ಶಿವಮೊಗ್ಗ

ಪ್ರತ್ಯೇಕ ಕೃಷಿ ಬಜೆಟ್; ನಮೋಗೆ ಮನವಿ

Published On :

ಕ.ಪ್ರ.ವಾರ್ತೆ, ಶಿವಮೊಗ್ಗ, ಮಾ.13
ಸಂಸದನಾದ ಮೇಲೆ ರಾಜ್ಯಕ್ಕೆ ಕೇಂದ್ರ ಸರ್ಕಾರದಿಂದ ಆಗಿರುವ ಅನ್ಯಾಯವನ್ನು ಸರಿ ಮಾಡುತ್ತೇನೆ. ರಾಜ್ಯ ಹಾಗೂ ಜಿಲ್ಲೆಗೆ ಏನೇನು ಆಗಬೇಕೋ ಅದೆಲ್ಲವನ್ನೂ ಮಾಡುತ್ತೇನೆ ಎಂದು ಬಿಜೆಪಿ ಅಭ್ಯರ್ಥಿ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದು, ಕೇಂದ್ರ ಸರ್ಕಾರವೂ ಸಹ ರೇಲ್ವೆ ಬಜೆಟ್‌ನಂತೆ ಪ್ರತ್ಯೇಕ ಕೃಷಿ ಬಜೆಟ್ ಮಂಡಿಸಬೇಕು. ಈ ಬಗ್ಗೆ ಮೋದಿ ಅವರನ್ನು ಒತ್ತಾಯಿಸುತ್ತೇನೆ ಎಂದಿದ್ದಾರೆ.
ನಾಮಪತ್ರ ಸಲ್ಲಿಕೆ ನಂತರ ನಗರದ ನೆಹರೂ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಅವರು, ಸಂಸತ್ ಸದಸ್ಯನಾದ ಮೇಲೆ ರಾಜ್ಯದ ಸಂಸದರನ್ನು ಜತೆಗೆ ಕರೆದುಕೊಂಡು ಹೋಗುತ್ತೇನೆ. ಎಲ್ಲಾ ಇಲಾಖೆಗಳಿಗೆ ಓಡಾಡುತ್ತೇನೆ. ರಾಜ್ಯದ, ಕ್ಷೇತ್ರದ ಸಮಸ್ಯೆಗಳನ್ನು ಪಟ್ಟಿ ಮಾಡುತ್ತೇನೆ. ಪ್ರಧಾನಿಯವರ, ಸಚಿವರ ಮನವೊಲಿಸುತ್ತೇನೆ. ಆಗಬೇಕಾದ ಕೆಲಸಗಳನ್ನು ಮಾಡುತ್ತೇನೆ ಎಂದರು.
ಬದಲಾವಣೆ ಖಂಡಿತಾ:  ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ರಚನೆಯಾದ 3 ತಿಂಗಳಲ್ಲಿಯೇ ನೀವು ಬದಲಾವಣೆಯನ್ನು ನೋಡಲಿದ್ದೀರಿ ಎಂದು ಹೇಳಿದ ಯಡಿಯೂರಪ್ಪ, ಮೋದಿ ಅವರು ಭಾರತದ ಅಭಿವೃದ್ಧಿ ಬಗ್ಗೆ ಸ್ಪಷ್ಟ ಚಿತ್ರಣ ಹೊಂದಿದ್ದಾರೆ. ಅಟಲ್ ಬಿಹಾರಿ ವಾಜಪೇಯಿ ಅವರ ಕನಸಾಗಿದ್ದ ನದಿಗಳ ಜೋಡಣೆಯನ್ನು ಅನುಷ್ಠಾನಕ್ಕೆ ತರುವುದಾಗಿ ಹೇಳಿದ್ದಾರೆ. ದೇಶದ ಅಖಂಡತೆ, ಸಮಗ್ರತೆಗೆ ಚಿಂತನೆ ನಡೆದಿದೆ. ಗುಜರಾತ್ ಅಭಿವೃದ್ಧಿಯನ್ನು ದೇಶಕ್ಕೆ ವಿಸ್ತರಣೆ ಮಾಡುವ ಪ್ರಯತ್ನ ನಡೆಸಿದ್ದಾರೆ ಎಂದರು.
