ಶಿವಮೊಗ್ಗ

ಮಲೆನಾಡು ಜನರ ಭೂಮಿ ಕಿತ್ತುಕೊಳ್ಳುವ ಹುನ್ನಾರ

Published On :

ಕನ್ನಡಪ್ರಭ ವಾರ್ತೆ  ಶಿವಮೊಗ್ಗ  ಮಾ.4
ಮಲೆನಾಡು ಭಾಗದಲ್ಲಿ ಜನರನ್ನು ಕೃಷಿ ಭೂಮಿಗಳಿಂದ ಮತ್ತು ಜನವಸತಿ ಪ್ರದೇಶಗಳಿಂದ ತೆರವುಗೊಳಿಸುವಂತಹ ಅಮಾನವೀಯ ಕೃತ್ಯಕ್ಕೆ ಸರ್ಕಾರಗಳು ಮುಂದಾಗುತ್ತಿವೆ ಎಂದು ಆರೋಪಿಸಿ ಜಿಲ್ಲಾ ಭೂ ಹಕ್ಕು ಹೋರಾಟ ಸಮಿತಿಯ ನೇತೃತ್ವದಲ್ಲಿ ಮಂಗಳವಾರ ಪ್ರತಿಭಟನೆ ನಡೆಯಿತು.
ನಗರಸಭಾ ಆವರಣದಿಂದ ಹೊರಟ ಪ್ರತಿಭಟನಕಾರರು ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ಮೂಲಕ ತೆರಳಿ ಧರಣಿ ನಡೆಸಿ, ಕೂಡಲೇ ಸರ್ಕಾರ ನಿಲುವು ಬದಲಿಸುವಂತೆ ಆಗ್ರಹಿಸಿ ಮನವಿ ಸಲ್ಲಿಸಿದರು.
ಜಿಲ್ಲೆಯಲ್ಲಿ ಎರಡೂವರೆ ಲಕ್ಷಕ್ಕೂ ಹೆಚ್ಚು ಕುಟುಂಬಗಳು ಕಂದಾಯ ಮತ್ತು ಅರಣ್ಯ ಜಮೀನುಗಳಲ್ಲಿ ಕೃಷಿ ಅವಲಂಬಿಸಿದ್ದಾರೆ. ಕಂದಾಯ ಭೂಮಿಯಲ್ಲಿ ಬಗರ್‌ಹುಕುಂ ಸಾಗುವಳಿ ಮಾಡಿಕೊಂಡಿರುವವರಿಗೆ ಹಕ್ಕುಪತ್ರ ಕೊಡುತ್ತೇವೆಂದು ಸರ್ಕಾರಗಳು ಪಡೆದುಕೊಂಡ ಲಕ್ಷಾಂತರ ಅರ್ಜಿಗಳು ಕಚೇರಿಗಳಲ್ಲಿ ಗೆದ್ದಲು ಹಿಡಿದಿವೆ. ಅರಣ್ಯ ಜಮೀನುಗಳಲ್ಲಿ ಕೃಷಿ ಮಾಡಿಕೊಂಡಿರುವವರಿಗೆ ಹಕ್ಕುಪತ್ರ ಕೊಡಬೇಕೆಂದು 1978ರಲ್ಲಿ ಸುಪ್ರೀಂಕೋರ್ಟ್ ಆದೇಶ ಮಾಡಿರುವುದನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಪ್ಪಿಕೊಂಡಿದ್ದರೂ ಇದುವರೆಗೂ ಜಾರಿ ಮಾಡಿಲ್ಲ ಎಂದು ಆಕ್ಷೇಪಿಸಿದರು.
ಆಕ್ರೋಶ: ಅರಣ್ಯ ಹಕ್ಕುಗಳನ್ನು ಮಾನ್ಯ ಮಾಡುವ ಅಧಿನಿಯಮ 2006, 2008, 2012ರ ಕಾಯ್ದೆಯನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿರುವುದನ್ನು ರಾಜಕಾರಣಿಗಳು ಜನರ ದಿಕ್ಕು ತಪ್ಪಿಸಲು ತಂದಿರುವ ಬೋಗಸ್ ಕಾಯಿದೆ ಎಂದು ಆಡಳಿತದಲ್ಲಿರುವ ಸರ್ಕಾರಿ ಅಧಿಕಾರಿಗಳೇ ಹೇಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಸಮಾಧಾನ: ಜನರ ಅಗತ್ಯಗಳಿಗೆ ಕಾನೂನು ಜಾರಿಗೆ ತರುವ ಬದಲು ಹಾಗೂ ವಾಸ್ತವ ಸಂಗತಿಗಳನ್ನು ನ್ಯಾಯಾಲಯಗಳ ಗಮನಕ್ಕೆ ತರುವ ಬದಲು ಪೊಲೀಸ್ ಬಲ ಬಳಸಿ ರೈತರ ಬೆಳೆ ನಾಶಪಡಿಸುವ, ಒಕ್ಕಲೆಬ್ಬಿಸುವ ಅನಾಗರಿಕ ಕೃತ್ಯಗಳಲ್ಲಿ ಸರ್ಕಾರಗಳು ತೊಡಗಿಕೊಂಡಿವೆ. ಕಳೆದ 30 ವರ್ಷಗಳಿಂದ ಹಕ್ಕುಪತ್ರಕ್ಕಾಗಿ ಹೋರಾಡುತ್ತಿರುವ ರೈತರಿಗೆ ಹಕ್ಕುಪತ್ರ ನೀಡಲು ನ್ಯಾಯಾಲಯಗಳು ಅಡ್ಡಿ ಬರುತ್ತವೆ. ಆದರೆ, ಭ್ರಷ್ಟರು, ಅಧಿಕಾರಿಶಾಹಿಗಳು ತಮ್ಮ ಅಕ್ರಮ ಮುಚ್ಚಿಕೊಳ್ಳಲು ರಾತ್ರೋರಾತ್ರಿ ಕಾನೂನು ತಿದ್ದುಪಡಿ ಮಾಡಿಕೊಂಡರೆ ಯಾವ ನ್ಯಾಯಾಲಯವೂ ತುಟಿ ಬಿಚ್ಚುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಈಸೂರು ಲೋಕೇಶ್, ಚಂದ್ರಕಾಂತ್ ಮತ್ತಿತರರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.