ಬಿಎಸ್ವೈ ಗೆದ್ದರೆ ನಾಡು ಅಭಿವೃದ್ಧಿ
ಶಿವಮೊಗ್ಗ: ದೇಶವನ್ನು ಬ್ರಿಟಿಷರಿಂದ ಮುಕ್ತಗೊಳಿಸಲು ಮಹಾತ್ಮ ಗಾಂಧೀಜಿ ಹೋರಾಟ ಮಾಡಿದ್ದರು. ಅದೇ ರೀತಿ 57 ವರ್ಷಗಳ ಕಾಲ ಈ ದೇಶವನ್ನು ಆಳುತ್ತಿರುವ ಕಾಂಗ್ರೆಸ್ ಪಕ್ಷವನ್ನು ಓಡಿಸಲು ಈಗ ನರೇಂದ್ರ ಮೋದಿ ನೇತೃತ್ವ ವಹಿಸಿದ್ದಾರೆ ಎಂದು ಬಿಜೆಪಿ ಮಹಿಳಾ ಮೋರ್ಚಾ ಮುಖಂಡರಾದ ಚಿತ್ರ ನಟಿ ಶ್ರುತಿ ಹೇಳಿದ್ದಾರೆ.
ನಗರದ ದೈವಜ್ಞ ಕಲ್ಯಾಣ ಮಂದಿರದಲ್ಲಿ ಮಹಿಳಾ ಮೋರ್ಚಾದಿಂದ ಏರ್ಪಡಿಸಿದ್ದ ಕಾರ್ಯಕರ್ತರ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ದೇಶ ಇಂದು ಬದಲಾವಣೆ ಬಯಸುತ್ತಿದೆ. ಇಂತಹ ಸಂದರ್ಭದಲ್ಲಿ ಮೋದಿಯವರು ನಮಗೆ ಸಿಕ್ಕಿದ್ದಾರೆ ಎಂದು ಹೇಳಿದರು.
ದೇಶವಿಂದು ದುಸ್ಥಿತಿಗೆ ಬಂದಿರುವುದು ಕೆಟ್ಟವರಿಂದ ಅಲ್ಲ, ಒಳ್ಳೆಯವರು ಸುಮ್ಮನಿರುವುದರಿಂದ ಎಂದು ಅಭಿಪ್ರಾಯಪಟ್ಟ ಅವರು, ಪಕ್ಷ, ವ್ಯಕ್ತಿ, ಪ್ರಧಾನಿ ಅಭ್ಯರ್ಥಿ ಈ ಮೂವರನ್ನು ನೋಡಿ ಮತಚಲಾಯಿಸಿ ಎಂದು ಕರೆ ನೀಡಿದರು.
ಅಭಿವೃದ್ಧಿಯತ್ತ: ಯಡಿಯೂರಪ್ಪನವರಂತಹ ಕನಸುಗಾರ ಜಿಲ್ಲೆಗೆ ಅಳಿಯನಾಗಿ ಬಂದು ಮನೆ ಮಗನಾಗಿದ್ದಾರೆ. ಅವರನ್ನು ಗೆಲ್ಲಿಸಿದರೆ ನಾಡು ಕ್ಷೇತ್ರ ಮತ್ತೆ ಅಭಿವೃದ್ಧಿ ಪಥದಲ್ಲಿ ಸಾಗುತ್ತದೆ ಎಂದರು.
ಸ್ವಾತಂತ್ರ್ಯ ನಂತರ ದೇಶದ ಮೊದಲ ಪ್ರಧಾನಿ ನೆಹರು ಮಾಡಿದ ಭಾಷಣವನ್ನೇ ಇಂದಿನ ಪ್ರಧಾನಿ ಮನಮೋಹನ್ ಸಿಂಗ್ ಮಾಡುತ್ತಿದ್ದಾರೆ. ಇದರಿಂದ ದೇಶ ಅಂದು ಹೇಗಿತ್ತೋ ಇಂದು ಹಾಗೆಯೇ ಇದೆ ಎಂದು ವ್ಯಕ್ತವಾಗುತ್ತಿದೆ. ಯಾವುದೇ ಅಭಿವೃದ್ಧಿ ಮಾಡದ ಕಾಂಗ್ರೆಸ್ ಪಕ್ಷವನ್ನು ಈ ಬಾರಿ ಚುನಾವಣೆಯಲ್ಲಿ ಸೋಲಿಸದೇ ಬೇಕಾದ ಅನಿವಾರ್ಯತೆ ಇದೆ ಎಂದು ಹೇಳಿದರು.
