ಶಿವಮೊಗ್ಗ

ರೈತರ ಸಮಸ್ಯೆ: ಸಿಎಂ ಬಳಿ ನಿಯೋಗ

Published On :

ಕ.ಪ್ರ.ವಾರ್ತೆ , ಸಾಗರ , ಮೇ 9
ತುಮರಿ ಸೇತುವೆ ನಿರ್ಮಾಣಕ್ಕೆ ಹಣ ಬಿಡುಗಡೆ ಮಾಡಲು ಹಾಗೂ ರೈತರ ಸಮಸ್ಯೆ ಪರಿಹರಿಸುವಂತೆ ಒತಾಯಿಸಿ ಒಂದು ವಾರದಲ್ಲಿ ಕಾಂಗ್ರೆಸ್ ಪಕ್ಷದ ನಿಯೋಗ ಮುಖ್ಯಮಂತ್ರಿ ಹಾಗೂ ಲೋಕೋಪಯೋಗಿ ಸಚಿವರನ್ನು ಭೇಟಿ ಮಾಡಲಾಗುವುದು ಎಂದು ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ತೀ.ನ. ಶ್ರೀನಿವಾಸ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿ, ಹಿಂದಿನ ಸರ್ಕಾರ ತುಮರಿ ಸೇತುವೆಗೆ ಶಂಕುಸ್ಥಾಪನೆ ಮಾಡಿದೆ ಎಂದು ನಮ್ಮ ಸರ್ಕಾರದ ಅವಧಿಯಲ್ಲಿ ಸೇತುವೆ ಕಾಮಗಾರಿ ಕೈಬಿಡುವ ಪ್ರಶ್ನೆಯೆ ಇಲ್ಲ.
ಶರಾವತಿ ಹಿನ್ನೀರಿನ ಸಂತ್ರಸ್ತ ಜನರ ಬಹುಕಾಲದ ಬೇಡಿಕೆಯಾಗಿರುವ ತುಮರಿ ಸೇತುವೆ ನಿರ್ಮಾಣಕ್ಕೆ ಕಾಂಗ್ರೆಸ್ ಪಕ್ಷ ಕಟಿಬದ್ಧವಾಗಿದೆ ಎಂದರು.
ವೈದ್ಯರ ಕೊರತೆ: ತುಮರಿ ಆಸ್ಪತ್ರೆಗೆ ಬರುವ ಸೋಮವಾರದಿಂದ ಒಬ್ಬ ವೈದ್ಯರು ಸೇವೆಗೆ ಹಾಜರಾಗಲಿದ್ದಾರೆ ಎಂದ ಅವರು, ಸಾಗರ ತಾಲೂಕು ಸೇರಿದಂತೆ ಜಿಲ್ಲೆಯಲ್ಲಿ 25ಕ್ಕೂ ಹೆಚ್ಚು ವೈದ್ಯರ ಕೊರತೆಯಿದೆ. ಸರ್ಕಾರಿ ಆಸ್ಪತ್ರೆಗೆ ವೈದ್ಯರು ಸೇವೆ ಬಾರದಿರುವ ಕುರಿತಂತೆ ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಅವರು ವೈದ್ಯರು ಹಾಗೂ ಮೆಡಿಕಲ್ ಕಾಲೇಜಿನಲ್ಲಿ ಸೇವೆ ಸಲ್ಲಿಸುವ ವೈದ್ಯರಿಗೆ ಸಮಾನ ವೇತನ ನೀಡುವಂತೆ ಸರ್ಕಾರಕ್ಕೆ ಹಲವು ಪತ್ರ ಬರೆದಿದ್ದಾರೆ. ಸರ್ಕಾರಿ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕೂ ಪತ್ರ ಬರೆದಿದ್ದಾರೆ ಎಂದು ಮಾಹಿತಿ ನೀಡಿದರು.