ಬೆಂಬಲ:  ನರೇಂದ್ರ ಮೋದಿ ಅವರಿಗೆ ದೇಶದ ಬಗ್ಗೆ ಇರುವ ಕಳಕಳಿ ಇರುವುದರಿಂದ ಭಾರತದ ಜನರು ಸ್ವಾಭಿಮಾನದಿಂದ ತಲೆ ಎತ್ತಿ ಓಡಾಡುವ ಅವಕಾಶ ಸಿಕ್ಕೇ ಸಿಗುತ್ತೆ. ಕಳೆದ 5 ವರ್ಷದ ಅವಧಿಯಲ್ಲಿ ನಾವು ರಾಜ್ಯದ ಜನತೆಗೆ ಕೊಟ್ಟ ಸವಲತ್ತುಗಳು ರಾಜ್ಯದಲ್ಲಿ ಮನೆಮಾತಾಗಿವೆ. 20 ಸೀಟು ಗೆಲ್ಲುವುದು ಖಚಿತ. ಇನ್ನು ರಾಜ್ಯಾದ್ಯಂತ ಪ್ರವಾಸ ಶುರು ಮಾಡಿದ ಮೇಲೆ ಯಾವ ರೀತಿ ಬದಲಾವಣೆ ಮಾಡಬಹುದು ಎಂದು ಊಹೆ ಮಾಡಲು ಆಗುವುದಿಲ್ಲ. 40 ವರ್ಷದ ರಾಜಕೀಯ ಇತಿಹಾಸದಲ್ಲಿ ಬಿಜೆಪಿಗೆ ಈ ರೀತಿಯ ಬೆಂಬಲ ಯಾವತ್ತೂ ಸಿಕ್ಕಿರಲಿಲ್ಲ ಎಂದರು.
ಕಾನೂನು ತಿದ್ದುಪಡಿ:  ಕಳೆದ ಐದಾರು ದಿನಗಳಿಂದ ಹಲವು ಸಮಾಜದ, ಪ್ರಮುಖರ ಸಬೆ ಮಾಡುತ್ತಿದ್ದೇನೆ. ಇಂತಹ ಕೆಲಸ ನಮ್ಮ ತಾಲೂಕಿನಲ್ಲಿ ಆಗಲಿಲ್ಲ ಎಂಬ ಮಾತನ್ನು ಒಬ್ಬರೂ ಹೇಳಲಿಲ್ಲ. ಬೆಂಬಲ ಕೊಡುವುದಾಗಿ ಹೇಳಿದ್ದಾರೆ. ಅಡಕೆ ಬೆಳೆಗಾರರ ಸಮಸ್ಯೆ, ರೈತರ ಸಮಸ್ಯೆ ಬಗ್ಗೆ ನರೇಂದ್ರ ಮೋದಿ ಅವರ ಜತೆ ಮಾತನಾಡಿದ್ದೇನೆ. ಸುಪ್ರೀಂಕೋರ್ಟ್‌ಗೆ ಸಲ್ಲಿಸಿರುವ ಪ್ರಮಾಣಪತ್ರ ವಾಪಸು ಪಡೆಯಬೇಕಿದೆ. ಈ ರೀತಿಯ ಎಲ್ಲ ಸಮಸ್ಯೆಗಳಿಗೂ ಪರಿಹಾರ ಸಿಗುವುದು ನಿಶ್ಚಿತ ಎಂದ ಅವರು, ಅರಣ್ಯ ಒತ್ತುವರಿ ಬಗ್ಗೆ ಕಾಗೋಡು ತಿಮ್ಮಪ್ಪ ಮಾತನಾಡುತ್ತಿದ್ದಾರೆ. ಬರೀ ಮಾತನಾಡಿದರೆ ಅಗುವುದಿಲ್ಲ. ಕಾನೂನು ತಿದ್ದುಪಡಿ ಆಗಬೇಕಿದೆ. ಈ ಬಗ್ಗೆ ಪ್ರಯತ್ನಿಸುತ್ತೇನೆ ಎಂದರು.
ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ, ರಾಜ್ಯಸಭಾ ಸದಸ್ಯ ಆಯನೂರು ಮಂಜುನಾಥ್, ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ವಿ.ಸೋಮಣ್ಣ, ಹರತಾಳು ಹಾಲಪ್ಪ, ಸಂಸದ ಬಿ.ವೈ.ರಾಘವೇಂದ್ರ, ಮುಖಂಡರಾದ ಬಿ.ಜಿ.ಪುಟ್ಟಸ್ವಾಮಿ, ನೀರಜ್ ಪಾಟೀಲ್ ಮಾತನಾಡಿದರು.
ವಿಧಾನಪರಿಷತ್ ಸದಸ್ಯ ಆರ್.ಕೆ.ಸಿದ್ದರಾಮಣ್ಣ, ಎಂ.ಬಿ.ಭಾನುಪ್ರಕಾಶ್, ಪಿ.ವಿ. ಕೃಷ್ಣಭಟ್, ಮುಖಂಡರಾದ ನೆಹರೂ ಓಲೇಕಾರ್, ರುದ್ರೇಗೌಡ, ಕೆ.ಜಿ.ಕುಮಾರಸ್ವಾಮಿ, ಜಿ.ಬಸವಣ್ಯಪ್ಪ, ಲಕ್ಷ್ಮೀನಾರಾಯಣ್, ಆರಗ ಜ್ಞಾನೇಂದ್ರ ಸೇರಿದಂತೆ ಹಲವು ಮುಖಂಡರು ಪಾಲ್ಗೊಂಡಿದ್ದರು.





ಸಿಎಂ ಸ್ಥಾನ ಮುಖ್ಯವಲ್ಲ...
