ನಿವೇಶನ ಹಗರಣ: ಪರಿಶೀಲನೆಗೆ ಡಿಸಿ ಅಧ್ಯಕ್ಷತೆಯಲ್ಲಿ ಮತ್ತೊಂದು ಸಮಿತಿ
ಶಿವಮೊಗ್ಗ: ಅಟಲ್ ಬಿಹಾರಿ ವಾಜಪೇಯಿ ಬಡಾವಣೆ ನಿವೇಶನ ಹಂಚಿಕೆ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಸೂಡಾ ಅಧ್ಯಕ್ಷ ಜಿಲ್ಲಾಧಿಕಾರಿ ವಿಪುಲ್ ಬನ್ಸಾಲ್ ಅವರ ಅಧ್ಯಕ್ಷತೆಯಲ್ಲಿ ಮತ್ತೊಂದು ಸಮಿತಿ ರಚಿಸಿ ಪರಿಶೀಲನೆ ನಡೆಸಲು ತೀರ್ಮಾನಿಸಲಾಗಿದೆ.
ಶಿವಮೊಗ್ಗ ನಗರಾಭಿವೃದ್ಧಿ ಪ್ರಾಧಿಕಾರದ ಸಭಾಂಗಣದಲ್ಲಿ ಮಂಗಳವಾರ ನಡೆದ ವಿಶೇಷ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.
ನಗರಾಭಿವೃದ್ಧಿ ಪ್ರಾಧಿಕಾರ ಕಾಯ್ದೆಯ ಕಲಂ 9(2) ಪ್ರಕಾರ ನಗರಾಭಿವೃದ್ಧಿ ಪ್ರಾಧಿಕಾರಗಳು ರಚಿಸುವ ಯಾವುದೇ ಸಮಿತಿಯ ಅಧ್ಯಕ್ಷರು ಪ್ರಾಧಿಕಾರದ ಅಧ್ಯಕ್ಷರೇ ಆಗಿರಬೇಕು. ಈ ಹಿನ್ನಲೆಯಲ್ಲಿ ಈಗಾಗಲೇ ನಿವೃತ್ತ ನ್ಯಾಯಾಧೀಶ ರವೀಂದ್ರನಾಥ್ ಅವರ ಅಧ್ಯಕ್ಷತೆಯಲ್ಲಿ ರಚಿಸಿರುವ ಸಮಿತಿಯು ನೀಡಿರುವ ಪರಿಶೀಲನಾ ವರದಿಯು ಇದೇ ತಾಂತ್ರಿಕ ಕಾರಣದಿಂದ ನ್ಯಾಯಾಲಯದಲ್ಲಿ ಆಕ್ಷೇಪಕ್ಕೊಳಗಾಬಹುದು ಎಂಬ ಹಿನ್ನಲೆಯಲ್ಲಿ ಸೂಡಾ ವಿಶೇಷ ಸಭೆ ತೀರ್ಮಾನ ಕೈಗೊಂಡಿದೆ.
ನ್ಯಾ.ರವೀಂದ್ರನಾಥ್ ಅವರ ಅಧ್ಯಕ್ಷತೆಯ ಪರಿಶೀಲನಾ ಸಮಿತಿ ನೀಡಿದ್ದ ವರದಿಯಲ್ಲಿ ಸಭೆ ಈ ಕಾರಣದಿಂದ ಒಪ್ಪಿಕೊಂಡಿಲ್ಲ. ನೂತನ ಸಮಿತಿಗೆ ಜಿಲ್ಲಾಧಿಕಾರಿ ಅಧ್ಯಕ್ಷರಾಗಿದ್ದು, ಉಳಿದಂತೆ ಹಿಂದಿನ ಸಮಿತಿಯಲ್ಲಿದ್ದ ನ್ಯಾಯಾಧೀಶ ರವೀಂದ್ರನಾಥ್ ಸೇರಿದಂತೆ ಉಳಿದವರೆಲ್ಲರೂ ಇರುತ್ತಾರೆ.
ಜಿಲ್ಲಾಧಿಕಾರಿ ವಿಪುಲ್ ಬನ್ಸಾಲ್ ಅವರು ಅಧ್ಯಕ್ಷತೆ ವಹಿಸಿದ್ದ ವಿಶೇಷ ಸಭೆಯಲ್ಲಿ ಶಾಸಕರಾದ ಕೆ.ಬಿ. ಪ್ರಸನ್ನಕುಮಾರ್, ಶಾರದಾ ಪೂರ್ಯಾನಾಯ್ಕ್, ಎಂ.ಜೆ. ಅಪ್ಪಾಜಿಗೌಡ, ವಿಧಾನಪರಿಷತ್ ಸದಸ್ಯರಾದ ಆರ್.ಕೆ. ಸಿದ್ದರಾಮಣ್ಣ, ಪಿ.ವಿ.ಕೃಷ್ಣಭಟ್, ಎಂ.ಬಿ. ಭಾನುಪ್ರಕಾಶ್, ಶಿವಮೊಗ್ಗ ನಗರಪಾಲಿಕೆ ಆಯುಕ್ತ ಕರಭೀಮಣ್ಣನವರ್, ಸೂಡಾ ಆಯುಕ್ತ ಜನಾರ್ಧನ್, ಕರ್ನಾಟಕ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ ಅಭಿಯಂತರ ಸುರೇಂದ್ರ ಭಾಗವಹಿಸಿದ್ದರು.
