ಕೇಜ್ರಿವಾಲ್ ಶೀಘ್ರ ಶಿವಮೊಗ್ಗಕ್ಕೆ
ಕ.ಪ್ರ.ವಾರ್ತೆ ಶಿವಮೊಗ್ಗ ಮಾ.13
ಅಮ್ ಆದ್ಮಿ ಪಕ್ಷದ ಅಭ್ಯರ್ಥಿಯ ಪರವಾಗಿ ಪ್ರಚಾರ ನಡೆಸುವ ಉದ್ದೇಶದಿಂದ ಅರವಿಂದ ಕೇಜ್ರಿವಾಲ್ ಅವರು ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಪ್ರಚಾರ ನಡೆಸಲಿದ್ದಾರೆ.
ಗುರುವಾರ ಮಾಧ್ಯಮಪ್ರತಿನಿಧಿಗಳೊಂದಿಗೆ ಮಾತನಾಡಿದ ಆಪ್ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಶ್ರೀಧರ ಕಲ್ಲಹಳ್ಳ ಈ ವಿಷಯ ತಿಳಿಸಿದರು.
ಅರವಿಂದ ಕೇಜ್ರಿವಾಲ್ ಅವರು ಯಾವಾಗ ಶಿವಮೊಗ್ಗಕ್ಕೆ ಭೇಟಿ ಕೊಡುತ್ತಾರೆಂದು ದಿನಾಂಕ ಇನ್ನೂ ನಿಶ್ಚಯವಾಗಿಲ್ಲ. ಆದರೆ, ಇಲ್ಲಿಗೆ ಭೇಟಿ ಕೊಟ್ಟು ಪ್ರಚಾರ ನಡೆಸುವುದು ಖಚಿತ ಎಂದು ಹೇಳಿದ ಅವರು, ಸದ್ಯ ರಾಜ್ಯದಲ್ಲಿ ಐದು ದಿನಗಳನ್ನು ಪ್ರಚಾರಕ್ಕಾಗಿ ಮೀಸಲಿಟ್ಟಿದ್ದಾರೆ. ಈ ಪೈಕಿ ಬೆಂಗಳೂರು ಮತ್ತು ಚಿಕ್ಕಬಳ್ಳಾಪುರಕ್ಕೆ ಮಾ. 16ರಂದು ಬರುತ್ತಿದ್ದಾರೆ. ನಂತರ ಎರಡನೇ ಹಂತದಲ್ಲಿ ಉಳಿದ ಮೂರು ದಿನಗಳಲ್ಲಿ ರಾಜ್ಯದ ಬೇರೆ ಬೇರೆ ಕಡೆ ಪ್ರಚಾರ ಮಾಡುವರು. ಈ ಸಂದರ್ಭದಲ್ಲಿ ಶಿವಮೊಗ್ಗಕ್ಕೆ ಬರುತ್ತಿದ್ದಾರೆ ಎಂದು ವಿವರಿಸಿದರು.
ಕೇಜ್ರಿವಾಲ್ ಅವರು ಯಾವುದೇ ರಾಜ್ಯಕ್ಕೆ ತೆರಳಿದರೂ ಅಲ್ಲಿ ಅಲೆ ಸೃಷ್ಟಿಸುತ್ತಿದ್ದಾರೆ. ಅವರ ಭೇಟಿಯಿಂದಾಗಿ ಬದಲಾವಣೆಗಳಾಗುತ್ತಿವೆ. ದೊಡ್ಡ ಸಂಖ್ಯೆಯಲ್ಲಿ ಜನರು ಆಪ್ ಪರ ಮನಸ್ಸು ಮಾಡುತ್ತಿದ್ದಾರೆ. ಇಲ್ಲೂ ಅದೇ ಬೆಳವಣಿಗೆ ನಿರೀಕ್ಷಿಸಿದ್ದೇವೆ ಎಂದರಲ್ಲದೆ, ಮತದಾನಕ್ಕೆ ಸಮೀಪ ಇರುವಂತೆ ಇಲ್ಲಿಗೆ ಅವರು ಭೇಟಿ ಕೊಡಬೇಕೆಂಬುದು ನಮ್ಮ ಅಪೇಕ್ಷೆ ಎಂದು ತಿಳಿಸಿದರು.
