ಶಿವಮೊಗ್ಗ

ಹಣ ಬಿಡುಗಡೆ ಒತ್ತಾಯಿಸಿ ಗುತ್ತಿಗೆದಾರರ ಪ್ರತಿಭಟನೆ

Published On :

ಕ.ಪ್ರ.ವಾರ್ತೆ, ಸಾಗರ, ಮಾ. 3
ತಾಲೂಕಿನಲ್ಲಿ ಮುಖ್ಯಮಂತ್ರಿ ವಿಶೇಷ ಅನುದಾನ ಶೀರ್ಷಿಕೆ 3054-5054 ಯೋಜನೆಯಡಿ ನಿರ್ವಹಿಸುತ್ತಿರುವ ಕಾಮಗಾರಿಗಳ 553.38 ಲಕ್ಷ ಬಿಲ್ಲುಗಳು ಬಾಕಿ ಇರುವುದನ್ನು ತಕ್ಷಣ ಬಿಡುಗಡೆಗೊಳಿಸುವಂತೆ ಒತ್ತಾಯಿಸಿ ಸೋಮವಾರ ತಾಲೂಕು ಗುತ್ತಿಗೆದಾರರ ಸಂಘದ ವತಿಯಿಂದ ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗದ ಕಾರ್ಯಪಾಲಕ ಅಭಿಯಂತರರ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯಲ್ಲಿ ಸಂಘದ ಅಧ್ಯಕ್ಷ ಡಿ.ಕೆ. ಸಿದ್ದೇಶ್ವರ ಪ್ರಸಾದ್ ಮಾತನಾಡಿ, ಯಡಿಯೂರಪ್ಪನವರು ಮುಖ್ಯಮಂತ್ರಿಗಳಾಗಿದ್ದ ಅವಧಿಯಲ್ಲಿ ತಾಲೂಕಿನ ಅಭಿವೃದ್ಧಿಗೆ ವಿಶೇಷ ಅನುದಾನವನ್ನು ಬಿಡುಗಡೆ ಮಾಡಲಾಗಿತ್ತು. ವಿಶೇಷ ಅನುದಾನ ಶೀರ್ಷಿಕೆ 3054-5054 ಯೋಜನೆಯಡಿ ತಾಲೂಕಿನಾದ್ಯಂತ ರಸ್ತೆ, ಸೇತುವೆ ಕಾಮಗಾರಿಗಳನ್ನು ನಿರ್ವಹಿಸಲಾಗಿದೆ. ಆದರೆ ಈತನಕ ಹಣ ಬಿಡುಗಡೆಯಾಗಿಲ್ಲ ಎಂದರು.
ಸಂಕಷ್ಟದಲ್ಲಿ ಗುತ್ತಿಗೆದಾರರು: ಸಾಗರ ಹಾಗೂ ಹೊಸನಗರ ತಾಲೂಕಿನಲ್ಲಿ 45ಕ್ಕೂ ಹೆಚ್ಚು ಸಣ್ಣಪುಟ್ಟ ಗುತ್ತಿಗೆದಾರರು 553.38 ಲಕ್ಷ ವೆಚ್ಚದಲ್ಲಿ ಕಾಮಗಾರಿಗಳನ್ನು ನಿರ್ವಹಿಸಿ, ಬಿಲ್ಲು ನೀಡಿದ್ದಾರೆ.
ಆದರೆ ಸರ್ಕಾರದಿಂದ ಹಣ ಮಂಜೂರಾತಿ ಆಗದಿರುವುದರಿಂದ ಈತನಕ ಗುತ್ತಿಗೆದಾರರಿಗೆ ಹಣ ಸಂದಾಯವಾಗಿಲ್ಲ. ಕಾಮಗಾರಿ ನಿರ್ವಹಿಸುವಾಗ ಗುತ್ತಿಗೆದಾರರು ಬೇರೆ ಬೇರೆ ಕಡೆ ಸಾಲ ಮಾಡಿ, ಕಾಮಗಾರಿ ಬಿಲ್ಲು ಆದ ತಕ್ಷಣ ಮರುಪಾವತಿ ಮಾಡುವ ಉದ್ದೇಶ ಹೊಂದಿರುತ್ತಾರೆ. ಈ ತನಕ ಹಣ ಬಿಡುಗಡೆಯಾಗದೆ ಇರುವುದರಿಂದ ಗುತ್ತಿಗೆದಾರರು ತೀವ್ರ ಸಂಕಷ್ಟಕ್ಕೆ ಒಳಗಾಗುವಂತಾಗಿದೆ ಎಂದು ಹೇಳಿದರು.
ತಕ್ಷಣ ಹಣ ಬಿಡುಗಡೆಗೊಳಿಸಿ: ರಾಜ್ಯದ 13 ತಾಲೂಕುಗಳಲ್ಲಿ ಇದೇ ಸ್ಥಿತಿಯಿದ್ದು, ಶಿವಮೊಗ್ಗ ಜಿಲ್ಲೆಗೆ ದೊಡ್ಡ ಪ್ರಮಾಣದ ಮೊತ್ತ ಬಿಡುಗಡೆಯಾಗದೆ ಬಾಕಿ ಉಳಿದಿದೆ. ಹಿಂದಿನ ಎಲ್ಲಾ ಮುಖ್ಯಮಂತ್ರಿಗಳಿಗೆ ಸಂಘದ ವತಿಯಿಂದ ಬಾಕಿಯಿರುವ ಹಣ ಬಿಡುಗಡೆ ಮಾಡುವಂತೆ ಮನವಿ ಸಲ್ಲಿಸಲಾಗಿದ್ದರೂ ಯಾವುದೆ ಪ್ರಯೋಜನವಾಗಿಲ್ಲ. ತಕ್ಷಣ ಗುತ್ತಿಗೆದಾರರು ಕಾಮಗಾರಿ ಸಂದರ್ಭದಲ್ಲಿ ಮುಂಗಡ ಇಟ್ಟಿರುವ ಶೇ.5 ಭದ್ರತಾ ಠೇವಣಿ ವಾಪಸ್ ನೀಡಬೇಕು. ಜೊತೆಗೆ ಕಾಮಗಾರಿ ನಿರ್ವಹಿಸಿರುವ ಹಣವನ್ನು ತಕ್ಷಣ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.
ಸಂಘದ ಉಪಾಧ್ಯಕ್ಷ ಮಂಜುನಾಥ ಎಚ್., ಪ್ರಧಾನ ಕಾರ್ಯದರ್ಶಿ ಬಸವರಾಜ ಟಿ., ಸಹ ಕಾರ್ಯದರ್ಶಿ ಜಿ. ಪ್ರವೀಣ್ ಭೀಮನಕೋಣೆ, ಖಜಾಂಚಿ ಕೆ. ರಾಜಶೇಖರ್, ಸೊರಬ ತಾಲೂಕು ಗುತ್ತಿಗೆದಾರರ ಸಂಘದ ಅಧ್ಯಕ್ಷ ಕುಪ್ಪಗಡ್ಡೆ ನಾಗರಾಜ್, ಪ್ರಮುಖರಾದ ಗಿರೀಶ್, ಪ್ರಭಾಕರ್ ಶೆಟ್ಟಿ, ರವಿ ಜಂಬೂರುಮನೆ, ಪಿ.ಆರ್. ಸೋಮನ್, ಸ್ವಾಮಿ ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.