ಶಿವಮೊಗ್ಗ

ಜೆಡಿಎಸ್ ಗೀತಾ ಸೈ ಅಂದ್ರೆ, ಕುಮಾರ್‌ಗೆ 'ಕೈ' ಕೊಡುತ್ತಾ?

Published On :

ಕ.ಪ್ರ.ವಾರ್ತೆ ಟಿ ಶಿವಮೊಗ್ಗ ಟಿ ಮಾ.12
ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಗೀತಾ ಶಿವರಾಜ್‌ಕುಮಾರ್ ಜೆಡಿಎಸ್ ಅಭ್ಯರ್ಥಿ ಆಗುವ ಲಕ್ಷಣ ಗೋಚರಿಸುತ್ತಿದ್ದಂತೆ ಮಾಜಿ ಸಚಿವ, ಗೀತಾ ಸಹೋದರ ಕುಮಾರ್ ಬಂಗಾರಪ್ಪ ಅವರಿಗೆ ಕಾಂಗ್ರೆಸ್ ಟಿಕೆಟ್ ಅನುಮಾನ ಎಂಬ ವಾತಾವರಣ ಕಾಂಗ್ರೆಸ್ ವಲಯದಲ್ಲಿ ಸೃಷ್ಟಿಯಾಗಿದೆ.
ಇನ್ನೊಂದೆಡೆ ಗೀತಾ ಶಿವರಾಜ್‌ಕುಮಾರ್ ಅವರಿಗೆ ಟಿಕೆಟ್ ಎಂದು ಜೆಡಿಎಸ್ ಹೇಳುತ್ತಿದ್ದೆ. ಗೀತಾ ಪತಿ ನಟ ಶಿವರಾಜ್‌ಕುಮಾರ್ ಸಹ ಸ್ಪರ್ಧಿ ಆಗುವುದರಲ್ಲಿ ತಪ್ಪೇನಿಲ್ಲ ಎಂದು ಹೇಳಿದ್ದಾರಾದರೂ ಖಚಿತತೆ ಇಲ್ಲ. ಮಾ.17 ರಂದು ನಿರ್ಧಾರ ಆಗಬಹುದು ಎಂಬ ಮಾತು ಕೇಳಿಬಂದಿದೆ. ಹೀಗಾಗಿ, ಕಾಂಗ್ರೆಸ್ ಕೂಡ ತನ್ನ ಅಭ್ಯರ್ಥಿಯನ್ನು ನಿಶ್ಚಯಿಸಲು ಹೆಣಗುತ್ತಿದೆ.
ಒಂದೊಮ್ಮೆ ಗೀತಾ ಶಿವರಾಜ್‌ಕುಮಾರ್ ಜೆಡಿಎಸ್ ಅಭ್ಯರ್ಥಿಯಾದರೆ ತಾನು ಕುಮಾರ್ ಬಂಗಾರಪ್ಪ ಬದಲಾಗಿ ಬೇರೆ ಸಮರ್ಥ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಕಾಂಗ್ರೆಸ್ ಆಸಕ್ತಿ ತೋರಿದೆ. ಈ ಹಿನ್ನೆಲೆ ಕಾಂಗ್ರೆಸ್ ಅಭ್ಯರ್ಥಿ ಘೋಷಣೆಗೆ ಹಿನ್ನೆಡೆ ಆಗುತ್ತಿದೆ ಎಂಬ ಮಾತು ಕೇಳಿಬಂದಿದೆ.
ಈಡಿಗ ಮತಗಳ ಮೇಲೆ ಗಮನ:  ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಈಡಿಗ ಸಮುದಾಯದ ಮತಗಳು ದೊಡ್ಡ ಸಂಖ್ಯೆಯಲ್ಲಿಯೇ ಇದೆ. ಇದನ್ನು ಕೇಂದ್ರೀಕರಿಸಿಕೊಂಡು ಜೆಡಿಎಸ್ ಹಾಗೂ ಕಾಂಗ್ರೆಸ್ ರಾಜಕೀಯ ತಂತ್ರಗಾರಿಕೆ ರೂಪಿಸುತ್ತಿರುವುದು ಮುಚ್ಚಿಟ್ಟ ವಿಷಯವೇನಲ್ಲ.