ಕ್ರಿಯಾಶೀಲ ಕೆಲಸ: ಸದ್ಯ ವಿವಿಧ ತಾಲೂಕು ಆಪ್ ಘಟಕಗಳು ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿವೆ. ಸಾಗರ, ತೀರ್ಥಹಳ್ಳಿಯಲ್ಲಿ ಚುನಾವಣಾ ಕಾರ್ಯ ಚುರುಕಿನಿಂದ ನಡೆಯುತ್ತಿದೆ. ಶುಕ್ರವಾರ ಎಲ್ಲಾ ತಾಲೂಕು ಮುಖಂಡರೊಂದಿಗೂ ಚುನಾವಣೆ ಸಂಬಂಧ ಚರ್ಚೆ ನಡೆಸುತ್ತಿರುವುದಾಗಿ ಶ್ರೀಧರ್ ಇದೇ ಸಂದರ್ಭದಲ್ಲಿ ಮಾಹಿತಿ ನೀಡಿದರು.
ಚುನಾವಣೆ ತಯಾರಿಗೆ ನಮ್ಮಲ್ಲಿ ಯಾವುದೇ ಬಂಡವಾಳ ಇಲ್ಲ. ಆದರೂ ಆಪ್ ಕುರಿತಂತೆ ಜನತೆ ಜಾಗೃತರಾಗಿದ್ದಾರೆ. ಜಾಗೃತರಾದವರನ್ನು ಚುನಾವಣೆಗೆ ತೊಡಗಿಕೊಳ್ಳುವಂತೆ ಮಾಡುವ ಹಾಗೂ ಫಲಿತಾಂಶಕ್ಕೆ ಅನುಕೂಲವಾಗುವಂತೆ ಮಾಡುವ ಕಾರ್ಯ ಆಗಬೇಕಾಗಿದೆ ಎಂದರು.
ಉತ್ತಮ ಪ್ರತಿಕ್ರಿಯೆ: ಎಲ್ಲಾ ಕಡೆ ಓಡಾಡುತ್ತಿದ್ದೇನೆ, ಎಲ್ಲೆಡೆ ಆಪ್ ಪರವಾಗಿಯೇ ಇರುವ ಲಕ್ಷಣ ಗೋಚರಿಸುತ್ತಿದೆ. ಆದರೆ, ಗೆಲ್ಲುವ ಸಂಖ್ಯೆ ಇದೆಯೋ ಇಲ್ಲವೋ ಎಂದು ಗೊತ್ತಾಗುತ್ತಿಲ್ಲ ಎಂದು ಹೇಳಿದ ಶ್ರೀಧರ್, ನಮಗೆ ರೈತ ಸಂಘ, ಸರ್ವೋದಯ ಪಕ್ಷ ಬೆಂಬಲ ನೀಡಿರುವುದರಿಂದ ಸಾಕಷ್ಟು ಕಡೆ ಉತ್ತಮ ಪ್ರತಿಕ್ರಿಯೆ ಇದೆ ಎಂದರು.
ಇದೀಗ ಆಪ್ ಪರವಾಗಿ ಎಲ್ಲೆಡೆ ಪ್ರಚಾರ ಕಾರ್ಯ ಆರಂಭವಾಗುತ್ತಿದೆ. ಕಷ್ಟದಲ್ಲಿರುವವರು ಹೆಚ್ಚಿರುವ ಪ್ರದೇಶಕ್ಕೆ ಭೇಟಿ ಕೊಡುತ್ತಿದ್ದು, ನಮಗೆ ಅವರೇ ಆಧಾರ, ಅವರೇ ಹೆಚ್ಚು ಇಷ್ಟಪಡುತ್ತಿದ್ದಾರೆ ಎಂದು ಹೇಳಿದರು.
ಅಮ್ ಆದ್ಮಿ ಪಕ್ಷಕ್ಕೆ ಪ್ರತಿ ದಿನ ಲಕ್ಷ ಲಕ್ಷ ಸಂಖ್ಯೆಯಲ್ಲಿ ಜನರು ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ. ಜನಪ್ರಿಯತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಜನರು ಬದಲಾವಣೆ ಬಯಸುತ್ತಿರುವುದು ಸ್ಪಷ್ಟವಾಗಿ ಗೋಚರವಾಗುತ್ತಿದೆ ಎಂದರು. ಜಿಲ್ಲಾಧಿಕಾರಿ ಕಚೇರಿ, ಬಾರ್ ಅಸೋಸಿಯೇಷನ್ ಸೇರಿದಂತೆ ವಿವಿಧ ಕಡೆ ಪ್ರಚಾರಕ್ಕೆ ಹೊರಟ ಶ್ರೀಧರ್ ಕಲ್ಲಹಳ್ಳ ಜತೆಗೆ ವಕೀಲ ಶ್ರೀಪಾಲ್, ದಿನೇಶ್, ನಸೀರ್ ಅಹ್ಮದ್ ಮತ್ತಿತರರು ಇದ್ದರು. ಬೆಂಗಳೂರಿನ ಕೆಲವು ಆಪ್ ಕಾರ್ಯಕರ್ತರೂ ಜತೆಗಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

