ಶಿವಮೊಗ್ಗ

ಮಹಾನಗರ ಪಾಲಿಕೆ ಆವರಣದಲ್ಲೇ ಸಾರ್ವಜನಿಕ ಶೌಚಾಲಯಕ್ಕೆ ಬರ!

Published On :

ಶಿವಮೊಗ್ಗ: ಪ್ರತಿನಿತ್ಯ ಒಂದೂವರೆ ಸಾವಿರಕ್ಕೂ ಹೆಚ್ಚು ಜನರು ಭೇಟಿ ನೀಡುವ ಮಹಾನಗರ ಪಾಲಿಕೆ ಆವರಣದಲ್ಲಿಯೇ ಸಾರ್ವಜನಿಕ ಶೌಚಾಲಯವಿಲ್ಲ.
3 ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ಶಿವಮೊಗ್ಗ ನಗರವೀಗ ಮಹಾನಗರ ಪಾಲಿಕೆ ಎಂಬ ಕೋಡು ಹೊತ್ತಿದೆ. ಬೆಳೆಯುತ್ತಿರುವ ಈ ನಗರದಲ್ಲಿಯೇ ಸಾರ್ವಜನಿಕ ಶೌಚಾಲಯಗಳ ಕೊರತೆ ಇದೆ. ಜನನಿಬಿಡ ನೆಹರೂ ರಸ್ತೆ, ಗಾಂಧಿ ಬಜಾರ್, ಬಿ.ಎಚ್. ರಸ್ತೆ, ಜೈಲು ರಸ್ತೆಯಲ್ಲಿಯೇ ಸಾಕಷ್ಟು ಸಾರ್ವಜನಿಕ ಮೂತ್ರಿಗಳಿಲ್ಲ. ಇವೆಲ್ಲಕ್ಕೂ ಮಿಗಿಲಾಗಿ ಪಾಲಿಕೆ ಆವರಣದಲ್ಲಿಯೇ ಶೌಚಾಲಯ ಇಲ್ಲವಾಗಿದೆ.
ಅಚ್ಚರಿ ಎಂದರೆ ನಗರಸಭೆ ಆವರಣದಲ್ಲಿಯೇ ಮೂರ್ನಾಲ್ಕು ದೇವಾಲಯಗಳಿವೆ. ಈ ದೇವಾಲಯಗಳು ಪ್ರತಿವರ್ಷ ಅಭಿವೃದ್ಧಿ ಆಗುತ್ತಲೇ ಇವೆ. ಆದರೆ, ಊರ ಅಭಿವೃದ್ಧಿಗೆ ಚಿಂತಿಸುವ ಪುರಪಿತೃಗಳಿಗೆ ನಗರಸಭೆ ಆವರಣದಲ್ಲೇ ಸಾರ್ವಜನಿಕ ಶೌಚಾಲಯ ಕಟ್ಟಿಸುವ ಯೋಚನೆ ಇಲ್ಲದಿರುವುದು ದುರಂತ.
ಪಾಲಿಕೆಯಲ್ಲಿಯೇ ಹಾಲಿ 200ಕ್ಕೂ ಹೆಚ್ಚು ಸಿಬ್ಬಂದಿ ಇದ್ದಾರೆ. 200ಕ್ಕೂ ಹೆಚ್ಚು ಪೌರ ಕಾರ್ಮಿಕರಿದ್ದಾರೆ. ಪ್ರತಿನಿತ್ಯ ವಿವಿಧ ಕೆಲಸಕ್ಕೆಂದು ಸಾವಿರಕ್ಕೂ ಹೆಚ್ಚು ಜನರು ಬಂದು ಹೋಗುತ್ತಾರೆ. ಇವರೆಲ್ಲರೂ ಮೂತ್ರ ಮಾಡುವುದಕ್ಕೆ ನೀರಿನ ಟ್ಯಾಂಕ್ ಸುತ್ತಮುತ್ತಲಿನ ಜಾಗ ಹುಡುಕಿಕೊಂಡಿದ್ದಾರೆ. ಇದರಿಂದಾಗಿ ಈ ಜಾಗ ಗಬ್ಬು ನಾರುತ್ತಿದೆ. ಇನ್ನು ಸಾರ್ವಜನಿಕ ಮೂತ್ರಾಲಯಕ್ಕೇ ಹೋಗಬೇಕೆಂದರೆ ಕಾಂಪೌಂಡ್ ದಾಟಿ ಗೋಪಿ ವೃತ್ತದ ಬಳಿ ಇರುವ ನಗರಸಭೆ ಕಾಂಪ್ಲೆಕ್ಸ್ ಹಿಂಭಾಗಕ್ಕೆ ಹೋಗಬೇಕು.
ಮುಜುಗರ: ಮಹಿಳೆಯರ ಸಮಸ್ಯೆಯಂತೂ ಹೇಳತೀರದು. ಹತ್ತಿರದಲ್ಲೆಲ್ಲೂ ಸಾರ್ವಜನಿಕ ಮೂತ್ರಿ ಇಲ್ಲದ ಕಾರಣ ಭಾರಿ ಮುಜುಗರ ಎದುರಿಸುವಂತಾಗಿದೆ.
ಪ್ರಸ್ತಾವವಿದೆ: ಮಹಾನಗರ ಪಾಲಿಕೆ ಆವರಣದಲ್ಲಿ ಶೌಚಾಲಯ ಇಲ್ಲವೆಂಬ ವಿಷಯ ಪುರಪಿತೃಗಳಿಗೆ, ಅಧಿಕಾರಿಗಳಿಗೆ ಗೊತ್ತಲ್ಲವೆಂದೇನಲ್ಲ. ಆದರೆ ನಿರ್ಲಕ್ಷ್ಯ ಮನೆ ಮಾಡಿದೆ.
ಪಾಲಿಕೆ ಇರುವ ವಾರ್ಡ್ ಪ್ರತಿನಿಧಿಸುತ್ತಿರುವ ಸದಸ್ಯ ಐಡಿಯಲ್ ಗೋಪಿ ಅವರು ಈ ವಿಷಯವನ್ನು ಹಲವು ಬಾರಿ ಸಭೆಗಳಲ್ಲಿ ಪ್ರಸ್ತಾಪಿಸಿದ್ದಾರೆ. ಲಿಖಿತವಾಗಿಯೂ ಮನವಿ ಕೊಟ್ಟಿದ್ದಾರೆ. ಆದರೆ, ಫಲ ನೀಡಿಲ್ಲ.
ಯಾವತ್ತೂ ಪುರಪಿತೃಗಳ ಕಣ್ಣು ತೆರೆಯುತ್ತದೆಯೋ ಎಂದ ಜನರು ಕಾಯುತ್ತಲೇ ಇದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.