ಆಯನೂರು ಸಂತೆಯಲ್ಲಿ ಸೂಕ್ತ ಸೌಲಭ್ಯ ಕಲ್ಪಿಸಿ
ಆಯನೂರಿನ ಸಂತೆ ಮಾರುಕಟ್ಟೆಯಲ್ಲಿ ಶೌಚಾಲಯ ಇಲ್ಲದೇ ಇರುವುದು ಜನರಿಗೆ ಬಹಳ ತೊಂದರೆಯಾಗಿದೆ. ಸುಮಾರು ಸಾವಿರಾರು ಸಂಖ್ಯೆಯಲ್ಲಿ ಜನರು ಇಲ್ಲಿಗೆ ಬರುತ್ತಾರೆ. ಈ ಮಾರುಕಟ್ಟೆಗೆ ದೂರದೂರುಗಳಿಂದ ತರಕಾರಿಗಳನ್ನು ಮಾರಲು ಮಾರಾಟಗಾರರು ಹಾಗೂ ಕೊಳ್ಳಲು ಜನತೆ ಆಗಮಿಸುತ್ತಾರೆ. ಸುತ್ತಮುತ್ತಲಿನ ಹತ್ತಾರು ಹಳ್ಳಿಗಳಲ್ಲಿ ಇದೇ ದೊಡ್ಡ ಮಾರುಕಟ್ಟೆಯಾಗಿದೆ. ಇಲ್ಲಿಗೆ ಬರುವವರು ಮೂತ್ರ ವಿಸರ್ಜನೆಗೆ ಪರದಾಡುವಂತಾಗಿದೆ. ಏಷ್ಟೋ ವೇಳೆ ಮಹಿಳೆಯರು ಮುಜುಗರಕ್ಕೆ ಈಡಾದ ಘಟನೆಗಳು ನಡೆದಿವೆ. ಹೀಗಾಗಿ ಗ್ರಾಮ ಪಂಚಾಯಿತಿ ಅಥವಾ ಜಿಲ್ಲಾ ಪಂಚಾಯಿತಿಯವರು ಇಲ್ಲಿ ಶೌಚಾಲಯ ನಿರ್ಮಿಸಲು ಅಗತ್ಯಕ್ರಮಕೈಗೊಳ್ಳಬೇಕು.
ಗೋದಾವರಿ, ವ್ಯಾಪಾರಿ
ಚಿಕನ್ ಸ್ಟಾಲ್ ಬೇಡ
ಶಿವಮೊಗ್ಗದ ಎ.ಎನ್.ಕೆ ಮುಖ್ಯ ರಸ್ತೆ 1ನೇ ಅಡ್ಡ ರಸ್ತೆಯಲ್ಲಿ ಹೊಸದಾಗಿ ಕೋಳಿ ಅಂಗಡಿ ಸ್ಥಾಪಿಸಲು ಅನುವು ಮಾಡಿಕೊಡಬಾರದು. ಹೊಸದಾಗಿ ಕಸಾಯಿ ಖಾನೆ ಪ್ರಾರಂಭಕ್ಕೆ ಪ್ರಯತ್ನಗಳು ನಡೆದಿವೆ ಎಂಬ ಮಾಹಿತಿ ಇದೆ. ಈ ಮಳಿಗೆ ಆರಂಭವಾಗುವ ಅಕ್ಕಪಕ್ಕದಲ್ಲಿ ವಾಸದ ಮನೆಗಳು ಸಾಕಷ್ಟಿವೆ. ಇಂತಹ ಪ್ರದೇಶದಲ್ಲಿ ಕಸಾಯಿಖಾನೆಯಾದರೆ ಕಸದ ರಾಶಿ ಹೆಚ್ಚಾಗಿ ಕಾಗೆಗಳ ಅಬ್ಬರ ಹೆಚ್ಚಾಗುವ ಜೊತೆಗೆ ಸಾಕಷ್ಟು ತೊಂದರೆಯಾಗುತ್ತದೆ. ಈಗಾಗಲೇ ಸುತ್ತಮುತ್ತ 3 ಅಂಗಡಿಗಳಿದ್ದು, ಮತ್ತೊಂದು ಅಂಗಡಿಗೆ ಯಾವುದೇ ಕಾರಣಕ್ಕೂ ಅವಕಾಶ ಮಾಡಿಕೊಡಬಾರದು.
