ಸಮಾಜವಾದಿ ನೆಲದಲ್ಲಿ ಬೇರುಬಿಟ್ಟ ಕಾಂಗ್ರೆಸ್ ಕಿತ್ತ ಬಿಜೆಪಿ
ಟಿ ಹೊನ್ನಾಳಿ ಚಂದ್ರಶೇಖರ್
ಕ.ಪ್ರ.ವಾರ್ತೆ ಟಿ ಶಿವಮೊಗ್ಗ ಟಿ ಮಾ.12
ಸಮಾಜವಾದಿ ಪ್ರಭಾವದ ನೆಲವಿದು. ಆದನ್ನೂ ಮೀರಿ ಕಾಂಗ್ರೆಸ್ ಬಹುವರ್ಷ ಬಾವುಟ ಹಾರಿಸಿತ್ತು. ಈ ನಡುವೆ ಒಮ್ಮೆ ಸೋಷಿಯಲಿಸ್ಟ್ ಪಕ್ಷವು ಛಾಪು ಮೂಡಿಸಿತ್ತು. 2 ಬಾರಿ ಬಿಜೆಪಿಗೂ ಸಹ ಶಿವಮೊಗ್ಗ ಲೋಕಸಭೆ ಕ್ಷೇತ್ರದ ಮತದಾರರು ಅವಕಾಶ ಮಾಡಿಕೊಟ್ಟಿದ್ದಾರೆ.
ಮೇಲ್ನೋಟಕ್ಕೆ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಚುನಾವಣಾ ಇತಿಹಾಸದ ಸ್ಥೂಲ ನೋಟವಿದು. ಆದರೆ ಅಂತರಂಗದಲ್ಲಿ ಅನೇಕ ಒಳಸುಳಿಗಳಿವೆ.
ಸ್ವಾತಂತ್ರ್ಯಾನಂತರ ನಡೆದ ಮೊದಲ ಚುನಾವಣೆಯಲ್ಲಿ ಮತದಾರರು ವಿಧಾನಸಭೆಗೆ ಹಲವು ಸಮಾಜವಾದಿ ಪಕ್ಷದ ಶಾಸಕರನ್ನು ಗೆಲ್ಲಿಸಿ ಕಳಿಸಿದರು. ಆದರೆ, ಲೋಕಸಭೆಯಲ್ಲಿ ಕಾಂಗ್ರೆಸ್ಸನ್ನೇ ಬೆಂಬಲಿಸಿದರು. ಒಮ್ಮೆ ಹೊರತುಪಡಿಸಿ 1991ರ ಚುನಾವಣೆವರೆಗೂ ಈ ಕ್ಷೇತ್ರ ಕಾಂಗ್ರೆಸ್ ಪಕ್ಷದ ಭದ್ರಕೋಟೆ. ಆದರೆ, ಯಾವಾಗ ಸಾರೇಕೊಪ್ಪ ಬಂಗಾರಪ್ಪ ಅವರು ರಾಜೀವ್ ಗಾಂಧಿ ಅವರ ವಿರುದ್ಧ ಸಿಡಿದೆದ್ದು ಹೊಸ ಪಕ್ಷವನ್ನು ಕಟ್ಟಿದರೋ ಕ್ಷೇತ್ರದ ಇತಿಹಾಸ ಮಗ್ಗುಲು ಬದಲಾಯಿಸಿತು. ಕರ್ನಾಟಕ ಜನತಾ ಪಕ್ಷದ ಅಭ್ಯರ್ಥಿಯಾಗಿ ಗೆದ್ದು ಲೋಕಸಭೆಗೆ ಹೋದರು. ಬಂಗಾರಪ್ಪ ಅವರು 4 ಬಾರಿ ಈ ಕ್ಷೇತ್ರದಿಂದ ಗೆದ್ದಿದ್ದು, ಪ್ರತಿ ಬಾರಿಯೂ ಬೇರೆಬೇರೆ ಪಕ್ಷದಿಂದಲೇ ಲೋಕಸಭೆ ಪ್ರವೇಶಿಸಿದ್ದು ಇತಿಹಾಸ.
ಈ ನಡುವೆ 1962 ರಲ್ಲಿ ಒಮ್ಮೆ ಸಂಯುಕ್ತ ಸೋಷಿಯಲಿಸ್ಟ್ ಪಕ್ಷದಿಂದ ಜೆ.ಎಚ್. ಪಟೇಲರು ಗೆದ್ದು, ಲೋಕಸಭೆಯಲ್ಲಿ ಮೊಟ್ಟಮೊದಲ ಬಾರಿ ಕನ್ನಡದಲ್ಲಿಯೇ ಮಾತನಾಡಿ ಇತಿಹಾಸ ಸೃಷ್ಟಿಸಿದರು.
