ಜನರಿಗೆ ಸ್ಪಂದಿಸದ ಕಾನೂನು ಜನವಿರೋಧಿ: ಸಚಿವ ಕಿಮ್ಮನೆ
ಶಿವಮೊಗ್ಗ: ತಾವು ವಾಸಿಸುತ್ತಿರುವ ಪ್ರದೇಶದಲ್ಲೇ ಎಷ್ಟೋ ಜನರಿಗೆ ಭೂಮಿಯ ಹಕ್ಕು ಸಿಕ್ಕಿಲ್ಲ. ಆದ್ದರಿಂದಲೇ ದೇಶಭಕ್ತಿ ಕಡಿಮೆಯಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕಿಮ್ಮನೆ ರತ್ನಾಕರ್ ವಿಶ್ಲೇಷಿಸಿದರು.
ನಗರದಲ್ಲಿ ಶನಿವಾರ ಅವರು ಅರಣ್ಯ ಹಕ್ಕು ಕಾಯ್ದೆ ಅಡಿ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸುವ ಕಾರ್ಯಕ್ರಮ ಉದ್ಘಾಟಿಸಿ, ಯಾವ ಕಾನೂನು ಜನರಿಗೆ ಸ್ಪಂದಿಸುವುದಿಲ್ಲವೋ ಅದನ್ನು ಜನವಿರೋಧಿ ಕಾನೂನು ಎಂದೇ ಹೇಳಬೇಕಾಗುತ್ತದೆ. ಅಧಿಕಾರಿಗಳು ಕಾನೂನು ಅನುಷ್ಠಾನ ಮಾಡುವ ಸಂದರ್ಭದಲ್ಲಿ ಮಾನವೀಯತೆಯನ್ನು ಮರೆಯಬಾರದು ಎಂದರು.
ಬಾವಿಗೆ ಅಡ್ಡಿ: ಅರಣ್ಯ ಹಕ್ಕು ಕಾಯ್ದೆ ಅಡಿಯಲ್ಲಿ ಹಕ್ಕುಪತ್ರ ಪಡೆದಿರುವ ತೀರ್ಥಹಳ್ಳಿ ತಾಲೂಕಿನ ಮಲಂದೂರು ಗ್ರಾಮದಲ್ಲಿ ಬಾವಿ ತೋಡುವುದಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಆಕ್ಷೇಪಣೆ ವ್ಯಕ್ತಪಡಿಸುತ್ತಿರುವುದಕ್ಕೆ ಕಿಡಿ ಕಾರಿದ ಅವರು, ನೀರಿಗಾಗಿಯೂ ಹೋರಾಟ ಮಾಡಬೇಕು ಎಂದರೆ ಏನು ಕಾಮನ್ ಸೆನ್ಸ್ ಇಲ್ಲವೇ ಎಂದು ಪ್ರಶ್ನಿಸಿದರು.
ಅರಣ್ಯ ಹಕ್ಕು ಕಾಯ್ದೆಯನ್ನು ಇನ್ನಷ್ಟು ತಿದ್ದುಪಡಿ ಆಗಬೇಕಿದೆ. ಈ ಕಾಯ್ದೆ ಅಡಿಯಲ್ಲಿ ಅರ್ಜಿ ಸಲ್ಲಿಸಿದ ಎಲ್ಲಾ ಅರ್ಹರಿಗೆ ಹಕ್ಕುಪತ್ರ ಸಿಗುವಂತಾಗಲು ಶ್ರಮಿಸುತ್ತೇನೆ ಎಂದರು.
ವಿಧಾನಪರಿಷತ್ ಸದಸ್ಯ ಆರ್.ಕೆ. ಸಿದ್ದರಾಮಣ್ಣ, ಶಾಸಕ ಕೆ.ಬಿ. ಪ್ರಸನ್ನಕುಮಾರ್ ಅಧ್ಯಕ್ಷತೆ ವಹಿಸಿದ್ದರು. ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಅವರನ್ನು ಪ್ರತಿಯೊಬ್ಬ ಭಾಷಣಕಾರರೂ ಪ್ರಸ್ತಾಪಿಸಿ ಅವರ ಶ್ರಮವನ್ನು ಸ್ಮರಿಸಿದರು. ಜಿಲ್ಲಾ ಪಂಚಾಯ್ತಿ ಸದಸ್ಯರಾದ ಕಲಗೋಡು ರತ್ನಾಕರ್, ಯಲ್ಲಪ್ಪ, ರೇಣುಕಮ್ಮ, ಜಿಲ್ಲಾಧಿಕಾರಿ ವಿಫುಲ್ ಬನ್ಸಲ್, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಸಿಕಾಂತ್ ಸೆಂಥಿಲ್, ಪ್ರಮುಖರಾದ ತೀ.ನ. ಶ್ರೀನಿವಾಸ್, ನಗರದ ಮಹದೇವಪ್ಪ, ಶಿವಪ್ಪ, ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಮಲ್ಲಿಕಾರ್ಜುನ್, ಬ್ಯಾನರ್ಜಿ, ರವಿಕುಮಾರ್, ಸಮಾಜ ಕಲ್ಯಾಣಾಧಿಕಾರಿ ಬಾಲರಾಜ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.
