ಶಿವಮೊಗ್ಗ

ಶಿಕ್ಷಕರಿಗೆ ಸಂಬಳ ಕೊಡಲು ಹಣವಿಲ್ಲವೇ?

Published On :

 ವಿಶೇಷ ವರದಿ
ಶಿವಮೊಗ್ಗ:
ಶಿಕ್ಷಕರಿಗೆ ಮಾಸಿಕ ಸಂಬಳ ಕೊಡಲು ಸರ್ಕಾರದ ಬಳಿ ಹಣವಿಲ್ಲವೇ?.
ಈ ರೀತಿಯ ಸಂಶಯದ ಮಾತಿಗೊಂದು ಪುಷ್ಟಿ ನೀಡುವ ಬೆಳವಣಿಗೆ ಶಿವಮೊಗ್ಗ ಜಿಲ್ಲೆ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ನಡೆದಿದೆ. ವಿಶೇಷವಾಗಿ ಶಿಕ್ಷಣ ಸಚಿವರ ತವರು ಜಿಲ್ಲೆಯಲ್ಲಿ ಪ್ರೌಢ ಶಾಲೆಯ 150ಕ್ಕೂ ಹೆಚ್ಚು ಶಿಕ್ಷಕರು ಮೂರು ತಿಂಗಳಿಂದ ವೇತನವಿಲ್ಲದೇ ಪರದಾಡುತ್ತಿದ್ದಾರೆ.
(ಪ್ಲಾನ್‌ಹೆಡ್ ಯೋಜನೆ)ನಲ್ಲಿ ವೇತನ ಪಾವತಿಯಾಗಬೇಕಾದ ಜಿಲ್ಲೆಯ ವಿವಿಧ ತಾಲೂಕುಗಳ ಶಿಕ್ಷಕರಿಗೆ ಅಲಾಟ್‌ಮೆಂಟ್ ಇಲ್ಲದೆ ವೇತನ ಪಾವತಿಯಾಗಿಲ್ಲ.
ಅಲಾಟ್‌ಮೆಂಟ್ ಬಂದಿಲ್ಲ: ಈ ಬಗ್ಗೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು ಸಮರ್ಪಕ ಉತ್ತರ ನೀಡಲು ಅಸಮರ್ಥರಾಗಿದ್ದಾರೆ. ನಾವು ಪತ್ರ ಬರೆದಿದ್ದೇವೆ, ಅಲಾಟ್‌ಮೆಂಟ್ ಬಂದಿಲ್ಲ. ನೀವು ಏಕೆ ಕಚೇರಿಗೆ ಬರುತ್ತೀರಾ... ಶಾಲೆಯಲ್ಲಿ ಕೆಲಸ ಮಾಡಿ ಎಂದು ದಬಾಯಿಸುತ್ತಿದ್ದಾರೆ. ಸಂಬಳವಿಲ್ಲದೇ ಕುಟುಂಬ ನಿರ್ವಹಣೆ ಹೇಗೆ ಎಂದರೆ, ಅಲಾಟ್‌ಮೆಂಟ್ ಬಂದರೆ ಕೊಡುವುದಿಲ್ಲವೇ, ನಾವೇನು ತಿಂದುಬಿಡುತ್ತೇವೆಯೇ ಎಂದೂ ಸಹ ಉದಾಸೀನ ಉತ್ತರ ಶಿಕ್ಷಣ ಇಲಾಖೆಯಿಂದ ಬರುತ್ತಿದೆ.
ಈ ಯೋಜನೆಯಡಿ ಶಿಕ್ಷಕರಿಗೆ ಕಳೆದ ಜನವರಿಯಿಂದ ಏಪ್ರಿಲ್‌ವರೆಗೆ ನೀಡಬೇಕಾದ ಶೇ.5 ಡಿಎ ಅರಿಯರ್ಸ್, ಜುಲೈನಿಂದ ಅಕ್ಟೋಬರ್‌ವರೆಗೆ ನೀಡಬೇಕಾದ ಶೇ.7 ಡಿಎ ಅರಿಯರ್ಸ್ ಸಹ ಪಾವತಿಯಾಗಿಲ್ಲ. ಕಳೆದ 4 ವರ್ಷಗಳಿಂದ ಈ ಶಿಕ್ಷಕರಿಗೆ ಸರೆಂಡರ್ ಲೀವ್ ಸಹ ನಗದೀಕರಣಗೊಳಿಸಲು ಅಲಾಟಮೆಂಟ್ ಇಲ್ಲವಾಗಿದ್ದು ಈ ಯೋಜನೆಯಡಿ ವೇತನ ಪಡೆಯುತ್ತಿರುವ ಶಿಕ್ಷಕರ ಗೋಳಿಗೆ ಸ್ಪಂದಿಸುವವರೇ ಇಲ್ಲವಾಗಿದೆ ಎಂದು ನೊಂದ ಶಿಕ್ಷಕರು ತಂಡ ಕನ್ನಡಪ್ರಭಕ್ಕೆ ವಿವರಿಸಿತು.