ಕಾಂಗ್ರೆಸ್ಗೆ ಪೆಟ್ಟು: ಕಾಂಗ್ರೆಸ್ ಹಾಗೂ ಸೋಷಿಯಲಿಸ್ಟ್ ಮುಖಂಡರ ಆಡಂಬೋಲವಾಗಿದ್ದ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಇವರಿಗೆ ಮೊದಲ ಪೆಟ್ಟು ಬಿದ್ದಿದ್ದು 1998ರಲ್ಲಿ. ಹಲವು ಪಕ್ಷದಿಂದ ಕಣಕ್ಕಿಳಿಯುತ್ತಿದ್ದ ಬಂಗಾರಪ್ಪ ಅವರು ಅಂದು ಕರ್ನಾಟಕ ವಿಕಾಸ ಪಕ್ಷದಿಂದ ನಿಂತಿದ್ದರು. ಡಿ.ಬಿ. ಚಂದ್ರೇಗೌಡ ಅವರು ಕಾಂಗ್ರೆಸ್ ಅಭ್ಯರ್ಥಿಯಾಗಿದ್ದರು. ಆದರೆ, ಜೈಂಟ್ ಕಿಲ್ಲರ್ ಎನಿಸಿದ ಬಿಜೆಪಿಯ ಆಯನೂರು ಮಂಜುನಾಥ್ ಅವರು ದೊಡ್ಡ ಅಂತರದಿಂದ ಗೆದ್ದು ಲೋಕಸಭೆ ಪ್ರವೇಶಿಸಿದರು.
2004ರ ಚುನಾವಣೆ ಬಿಜೆಪಿ ಪಾಲಿನ ಮೈಲಿಗಲ್ಲು. ಎಲ್ಲರನ್ನು ಅಚ್ಚರಿಗೂಳಿಸಿ ಎಸ್.ಬಂಗಾರಪ್ಪ ಅವರು ಬಿಜೆಪಿ ಟಿಕೆಟ್ ಪಡೆದು ಕಣಕ್ಕಿಳಿದು ಗೆದ್ದರು. ಆದರೆ, ಬಹುದಿನ ಈ ಪಕ್ಷದಲ್ಲಿ ಉಳಿಯಲಿಲ್ಲ. ಒಂದೂವರೆ ವರ್ಷದಲ್ಲೇ ರಾಜಿನಾಮೆ ಕೊಟ್ಟು, ಸಮಾಜವಾದಿ ಪಕ್ಷದಿಂದ ಸ್ಪರ್ಧಿಸಿ ಗೆದ್ದರು.
ಮುಂದಿನ ಚುನಾವಣೆ ಬಂಗಾರಪ್ಪ ಪಾಲಿಗೆ ಸಿಹಿಯಾಗಿರಲಿಲ್ಲ. 2009ರಲ್ಲಿ ಬಿ.ಎಸ್. ಯಡಿಯೂರಪ್ಪ ಅವರ ಪುತ್ರ ಬಿ.ವೈ. ರಾಘವೇಂದ್ರ ಅವರು ನೇರ ಹಣಾಹಣಿಯಲ್ಲಿ ಎಸ್.ಬಂಗಾರಪ್ಪ ಅವರನ್ನು ಸೋಲಿಸಿದರು. ಈ ಬಾರಿ ಮತ್ತೆ ಚುನಾವಣೆ ಬಂದಿದೆ. ಒಂದು ಉಪಚುನಾವಣೆಯೂ ಸೇರಿ ನಡೆದಿರುವ 16 ಚುನಾವಣೆಯಲ್ಲಿ 10 ಬಾರಿ ಕಾಂಗ್ರೆಸ್, 3 ಬಾರಿ ಬಿಜೆಪಿ, ಒಮ್ಮೆ ಸೋಷಿಯಲಿಸ್ಟ್ ಪಕ್ಷ, ಒಮ್ಮೆ ಸಮಾಜವಾದಿ ಪಕ್ಷ, ಒಮ್ಮೆ ಕೆಸಿಪಿ ಅಭ್ಯರ್ಥಿಗಳು ಜಯ ಗಳಿಸಿದ್ದಾರೆ. ಎಸ್.ಬಂಗಾರಪ್ಪ 4 ಬಾರಿ, ಟಿ.ವಿ. ಚಂದ್ರಶೇಖರಪ್ಪ 3 ಬಾರಿ, ಕೆ.ಜಿ. ಒಡೆಯರ್ 2 ಬಾರಿ ಗೆದ್ದು ತಮ್ಮ ಸಾಮರ್ಥ್ಯ ಸಾಬೀತುಪಡಿಸಿದ್ದಾರೆ.
2009ರ ಚುನಾವಣೆ ವೇಳೆಗೆ ಲೋಕಸಭಾ ಕ್ಷೇತ್ರವು ಪುನರ್ ವಿಂಗಡಣೆಯಾಗಿದೆ. ಪಕ್ಕದ ಉಡುಪಿ ಜಿಲ್ಲೆಯ ಬೈಂದೂರು ಕ್ಷೇತ್ರವು ಸೇರಿಕೊಂಡಿತು. ಇದು ಎಸ್.ಬಂಗಾರಪ್ಪ ಅವರಿಗೆ ಅನುಕೂಲ ಮಾಡಿಕೊಡಬಹುದೆಂಬ ಚರ್ಚೆಗಳಿದ್ದವು. ಆದರೆ, ಗೆದ್ದಿದ್ದು ಬಿಜೆಪಿಯೇ. ಸ್ವತಃ ಬೈಂದೂರು ಕ್ಷೇತ್ರದಲ್ಲಿಯೂ ಬಂಗಾರಪ್ಪ ಅವರು ಬಿಜೆಪಿಗಿಂತ ಕಡಿಮೆ ಮತ ಪಡೆದರು.