ಸಭಿಕರ ಪ್ರಶ್ನೆ
ರಾಜ್ಯಸಭಾ ಸದಸ್ಯ ಆಯನೂರು ಮಂಜುನಾಥ್ ಅವರು ಅರಣ್ಯ ಹಕ್ಕು ಕಾಯ್ದೆಯಲ್ಲಿನ ಲೋಪಗಳನ್ನೇ ಪ್ರಮುಖವಾಗಿ ಮಾತನಾಡುತ್ತಿದ್ದಾಗ ಎದ್ದುನಿಂತ ಸಭಿಕರೊಬ್ಬರು, 2006ರಲ್ಲಿ ಕಾಯ್ದೆ ಅನುಷ್ಠಾನಕ್ಕೆ ಬಂದಾಗ ರಾಜ್ಯದಲ್ಲಿ ಯಾವ ಸರ್ಕಾರ ಅಸ್ತಿತ್ವದಲ್ಲಿತ್ತು ಯಾಕೆ ಸಮರ್ಪಕ ಅನುಷ್ಠಾನ ಮಾಡಲಿಲ್ಲ ಎಂದು ಪ್ರಶ್ನಿಸಿದರು. ಆಯನೂರು ಮಂಜುನಾಥ್ ಪ್ರತಿಕ್ರಿಯಿಸಿ, ನಿಮ್ಮ ಪ್ರಶ್ನೆಗೆ ಉತ್ತರಿಸಲು ನಾನು ಸಮರ್ಥನಲ್ಲ. ಜಿಲ್ಲಾಧಿಕಾರಿ ಉತ್ತರಿಸುತ್ತಾರೆ ಎಂದರು. ಪ್ರಶ್ನೆ ಕೇಳಿದ ವ್ಯಕ್ತಿಯನ್ನು ವೇದಿಕೆಯ ಮೇಲೆ ಆಹ್ವಾನಿಸಿದಾಗ ವೇದಿಕೆಯಲ್ಲಿದ್ದ ಪ್ರಮುಖರು ಆ ವ್ಯಕ್ತಿಯನ್ನು ತೀವ್ರವಾಗಿ ಪ್ರಶ್ನಿಸಿದರು. ಆಗ ಕೆಲಕಾಲ ಗೊಂದಲದ ವಾತಾರವಣ ಉಂಟಾಗಿತ್ತು.
ಆಯನೂರು ಕಿಡಿ
ಯಾಕೆ ತರಾತುರಿಯಲ್ಲಿ ಸಭೆ ಮಾಡುತ್ತೀರಿ ಅಂತಹ ಅವಸರವೇನಿದೆ ಈ ಕಾರ್ಯಕ್ರಮಕ್ಕೆ ಗ್ರಾಮಾಂತರ ಶಾಸಕರು ಅಧ್ಯಕ್ಷತೆ ವಹಿಸಬೇಕಿತ್ತು. ಏನು ಪ್ರೋಟೋಕಾಲ್ ಅನುಸರಿಸಿದ್ದೀರಿ ನನಗೆ ಏಕೆ ಆಹ್ವಾನ ನೀಡಿಲ್ಲ ಎಂದು ಪ್ರಶ್ನೆಗಳ ಮೇಲೆ ಪ್ರಶ್ನೆ ಕೇಳಿದ ರಾಜ್ಯಸಭಾ ಆಯನೂರು ಮಂಜುನಾಥ್ ಅಧಿಕಾರಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.
ಯಾರಾದರೂ ಅಧಿಕಾರಿಗಳನ್ನು ಪ್ರಶ್ನಿಸಿದರೆ ಅವರು ನಮ್ಮ ವಿರುದ್ಧ ಜನರನ್ನು ಎತ್ತಿಕಟ್ಟಿ ಪ್ರತಿಭಟನೆ ಮಾಡಿಸುತ್ತಾರೆ. ಜನರ ಪರವಾಗಿ ನಾವು ಮಾತನಾಡಬಾರದೇ ನಗರ ಪಾಲಿಕೆ ಆಯುಕ್ತರನ್ನು ಏನೂ ಕೇಳಬಾರದೇ ಎಂದ ಅವರು, ಇಂತಹ ಪ್ರತಿಭಟನೆಗೆ ಜಗ್ಗುವುದಿಲ್ಲ. ನಾವು ಯಾವತ್ತಿಗೂ ಇದನ್ನೇ ಮಾಡಿಕೊಂಡು ಬಂದವರು. ಜನರನ್ನು ಎತ್ತಿಕಟ್ಟುವ ಅಧಿಕಾರಿಗಳು ತಮ್ಮ ಕೆಲಸಕ್ಕೆ ರಾಜಿನಾಮೆ ಕೊಟ್ಟು ರಾಜಕಾರಣಕ್ಕೆ ಬರಲಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಹಕ್ಕುಪತ್ರ ವಿತರಣೆ
ಕಾರ್ಯಕ್ರಮದಲ್ಲಿ ಒಟ್ಟು 110 ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಲಾಯಿತು. ಒಟ್ಟು 185 ಎಕರೆ 14 ಗುಂಟೆ ಭೂಮಿ ಈಗ ಅರಣ್ಯ ಇಲಾಖೆಯಿಂದ ಬಿಡುಗಡೆಗೊಂಡು ಆಯಾ ಫಲಾನುಭವಿಗಳಿಗೆ ಸಿಕ್ಕಂತಾಗಿದೆ. ಶಿವಮೊಗ್ಗದ 13 ಫಲಾನುಭವಿಗಳು, ತೀರ್ಥಹಳ್ಳಿಯ 19, ಹೊಸನಗರದ 14, ಸಾಗರದ 5, ಸೊರಬದ 4, ಶಿಕಾರಿಪುರದ 55 ಫಲಾನುಭವಿಗಳು ಹಕ್ಕುಪತ್ರ ಪಡೆದರು. ಇವರೆಲ್ಲರೂ ಅನುಸೂಚಿತ ಬುಡಕಟ್ಟು ಜನಾಂಗಕ್ಕೆ ಸೇರಿದವರಾಗಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

