ವರ್ಗಾವಣೆಗೆ ಶಿಫಾರಸು ತಂದರೆ ಮುಲಾಜಿಲ್ಲದೇ ಕ್ರಮ!
ಶ್ರೀಕಾಂತ ಭಟ್
ಕ.ಪ್ರ. ವಾರ್ತೆ, ಶಿವಮೊಗ್ಗ, ಮಾ.12
ಕಾಲೇಜು ಶಿಕ್ಷಣ ಇಲಾಖೆಯಲ್ಲಿನ್ನು ವರ್ಗಾವಣೆಗೆ ಒತ್ತಡ ತಂದರೆ, ಕಾನೂನಾತ್ಮಕ ಕ್ರಮ ಗ್ಯಾರಂಟಿ!
ಈ ಸಂಬಂಧ ಕಾಲೇಜು ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿ, ವರ್ಗಾವಣೆಗೆ ಒತ್ತಡ ತಂದರೆ ಅಂಥವರ ವಿರುದ್ಧ ಯಾವುದೇ ಮುಲಾಜಿಲ್ಲದೇ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದೆ.
ವರ್ಗಾವಣೆಗೆ ರಾಜಕಾರಣಿಗಳು, ಧಾರ್ಮಿಕ ಮುಖಂಡರು, ಸಂಘಟನೆಗಳ ಮುಖಂಡರು ಹೀಗೆ ಬೇರೆ ಬೇರೆ ಕ್ಷೇತ್ರದ ಗಣ್ಯರೆನಿಸಿಕೊಂಡವರಿಂದ ಶಿಫಾರಸು ಮಾಡಿಸುವುದು ಮಾಮಾಲಾಗಿತ್ತು. ಇದಕ್ಕೆ ಬ್ರೇಕ್ ಹಾಕಲು ಕಾಲೇಜ್ ಶಿಕ್ಷಣ ಇಲಾಖೆ ಈಗ ನಿರ್ಧರಿಸಿದೆ.
ಸುತ್ತೋಲೆ ಹೊರಡಿಸಿದ್ದಷ್ಟೇ ಅಲ್ಲದೆ, ಬೆಂಗಳೂರು, ಮೈಸೂರು, ಮಂಗಳೂರು, ಶಿವಮೊಗ್ಗ, ಧಾರವಾಡ ಹಾಗೂ ಗುಲ್ಬರ್ಗ ಪ್ರಾದೇಶಿಕ ಜಂಟಿ ನಿರ್ದೇಶಕರಿಗೆ ಈ ಸಂಬಂಧ ನಿರ್ದೇಶಕರು ನಿರ್ದೇಶನ ನೀಡಿದ್ದಾರೆ. ಎಲ್ಲ ಖಾಸಗಿ ಅನುದಾನಿತ ಕಾಲೇಜುಗಳ ಬೋಧಕ ಹಾಗೂ ಪ್ರಾಂಶುಪಾಲರಿಗೆ ಸುತ್ತೋಲೆ ಹೊರಡಿಸುವ ಮೂಲಕ ಗಮನಕ್ಕೆ ತರಲು ಕಾಲೇಜು ಶಿಕ್ಷಣ ಇಲಾಖೆ ನಿರ್ದೇಶಕರು ಸೂಚಿಸಿದ್ದಾರೆ.
ಸುತ್ತೋಲೆಯಲ್ಲಿ ಏನಿದೆ? ಕಾಲೇಜು ಶಿಕ್ಷಣ ಇಲಾಖೆ ವ್ಯಾಪ್ತಿಗೆ ಒಳಪಡುವ ಎಲ್ಲಾ ಖಾಸಗಿ ಅನುದಾನಿತ ಪದವಿ ಕಾಲೇಜುಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲಾ ಬೋಧಕ ಸಿಬ್ಬಂದಿಗೆ ಈ ಆದೇಶದ ಮೂಲಕ ಎಚ್ಚರಿಕೆ ನೀಡಲಾಗಿದೆ.
ಮರು ಹಂಚಿಕೆ ಸಂಬಂಧಿಸಿದಂತೆ ಜನಪ್ರತಿನಿಧಿಗಳಿಂದ ಹಾಗೂ ಇತರೆ ಮೂಲಗಳಿಂದ ಶಿಫಾರಸು ಪತ್ರ ಸಲ್ಲಿಸುವುದು ಅಥವಾ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಿಸುವ ಮೂಲಕ ರಾಜಕೀಯ ಒತ್ತಡ ತರುವುದು ಸಾಮಾನ್ಯ ಪ್ರವೃತ್ತಿಯಾಗಿದೆ.