ಕಾಲ ಬದಲಾಗಿದೆ: ಇತಿಹಾಸದ ಪಾಠ ಯಾವ ರಾಜಕೀಯ ಪಕ್ಷಗಳಿಗೂ ಬೇಡವಾಗಿದೆ. ಏಕೆಂದರೆ ಕಳೆದ 2-3 ದಶಕಗಳಿಂದ ಶಿವಮೊಗ್ಗ ಲೋಕಸಭಾ ಕ್ಷೇತ್ರವು ಪಕ್ಷಕ್ಕಿಂತ ವ್ಯಕ್ತಿ ಪ್ರತಿಷ್ಠೆಯ ಕ್ಷೇತ್ರವಾಗಿ ಪರಿವರ್ತನೆಯಾಗಿದೆ. ಒಂದಿಷ್ಟು ಕಾಲ ಬಂಗಾರಪ್ಪ ಅವರು ಆಳಿದರೆ, ಇನ್ನೊಂದಿಷ್ಟು ಕಾಲ ಬಿ.ಎಸ್.ಯಡಿಯೂರಪ್ಪ ನಿರ್ವಹಿಸಿದರು. ಈ ಬಾರಿ ಅವರೇ ಕಣಕ್ಕಿಳಿಯುತ್ತಿದ್ದಾರೆ. ಹಾಗಾಗಿ, ಪಕ್ಷಕ್ಕಿಂತ, ವ್ಯಕ್ತಿ ಯಾರು ಎಂದೇ ಹಲವು ಚುನಾವಣೆಗಳಲ್ಲಿ ಮತದಾರರು ತಮ್ಮ ಹಕ್ಕು ಚಲಾವಣೆ ಮಾಡಿದ್ದಾರೆ.
ಈ ಹಿನ್ನೆಲೆಯಲ್ಲಿ ಜಾತ್ಯತೀತ ಜನತಾದಳವು ಎಸ್.ಬಂಗಾರಪ್ಪ ಅವರ ಕುಟುಂಬದವರನ್ನೇ ಕಣಕ್ಕಿಳಿಸಲು ಮುಂದಾಗಿದೆ. ಕಾಂಗ್ರೆಸ್ ಇನ್ನೂ ಅಭ್ಯರ್ಥಿ ಅಂತಿಮಗೊಳಿಸಿಲ್ಲ. ಚರ್ಚೆಗಳು ಮಾತ್ರ ಈಗ ಪಕ್ಷಕ್ಕಿಂತಲೂ ಅಭ್ಯರ್ಥಿಗಳ ಸುತ್ತಲೇ ಸುತ್ತುತ್ತಿವೆ.
ಗೆದ್ದವರಿವರು
ಟಿ ಕೆ.ಜೆ.ಒಡೆಯರ್ (ಕಾಂಗ್ರೆಸ್)- 1952, 1957
ಟಿ ಎಸ್.ವಿ.ಕೃಷ್ಣಮೂರ್ತಿ (ಕಾಂಗ್ರೆಸ್)- 1962
ಟಿ ಜೆ.ಎಚ್.ಪಟೇಲ್ (ಸೋಷಿಯಲಿಸ್ಟ್ ಪಕ್ಷ)- 1962
ಟಿ ಟಿ.ವಿ.ಚಂದ್ರಶೇಖರಪ್ಪ (ಕಾಂಗ್ರೆಸ್)- 1971, 1984, 1989
ಟಿ ಎ.ಆರ್.ಬದರಿನಾರಾಯಣ್ (ಕಾಂಗ್ರೆಸ್)- 1977
ಟಿ ಎಸ್.ಟಿ.ಖಾದ್ರಿ (ಕಾಂಗ್ರೆಸ್)- 1980
ಟಿ ಕೆ.ಜಿ.ಶಿವಪ್ಪ (ಕಾಂಗ್ರಸ್)- 1991
ಟಿ ಎಸ್.ಬಂಗಾರಪ್ಪ (ಕೆಸಿಪಿ, ಕಾಂಗ್ರೆಸ್, ಬಿಜೆಪಿ, ಸಮಾಜವಾದಿ ಪಕ್ಷ)- 1996, 1999, 2004, 2005
ಟಿ ಆಯನೂರು ಮಂಜುನಾಥ್ (ಬಿಜೆಪಿ)- 1998
ಟಿ ಬಿ.ವೈ.ರಾಘವೇಂದ್ರ (ಬಿಜೆಪಿ)- 2009
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

