ಮೈಮರೆತರೆ ನೀರಿನ ಜತೆ ಆಮ್ಲಜನಕ ನೀಡಬೇಕಾದೀತು
ಶಿವಮೊಗ್ಗ: ಇಂದು ಪರಿಸರದ ಬಗ್ಗೆ ಕಾಳಜಿ ವಹಿಸದೇ ಇದ್ದರೆ ಮುಂದಿನ ದಿನಗಳಲ್ಲಿ ಶಾಲೆಗೆ ಹೋಗುವ ಮಕ್ಕಳಿಗೆ ನೀರಿನ ಬಾಟಲ್ ಜೊತೆಗೆ ಆಮ್ಲಜನಕ ತುಂಬಿದ ಬಾಟಲಿಯನ್ನೂ ಕಳುಹಿಸಬೇಕಾದ ಸಂದರ್ಭ ಬರಬಹುದು ಎಂದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಹಿರಿಯ ಅಧಿಕಾರಿ ಡಾ.ಆರ್. ಲಕ್ಷ್ಮೀನಾರಾಯಣ್ ಎಚ್ಚರಿಸಿದ್ದಾರೆ.
ಜವಾಹರಲಾಲ್ ನೆಹರೂ ರಾಷ್ಟ್ರೀಯ ತಾಂತ್ರಿಕ ಮಹಾವಿದ್ಯಾಲಯದ ಐಇಐ ಘಟಕದ ವತಿಯಿಂದ ಕಾಲೇಜಿನ ಅನನ್ಯ ಮಂಟಪದಲ್ಲಿ ಆಯೋಜಿಸಲಾಗಿದೆ ಟೆಕ್ಜೋನ್ 2014 ರಾಷ್ಟ್ರಮಟ್ಟದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಅಭಿವೃದ್ಧಿ ಬೇಕು. ಹಾಗೆಂದು ಅಗತ್ಯಕ್ಕಿಂತ ಅಭಿವೃದ್ಧಿಯಾದರೆ ಹೆಚ್ಚು ಆತಂಕ ಎದುರಿಸಬೇಕಾಗುತ್ತದೆ ಎಂದು ಹೇಳಿದರು.
ವಿಪರೀತವಾದ ನಗರೀಕರಣ ಪರಿಸರವನ್ನು ಅತಿಯಾಗಿ ಹಾಳು ಮಾಡುತ್ತಿದೆ. ನೈಸರ್ಗಿಕ ಸಂಪತ್ತಿನ ಬಳಕೆ ಮಿತಿಮೀರುತ್ತಿದೆ. ಈ ಬಗ್ಗೆ ಈಗಲೇ ಎಚ್ಚೆತ್ತುಕೊಳ್ಳದೇ ಇದ್ದರೆ ಭವಿಷ್ಯದ ಪೀಳಿಗೆ ಸಾಕಷ್ಟು ಸಮಸ್ಯೆ ಎದುರಿಸಬೇಕಾಗುತ್ತದೆ ಎಂದರು.
ವಾಹನಗಳಿಂದ ಹೊರಬರುವ ಕಾರ್ಬನ್ ಡೈ ಆಕ್ಸೈಡ್ನಿಂದಾಗಿ ಹೆಚ್ಚಿನ ವಾಯುಮಾಲಿನ್ಯ ಉಂಟಾಗುತ್ತಿದೆ. ಕಲ್ಲಿದ್ದಲು ಅತಿಯಾದ ಬಳಕೆಯಿಂದಾಗಿ ಪರಿಸರದ ಮೇಲೆ ಹಾನಿಯಾಗುವ ಜೊತೆಗೆ ಕಲ್ಲಿದ್ದಲು ಬಳಕೆಯಿಂದ ವಾಯು ಮಾಲಿನ್ಯ ಹೆಚ್ಚಾಗುತ್ತಿದೆ ಎಂದು ಹೇಳಿದ ಅವರು, ನೀರನ್ನು ಜೀವಜಲವೆಂದೇ ಗುರುತಿಸಲಾಗಿದೆ. ಆದರೆ ಕಾರ್ಖಾನೆಗಳಿಂದ ಹೊರಬರುವ ತ್ಯಾಜ್ಯಗಳನ್ನು ಸಂಸ್ಕರಿಸದೇ ನದಿಗಳಿಗೆ ನೇರವಾಗಿ ಬಿಡುತ್ತಿರುವುದರಿಂದ ಹೆಚ್ಚಿನ ಜಲ ಮಾಲಿನ್ಯ ಉಂಟಾಗುತ್ತಿದೆ.