19ನೇ ವಾರ್ಡಿನ ನಾಗರಿಕರು
ಸಿಟಿ ಬಸ್ಗಳಿಗೆ ಶಿಸ್ತು ಬರಲಿ
ನಗರದಲ್ಲಿ ಸಂಚರಿಸುವ ನಗರ ಸಾರಿಗೆ ಬಸ್ಗಳು ಶಿಸ್ತು ಕಾಪಾಡುತ್ತಿಲ್ಲ. ರಸ್ತೆಯ ಮಧ್ಯದಲ್ಲಿಯೇ ನಿಲ್ಲಿಸಿ ಪ್ರಯಾಣಿಕರನ್ನು ಹತ್ತಿಸಿಕೊಳ್ಳುವ ಮತ್ತು ಇಳಿಸುವ ಕಾರ್ಯಮಾಡುತ್ತವೆ. ಇದರಿಂದ ಬಸ್ ಹಿಂದೆ- ಮುಂದೆ ಬರುವ ವಾಹನಗಳಿಗೆ ಸಾಕಷ್ಟು ತೊಂದರೆಯಾಗುತ್ತಿವೆ. ಅನೇಕ ಸಂದರ್ಭದಲ್ಲಿ ಅಪಘಾತಕ್ಕೂ ಕಾರಣವಾಗುತ್ತಿದೆ. ಇಷ್ಟೇ ಅಲ್ಲದೇ ಸಮಯ ಪರಿಪಾಲನೆ ಹೆಸರಿನಲ್ಲಿ ಮತ್ತು ಜನರನ್ನು ತುಂಬಿಸಿಕೊಂಡು ಹೋಗುವ ಉದ್ದೇಶದಿಂದ ಕೆಲವೆಡೆ ಅತಿ ಕನಿಷ್ಠ ವೇಗದಲ್ಲಿ ಸಂಚರಿಸುತ್ತಿವೆ. ಸಿಟಿಬಸ್ಗಳ ಈ ಸಮಸ್ಯೆ ಬಗ್ಗೆ ಪೊಲೀಸ್ ಇಲಾಖೆಗೆ ತಿಳಿದಿದ್ದರೂ ಮೌನವೇಕೆ ಎಂಬುದು ಅರ್ಥವಾಗುತ್ತಿಲ್ಲ. ಮಾನ್ಯ ರಕ್ಷಣಾಧಿಕಾರಿಯವರು ಒಮ್ಮೆ ಸಿಟಿಬಸ್ನಲ್ಲಿ ಪ್ರಯಾಣಿಸಿ ಸಮಸ್ಯೆ ಅರಿತುಕೊಂಡರೆ ಒಳಿತು.
ಸಿ.ರವಿ, 2ನೇ ಹಂತ,
ವಿನೋಬನಗರ
ರಸ್ತೆ ದುರಸ್ತಿಪಡಿಸಿ
20 ವರ್ಷಗಳಿಂದಲೂ ಗುಣಾತ್ಮಕವಾದ ಪ್ರಾಮಾಣಿಕ ಆರೈಕೆ ಇಲ್ಲದೆ ನಗರದ ಸ್ವಾಮಿ ವಿವೇಕಾನಂದ ಬಡಾವಣೆಯ ಸಂಪರ್ಕ 80 ಅಡಿ ರಸ್ತೆ ಒಂದಿಲ್ಲೊಂದು ರೀತಿಯಲ್ಲಿ ಬಾಧೆಗೆ ಒಳಗಾಗುತ್ತಲೇ ಬಂದಿದೆ. ದುರಸ್ತಿ ಕಾಣದ ರಸ್ತೆಗಳು, ಹಸಿರೀಕರಣವಿಲ್ಲದೆ ಅನಾಥ ಬಡಾವಣೆ ಆಗಿದೆ. ವಿದ್ಯಾರ್ಥಿಗಳು, ವೃದ್ಧರು, ವಾಯುವಿಹಾರಿಗಳು, ಸಾರ್ವಜನಿಕರು, ದ್ವಿಚಕ್ರ ವಾಹನ, ಸೈಕಲ್ ಸವಾರರು ನೂರಾರು ಸಂಖ್ಯೆಯಲ್ಲಿ ನಿತ್ಯ ಓಡಾಡುತ್ತಲೇ ಇರುತ್ತಾರೆ. ಇಂತಹ ಬಹು ಉಪಯೋಗಿ ರಸ್ತೆ ದುರಸ್ತಿ ಕಾರ್ಯ 3-4 ತಿಂಗಳಿಂದಲೂ ನಡೆಯುತ್ತಿದೆ.
ಡಾಂಬರಿಕರಣವಾಗದೆ ಬೇಬಿ ಜೆಲ್ಲಿಯ ಹೊದಿಕೆಯಲ್ಲಿಯೇ ಮಲಗಿದೆ. ಇದರಿಂದ ಬಡಾವಣೆ ನಿವಾಸಿಗಳಿಗೆ, ವಾಹನ ಸವಾರರಿಗೆ ಸಂಕಟ ಎದುರಾಗಿದೆ. ಆರೈಕೆ ಇಲ್ಲದ ರಸ್ತೆಯನ್ನು ದುರಸ್ತಿ ಮಾಡಿಸಲು ಸಂಬಂಧಪಟ್ಟವರು ಕ್ರಮ ಕೈಗೊಳ್ಳಬೇಕು. ಹಾಗೆಯೇ ಗುಣಮಟ್ಟಕ್ಕೆ ಆದ್ಯತೆ ಸಿಗುವಂತೆ ನೋಡಿಕೊಳ್ಳಬೇಕು.
ಕೆ.ಈಶ್ವರಯ್ಯ,
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

