ಸ್ಲಂ ನಿವಾಸಿಗಳಿಗೆ ಬೋಗಸ್ ನಿವೇಶನ ಹಕ್ಕುಪತ್ರ
ಶಿವಮೊಗ್ಗ: ನಗರದ 19 ಸ್ಲಂ ನಿವಾಸಿಗಳಿಗೆ ಕೊಳಚೆ ನಿರ್ಮೂಲನಾ ಮಂಡಳಿ ಬೋಗಸ್ ಪ್ರಮಾಣ ಪತ್ರ ನೀಡಿದ್ದು, ಇದಕ್ಕೆ ಹಿಂದಿನ ಬಿಜೆಪಿ ಸರ್ಕಾರ- ಅಂದಿನ ಡಿಸಿಎಂ ಕಾರಣ ಎಂದು ಶಾಸಕ ಕೆ.ಬಿ.ಪ್ರಸನ್ನಕುಮಾರ್ ವಾಗ್ದಾಳಿ ನಡೆಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಬಿಜೆಪಿ ಸರ್ಕಾರದ ಆಡಳಿತಾವಧಿಯಲ್ಲಿ ಯಾವುದೇ ಸರ್ಕಾರಿ ಆದೇಶವಿಲ್ಲದೆ ನಗರದ ಹಲವು ಸ್ಲಂಗಳಲ್ಲಿ ನಿವೇಶನ ಹಕ್ಕುಪತ್ರ ನೀಡಲಾಗಿದೆ. ಇದು ತರಾತುರಿಯಲ್ಲಿ ನೀಡಲಾಗಿದ್ದು ಈ ಮೂಲಕ ಬೋಗಸ್ ನಿವೇಶನ ಪತ್ರ ನೀಡಿ ಜನರನ್ನು ವಂಚಿಸಲಾಗಿದೆ ಎಂದು ಟೀಕಿಸಿದರು.
ಕೊಳಚೆ ನಿರ್ಮೂಲನಾ ಮಂಡಳಿಯಿಂದ ನೀಡಲಾದ ನಿವೇಶನ ಹಕ್ಕುಪತ್ರಗಳನ್ನು ಹಿಡಿದು ಖಾತೆ ಮಾಡಿಸಿಕೊಳ್ಳಲು ಹೋದವರಿಗೆ ಹಕ್ಕುಪತ್ರದ ನೈಜ ಬಂಡವಾಳ ಗೊತ್ತಾಗಿದೆ. ಜಾಗ ಯಾರದ್ದೂ, ನಿವೇಶನ ಹಕ್ಕುಪತ್ರ ಮತ್ಯಾರದ್ದೋ. ಒಟ್ಟಾರೆ ಅಂದಿನ ಡಿಸಿಎಂ ಸ್ಲಂ ನಿವಾಸಿಗಳಿಗೆ ಈ ಮೂಲಕ ಮೋಸ ಎಸಗಿದ್ದಾರೆ. ಅದರ ಫಲ ಈಗಾಗಲೇ ಉಂಡಿದ್ದು, ಮುಂದೆಯೂ ಉಣ್ಣಲಿದ್ದಾರೆ ಎಂದು ಪರೋಕ್ಷವಾಗಿ ಈಶ್ವರಪ್ಪರನ್ನು ಟೀಕಿಸಿದರು.
ಅಂದು ಸ್ಲಂ ನಿವಾಸಿಗಳಿಗೆ ನಿವೇಶನ ಹಕ್ಕುಪತ್ರ ಕೊಟ್ಟರೆಂಬ ಕಾರಣಕ್ಕೆ ನಾನು ಸ್ವತ: ಡಿಸಿಎಂ ಅವರಿಗೆ ಮಾಲಾರ್ಪಣೆ ಮಾಡಿ ಶ್ಲಾಘಿಸಿದ್ದೆ. ಆದರೆ, ನಿಜ ಬಣ್ಣ ಬಯಲಾಗಿದೆ. ಸ್ಲಂ ನಿವಾಸಿಗಳು ಪ್ಲಾಸ್ಟಿಕ್ ಕವರ್, ಟ್ರಂಕ್ಗಳಲ್ಲಿಟ್ಟು ರಕ್ಷಿಸುತ್ತಿರುವ ನಿವೇಶನ ಪತ್ರ ಬೋಗಸ್ ಎಂಬುದು ಇದೀಗ ಗೊತ್ತಾಗುತ್ತಿದೆ ಎಂದು ಹೇಳಿದರು.
ಆಶ್ರಯ- 45 ದಿನದಲ್ಲಿ ಅರ್ಹರ ಪಟ್ಟಿ ರೆಡಿ
ಈ ಹಿಂದೆ ಆಶ್ರಯ ನಿವೇಶನಕ್ಕಾಗಿ ಕಂಡಕಂಡವರಿಗೆ ಅರ್ಜಿ ಹಂಚಿದ್ದಾರೆ. ಬೇಕಾಬಿಟ್ಟಿಯಾಗಿ ಅರ್ಜಿ ಹಂಚಿದ್ದಾರೆ. ಸುಮಾರು 16 ಸಾವಿರ ಅರ್ಜಿಗಳು ಬಂದಿವೆ. ಹೀಗಾಗಿ ನಿವೇಶನ ರಹಿತರ ಪಟ್ಟಿ ನೀಡುವಂತೆ ಕಂದಾಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. 45 ದಿನಗಳಲ್ಲಿ ವರದಿ ನೀಡಲಿದ್ದು ನಂತರ ಅಗತ್ಯ ಕ್ರಮಕೈಗೊಳ್ಳಲಾಗುವುದು. ಸದ್ಯ 2 ಸಾವಿರ ನಿವೇಶನ ಹಂಚಲು ಅವಕಾಶವಿದೆ. ಅರ್ಜಿದಾರರಿಗೆ ನಿವೇಶನವೇ ನೀಡಬೇಕೋ, ಮನೆ ನಿರ್ಮಿಸಿಕೊಡಬೇಕೋ ಅಥವಾ ಫ್ಲಾಟ್ ನಿರ್ಮಿಸಿ ಹಂಚಬೇಕೇ ಎಂಬುದನ್ನು ನಿರ್ಧರಿಸಲಾಗುತ್ತದೆ ಎಂದು ನುಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