ಪ್ಲಾನ್‌ಹೆಡ್: ಹೊಸದಾಗಿ ಸೃಷ್ಟಿಯಾಗುವ ಸರ್ಕಾರಿ ಹುದ್ದೆಗಳು ಆರಂಭದ ಐದು ವರ್ಷಗಳ ಕಾಲ ಈ ಯೋಜನೆಗೊಳಪಡುತ್ತದೆ. ಈ ಯೋಜನೆಯಡಿ ಆರ್ಥಿಕ ಇಲಾಖೆಯಿಂದ ಪ್ರತ್ಯೇಕ ಅಲಾಟ್‌ಮೆಂಟ್ ಬಿಡುಗಡೆಯಾಗಿ ಅದೇ ಹಣದಲ್ಲಿಯೇ ವೇತನ ಪಾವತಿಯಾಗಬೇಕಾಗುತ್ತದೆ. ಐದು ವರ್ಷಗಳ ನಂತರ ಈ ಯೋಜನೆ ನಾನ್‌ಪ್ಲಾನ್ ಆಗಿ ರಾಜ್ಯ ಸರ್ಕಾರ ಮಾರ್ಪಾಡುಗೊಳಿಸುತ್ತದೆ.
2006ರಲ್ಲಿ ಬಿಜೆಪಿ ಮತ್ತು ಜೆಡಿಎಸ್ ಸಮ್ಮಿಶ್ರ ಸರ್ಕಾರ ಅಸ್ತಿತ್ವದಲ್ಲಿದ್ದಾಗ ರಾಜ್ಯದೆಲ್ಲೆಡೆ ಹೊಸದಾಗಿ ಪ್ರೌಢ ಶಾಲೆಗಳು ಮಂಜೂರಾದವು. ಈ ಪ್ರೌಢಶಾಲೆಗಳ ಬಹುತೇಕ ಹುದ್ದೆಗಳು ಹೊಸದಾಗಿದ್ದು, ಎಲ್ಲವೂ ಪ್ಲಾನ್ ಯೋಜನೆಗೊಳಪಟ್ಟಿದ್ದವು. ಈಗಾಗಲೇ ಈ ಹುದ್ದೆಗಳು ಸೃಷ್ಟಿಯಾಗಿ ಏಳು ವರ್ಷ ಪೂರ್ಣಗೊಂಡಿದ್ದು ಇನ್ನೂ ನಾನ್‌ಪ್ಲಾನ್ ಆಗಿ ಬದಲಾಗಿಲ್ಲ.
ಪರದಾಟ: ಶಿವಮೊಗ್ಗ ಜಿಲ್ಲೆಯ ವಿವಿಧ ತಾಲೂಕುಗಳ ಹೊಸ ಪ್ರೌಢಶಾಲೆಗಳ ಶಿಕ್ಷಕರು ಮೂರು ತಿಂಗಳಿಂದ ವೇತನವಿಲ್ಲದೇ ಜೀವನ ನಿರ್ವಹಣೆಗಾಗಿ ಕಂಡ ಕಂಡವರ ಮುಂದೆ ಕೈಚಾಚುವಂತಾಗಿದೆ. ಇದು ಸಮಸ್ಯೆ ಶಿವಮೊಗ್ಗಕ್ಕಷ್ಟೇ ಸೀಮಿತವಾಗಿಲ್ಲ. 2006ರಲ್ಲಿ ರಾಜ್ಯದಲ್ಲಿ ಆರಂಭವಾದ ನೂತನ ಪ್ರೌಢ ಶಾಲೆಗಳ ಪೈಕಿ ಹೊಸದಾಗಿ ಸೃಷ್ಟಿಯಾದ ಹುದ್ದೆಗಳಡಿ ನೇಮಕಗೊಂಡ ಶಿಕ್ಷಕರೆಲ್ಲರೂ ಅನುಭವಿಸುತ್ತಿದ್ದಾರೆ.