ಈ ದೇಶದ ಎಲ್ಲಾ ರಂಗಗಳಲ್ಲೂ ಮಹಿಳೆ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದಾರೆ. ಇದರಿಂದ ಮಹಿಳೆಯರು ಕೆಲವು ಕ್ಷೇತ್ರಗಳಲ್ಲಿ ಬಹು ಸಂಖ್ಯಾತರಾಗಿದ್ದಾರೆ ಎಂದ ಅವರು ರಾಜಕೀಯ ರಂಗದಲ್ಲೂ ಸಹ ಮಹಿಳೆಯರು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಮುಂದೆ ಬರಬೇಕಾಗಿದೆ. ಈ ಬಾರಿಯ ಚುನಾವಣೆ ಧರ್ಮ, ಅಧರ್ಮದ ವಿಚಾರವಾಗಿ ನಡೆಯುತ್ತಿದೆ. ಆದ್ದರಿಂದ ಪ್ರತಿಯೊಬ್ಬ ಮಹಿಳೆಯರು ಧರ್ಮದ ಹಾದಿಯಲ್ಲಿರುವ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಗೆ ಮತ ನೀಡುವ ಮೂಲಕ ನರೇಂದ್ರ ಮೋದಿಯವರನ್ನು ಈ ದೇಶದ ಪ್ರಧಾನಿಯನ್ನಾಗಿ ಮಾಡಬೇಕೆಂದು ಮನವಿ ಮಾಡಿದರು.
ರಾಹುಲ್ಗೆ ಬಡತನ ಗೊತ್ತಿಲ್ಲ: ರಾಹುಲ್ ಗಾಂಧಿಯವರಿಗೆ ಬಡತನದ ಅನುಭವವಿಲ್ಲ. ಶ್ರೀಮಂತ ಕುಟುಂಬದ ಹಿನ್ನೆಲೆಯಿಂದ ಬಂದ ಅವರಿಗೆ ಬಡತನದ ಅನುಭವ ಹೇಗೆ ಬರಲು ಸಾಧ್ಯವೆಂದ ಅವರು, ಇಂತಹ ವ್ಯಕ್ತಿ ಕೆಳ ಹಂತದಿಂದ ಬಂದಿರುವ ಮೋದಿ ವಿರುದ್ಧ ಟೀಕೆ ಮಾಡುತ್ತಿದ್ದಾರೆ. ಮೋದಿ ಅತ್ಯಂತ ಬಡತನದಿಂದ ಬಂದವರು, ಇಂತಹ ವ್ಯಕ್ತಿ ಪ್ರಧಾನ ಮಂತ್ರಿಯಂತಹ ಅತ್ಯುನ್ನತ ಹುದ್ದೆಯ ಎತ್ತರಕ್ಕೆ ಬೆಳೆಯುತ್ತಿದ್ದಾರೆ ಎಂದು ಹೇಳಿದರು.
ಪ್ರಸ್ತುತ ಸನ್ನಿವೇಶದಲ್ಲಿ ಮಹಿಳೆಯರನ್ನು ರಾಜಕೀಯ ಸಮಾರಂಭಗಳಿಗೆ ಕರೆತರುವುದು ಕಷ್ಟಕರವಾಗಿದೆ, ಅವರು ಧಾರಾವಾಹಿಗಳಿಗೆ ಮಾರು ಹೋಗಿದ್ದಾರೆ. ಧಾರಾವಾಹಿ ನೋಡುವುದರಿಂದ ಈ ದೇಶದ ರಾಜಕೀಯ ಚಟುವಟಿಕೆಗಳು ತಿಳಿಯುವುದಿಲ್ಲ. ನ್ಯೂಸ್ ಚಾನಲ್ಗಳನ್ನು ಹಾಗೂ ಪತ್ರಿಕೆ ಓದುವುದರಿಂದ ಪ್ರಸ್ತುತ ರಾಜಕೀಯದ ವಿದ್ಯಮಾನಗಳು ತಿಳಿಯುತ್ತದೆ. ಇದರಿಂದ ನೀವು ಯಾರಿಗೆ ಓಟು ಮಾಡಬೇಕೆಂಬ ಬಗ್ಗೆ ಅರಿವು ಉಂಟಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಸಮಾರಂಭದಲ್ಲಿ ಮಹಿಳಾ ಮೋರ್ಚಾ ಮುಖಂಡರಾದ ಶೋಭಾ, ಸುವರ್ಣ ಶಂಕರ್, ಜಯಲಕ್ಷ್ಮಿ, ಹೇಮಾ ಪಾವನಿ, ಅರುಣಾದೇವಿ ಮತ್ತಿರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

