ಧರೆಗುರುಳಲು ದಿನಗಣನೆ...!
ಕ.ಪ್ರ.ವಾರ್ತೆ, ಸೊರಬ, ಮಾ.22
ಇಲ್ಲಿನ ಆನವಟ್ಟಿಯ ಶಾಂತಿನಗರ ಅಂಗನವಾಡಿ ಕೇಂದ್ರದಲ್ಲಿ ನಿರ್ಮಿಸಲಾಗಿರುವ ಓವರ್ಹೆಡ್ ಟ್ಯಾಂಕ್ ಕಾಮಗಾರಿ ಕಳಪೆಯಿಂದ ಕೂಡಿದ್ದು, ಟ್ಯಾಂಕ್ನ ಕಂಬ ಯಾವುದೇ ಕ್ಷಣದಲ್ಲಾದರೂ ಕುಸಿಯುವ ಸಂಭವಿಸುವ ಆತಂಕ ಸೃಷ್ಟಿಯಾಗಿದೆ.
ಕೆಲವು ವರ್ಷಗಳ ಹಿಂದೆ ಈ ಅಂಗನವಾಡಿ ಕೇಂದ್ರ ಮಂಜೂರಾಗಿ ಹಲವು ಮೂಲಭೂತ ಸೌಕರ್ಯಗಳ ಕೊರತೆ ನಡುವೆಯೂ ಕಾರ್ಯನಿರ್ವಹಿಸುತ್ತಿತ್ತು. ಪೋಷಕರು ಹಾಗೂ ಸಾರ್ವಜನಿಕರ ಒತ್ತಾಯದಿಂದಾಗಿ ಇತ್ತೀಚೆಗೆ ಕೇಂದ್ರಕ್ಕೆ ಜಿಲ್ಲಾ ಪಂಚಾಯತ್ ಅನುದಾನದಿಂದ ಕುಡಿಯುವ ನೀರು ಸಂಗ್ರಹಣೆ ಹಾಗೂ ಓವರ್ಹೆಡ್ ಟ್ಯಾಂಕ್ಗಳಿಗೆ ಮಂಜೂರಾತಿ ದೊರೆತ್ತಿತ್ತು. 3-4 ದಿನಗಳ ಹಿಂದೆ ಕಾಮಗಾರಿ ಪ್ರಾರಂಭಿಸಲಾಗಿತ್ತು.
ಬೀಳುವ ಸಾಧ್ಯತೆ: ಸರ್ಕಾರದ ನಿಯಮಾವಳಿ ಪ್ರಕಾರ ಆರ್ಥಿಕ ವರ್ಷದ ಮಾರ್ಚ್ ಕೊನೆ ವಾರದೊಳಗೆ ಕಾಮಗಾರಿ ಮುಗಿಸಿ ಬಿಲ್ ಪಡೆಯಬೇಕಾಗಿತ್ತು. ಹಾಗಾಗಿ, ತರಾತುರಿ ಮಾ.15ರ ನಂತರ ಕಾಮಗಾರಿ ಆರಂಭಿಸಿದೆ. ಓವರ್ಹೆಡ್ ಟ್ಯಾಂಕ್ಗಾಗಿ ನಿರ್ಮಿಸಿದ್ದ ಪಿಲ್ಲರ್, ಸಿಂಟೆಕ್ಸ್ ಟ್ಯಾಂಕ್ ಇಡುವ ಅಡಿಪಾಯ ನಿರ್ಮಿಸಿ, 3-4 ದಿನಗಳಲ್ಲಿಯೇ ಕಾಮಗಾರಿಗೆ ಹಾಕಿದ್ದ ಸೆಂಟ್ರಿಂಗ್ ಅನ್ನು ತೆರವುಗೊಳಿಸಲಾಗಿದೆ. ಇದರ ಪರಿಣಾಮ ಸಿಮೆಂಟ್ ಪಿಲ್ಲರ್ ಸರಿಯಾಗಿ ಗಟ್ಟಿಯಾಗದೇ ಅಲುಗಾಡುವ ಸ್ಥಿತಿಯಲ್ಲಿದೆ.
ಮೇಲಿನ ಪ್ಲೇಟ್ ಸಂಪೂರ್ಣವಾಗಿ ಮುರಿದು ಬೀಳುವ ಹಂತ ತಲುಪಿದೆ. ಆದರೂ ಕೇಂದ್ರದಲ್ಲಿ ಮಕ್ಕಳಿಗೆ ವಿದ್ಯಾಭ್ಯಾಸ ನೀಡಲಾಗುತ್ತಿದೆ. ಯಾವುದೇ ಕ್ಷಣದಲ್ಲಾದರೂ ಚಿಕ್ಕ ಚಿಕ್ಕ ಮಕ್ಕಳ ಮೇಲೆ ಬೀಳುವ ಸಾಧ್ಯತೆ ಹೆಚ್ಚಿದೆ.
ಪ್ರಯೋಜನವಿಲ್ಲ: ಈ ಕಳಪೆ ಕಾಮಗಾರಿ ಕುರಿತು ಗುತ್ತಿಗೆದಾರರು, ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದರೂ ಈವರೆಗೂ ಸ್ಥಳಕ್ಕೆ ಹಾಜರಾಗಿಲ್ಲ. ಸಂಬಂಧಪಟ್ಟ ಎಂಜಿನಿಯರ್ ವಿರುದ್ಧ ಹಲವಾರು ದೂರುಗಳಿವೆ. ಈ ಬಗ್ಗೆ ಉನ್ನತಮಟ್ಟದ ಅಧಿಕಾರಿಗಳು, ಜನಪ್ರತಿನಿಧಿಗಳಿಗೂ ಗ್ರಾಮಸಭೆ ಹಾಗೂ ಕೆಡಿಪಿ ಸಭೆಯಲ್ಲಿ ಗಮನಕ್ಕೆ ತಂದಿದ್ದರೂ ಯಾವೊಂದು ಪ್ರಯೋಜನವೂ ಆಗಿಲ್ಲ.
