾಯಿ, ಕತ್ತೆ, ದನ, ಭಿಕ್ಷುಕರ ಆಶ್ರಯ ತಾಣವಾಗಿದೆ. ಎಲ್ಲೆಂದರಲ್ಲಿ ಕಸ-ಕಡ್ಡಿ, ತ್ಯಾಜ್ಯ ವಸ್ತುಗಳಿಂದ ಕೂಡಿದೆ. ಸಂಜೆ 6 ಗಂಟೆಯ ನಂತರ ಇಲ್ಲಿ ಯಾರೂ ಸುಳಿಯದ ಪ್ರದೇಶವಾಗಿದೆ. ಇಂಥ ನಿರ್ಜನ ಪ್ರದೇಶವಾಗುವ ಕಟ್ಟಡದ ಸುತ್ತುಮುತ್ತ ಅನೈತಿಕ ಚಟುವಟಿಕೆಗಳು ನಡೆಯುತ್ತಿವೆ ಎಂದು ವಿದ್ಯಾರ್ಥಿ ಹಿತರಕ್ಷಣಾ ಹೋರಾಟ ವೇದಿಕೆ ಅಧ್ಯಕ್ಷ ಜೆ.ಎಸ್. ಚಿದಾನಂದಗೌಡ ಆರೋಪಿಸಿದ್ದಾರೆ. ಅಲ್ಲದೆ, ನೂತನ ಕಟ್ಟಡಕ್ಕೆ ಬಿಇಒ ಕಚೇರಿ ಶೀಘ್ರ ಸ್ಥಳಾಂತರವಾಗಬೇಕಿದೆ ಎಂದು ಆಗ್ರಹಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

