ತ್ಯಾಜ್ಯ ಪರಿಷ್ಕರಣೆ ಮಾತ್ರ ಇಲ್ಲ...
ಹೊಸನಗರ: ತೀರಾ ಇತ್ತೀಚಿನ ವರ್ಷದವರೆಗೂ ಹೊಸನಗರದಲ್ಲೂ ತ್ಯಾಜ್ಯ ವಿಲೇವಾರಿ ಸಮಸ್ಯೆ ಭೂತದಂತೆ ಕಾಡುತ್ತಲೆ ಇತ್ತು. ಶರಾವತಿ ಹಿನ್ನೀರ ದಂಡೆ ಮೇಲೋ, ರಾಮಕೃಷ್ಣ ಶಾಲೆ ಸಮೀಪದ ಬಯಲಿನಲ್ಲೂ ಎಲ್ಲೆಂದರಲ್ಲಿ ಕಸದ ರಾಶಿ ಕಂಡುಬರುತ್ತಾ ಸಾಕಷ್ಟು ಪ್ರತಿಭಟನೆಗಳಿಗೂವಿಷಯವಾಗಿತ್ತು.
ಹಲವು ವರ್ಷಗಳ ವಿವಾದಕ್ಕೆ ಮುಕ್ತಿ ದೊರೆತ ಹಿನ್ನಲೆಯಲ್ಲಿ ಪಟ್ಟಣ ಸಮೀಪದ ಅಗಸರಕೊಪ್ಪ ಕಾಡು ಪ್ರದೇಶದಲ್ಲಿ ಎರಡು ವರ್ಷದ ಹಿಂದೆ ತ್ಯಾಜ್ಯ ವಿಲೇವಾರಿ ಘಟಕ ಸ್ಧಾಪಿಸಲಾಗಿದ್ದು ಪಟ್ಟಣದ ಪೂರ್ತಿ ತ್ಯಾಜ್ಯವನ್ನು ಅಲ್ಲಿ ಹಾಕಲಾಗುತ್ತಿದೆ.
ಆದರೆ ಇಲ್ಲಿ ತ್ಯಾಜ್ಯ ಸಂಸ್ಕರಣೆಯೇ ನಡೆಯುತ್ತಿಲ್ಲ. ಅಗಸರಕೊಪ್ಪದ ಘಟಕದ ಪರಿಸರದಲ್ಲಿ ತ್ಯಾಜ್ಯ ಸುರಿಯಲಾಗುತ್ತಿದೆ ಹೊರತು ಇನ್ನು ಅಲ್ಲಿ ತ್ಯಾಜ್ಯದ ಸಂಸ್ಕರಣೆ ನಡೆಯುತ್ತಿಲ್ಲ. ಹೀಗಾಗಿ ತ್ಯಾಜ್ಯದ ವಾಸನೆ ಸುತ್ತಮುತ್ತಲಿನ ನಾಗರಿಕರ ನಿದ್ದೆಗೆಡಿಸಿದೆ.
ಸದರಿ ಪ್ರದೇಶದಲ್ಲಿ ಒಂದು ಕಡೆಯಿಂದ ಕಸ ಸುರಿಯುತ್ತ ಬರಲು ರಸ್ತೆ ಸಂಪರ್ಕ ಇಲ್ಲದಿರುವುದು ತೊಂದರೆಯಾಗಿದೆ ಮಳೆಗಾಲದಲ್ಲಿ ವಾಹನ ಓಡಾಟ ಕಷ್ಟ ಸಾಧ್ಯ ಕಾರಣ ಅಲ್ಲಲ್ಲೆ ಕಸ ಹಾಕಬೇಕಾದ ಸ್ಥಿತಿ ಇದೆ. ಇವೆಲ್ಲ ಸುಧಾರಿಸಬೇಕಿದೆ ಎಂದು ಸ್ಥಳೀಯರು ಅಭಿಪ್ರಾಯಪಡುತ್ತಾರೆ.