ಅಭಿವೃದ್ಧಿಗೆ ಒತ್ತು: ಕಾಗೋಡು ತಿಮ್ಮಪ್ಪ ಅವರು ವಿಧಾನಸಭಾಧ್ಯಕ್ಷರಾಗಿರುವುದರಿಂದ ಪಕ್ಷದ ಚಟುವಟಿಕೆಯಲ್ಲಿ ಸಕ್ರಿಯವಾಗಿ ತೊಡಗಿಕೊಳ್ಳದಿದ್ದರೂ, ಶಾಸಕರಾಗಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ನಿರಂತರ ಶ್ರಮಿಸುತ್ತಿದ್ದಾರೆ.
ಸ್ಪೀಕರ್ ಆಗಿದ್ದರೂ ಅಧಿವೇಶನ ಹೊರತುಪಡಿಸಿ ಉಳಿದ ದಿನಗಳಲ್ಲಿ ಕ್ಷೇತ್ರದಲ್ಲಿಯೆ ಇದ್ದು, ಆದ್ಯತಾ ಕ್ಷೇತ್ರ ಗುರುತಿಸಿ ಅಭಿವೃದ್ಧಿಗೆ ಒತ್ತು ನೀಡಿದ್ದಾರೆ. ಹಿನ್ನೀರಿನ ಜನರು ಆರೋಗ್ಯ ಸೇವೆ ನೀಡುವಂತೆ ಒತ್ತಾಯಿಸಿ ನಡೆಸಿದ ಪ್ರತಿಭಟನೆ ಸಮಯೋಚಿತವಾಗಿದ್ದು, ಶರಾವತಿ ಹಿನ್ನೀರಿನ ತುಮರಿ ಹಾಗೂ ಬ್ಯಾಕೋಡು ಆಸ್ಪತ್ರೆಗಳಲ್ಲಿ ವೈದ್ಯ ಕೊರತೆ ನೀಗಿಸುವ ನಿಟ್ಟಿನಲ್ಲಿ ಈಗಾಗಲೆ ಕ್ರಮ ಕೈಗೊಳ್ಳಲಾಗಿದೆ. 108 ವಾಹನ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿಯೂ ಗಂಭೀರ ಪ್ರಯತ್ನ ನಡೆಸಲಾಗಿದೆ ಎಂದರು.
ಪ್ರಮುಖರಾದ ಹೊಳಿಯಪ್ಪ, ಮಕ್ಬೂಲ್ ಅಹ್ಮದ್, ರಮೇಶ್ ಗಾಳಿಪುರ, ಮಲ್ಲಿಕಾರ್ಜುನ ಹಕ್ರೆ, ಎನ್. ಲಲಿತಮ್ಮ, ಸುಂದರಸಿಂಗ್ ಇದ್ದರು.
ತುಮರಿ ಭಾಗದ ಅಭಿವೃದ್ಧಿಗೆ 25 ಕೋಟಿ
ತುಮರಿ ಭಾಗದ ಅಭಿವೃದ್ಧಿಗೆ ಸುಮಾರು 25 ಕೋಟಿ ವಿನಿಯೋಗಿಸಲಾಗಿದೆ. ಅವುಗಳಲ್ಲಿ ಪ್ರಮುಖವಾಗಿ ಬ್ಯಾಕೋಡು ಗ್ರಾಮದಲ್ಲಿ ಫ್ರಿಮೆಟ್ರಿಕ್ ವಿದ್ಯಾರ್ಥಿನಿ ನಿಲಯಕ್ಕೆ 42 ಲಕ್ಷ, ಸುಳ್ಳಳ್ಳಿ- ಹೊಸಕೊಪ್ಪ- ನಾಗೋಡಿ ರಸ್ತೆ ನಿರ್ಮಾಣಕ್ಕೆ 4 ಕೋಟಿ, ಅಂಬಾರಗೋಡ್ಲು- ಕಳಸವಳ್ಳಿಗೆ 2 ನೂತನ ಲಾಂಚ್‌ಗಾಗಿ 3.60 ಕೋಟಿ, ರ್ಯಾಂಪ್ ನಿರ್ಮಾಣಕ್ಕೆ 2 ಕೋಟಿ, ಕುದುರೂರು- ಬ್ಯಾಕೋಡು- ಮಳೂರು ರಸ್ತೆ ನಿರ್ಮಾಣಕ್ಕೆ 6.50 ಕೋಟಿ, ಹೊನಗಲು- ಕಳೂರು-ಮುಚ್ಚಳ್ಳಿ ರಸ್ತೆ ನಿರ್ಮಾಣಕ್ಕೆ 8.52 ಕೋಟಿ ಬಿಡುಗಡೆಯಾಗಿದ್ದು, ಕಾಮಗಾರಿ ಪ್ರಗತಿಯಲ್ಲಿದೆ ಎಂದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.