ಬಿ.ಎಸ್. ಯಡಿಯೂರಪ್ಪ ಅವರಿಗಿಂತ ಮುಂಚೆ ಮಾತನಾಡಿದ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಅವರು, ಚುನಾವಣೆ ನಂತರ ಯಡಿಯೂರಪ್ಪ ಅವರು ಗೆದ್ದು ಕೇಂದ್ರ ಸರ್ಕಾರದಲ್ಲಿ ಸಚಿವರಾಗುವುದು ಖಚಿತ. ಆದರೆ, ರಾಜ್ಯ ರಾಜಕಾರಣದಲ್ಲಿ ಭಾರಿ ಬದಲಾವಣೆಗಳಾಗಲಿವೆ. ಕಾಂಗ್ರೆಸ್ ಪತನವಾಗಲಿದೆ. ಆಗ ಅವರು ಮತ್ತೆ ರಾಜ್ಯದ ಮುಖ್ಯಮಂತ್ರಿ ಆಗಬೇಕು ಎಂಬುದು ನಮ್ಮ ಆಸೆ ಎಂದು ಹೇಳಿದ್ದರು. ತಮ್ಮ ಭಾಷಣದಲ್ಲಿ ಇದಕ್ಕೆ ಪ್ರತಿಕ್ರಿಯಿಸಿದ ಯಡಿಯೂರಪ್ಪ, ಚುನಾವಣೆ ನಂತರ ಕಾಂಗ್ರೆಸ್ ಪತನವಾಗಲಿದೆ. ನಂತರ ಯಾರು ಮುಖ್ಯಮಂತ್ರಿ ಆಗುತ್ತಾರೆ ಎಂಬುದು ಮುಖ್ಯವಲ್ಲ. ಆದರೆ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಬೇಕು ಎಂದು ಹೇಳಿದರು.
ಕಾರ್ಯಕರ್ತರಿಂದ ಠೇವಣಿ ಹಣ
ನಾಮಪತ್ರದ ಜತೆಗೆ ಸಲ್ಲಿಸಬೇಕಾದ ಠೇವಣಿ ಹಣವನ್ನು ಆನವೇರಿ ಭಾಗದ ರೈತರು ಸಂಗ್ರಹಿಸಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಕೊಟ್ಟಿದ್ದಾರೆ. ಸಮಾವೇಶದಲ್ಲಿ ಈ ವಿಷಯ ತಿಳಿಸಿದ ಯಡಿಯೂರಪ್ಪ ಅವರು, ನಾನು ಮೊಟ್ಟಮೊದಲು ಶಿಕಾರಿಪುರ ಕ್ಷೇತ್ರದಿಂದ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದಾಗ ಶಿಕಾರಿಪುರ ಬಸ್ ನಿಲ್ದಾಣದ ಹಮಾಲಿಗಳು ಠೇವಣಿ ಹಣ ಸಂಗ್ರಹ ಮಾಡಿ ಕೊಟ್ಟಿದ್ದರು. ಈ ಹಳೆಯ ಸಂಗತಿಗಳು ಈಗ ಮತ್ತೆ ಮರುಕಳಿಸುತ್ತಿವೆ ಎಂದರು.
ಕ್ಷೇತ್ರದಲ್ಲಿ 3-4 ದಿನ ಮಾತ್ರ
ಬಿಜೆಪಿ ಅಭ್ಯರ್ಥಿ ಯಡಿಯೂರಪ್ಪ ಅವರು ಸ್ವಕ್ಷೇತ್ರದಲ್ಲಿ ಪ್ರವಾಸ ಮಾಡುವುದು ಮೂರ್ನಾಲ್ಕು ದಿನ ಮಾತ್ರ.
ಈ ಮಾತನ್ನು ವೇದಿಕೆಯಲ್ಲಿ ಮಾತನಾಡಿದ ಬಹುತೇಕ ಮುಖಂಡರು ಹೇಳಿದರು. ಸ್ವತಃ ಯಡಿಯೂರಪ್ಪ ಅವರೂ ಪ್ರಸ್ತಾಪಿಸಿದರು. 2-3 ದಿನ ಕ್ಷೇತ್ರದಲ್ಲಿ ಪ್ರವಾಸ ಮಾಡಿ ರಾಜ್ಯ ಪ್ರವಾಸಕ್ಕೆ ಹೊರಡುತ್ತೇನೆ. ಇವರಿಗಿಂತ ಮುಂಚೆ ಮಾತನಾಡಿದ ಆಯನೂರು ಮಂಜುನಾಥ್, ಕೆ.ಎಸ್.ಈಶ್ವರಪ್ಪ ಸಹ ಈ ವಿಷಯ ತಿಳಿಸಿ, ಪ್ರತಿಯೊಬ್ಬರೂ ಗಂಭೀರವಾಗಿ ಪರಿಗಣಿಸಿ ಪ್ರಚಾರ ಮಾಡಬೇಕು ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.