ಸಮರ್ಪಕ ಅನುಷ್ಠಾನ: ಸುಮಾರು 6 ಸಾವಿರದಷ್ಟು ಜನಸಂಖ್ಯೆ ಹೊಂದಿರುವ ಹೊಸನಗರದಲ್ಲಿ ದಿನವೊಂದಕ್ಕೆ 2 ಟನ್ ಕಸ ಉತ್ಪತ್ತಿಯಾಗುತ್ತದೆ. ವಿಶೇಷ ಎಂದರೆ ಮನೆಮನೆಯ ಕಸ ಎತ್ತಲು ಸುಮಾರು 1500 ಸಾವಿರ ಬಕೆಟ್ನ್ನು ಪಟ್ಟಣಪಂಚಾಯ್ತಿ ಸಾರ್ವಜನಿಕರಿಗೆ ಒದಗಿಸಿದೆ. ಇದು ರಾಜ್ಯದಲ್ಲೆ ಗಮನ ಸೆಳೆಯುವ ಯೋಜನೆಯಾಗಿದ್ದರೂ ಜನರ ಸ್ಪಂದನೆ ಮಾತ್ರ ಉತ್ತಮವಾಗಿ ದೊರಕಿಲ್ಲ ಎಂಬ ಮಾತು ಕೇಳಿ ಬರುತ್ತಿದೆ. ಎರಡು ಆಟೋ ಟಿಪ್ಪರ್ ಹಾಗೂ ಒಂದು ಟ್ರ್ಯಾಕ್ಟರ್ ತ್ಯಾಜ್ಯ ವಿಲೇವಾರಿಗೆ ಬಳಸಲಾಗುತ್ತಿದೆ.
ವಿಲೇವಾರಿ ಘಟಕ: ಪಟ್ಟಣ ಸಮೀಪದ ಅಗಸರಕೊಪ್ಪದ ಸುಮಾರು 8 ಎಕರೆ ಪ್ರದೇಶದಲ್ಲಿ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪಿಸಲಾಗಿದೆ. ಈವರೆಗೆ ಸುಮಾರು ರು. 60 ಲಕ್ಷ ವ್ಯಯಿಸಲಾಗಿದೆ. ಘಟಕದ ಮುಂಭಾಗ ಮಾತ್ರ ಕಾಂಪೌಂಡ್ ನಿರ್ಮಾಣಮಾಡಲಾಗಿದೆ. ಸುತ್ತಲೂ ಬೇಲಿ ನಿರ್ಮಾಣವಾಗಬೇಕಿದ್ದು ಇನ್ನಷ್ಟೆ ಪೂರ್ಣಗೊಳ್ಳಬೇಕಿದೆ. ವರ್ಷದ ಹಿಂದೆ ಈ ಪ್ರದೇಶಕ್ಕೆ ಮೇಯಲು ಬರುತ್ತಿದ್ದ ಜಾನುವಾರುಗಳು ತ್ಯಾಜ್ಯ ತಿಂದು ಅಸುನೀಗಿದ ಘಟನೆ ಕೂಡಾ ಆತಂಕಕ್ಕೆ ಎಡೆ ಮಾಡಿಕೊಟ್ಟಿತ್ತು. ಇದರಿಂದ ಎಚ್ಚೆತ್ತ ಪಪಂ ಘಟಕದಲ್ಲಿ ಒಬ್ಬ ವಾಚ್ಮನ್ನನ್ನು ನೇಮಿಸಿ ಯಾವುದೆ ಅಪಾಯ ಸಂಭವಿಸಿದಂತೆ ನಿಗಾ ಇಟ್ಟಿದೆ ಎನ್ನುತ್ತಾರೆ ಪಪಂ ಇಂಜನಿಯರ್ ಮಹಾಂತಗೌಡ ಪಾಟೀಲ್.
ಏನೇನಾಗಬೇಕಿದೆ: ಮನೆ ಮನೆಗೆ ಪಟ್ಟಣ ಪಂಚಾಯ್ತಿ ನೀಡಲಾಗಿರುವ ತಾಜ್ಯ ಸಂಗ್ರಹ ಬಕೆಟ್ ಸಮರ್ಪಕ ಬಳಕೆಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು. ಅಗಸರ ಕೊಪ್ಪ ತ್ಯಾಜ್ಯ ವಿಲೇವಾರಿ ಘಟಕದ ಸುತ್ತಲು ಕಾಂಪೌಂಡ್ ನಿರ್ಮಿಸಿ ಜಾನುವಾರುಗಳು ಒಳಗೆ ಪ್ರವೇಶಿಸದಂತೆ ಎಚ್ಚರ ವಹಿಸುವುದು. ಕೂಡಲೇ ತ್ಯಾಜ್ಯ ಸಂಸ್ಕರಣೆ ಪ್ರಾರಂಭಿಸಲು ಯೋಜನೆ ರೂಪಿಸುವುದು. ಉತ್ತಮ ರಸ್ತೆ ನಿರ್ಮಾಣಕ್ಕೆ ಒತ್ತು ನೀಡುವುದು. ತ್ಯಾಜ್ಯ ವಿಲೇವಾರಿ ಘಟಕದಿಂದ ಸುತ್ತಲಿನ ಪರಿಸರಕ್ಕೆ ಹಾನಿಯಾಗದಂತೆ ಎಚ್ಚರವಹಿಸುವುದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