ಹೀಗಾಗಿ, ಒಂದೊಮ್ಮೆ ಕೊನೆ ಹಂತದಲ್ಲಿ ಗೀತಾ ಶಿವರಾಜ್‌ಕುಮಾರ್ ಸರ್ಧೆಯಿಂದ ಹಿಂದೆ ಸರಿದರೆ ಕುಮಾರ್ ಬಂಗಾರಪ್ಪ ಅವರಿಗೆ ಟಿಕೆಟ್ ಪಕ್ಕಾ ಆಗಲಿದೆ ಎಂಬುದು ರಾಜಕೀಯ ಪಂಡಿತರು ವಿಶ್ಲೇಷಿಸುತ್ತಾರೆ.
ಸಹೋದರನ ಮಣಿಸಲು ಹೋರಾಟವೇ:  ಕಳೆದ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಸಹೋದರ ಕುಮಾರ್ ಬಂಗಾರಪ್ಪ ಅವರನ್ನು ಹಣಿದ ಮಧು ಬಂಗಾರಪ್ಪ, ಈ ಚುನಾವಣೆಯಲ್ಲಿ ಕುಮಾರ್ ಬಂಗಾರಪ್ಪ ಅವರನ್ನು ಕಣದಲ್ಲಿ ಇರದಂತೆ ನೋಡಿಕೊಳ್ಳುವ ಮೂಲಕ ಸಂಪೂರ್ಣವಾಗಿ ಅವರನ್ನು ಮೂಲೆಗುಂಪು ಮಾಡುವ ತಂತ್ರಗಾರಿಕೆ ಹೊಂದಿದ್ದಾರೆ ಎಂಬ ವಿಷಯ ಗುಟ್ಟಾಗಿ ಉಳಿದಿಲ್ಲ.
ಸೊರಬದಲ್ಲಿ ಪದೇ ಪದೇ ರಾಜಕೀಯ ಹಿನ್ನೆಡೆ ಅನುಭವಿಸಿದ ಕುಮಾರ್ ಬಂಗಾರಪ್ಪ ಅವರಿಗೆ ಈ ಲೋಕಸಭಾ ಚುನಾವಣೆ ಮಹತ್ವದ್ದೇ. ತಮ್ಮ ರಾಜಕೀಯ ಅಸ್ತಿತ್ವ ಕಾಪಾಡಿಕೊಳ್ಳಬೇಕೆಂದರೆ ಈ ಚುನಾವಣೆಯಲ್ಲಿ ಟಿಕೆಟ್ ಪಡೆಯುವ ಜೊತೆಗೆ ಯಶಸ್ಸು ಗಳಿಸಬೇಕಾಗಿದೆ. ಇಲ್ಲವಾದರಲ್ಲಿ ರಾಜಕೀಯ ಭವಿಷ್ಯ ಕಷ್ಟಕರ ಆಗಲಿದೆ ಎಂಬ ಅರಿವು ಅವರಿಗೂ ಇದೆ. ಈ ಅಂಶ ಮಧು ಬಂಗಾರಪ್ಪ ಅವರಿಗೂ ಸಹ ಗೊತ್ತಿದ್ದಿದ್ದೇ.
ಹೀಗಾಗಿ ಗೀತಾ ಅವರನ್ನು ಕಣಕ್ಕಿಳಿಸುವ ಮೂಲಕ ಕುಮಾರ್ ಬಂಗಾರಪ್ಪ ಹಾದಿಯನ್ನು ಮಸುಕು ಮಾಡುವ ಹುನ್ನಾರ ಮಧು ಬಂಗಾರಪ್ಪ ಅವರದ್ದು. ಹಾಗೆಯೇ ಕುಮಾರ್ ಬಂಗಾರಪ್ಪ ಅವರೇನು ಸುಮ್ಮನೇ ಕುಳಿತಿಲ್ಲ. ತಮ್ಮೆಲ್ಲಾ ಸಾಮರ್ಥ್ಯವನ್ನು ಓರೆಗೆ ಹಚ್ಚಿದ್ದಲ್ಲದೇ ತಮ್ಮ ರಾಜಕೀಯ ಗುರು ಬಂಗಾರಪ್ಪ ಅವರಿಂದ ಕಲಿತ ಪಟ್ಟುಗಳನ್ನು ಪ್ರಯೋಗಿಸುತ್ತಿದ್ದಾರೆ.
ಒಟ್ಟಾರೆ ಸಹೋದರರ ನಡುವಿನ ರಾಜಕೀಯ ಚದುರಂಗದಾಟದಲ್ಲಿ ಜೆಡಿಎಸ್ ಕಾಂಗ್ರೆಸ್ ಪಗಡೆ ಕಾಯಿಗಳಾಗಿವೆ ಎಂಬುದರಲ್ಲಿ ಎರಡು ಮಾತಿಲ್ಲ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.