ಆಗ್ರಹ: ಅಂಗನವಾಡಿ ಕೇಂದ್ರದ ಕಟ್ಟಡದ ಎದುರೇ ಗ್ರಾಮ ಪಂಚಾಯತ್ನ ಮೀನು, ಕೋಳಿ ಮಾಂಸ ಮಾರುಕಟ್ಟೆ ಇರುವುದರಿಂದ ಅಲ್ಲಿ ಮಾರಾಟ ಮಾಡುವ ಮೀನು ಹಾಗೂ ಕೋಳಿಗಳ ತ್ಯಾಜ್ಯ ಅಂಗನವಾಡಿ ಕೇಂದ್ರದ ಪಕ್ಕದಲ್ಲಿಯೇ ಎಸೆಯಲಾಗುತ್ತಿದೆ. ವಾಸನೆಯಿಂದ ವಾಕರಿಗೆ ಬರುವಂತಾಗಿದೆ. ಅಲ್ಲದೇ ತ್ಯಾಜ್ಯವನ್ನು ತಿನ್ನಲು ನಾಯಿ, ಹಂದಿಗಳು ಕೇಂದ್ರದ ಸುತ್ತಮುತ್ತಲೂ ಬೀಡುಬಿಟ್ಟಿವೆ. ಮಕ್ಕಳು ಆತಂಕದಿಂದಲೇ ಕೇಂದ್ರಕ್ಕೆ ಬರುತ್ತಿದ್ದಾರೆ.
ಸ್ಥಳಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಆಗಮಿಸಿ, ಪರಿಶೀಲನೆ ನಡೆಸಬೇಕು. ಗುತ್ತಿಗೆದಾರ ಹಾಗೂ ಎಂಜಿನಿಯರ್ ಮೇಲೆ ಕ್ರಮ ಕೈಗೊಳ್ಳಬೇಕು. ಜಿಪಂ ಅಧ್ಯಕ್ಷೆಯವರ ಕ್ಷೇತ್ರವೇ ಇದಾಗಿದೆ. ಜಿ.ಪಂ. ಅನುದಾನದಿಂದ ನಿರ್ಮಿಸಲಾಗುತ್ತಿರುವ ಕಳಪೆ ಕಾಮಗಾರಿಯನ್ನು ತೆರವುಗೊಳಿಸಿ, ನೂತನವಾಗಿ ಮತ್ತೇ ಕಾಮಗಾರಿಯನ್ನು ಮಾಡಬೇಕು ಎಂದು ಪೋಷಕರು ಹಾಗೂ ಸುತ್ತಮುತ್ತಲಿನ ನಿವಾಸಿಗಳು ಆಗ್ರಹಿಸಿದ್ದಾರೆ.
ಬಿಲ್ ಪಡೆಯುವ ತರಾತುರಿ ಕಾರಣ
ಗ್ರಾ.ಪಂ. ಉಪಾಧ್ಯಕ್ಷ ಹಾಗೂ ಸ್ಥಳೀಯ ವಾರ್ಡ್ ಸದಸ್ಯ ಮಧುಕೇಶ್ವರ ಪಾಟೀಲ್ ಮಾತನಾಡಿ, ಪರಿಸರ ಕಲುಷಿತ ಬಗ್ಗೆ ಸಾರ್ವಜನಿಕರಿಂದ ದೂರುಗಳು ಕೇಳಿಬಂದಿವೆ. ಸಂಜೆಯೊಳಗಾಗಿ ಸ್ವಚ್ಛಗೊಳಿಸಲು ಗ್ರಾ.ಪಂ. ಕಾರ್ಮಿಕರಿಗೆ ಸೂಚಿಸಲಾಗುವುದು. ಬರುವ ವರ್ಷ ಮತ್ತೆ ಟೆಂಡರ್ ಕರೆಯುವುದರೊಳಗೆ ಕೋಳಿ ಮತ್ತು ಮೀನು ಮಾರಾಟ ಮಳಿಗೆ ಬೇರೆಡೆಗೆ ಸ್ಥಳಾಂತರಿಸಲು ಕ್ರಮ ಕೈಗೊಳ್ಳಲಾಗುವುದು. ಆರ್ಥಿಕ ವರ್ಷದ ಕೊನೆಯ ತಿಂಗಳು ಮಾರ್ಚ್ ಆಗಿದೆ. ಆದ್ದರಿಂದ ಕಾಮಗಾರಿಯ ಬಿಲ್ ಪಡೆಯಲು ತರಾತುರಿಯಲ್ಲಿ ಮುಂದಾಗಿರುವುದೇ ಕಳಪೆ ಕಾಮಗಾರಿಗೆ ಕಾರಣ. ಸಂಬಂಧಪಟ್ಟ ಗುತ್ತಿಗೆದಾರ ಹಾಗೂ ಅಭಿಯಂತರರನ್ನು ಕರೆಯಿಸಿ, ಮರು ಕಾಮಗಾರಿ ಮಾಡುವಂತೆ ಒತ್ತಾಯಿಸಲಾಗುವುದು ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