ಗುಣಾತ್ಮಕ ಶಿಕ್ಷಣ, ಎಸ್‌ಎಸ್‌ಎಲ್‌ಸಿ ಫಲಿತಾಂಶ ಹೆಚ್ಚಳ ಇತ್ಯಾದಿಗಳ ಬಗ್ಗೆ ಶಿಕ್ಷಕರ ಮೇಲೆ ವಿಪರೀತ ಒತ್ತಡ ಹೇರುವ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು ಸಕಾಲದಲ್ಲಿ ವೇತನ ಪಾವತಿಯಾಗುವಂತೆ ಕ್ರಮ ಕೈಗೊಂಡು ಶಿಕ್ಷಕರ ಮಾನಸಿಕ ಸ್ಥೈರ್ಯ ಹೆಚ್ಚುವಂತೆ ಮಾಡುವಲ್ಲ ಲಕ್ಷ್ಯ ವಹಿಸದಿರುವುದು ವಿಪರ್ಯಾಸವೇ ಸರಿ ಎಂದು ನೊಂದ ಶಿಕ್ಷಕರು ತಿಳಿಸಿದರು.
ಕರ್ತವ್ಯ ಲೋಪ: ಸಕಾಲ ಯೋಜನೆಯಡಿ ಸರ್ಕಾರ ಹಲವು ಇಲಾಖೆಗಳನ್ನು ಒಳಪಡಿಸಿದೆ. ಇವುಗಳಲ್ಲಿ ಸರ್ಕಾರಿ ನೌಕಕರಿಗೆ ಪ್ರತಿ ತಿಂಗಳು 5ರೊಳಗೆ ವೇತನ ಪಾವತಿಯಾಗಬೇಕು, ಇಲ್ಲವಾದರೆ ಮೇಲಧಿಕಾರಿಗಳು ಕರ್ತವ್ಯ ಲೋಪವೆಸಗಿದಂತೆ ಎಂದು ವಿವರಿಸಲಾಗಿದೆ. ಇಂತಹ ಕಾನೂನುಗಳು ಸಹ ಶಿಕ್ಷಣ ಸಚಿವರ ಉಸ್ತುವಾರಿಯ ಈ ಜಿಲ್ಲೆಯಲ್ಲಿ ಶಿಕ್ಷಕರ ಹಿತಾಸಕ್ತಿ ಕಾಪಾಡಲಾರದೆ ವಿಫಲಗೊಂಡಿರುವುದು ಅತ್ಯಂತ ಅಚ್ಚರಿಯೆನುಸುತ್ತದೆ ಎಂಬ ಮಾತು ಕೇಳಿಬಂದಿದೆ.
ಇನ್ನೊಂದೆಡೆ ಎಚ್‌ಆರ್‌ಎಂಎಸ್ ಸಮಸ್ಯೆಯಿಂದಾಗಿ ಅನೇಕ ಶಿಕ್ಷಕರು, ಸಿಬ್ಬಂದಿ ಬಳಲುತ್ತಿದ್ದಾರೆ. ಅನೇಕರು ಮಾಸಿಕ ವೇತನ ಪಡೆದುಕೊಳ್ಳುವುದಕ್ಕೇ ಸಂಕಷ್ಟು ಎದುರಿಸುತ್ತಿದ್ದಾರೆ. ಶಿಕ್ಷಣ ಇಲಾಖೆಯ ಸಿಬ್ಬಂದಿಗೇ ಲಂಚ ಕೊಟ್ಟು ತಮ್ಮ ಸಮಸ್ಯೆ ಪರಿಹರಿಸಿಕೊಳ್ಳಬೇಕಾದ ಪರಿಸ್ಥಿತಿ ಎದುರಾಗಿದೆ. ಹೀಗೆ ಪದೇ ಪದೇ ವೇತನದ ವಿಚಾರದಲ್ಲಿ ಶಿಕ್ಷಣ ಇಲಾಖೆ ತನ್ನ ಸಿಬ್ಬಂದಿಯನ್ನು ಗೋಳಾಡಿಸುತ್ತಿರುವುದು ಅಚ್ಚರಿಗೆ ಕಾರಣವಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.