ಬೆಲೆ ತೆತ್ತಬೇಕಾಗುತ್ತದೆ: ನದಿಗಳು ಕಲುಷಿತಗೊಂಡು ಬಳಕೆಗೆ ಯೋಗ್ಯವಲ್ಲದ ನೀರಿನಿಂದ ಆರೋಗ್ಯದ ಮೇಲೆಯೂ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ವಾಯುಮಾಲಿನ್ಯ, ಜಲಮಾಲಿನ್ಯ ಮುಂದುವರಿದರೆ ಮುಂದೆ ಮಾನವ ತಕ್ಕ ಬೆಲೆ ತೆರಬೇಕಾಗುತ್ತದೆ ಎಂದರು.
ಇಂದು ಎಲ್ಲೆಲ್ಲೂ ಈ- ಆಡಳಿತ ಜಾರಿಗೆ ಬರುತ್ತಿದೆ. ಇಂತಹ ಸಂದರ್ಭದಲ್ಲಿ ಇ-ತ್ಯಾಜ್ಯ ಹೆಚ್ಚು ಉತ್ಪತ್ತಿಯಾಗುತ್ತಿದೆ. ಇ-ತ್ಯಾಜ್ಯ ಎಲ್ಲಿ ಉತ್ಪತ್ತಿಯಾಗುತ್ತಿದೆಯೋ ಅಲ್ಲೇ ಅದರ ಸಂಗ್ರಹಣೆ ನಡೆಯಬೇಕು. ಅದು ಪರಿಸರಕ್ಕೆ ಬಂದರೆ ಹಾನಿ ಹೆಚ್ಚು ಎಂದು ಹೇಳಿದ ಅವರು, ಇ-ತ್ಯಾಜ್ಯ ಮರುಬಳಕೆಗೂ ಸಾಕಷ್ಟು ಅವಕಾಶವಿದೆ ಎಂದು ಅಭಿಪ್ರಾಯಪಟ್ಟರು.
ಪರಿಸರ ಎಂಬುವುದು ನಮ್ಮ ಜೀವನ, ಅದೇ ಭವಿಷ್ಯ ಎಂಬುದನ್ನು ವಿದ್ಯಾರ್ಥಿಗಳು ಅರಿತು, ಪ್ಲಾಸ್ಟಿಕ್ ಮುಕ್ತ ಕ್ಯಾಂಪಸ್, ಪಾಸ್ಟಿಕ್ ಮುಕ್ತ ನಗರ, ಇ ತ್ಯಾಜ್ಯ ನಿರ್ವಹಣೆ, ಕಾರ್ ಪೂಲಿಂಗ್ ಸೇರಿದಂತೆ ಪರಿಸರ ಸ್ನೇಹಿ ನಿರ್ಧಾರಗಳನ್ನು ಕೈಗೊಳ್ಳಬೇಕೆಂದು ಸಲಹೆ ನೀಡಿದರು.
ಎನ್ಇಎಸ್ ಕಾರ್ಯದರ್ಶಿ ಎನ್.ಟಿ. ನಾರಾಯಣ ರಾವ್, ಖಜಾಂಚಿ ಅಶ್ವತ್ಥ ನಾರಾಯಣ ಶೆಟ್ಟಿ, ಸ್ವತಂತ್ರ್ಯ ಹೋರಾಟಗಾರ ಶ್ರೀರಂಗಯ್ಯ, ಡಾ. ವೈ.ಜೆ. ಯೋಗೇಶ್, ರಮ್ಯ, ಸುಮುಖ ಮತ್ತಿತರರು ಉಪಸ್ಥಿತರಿದ್ದರು. ಡಾ. ಶ್ರೀನಿವಾಸ್ರಾವ್ ಕುಂಟೆ ಅಧ್ಯಕ್ಷತೆ ವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