ಈ ಪ್ರವೃತ್ತಿಯಿಂದ ಮುಜುಗರ ಒಳಗಾಗುವುದು ಒಂದೆಡೆಯಾದರೆ, ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತಿದೆ. ಹಾಗೂ ಕಚೇರಿಗಳಲ್ಲಿ ಸುಗಮ ಆಡಳಿತ ಮೇಲೆ ಪರಿಣಾಮ ಬೀರುತ್ತಿದೆ. ಈ ಕಾರಣದಿಂದ ಇಲಾಖೆಯು ಗಂಭೀರವಾಗಿ ಪರಿಗಣಿಸಿದೆ. ಇಲಾಖೆ ಶೈಕ್ಷಣಿಕ ಹಾಗೂ ಆಡಳಿತ ಹಿತದೃಷ್ಟಿಯಿಂದ ಇನ್ನು ಮುಂದೆ ವರ್ಗಾವಣೆ, ಮರುಹಂಚಿಕೆ (ರಿಡಿಪ್ಲಾಯ್ಮೆಂಟ್) ಹೊಂದಲು ಅರ್ಜಿ ಸಲ್ಲಿಸುವ ಬೋಧಕ ಸಿಬ್ಬಂದಿ, ಆಡಳಿತ ಮಂಡಳಿಯು ತಮ್ಮ ಅರ್ಜಿಯನ್ನು ಸಂಬಂಧಪಟ್ಟ ಪ್ರಾದೇಶಿಕ ಜಂಟಿ ನಿರ್ದೇಶಕರ ಮುಖಾಂತರ ಸಂಬಂಧಪಟ್ಟ ಸಂಪೂರ್ಣ ದಾಖಲೆಗಳೊಂದಿಗೆ ಸಲ್ಲಿಸಬೇಕು. ನೇರವಾಗಿ ಅರ್ಜಿಗಳನ್ನು ಯಾವುದೇ ಕಾರಣಕ್ಕೂ ಪರಿಗಣಿಸಲಾಗುವುದಿಲ್ಲವೆಂದು ತಿಳಿಸಲಾಗಿದೆ.
ಇನ್ನು ಮುಂದೆ ವರ್ಗಾವಣೆ, ಮರು ಹಂಚಿಕೆ ಹೊಂದಲು ಅರ್ಜಿ ಸಲ್ಲಿಸುವ ಬೋಧಕ, ಬೋಧಕೇತರ ಸಿಬ್ಬಂದಿ ಯಾವುದೇ ರೀತಿಯ ರಾಜಕೀಯ ಒತ್ತಡ ತಂದಲ್ಲಿ ಸಿಬ್ಬಂದಿ ಅಥವಾ ಆಡಳಿತ ಮಂಡಳಿ ವಿರುದ್ಧ ಕರ್ನಾಟಕ ಶಿಕ್ಷಣ ಸಂಸ್ಥೆಗಳು (ಕಾಲೇಜು ಶಿಕ್ಷಣ) ನಿಯಮ 2003ರ ಅನ್ವಯ ಕಠಿಣ ಶಿಸ್ತು ಕ್ರಮಕೈಗೊಳ್ಳಲಾಗುವುದು.
ಅಧಿಕಾರಿಗಳು ಹೇಳೋದೇನೊ? ಈ ಆದೇಶ ಕುರಿತು ಪ್ರತಿಕ್ರಿಯೆ ನೀಡಿರುವ ಇಲಾಖೆಯ ಹಿರಿಯ ಅಧಿಕಾರಿಗಳು, ವರ್ಗಾವಣೆ, ಮರುಹಂಚಿಕೆ ವಿಚಾರವಾಗಿ ಸ್ವಾಮೀಜಿಗಳು, ಧಾರ್ಮಿಕ ಮುಖಂಡರು, ರಾಜಕಾರಣಿಗಳಿಂದ ಶಿಫಾರಸು ಮಾಡಿಸುತ್ತಾರೆ. ಕೆಲವರು ಪತ್ರ ತಂದರೆ ಮತ್ತೆ ಕೆಲವು ದೂರವಾಣಿ ಮೂಲಕ ಮಾತನಾಡಿಸುತ್ತಾರೆ. ಇದರಿಂದ ಹಿರಿಯ ಅಧಿಕಾರಿಗಳು ಸಹಜವಾಗಿ ಮುಜುಗರಕ್ಕೆ ಒಳಗಾಗಬೇಕಾಗುತ್ತದೆ. ಇನ್ನೊಂದೆಡೆ ಶಿಫಾರಸಿಗೆ ಕಟ್ಟುಬಿದ್ದು ವರ್ಗಾವಣೆ ಅಥವಾ ಮರು ಹಂಚಿಕೆ ಮಾಡಿದರೆ, ವಿದ್ಯಾರ್ಥಿಗಳ ಮೇಲೆ ಪರಿಣಾಮ ಬೀರುತ್ತದೆ. ಈ ಹಿನ್ನೆಲೆಯಲ್ಲಿ ಆದೇಶ ಮಹತ್ವದ್ದಾಗಿದೆ ಎಂದು ವಿವರಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