ಡಿಸಿ ಹೇಳಿದ್ದು: ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ, ಈ ಹಿಂದೆ ಸಮಿತಿ ರಚಿಸುವಾಗ ತಾಂತ್ರಿಕವಾಗಿ ತಪ್ಪಾಗಿದೆ. ಇದೇ ತಪ್ಪಿನಿಂದ ಇಷ್ಟು ದಿನದ ಪರಿಶ್ರಮ ಹಾಳಾಗುತ್ತದೆ. ಆದ್ದರಿಂದ ಹೊಸದಾಗಿ ಸಮಿತಿ ರಚಿಸಲು ತೀರ್ಮಾನಿಸಲಾಗಿದೆ ಎಂದರು. ಪರಿಶೀಲನೆ ದಿಸೆಯಲ್ಲಿ ಸಾಕಷ್ಟು ಕೆಲಸ ಆಗಿದೆ. ಮೊದಲಿದ್ದಷ್ಟು ಕೆಲಸ ಈಗಿಲ್ಲ. ದಾಖಲೆಗಳ ಪರಿಶೀಲನೆ ನಡೆದಿದೆ. ಹಾಗಾಗಿ ತಮ್ಮ ಅಧ್ಯಕ್ಷತೆಯ ಪರಿಶೀಲನಾ ಸಮಿತಿಯು ಶೀಘ್ರ ಹೊಸ ವರದಿ ಸಲ್ಲಿಸಲಿದೆ ಎಂದರು.
ಅಬ್ಬರದ ಸಭೆ: ನಗರಾಭಿವೃದ್ಧಿ ಪ್ರಾಧಿಕಾರದ ವಿಶೇಷ ಸಭೆಯಲ್ಲಿ ಸದಸ್ಯರು ಜೋರು ಧ್ವನಿಯಲ್ಲಿ ವಾಗ್ವಾದ ನಡೆಸಿದರು. ಪತ್ರಕರ್ತರನ್ನು ಹೊರಗಿಟ್ಟು ಸಭೆ ನಡೆಸಲಾಯಿತು.
ಸಭೆ ಮುಗಿದ ನಂತರ ಪತ್ರಕರ್ತರೊಂದಿಗೆ ಶಾಸಕರು, ವಿಧಾನಪರಿಷತ್ ಸದಸ್ಯರು ಮಾತನಾಡುತ್ತಿದ್ದಾಗ ಆಯಾಸ ಅವರ ಮುಖದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿತ್ತು.
ಆರ್.ಕೆ. ಸಿದ್ದರಾಮಣ್ಣ ಅವರಂತೂ ಮಾತನಾಡುವುದಕ್ಕೂ ಸಿದ್ಧರಿಲ್ಲದೇ 'ನೋ ಕಮೆಂಟ್ಸ್' ಎಂದು ಹೇಳಿ ಮುಂದೆ ಸಾಗಿದರು.
ವಾಜಪೇಯಿ ಬಡಾವಣೆ ನಿವೇಶನ ಹಂಚಿಕೆಯಲ್ಲಿ ಅಕ್ರಮ ಮೇಲ್ನೋಟಕ್ಕೆ ಸಾಬೀತಾಗಿದೆ. ವಿವೇಚನಾ ಕೋಟಾ ಇಲ್ಲದಿದ್ದರೂ ನಿವೇಶನ ನೀಡಿದ್ದನ್ನು ಪರಿಶೀಲನಾ ಸಮಿತಿ ಗುರುತಿಸಿದೆ. ಆದರೆ ತಾಂತ್ರಿಕ ತೊಂದರೆ ಕಾರಣ ಹೊಸ ಸಮಿತಿ ರಚಿಸಲಾಗಿದೆ. ತಪ್ಪು ಮಾಡಿದವರಿಗೆ ಶಿಕ್ಷೆ ಆಗಬೇಕು ಎಂಬುದು ನಮ್ಮ ಉದ್ದೇಶ.
ಟಿ ಕೆ.ಬಿ. ಪ್ರಸನ್ನಕುಮಾರ್, ಶಾಸಕರು
ತಪ್ಪು ಮಾಡಿದವರಿಗೆ ಶಿಕ್ಷೆಯಾಗಬೇಕು ಎಂಬುದು ಎಲ್ಲರ ಉದ್ದೇಶವಾಗಿತ್ತು. ಹಾಗಾಗಿ ನೂತನ ಸಮಿತಿ ರಚನೆಗೆ ಎಲ್ಲರೂ ಒಪ್ಪಿದೆವು. ಶಿವಮೊಗ್ಗ ನಗರದ ಜನತೆ ಜತೆಗೆ ನಾವಿದ್ದೇವೆ ಎಂದು ಈ ಮೂಲಕ ತೋರಿಸಿದ್ದೇವೆ.
ಟಿ ಶಾರದಾ ಪೂರ್ಯಾನಾಯ್ಕ್, ಶಾಸಕರು
ಈ ಹಿಂದಿನ ಪರಿಶೀಲನಾ ಸಮಿತಿಯಲ್ಲಿದ್ದ ತಪ್ಪುಗಳನ್ನು ಸಭೆಯ ಗಮನಕ್ಕೆ ತಂದೆವು. ಅಲ್ಲದೇ ಸೂಡಾ ಅಧ್ಯಕ್ಷರ ಅಧ್ಯಕ್ಷತೆಯಲ್ಲಿಯೇ ಸಮಿತಿ ರಚನೆಯಾಗಬೇಕು ಎಂದು ಕಾನೂನು ಹೇಳಿರುವುದರಿಂದ ಹೊಸ ಸಮಿತಿ ರಚನೆಗೆ ಒಪ್ಪಿದೆವು.
ಟಿ ಎಂ.ಬಿ. ಭಾನುಪ್ರಕಾಶ್, ವಿಧಾನಪರಿಷತ್ ಸದಸ್ಯರು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

